ಬೆಂಗಳೂರು, ಸೆಪ್ಟೆಂಬರ್ 2: ಭಾರತದ ಮೊದಲ ಸೂರ್ಯ ಮಿಷನ್ ಉಡಾವಣೆಗೆ ಸಿದ್ಧವಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಇಂದು ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್-1 (Aditya L1) ಉಪಗ್ರಹವನ್ನು ಉಡಾವಣೆ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ನಡೆಯಲಿದೆ. ಇದನ್ನು ಐದು ಲ್ಯಾಗ್ರೇಂಜ್ ಪಾಯಿಂಟ್‌ಗಳಲ್ಲಿ ಒಂದು ‘ಪಾಯಿಂಟ್-1’ ರಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಆದಿತ್ಯ ಎಲ್1 ತನ್ನ ಗಮ್ಯಸ್ಥಾನಕ್ಕೆ ಪಯಣಿಸಲಿದೆ. ಮಿಷನ್ ಉಡಾವಣೆ ಮಾಡಲು ಪಿಎಸ್‌ಎಲ್‌ವಿ ರಾಕೆಟ್‌ನ ಎಕ್ಸ್‌ಎಲ್ ಆವೃತ್ತಿಯನ್ನು ಬಳಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಕೆಲವೇ ದಿನಗಳ ಹಿಂದೆ ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಹೊರಹೊಮ್ಮಿತ್ತು. ಇದಾದ ನಂತರವೇ ಇಸ್ರೋ ಸೂರ್ಯ ಮಿಷನ್ ಉಡಾವಣೆ ದಿನಾಂಕ ಘೋಷಿಸಿತ್ತು. ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ.
ಶ್ರೀಹರಿಕೋಟಾದಲ್ಲಿ ಇಂದಿನ ಹವಾಮಾನ ಸ್ಪಷ್ಟವಾಗಿದ್ದು, ಮಿಷನ್ ಉಡಾವಣೆಗೆ ವಿಜ್ಞಾನಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಬೆಂಗಳೂರು ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ. ಮಿಷನ್ ಉಡಾವಣೆಗೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಸ್ರೋ ಕಚೇರಿಗೆ ಆಗಮಿಸಲಿದ್ದಾರೆ.
ಆದಿತ್ಯ L1 ತನ್ನ ಗಮ್ಯಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಆದಿತ್ಯ-L1 ಪೇಲೋಡ್ ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್ (CME), ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಡೈನಾಮಿಕ್ಸ್ ಮತ್ತು ಬಾಹ್ಯಾಕಾಶ ಹವಾಮಾನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಉಪಗ್ರಹವು ಪ್ರತಿದಿನ 1400 ಕ್ಕೂ ಹೆಚ್ಚು ಚಿತ್ರಗಳನ್ನು ಇಸ್ರೋಗೆ ಕಳುಹಿಸಲಿದೆ. ಇದರಿಂದ ಸೂರ್ಯನ ಚಟುವಟಿಕೆಗಳ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಲಭ್ಯವಾಗುತ್ತದೆ.