ನವದೆಹಲಿ, (ಜೂನ್ 11): ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾದ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ನವದೆಹಲಿಯ ಉದ್ಯೋಗ ಭವನದಲ್ಲಿರುವ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ (Union Minister for Steel and Heavy Industry) ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದರು. ಪೂಜೆ ಸಲ್ಲಿಸಿ ಬಳಿಕ ಕಡತಕ್ಕೆ ಸಹಿ ಹಾಕುವ ಮೂಲಕ ಹೆಚ್‌ಡಿಕೆ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ತುಕ್ಕು ಹಿಡಿದ ಸರ್ಕಾರದಲ್ಲಿ ಕುಮಾರಸ್ವಾಮಿ ಉಕ್ಕು ಖಾತೆ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ 5 ಪ್ರಶ್ನೆಗಳನ್ನು ಕೇಳಿದ್ದಾರೆ.
ಇದನ್ನೂ ಓದಿ ಕೇಂದ್ರ ಉಕ್ಕು ಸಚಿವರಾದ ಕುಮಾರಸ್ವಾಮಿ; ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಹಿಡಿದ ಗ್ರಹಣ ಬಿಡುತ್ತಾ?
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ಸರಕಾರವು ವೈಜಾಗ್ ಸ್ಟೀಲ್ ಪ್ಲಾಂಟ್ ಎಂದೇ ಖ್ಯಾತಿ ಪಡೆದಿರುವ ರಾಷ್ಟ್ರೀಯ ಇಸ್ಪತ್ ನಿಗಮ ಲಿಮಿಟೆಡ್(ಆರ್‍ಐಎನ್‍ಎಲ್) ಅನ್ನು ಪ್ರಧಾನಿಯ ಸ್ನೇಹಿತರಿಗೆ ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಸುಮಾರು 1 ಲಕ್ಷ ಜನ ಜೀವನೋಪಾಯಕ್ಕೆ ಈ ಕಾರ್ಖಾನೆ ಮೇಲೆ ಅವಲಂಬಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
Here is our statement in Kannada on public sector steel plants, raising 5 questions for the new Steel Minister HD Kumaraswamy pic.twitter.com/RaijuFWduw
— Jairam Ramesh (@Jairam_Ramesh) June 11, 2024
2021ರ ಜನವರಿಯಲ್ಲಿ ಆರ್ಥಿಕ ವ್ಯವಹಾರಗಳ ಮೇಲೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರ್‌ಐಎನ್‍ಎಲ್ ಶೇ.100ರಷ್ಟು ಖಾಸಗಿಕರಣದ ಪ್ರಸ್ತಾವನೆಗೆ ಅಂಕಿತ ನೀಡಿದ್ದು, ಕಳೆದ ಮೂರು ವರ್ಷಗಳಿಂದ ಕಾರ್ಖಾನೆಯ ಕಾರ್ಮಿಕರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಕೇಂದ್ರ ಸರಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯದ ಪರಿಣಾಮವಾಗಿ ಈ ಕಾರ್ಖಾನೆ ನಷ್ಟ ಅನುಭವಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಈ ವೈಜಾಗ್ ಉಕ್ಕಿನ ಕಾರ್ಖಾನೆಯನ್ನು ಪ್ರಧಾನಿಯ ಸ್ನೇಹಿತರಿಗೆ ಮಾರುವುದಿಲ್ಲ ಎಂದು ಲಿಖಿತ ಭರವಸೆ ನೀಡಬಲ್ಲರೇ? ಎಂದು ಅವರು ಪ್ರಶ್ನಿಸಿದ್ದಾರೆ.
2019ರಲ್ಲಿ ಮೋದಿ ಸರಕಾರವು ಸೇಲಂ ಉಕ್ಕಿನ ಕಾರ್ಖಾನೆಯಲ್ಲಿ ಬಂಡಾವಾಳ ಹೂಡಿಕೆ ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ನಂತರ 2000 ಕಾರ್ಮಿಕರು, ಕಾರ್ಮಿಕರ ಕುಟುಂಬದವರು, ಕಾರ್ಖಾನೆಗೆ ಜಾಗ ನೀಡಿದ್ದ ರೈತರು ಈ ಕಾರ್ಖಾನೆಯ ಖಾಸಗೀಕರಣ ವಿರೋಧಿಸಿ ಹೋರಾಟ ಮಾಡಿದರು. ಈ ಕಾರ್ಖಾನೆ ಸುಮಾರು 25 ಹಳ್ಳಿಗಳಷ್ಟು ವಿಸ್ತೀರ್ಣ ಹೊಂದಿದ್ದು, ಉದ್ದೇಶಪೂರ್ವಕವಾಗಿ ಈ ಕಾರ್ಖಾನೆಯನ್ನು ನಷ್ಟದಲ್ಲಿ ನಡೆಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ ಎಂದು ಜೈರಾಮ್ ತಿಳಿಸಿದ್ದಾರೆ
ಭಾರತೀಯ ಉಕ್ಕು ಪ್ರಾಧಿಕಾರದ ಮುಖ್ಯಸ್ಥರು ಆಡಳಿತ ಪಕ್ಷದ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರ ಈವರೆಗೂ ಈ ಕಾರ್ಖಾನೆ ಮಾರಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಈ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ಮುಂದುವರಿಸುವರೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ಪರಿಕಲ್ಪನೆಯಲ್ಲಿ ನಗರ್ನಾರ್ ಉಕ್ಕು ಕಾರ್ಖಾನೆಯು ಬಸ್ತರ್ ಪ್ರದೇಶದ ಜನರಿಗೆ ಸಾವಿರಾರು ಉದ್ಯೋಗ ಸಿಗುವ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ ಮೋದಿ 2020ರಿಂದ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಒಡೆತನ ಪ್ರಧಾನಿಯ ಉದ್ಯಮಿ ಸ್ನೇಹಿತರ ಪಾಲಾಗಲು ಸಿದ್ಧತೆ ನಡೆಸಿತ್ತು. ಆದರೆ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಮಿತ್ ಶಾ ಬಸ್ತ ಪ್ರದೇಶಕ್ಕೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಖಾಸಗಿಕರಣ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು ಎಂದು ಅವರು ಸ್ಮರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ