ಭಾರತದ ಪ್ರಧಾನಿಯನ್ನೂ ಟ್ರಂಪ್ ಕಿಡ್ನಾಪ್ ಮಾಡುತ್ತಾರಾ? ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ವಿವಾದ

ವೆಬೆಜುವೆಲಾದೊಳಗೆ ನುಗ್ಗಿ ಅಲ್ಲಿನ ಅಧ್ಯಕ್ಷರನ್ನು ಸದ್ದಿಲ್ಲದಂತೆ ಅಪಹರಿಸಿ, ಬಂಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನೇಕ ದೇಶಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದು ದೇಶದ ಮುಖ್ಯಸ್ಥರನ್ನು ಈ ರೀತಿ ಅಮಾನುಷವಾಗಿ ನಡೆಸಿಕೊಂಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ‘ಟ್ರಂಪ್ ನಮ್ಮ ದೇಶದ ಪ್ರಧಾನಿ ಮೋದಿಯವರನ್ನೂ ಅಪಹರಿಸುತ್ತಾರಾ?’ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಭಾರತದ ಪ್ರಧಾನಿಯನ್ನೂ ಟ್ರಂಪ್ ಕಿಡ್ನಾಪ್ ಮಾಡುತ್ತಾರಾ? ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ವಿವಾದ
Prithviraj Chavan

Updated on: Jan 06, 2026 | 6:28 PM

ಮುಂಬೈ, ಜನವರಿ 6: ಭಾರತ-ಅಮೆರಿಕಾ ದೇಶಗಳ ನಡುವಿನ ವ್ಯಾಪಾರ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಇಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪ್ರಸ್ತಾವಿತ ಶೇ. 50ರಷ್ಟು ಸುಂಕವು ಭಾರತ-ಅಮೆರಿಕಾ ನಡುವಿನ ವ್ಯಾಪಾರವನ್ನು ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ಭಾರತದ ರಫ್ತುಗಳನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸುತ್ತದೆ ಎಂದು ಎಚ್ಚರಿಸಿದ ಪೃಥ್ವಿರಾಜ್ ಚೌಹಾಣ್, ವೆನೆಜುವೆಲಾವನ್ನು (Venezuela) ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತದ ಪ್ರಧಾನಿಯನ್ನೂ ಅಪಹರಿಸುತ್ತಾರಾ? ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.

ಅವರ ಈ ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿದೆ. ಇಂದು ವರದಿಗಾರರೊಂದಿಗೆ ಮಾತನಾಡಿದ ಪೃಥ್ವಿರಾಜ್ ಚೌಹಾಣ್, “ಭಾರೀ ಸುಂಕವು ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ವಹಿವಾಟು ಸಾಧ್ಯವಾಗದಂತೆ ಮಾಡುತ್ತದೆ. ಇದು ಭಾರತವು ಪರ್ಯಾಯ ರಫ್ತು ಮಾರುಕಟ್ಟೆಗಳನ್ನು ಹುಡುಕುವಂತೆ ಮಾಡುತ್ತದೆ. ಹಾಗಾದರೆ, ಮುಂದೆ ಏನು? ವೆನೆಜುವೆಲಾದಲ್ಲಿ ನಡೆದಂತಹ ಘಟನೆಯೇ ಭಾರತದಲ್ಲಿ ನಡೆಯುತ್ತದೆಯೇ? ಟ್ರಂಪ್ ನಮ್ಮ ದೇಶದ ಪ್ರಧಾನಿಯನ್ನು ಕೂಡ ಅಪಹರಿಸುತ್ತಾರೆಯೇ?” ಎಂದು ಕೇಳಿದ್ದಾರೆ.

ಇದನ್ನೂ ಓದಿ: ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್​​ಗಿದೆ ಭಾರತದ ನಂಟು; ಇವರೂ ಕೂಡ ಸಾಯಿ ಬಾಬಾ ಭಕ್ತೆ!

ವೆನೆಜುವೆಲಾದ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಟ್ರಂಪ್ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಪರಿಸ್ಥಿತಿಯನ್ನು ಪೃಥ್ವಿರಾಜ್ ಚೌಹಾಣ್ ವೆನೆಜುವೆಲಾದ ಜೊತೆ ಹೋಲಿಕೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.


ಪೃಥ್ವಿರಾಜ್ ಚೌಹಾಣ್ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆಪರೇಷನ್ ಸಿಂಧೂರ್ ಬಗ್ಗೆ ಕೂಡ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನವೇ ಭಾರತ ಹಿನ್ನಡೆ ಅನುಭವಿಸಿತ್ತು ಎಂದು ಅವರು ಆರೋಪಿಸಿದ್ದರು. ಆ ಹೇಳಿಕೆಗೆ ರಕ್ಷಣಾ ತಜ್ಞರು ಮತ್ತು ಕೇಂದ್ರ ಸರ್ಕಾರದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅದು ಭಾರತೀಯ ಸೇನೆಗೆ ಮಾಡಿದ ಅವಮಾನ ಎಂದು ಟೀಕೆ ವ್ಯಕ್ತವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ