In-depth: ಉತ್ತರಾಖಂಡದಲ್ಲಿ ಕಾಳ್ಗಿಚ್ಚು- ದೆಹಲಿಗೆ ಶುದ್ಧಗಾಳಿ ಒದಗಿಸುತ್ತಿದ್ದ ದೇವಭೂಮಿಯಲ್ಲೇ ಆಮ್ಲಜನಕ ಕೊರತೆ!

|

Updated on: Apr 06, 2021 | 7:19 PM

Uttarakhand Forest Fire: ಹಸಿರು ಸಂಪತ್ತಿನಿಂದ ಸಮೃದ್ದವಾಗಿರುವ ಉತ್ತರಾಖಂಡ ರಾಜ್ಯದಲ್ಲಿ ಈಗ ಎದುರಾಗಿರುವ ಪರಿಸ್ಥಿತಿ ನೋಡಿದರೆ ಹಿಂದೊಮ್ಮೆ ಆರೋಗ್ಯ ಧಾಮವೆನಿಸಿಕೊಳ್ಳುತ್ತಿದ್ದ ರಾಜ್ಯ ಇದೇನಾ ಎಂಬ ಸಂಶಯ ಕಾಡಲಾರಂಬಿಸುತ್ತದೆ.

In-depth: ಉತ್ತರಾಖಂಡದಲ್ಲಿ ಕಾಳ್ಗಿಚ್ಚು- ದೆಹಲಿಗೆ ಶುದ್ಧಗಾಳಿ ಒದಗಿಸುತ್ತಿದ್ದ ದೇವಭೂಮಿಯಲ್ಲೇ ಆಮ್ಲಜನಕ ಕೊರತೆ!
ಉತ್ತರಾಖಂಡದಲ್ಲಿ ಕಾಳ್ಗಿಚ್ಚು
Follow us on

ಡೆಹ್ರಾಡೂನ್:  ದೇವಭೂಮಿ ಉತ್ತರಾಖಂಡ ರಾಜ್ಯದಲ್ಲಿ ಶುದ್ದ ಆಮ್ಲಜನಕ ತೀವ್ರ ಕೊರತೆ ಯಾವ ಪರಿ ಎದುರಾಗಿದೆಯೆಂದರೆ ಜನರು ಉಸಿರಾಡಲು ಪರದಾಡುತ್ತಿದ್ದಾರೆ. ಬೆಟ್ಟಗುಡ್ಡಗಳ ರಾಜ್ಯವಾಗಿದ್ದ ಉತ್ತರಾಖಂಡ ಈಗ ಹೊಗೆಯ ಚೇಂಬರ್​ನಂತೆ ಗೋಚರಿಸುತ್ತಿದೆ. ಅಸಲಿಗೆ ಅಲ್ಲಿ ಹೀಗಾಗಲು ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡೋಣ.

ದೇಶದ ರಾಜಧಾನಿ ದೆಹಲಿ ವಾಯುಮಾಲಿನ್ಯದಿಂದ ಕಂಗೆಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿರುವ ವಿಶ್ವದ ಹಲವಾರು ನಗರಗಳಲ್ಲಿ ದೆಹಲಿ ಕೂಡ ಒಂದು. ದೆಹಲಿಯ ವಾಯುಮಾಲಿನ್ಯಕ್ಕೆ ಅಲ್ಲಿನ ವಾಹನಗಳು ದಿನವಿಡೀ ಕಾರುವ ಹೊಗೆ ಮತ್ತು ಧೂಳು ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿವೆ. ಇದರ ಜೊತೆಗೆ ಪಕ್ಕದ ಹರಿಯಾಣ, ಪಂಜಾಬ್ ರಾಜ್ಯಗಳ ಗೋಧಿ, ಭತ್ತದ ಒಣಹುಲ್ಲಿಗೆ ಬೆಂಕಿ ಇಡುವುದು ಕೂಡ ಕಾರಣ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಲು ಕಾರಣವಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಂತೂ ದೆಹಲಿಯಲ್ಲಿ ಜನರಿಗೆ ಉಸಿರಾಡಲು ಸಹ ಆಗದ ಸ್ಥಿತಿ ನಿರ್ಮಾಣವಾಗುತ್ತದೆ.

ಮನೆಯಿಂದ ಹೊರಬಂದರೆ ಕಣ್ಣುರಿ, ಕಣ್ಣಲ್ಲಿ ನೀರು, ಉಸಿರಾಟದ ಸಮಸ್ಯೆ, ಎದೆನೋವು ಮುಂತಾದವು ಜನರನ್ನು ಕಾಡುತ್ತವೆ. ವೈದ್ಯರ ಬಳಿ ಹೋದರೆ, ಶುದ್ದ ವಾಯು ಸೇವನೆಯೇ ಇದಕ್ಕೆ ಪರಿಹಾರ, ಅಸ್ತಮಾದಿಂದ ಬಳಲುವವರು ಪರಿಶುದ್ದ ಗಾಳಿ ಹೇರಳವಾಗಿ ಲಭ್ಯವಿರುವಂಥ ಪ್ರದೇಶಗಲಳಿಗೆ ಹೋಗಿ ಎನ್ನುವ ಸಲಹೆ ನೀಡುತ್ತಾರೆ. ಹೀಗಾಗಿ ದೆಹಲಿಯ ಜನರು ಪಕ್ಕದ ಉತ್ತರಾಖಂಡ್ ರಾಜ್ಯಕ್ಕೆ ಹೋಗುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯ.

ಹೇರಳವಾಗಿ ಆಮ್ಲಜನಕ ಒದಗಿಸುತ್ತಿದ್ದ ಪ್ರದೇಶ ಉತ್ತರಾಖಂಡ್!
ದೆಹಲಿಯಿಂದ ಐದಾರು ಗಂಟೆ ಪ್ರಯಾಣದಷ್ಟು ದೂರವಿರುವ ಉತ್ತರಾಖಂಡ್ ದೆಹಲಿ ಜನರ ಪಾಲಿಗೆ ಪರಿಶುದ್ದ ಆಮ್ಲಜನಕ ಒದಗಿಸುವ ತಾಣ. ಆದರೆ, ಹಸಿರು ಸಂಪತ್ತಿನಿಂದ ಸಮೃದ್ದವಾಗಿರುವ ಉತ್ತರಾಖಂಡ್ ರಾಜ್ಯದಲ್ಲಿ ಈಗ ಎದುರಾಗಿರುವ ಪರಿಸ್ಥಿತಿ ನೋಡಿದರೆ ಹಿಂದೊಮ್ಮೆ ಆರೋಗ್ಯ ಧಾಮವೆನಿಸಿಕೊಳ್ಳುತ್ತಿದ್ದ ರಾಜ್ಯ ಇದೇನಾ ಎಂಬ ಸಂಶಯ ಕಾಡಲಾರಂಬಿಸುತ್ತದೆ. ದೆಹಲಿಯ ಜನರಿಗೆ ಪರಿಶುದ್ದ ಆಮ್ಲಜನಕ ಒದಗಿಸುತ್ತಿದ್ದ ಉತ್ತರಾಖಂಡ್​ನಲ್ಲೇ ಈಗ ಆಮ್ಲಜನಕದ ಕೊರತೆ ತೀವ್ರ ಸ್ವರೂಪದ್ದಾಗಿದೆ ಎಂದರೆ ನಂಬುತ್ತೀರಾ?

ಭೂಮಿ ಮೇಲಿನ ಸ್ವರ್ಗ ಈ ಉತ್ತರಾಖಂಡ್

ದೇವಭೂಮಿಯಲ್ಲಿ ಶುದ್ಧ ಆಮ್ಲಜನಕದ ಕೊರತೆ
ಉತ್ತರಾಖಂಡ್ ರಾಜ್ಯದಲ್ಲೂ ಈಗ ದೆಹಲಿಯಂಥ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಗೂ ಉತ್ತರಾಖಂಡ್ ರಾಜ್ಯಕ್ಕೂ ಉಸಿರಾಡುವ ಗಾಳಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲದಂಥ ಪರಿಸ್ಥಿತಿ ಎದುರಾಗಿದೆ. ಉತ್ತರಾಖಂಡ್ ರಾಜ್ಯದ ಪೌರಿ ಗರ್ವಾಲ್, ಉತ್ತರಕಾಶಿ, ಪಿತ್ತೋರ್ ಗಢ, ತೆಹ್ರಿ ಗರ್ವಾಲ್, ಅಲ್ಮೋರಾ, ನೈನಿತಾಲ್ ಸೇರಿದಂತೆ ಕೆಲ ಜಿಲ್ಲೆಗಳ ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವುದರಿಂದ ಅಲ್ಲಿ ವಾಸಿಸುವ ಜನರ ಕಣ್ಣಲ್ಲಿ ಉರಿಯುಂಟಾಗಿ ನೀರು ಬರುತ್ತಿದೆ. ಉಸಿರಾಟಕ್ಕೆ ಶುದ್ದ ಆಮ್ಲಜನಕದ ಕೊರತೆ ಎದುರಾಗಿದೆ.

ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದೇ ಕಾರಣ!
ಇದಕ್ಕೆಲ್ಲಾ ಕಾರಣ, ಉತ್ತರಾಖಂಡ್ ರಾಜ್ಯದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಬಿದ್ದ ಬೆಂಕಿ. ಕಳೆದ ಎರಡು-ಮೂರು ದಿನಗಳಿಂದ ಉತ್ತರಾಖಂಡ್​ನ ಅರಣ್ಯ ಪ್ರದೇಶದ ಹಲವಾರು ಭಾಗಗಳು ಹೊತ್ತಿ ಉರಿಯುತ್ತಿವೆ. ನಿರಂತರವಾದ ಬೆಂಕಿಯಿಂದಾಗಿ ಅಲ್ಲಿನ ವಾತಾವರಣವನ್ನು ಬರೀ ಇಂಗಾಲದ ಡೈ ಆಕ್ಸೈಡ್ ಆವರಿಸಿದೆ. ಇದರಿಂದಾಗಿ ವಯೋವೃದ್ದರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ.

ಇನ್ನು ಉತ್ತರಾಖಂಡದ ಈಗಿನ ಪರಿಸ್ಥಿತಿಯಿಂದಾಗಿ ಜನರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಮನೋವೈದ್ಯರು ಹೇಳುತ್ತಿದ್ದಾರೆ. ಜನರು ಭಯಾನಕ ಕೊರೊನಾ ವೈರಸ್​ದೊಂದಿಗೆ ದಟ್ಟವಾಗಿ ಆವರಿಸಿರುವ ಹೊಗೆಯನ್ನೂ ಈಗ ಎದುರಿಸಬೇಕಾಗಿ ಬಂದಿದೆ. ಪೌರಿ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಮನೋಜ್ ಶರ್ಮಾ ಅವರು, ಜನರು ಮಾನಸಿಕ ಸಮಸ್ಯೆ ಎದುರಿಸುತ್ತಿರುವುದು ನಿಜ ಎಂದು ಹೇಳುತ್ತಾರೆ. ದಟ್ಟ ಹೊಗೆಯಿಂದ ಉಂಟಾಗಿರುವ ವಾಯುಮಾಲಿನ್ಯದಿಂದ ಬೆಳಗಿನ ಸಮಯ ಸಂಜೆಯಂತೆ ಭಾಸವಾಗುತ್ತಿದೆ. ಈ ಮೊದಲು 10 ಸಾವಿರ ಮೀಟರ್ ದೂರದ ವಸ್ತುಗಳನ್ನು ಸುಲಭವಾಗಿ ನೋಡಬಹುದಿತ್ತು. ಆದರೀಗ 200 ಮೀಟರ್ ದೂರದ ವಸ್ತುಗಳೂ ಕೂಡ ಅಸ್ಪಷ್ಟವಾಗಿ ಕಾಣುತ್ತಿವೆ.

ಆರೋಗ್ಯ ಸಮಸ್ಯೆಗಳು
ಜನರು ಈಗ ಕಣ್ಣುರಿ, ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪಿತ್ತೋರ್​ಗಡದ ಮುಖ್ಯ ವೈದ್ಯಾಧಿಕಾರಿ ಡಾ ಎಚ್.ಸಿ.ಪಂತ್ ಹೇಳುತ್ತಾರೆ. ಜೊತೆಗೆ ಚರ್ಮದ ರೋಗದ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂದು ಅವರು ಹೇಳುತ್ತಾರೆ. ಪೊಲೀಸರಿಗೆ ಅರಣ್ಯಕ್ಕೆ ಯಾರು ಬೆಂಕಿ ಇಡ್ತಾರೆ ಎನ್ನುವುದು ಗೊತ್ತು, ಆದರೂ ಅಂಥವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಪೌರಿ ಜಿಲ್ಲೆಯಲ್ಲಿ 500 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ಉತ್ತರಕಾಶಿ ಜಿಲ್ಲೆಯಲ್ಲಿ 60 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ 165 ಹೆಕ್ಟೇರ್ ಅರಣ್ಯ ಬೆಂಕಿಗಾಹುತಿಯಾಗಿದೆ. ಉತ್ತರಾಖಂಡವು ಬೆಟ್ಟ-ಗುಡ್ಡಗಳು ಮತ್ತು ಹಸಿರು ಹುಲ್ಲುಗಾವಲು ಹಾಗೂ ದಟ್ಟ ಅರಣ್ಯ ಪ್ರದೇಶಗಳಿಂದ ಕೂಡಿದ ರುದ್ರ ರಮಣೀಯ ರಾಜ್ಯ. ಪ್ರಾಕೃತಿಕ ಸೌಂದರ್ಯದ ಬೀಡಾಗಿರುವ ಇದು ನಯನ ಮನೋಹರವಾಗಿರುವ ಸ್ಥಳ.

ಪ್ರಮುಖ ಪವಿತ್ರ ನದಿಗಳ ಉಗಮ ಸ್ಥಾನ
ಭಾರತದ ಜೀವನದಿಗಳು ಗಂಗಾ, ಯಮುನಾ, ಮಂದಾಕಿನಿ, ಭಾಗೀರಥಿ ಸೇರಿದಂತೆ ಅನೇಕ ನದಿಗಳ ಉಗಮ ಸ್ಥಾನ ಇದೇ ಉತ್ತರಾಖಂಡ್ ರಾಜ್ಯ. ಚಾರ್ ಧಾಮ ಎಂದೇ ಹೆಸರಾದ ಕೇದಾರನಾಥ್, ಬದರೀನಾಥ್, ಗಂಗೋತ್ರಿ, ಯಮುನೋತ್ರಿ ಇದೇ ರಾಜ್ಯದಲ್ಲಿವೆ. ಚಾರ್ ಧಾಮ್​ಗಳೆಂದರೆ ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರಗಳು. ಈ ಎಲ್ಲ ಪವಿತ್ರ ಸ್ಥಳಗಳನ್ನ ಹೊಂದಿರುವ ಉತ್ತರಾಖಂಡ್ ರಾಜ್ಯವನ್ನು ದೇವಭೂಮಿ ಅಂತ ಕರೆಯುವುದರಲ್ಲಿ ಸೋಜಿಗವಿಲ್ಲ. ಆದರೆ ದೇವಭೂಮಿಯಲ್ಲೇ ಈಗ ಶುದ್ದ ಆಮ್ಲಜನಕಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ.

ಬೇರೆ ದಿನಗಳಲ್ಲಿ ಉತ್ತರಾಖಂಡ್​ ಹೀಗಿರುತ್ತದೆ

ಹೆಲಿಕಾಪ್ಟರ್​ನಿಂದ ಬೆಂಕಿ ನಂದಿಸುವ ಕಾರ್ಯಾಚರಣೆ
ಉತ್ತರಾಖಂಡ್ ರಾಜ್ಯದಲ್ಲಿ ದಟ್ಟ ಕಾಳ್ಗಿಚ್ಚನ್ನು ನಂದಿಸಲು ಕೇಂದ್ರ ಸರ್ಕಾರವು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ಗಳನ್ನು ರವಾನಿಸಿದೆ. Mil Mi-17 ಹೆಲಿಕಾಪ್ಟರಗಳ ಮೂಲಕ ನೀರನ್ನು ಹೊಯ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ತೆಹ್ರಿ ಗರ್ವಾಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್​ಗಳನ್ನು ಬಳಸಲಾಗಿದೆ. ತೆಹ್ರಿ ಡ್ಯಾಂ ನೀರನ್ನು ಬೆಂಕಿ ನಂದಿಸಲು ಉಪಯೋಗಿಸಲಾಗುತ್ತಿದೆ.

ಅಮೆರಿಕಾದಲ್ಲಿ ಕಾಳ್ಗಿಚ್ಚು ತಲೆದೋರಿದಾಗ ನಡೆಸಯವ ಕಾರ್ಯಾಚರಣೆಯನ್ನೇ ಇಲ್ಲೂ ನಡೆಸಲಾಗುತ್ತಿದೆ. ಕಾರ್ಯಾಚರಣೆಗೆ ಎನ್‌ ಡಿ ಆರ್ ಎಫ್ ತಂಡವನ್ನು ಉತ್ತರಾಖಂಡ್ ರಾಜ್ಯಕ್ಕೆ ಬೆಂಕಿ ನಂದಿಸಲು ಕಳಿಸಲಾಗಿದೆ.
ಉತ್ತರಾಖಂಡ್​ನ 12 ಸಾವಿರ ಫಾರೆಸ್ಟ್ ಗಾರ್ಡ್​ಗಳು ಮತ್ತು ಅರಣ್ಯ ಇಲಾಖೆಯ ಇತರ ಸಿಬ್ಬಂದಿ ಕೂಡ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Uttarakhand Glacier Burst incident | ಉತ್ತರಾಖಂಡ ಹಿಮಪ್ರವಾಹದಲ್ಲಿ ಮೃತರ ಸಂಖ್ಯೆ 136; ಅಧಿಕೃತ ಘೋಷಣೆ

ವರದಿ: ಎಸ್ ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ಟಿವಿ9

Published On - 7:16 pm, Tue, 6 April 21