ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್
ಪ್ರಧಾನಿ ಮೋದಿಯನ್ನು ಹೊಗಳಿದ್ದಕ್ಕೆ ಕಾಂಗ್ರೆಸ್ ನಾಯಕರು ಶಶಿ ತರೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಶಶಿ ತರೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ "ಹಾರಾಡಲು ಯಾರ ಅನುಮತಿಯನ್ನೂ ಕೇಳಬೇಡಿ, ರೆಕ್ಕೆಗಳು ನಿಮ್ಮವು, ಆಕಾಶ ಯಾರಿಗೂ ಸೇರಿದ್ದಲ್ಲ" ಎಂದು ನಿಗೂಢ ಅರ್ಥದ ಪೋಸ್ಟ್ ಒಂದನ್ನು ಹಾಕಿದ್ದಾರೆ.

ನವದೆಹಲಿ, ಜೂನ್ 25: ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಅವರೇ 2-3 ದಿನಗಳ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ, ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಪ್ರಧಾನಿ ಮೋದಿಯವರನ್ನು (PM Narendra Modi) ಪದೇಪದೆ ಹೊಗಳುತ್ತಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಶಶಿ ತರೂರ್ “ಪ್ರಧಾನಿ ಮೋದಿ ಭಾರತದ ದೊಡ್ಡ ಆಸ್ತಿ. ಮೋದಿಯವರ ಶಕ್ತಿ, ಚೈತನ್ಯ ಮತ್ತು ತೊಡಗಿಸಿಕೊಳ್ಳುವ ಇಚ್ಛೆ ವಿಶೇಷವಾದುದು. ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ” ಎಂದು ಬರೆದಿದ್ದರು. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮಗೆ ದೇಶ ಮೊದಲು. ಆದರೆ, ಕೆಲವರಿಗೆ ಮೋದಿಯೇ ಮೊದಲು” ಎಂದು ಶಶಿ ತರೂರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಹಾಗೇ, “ಶಶಿ ತರೂರ್ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ನನಗೆ ಇಂಗ್ಲಿಷ್ ಚೆನ್ನಾಗಿ ಓದಲು ಬರುವುದಿಲ್ಲ. ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಇಂದು ಹೇಳಿದ್ದರು.
ಇದನ್ನೂ ಓದಿ: ಭಾರತದ ಪ್ರಮುಖ ಆಸ್ತಿ; ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಶಿ ತರೂರ್
ಅದಾದ ಸ್ವಲ್ಪ ಹೊತ್ತಿನಲ್ಲೇ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್ ಕೂಡ ಅದೇ ರೀತಿ ಪರೋಕ್ಷವಾಗಿ ನಿಗೂಢ ಅರ್ಥದ ಸಾಲುಗಳನ್ನು ಬರೆದಿದ್ದಾರೆ. “ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು ಮತ್ತು ಆಕಾಶ ಯಾರಿಗೂ ಸೇರಿದ್ದಲ್ಲ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಖರ್ಗೆಗೆ ಪರೋಕ್ಷವಾಗಿಯೇ ತಿರುಗೇಟು ನೀಡಿದ್ದಾರೆ.
— Shashi Tharoor (@ShashiTharoor) June 25, 2025
ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಆಪರೇಷನ್ ಸಿಂಧೂರದ ಬಳಿಕ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲು ಆಯ್ಕೆ ಮಾಡಲಾಗಿತ್ತು. ಅದಾದ ನಂತರ ಕಾಂಗ್ರೆಸ್ ಅಸಮಾಧಾನ ಹೆಚ್ಚಾಗಿತ್ತು.
ಇದನ್ನೂ ಓದಿ: ನಮಗೆ ದೇಶ ಮೊದಲು, ಕೆಲವರಿಗೆ ಮೋದಿಯೇ ಮೊದಲು; ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ
ಪ್ರಧಾನಿ ಮೋದಿಯವರ ಬಗ್ಗೆ ಹೊಗಳಿ ಬರೆದಿದ್ದ ಶಶಿ ತರೂರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು. ಆದರೆ, ನಿನ್ನೆಯೇ ಅದಕ್ಕೆ ಸ್ಪಷ್ಟನೆ ನೀಡಿದ್ದ ತರೂರ್, ನಾನು ನನ್ನ ಸಿದ್ಧಾಂತವನ್ನು ಬದಲಿಸುವುದಿಲ್ಲ. ನನ್ನ ಹೇಳಿಕ ಪ್ರಧಾನಿ ಮೋದಿಯವರ ಪಕ್ಷವನ್ನು ಸೇರುವ ಉದ್ದೇಶದಿಂದ ಬರೆದಿದ್ದಲ್ಲ. ನನ್ನ ಹೇಳಿಕೆ ರಾಷ್ಟ್ರೀಯ ಏಕತೆ, ಆಸಕ್ತಿ ಮತ್ತು ಭಾರತಕ್ಕಾಗಿ ನಿಲ್ಲುವ ಹೇಳಿಕೆಯಾಗಿದೆ ಎಂದು ಹೇಳಿದ್ದರು. ಪಕ್ಷಭೇದ ಮರೆತು ನಾನು ದೇಶಕ್ಕಾಗಿ ನಿಲ್ಲುತ್ತೇನೆ ಎಂದು ಅವರು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




