ಬೆಂಗಳೂರು, ಸೆಪ್ಟೆಂಬರ್ 2: ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್-1 (Aditya L1) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ, ಸೂರ್ಯಯಾನದ ಕುರಿತು ಜನರಲ್ಲಿರುವ ತಪ್ಪುಕಲ್ಪನೆಗೆ ತೆರೆ ಎಳೆಯಲು ಮತ್ತು ಯೋಜನೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಂದಾಗಿದೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನಲ್ಲಿಳಿದಂತೆ ಆದಿತ್ಯ-ಎಲ್1 ಸೂರ್ಯನ ಬಳಿ ಸಾಗುತ್ತದೆಯೇ, ಸೂರ್ಯನ ಬಿಸಿಯನ್ನು ಈ ಬಾಹ್ಯಾಕಾಶ ನೌಕೆ ಹೇಗೆ ತಡೆದುಕೊಳ್ಳಬಹುದು ಎಂಬಿತ್ಯಾದಿ ಪ್ರಶ್ನೆಗಳು ಜನರಲ್ಲಿವೆ. ಇದಕ್ಕೆ ಉತ್ತರವಾಗಿ ಇಸ್ರೋ ಸಾಮಾಜಿಕ ಮಾಧ್ಯಮ ಎಕ್ಸ್ (Twitter) ಮೂಲಕ ಮಾಹಿತಿ ನೀಡಿದೆ.
ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಉಡಾವಣೆಗೆ ಇನ್ನು ನಾವು ಕೆಲವೇ ಗಂಟೆಗಳ ದೂರದಲ್ಲಿದ್ದೇವೆ. ಇದು ಎಲ್ 1 ಪಾಯಿಂಟ್‌ಗೆ ಇಸ್ರೋದ ಮೊದಲ ಮಿಷನ್ ಆಗಲಿದೆ! ಅದು ಸರಿ, ನೀವು ಹಲವಾರು ಮಾಧ್ಯಮಗಳಿಂದ ತಿಳಿದಿರುವಂತೆ, ಆದಿತ್ಯ-L1 ಸೂರ್ಯನ ಕಡೆಗೆ ಹೋಗುವುದಿಲ್ಲ. ಬದಲಾಗಿ, ಅದು ಬಾಹ್ಯಾಕಾಶದಲ್ಲಿರುವ ಲ್ಯಾಗ್ರೇಂಜ್ 1 ಅಥವಾ L1 ಪಾಯಿಂಟ್ (ಅದಕ್ಕಾಗಿಯೇ ಇದನ್ನು ಆದಿತ್ಯ ಎಂದು ಕರೆಯಲಾಗುತ್ತದೆ-L1) ಎಂಬ ಪ್ರದೇಶಕ್ಕೆ ಹೋಗುತ್ತಿದೆ. ಇದು ಭೂಮಿಯಿಂದ ಸೂರ್ಯನಿಗೆ ಇರುವ ಒಟ್ಟು ದೂರದ ಕೇವಲ ಶೇ 1 ರಷ್ಟು ದೂರವಷ್ಟೆ. ಆಗಲೂ, ಅದು ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರಲಿದೆ. ಅಂದರೆ, ಭೂಮಿಯಿಂದ ಚಂದ್ರನ ದೂರದ ಸುಮಾರು 4 ಪಟ್ಟು! ಎಂದು ಇಸ್ರೋ ಸ್ಪೇಸ್ಫ್ಲೈಟ್ ‘ಎಕ್ಸ್’ ಪೋಸ್ಟ್ನಲ್ಲಿ ಉಲ್ಲೇಖಿಸಿದೆ.
ಅದು L1 ಪಾಯಿಂಟ್‌ಗೆ ಹೋಗುವುದಕ್ಕೆ ಕಾರಣವೆಂದರೆ, ಆ ಪ್ರದೇಶದಲ್ಲಿ ಅಥವಾ ದೂರದಲ್ಲಿ, ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುತ್ತವೆ. ಇದರರ್ಥ, ಬಾಹ್ಯಾಕಾಶ ನೌಕೆಯು ಭೂಮಿಯನ್ನು ಸುತ್ತುವ ಅಗತ್ಯವಿಲ್ಲ ಮತ್ತು L1 ಬಿಂದುವಿನ ಸುತ್ತ ‘ಹಾಲೋ ಕಕ್ಷೆ’ ಯಲ್ಲಿ ಕುಳಿತುಕೊಳ್ಳಬಹುದು ಎಂದಾಗಿದೆ. ಇದರಿಂದ, ಬಾಹ್ಯಾಕಾಶ ನೌಕೆಯು ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವಾಗಲಿದೆ ಎಂದು ಇಸ್ರೋ ಸ್ಪೇಸ್ಫ್ಲೈಟ್ ಉಲ್ಲೇಖಿಸಿದೆ.
We are hours away from the launch of Aditya-L1, India’s first space-based solar observatory. 🇮🇳
It is also going to be ISRO’s first mission to the L1 point!That’s right, unlike what you may have seen in the media, Aditya-L1 is NOT headed to the Sun. ☀️
Instead, it is going to a… pic.twitter.com/AobPtk0cPW— ISRO Spaceflight (@ISROSpaceflight) September 1, 2023
ಇದನ್ನೂ ಓದಿ: Aditya L1 Mission: ಇಸ್ರೋ ಮಹತ್ವದ ಹೆಜ್ಜೆ, ಇಂದು ಆದಿತ್ಯ ಎಲ್1 ಉಡಾವಣೆ; ಸಮಯ, ಸ್ಥಳ, ಮಹತ್ವ ಇಲ್ಲಿದೆ
ಭೂಮಿ ಮತ್ತು ಸೂರ್ಯರ ನಡುವೆ 15 ಕೋಟಿ ಕಿಲೋಮೀಟರ್ ಅಂತರವಿದೆ ಎನ್ನಲಾಗಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದೆ. ಲ್ಯಾಗ್ರೇಂಜ್ ಬಿಂದು ಎಂದರೆ ಎರಡು ಗ್ರಹಗಳ ನಡುವಣ ಗುರುತ್ವ ಶಕ್ತಿ ಶೂನ್ಯವಾಗಿರುವ ಪ್ರದೇಶ ಅಥವಾ ಬಿಂದು ಆಗಿದೆ. ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್1 ಎಂದು ಕರೆಯಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ