ಬುಡಕಟ್ಟು ಸಮುದಾಯದವರಿಗೆ ಕಾಂಗ್ರೆಸ್ ಒಮ್ಮೆಯೂ ಸಿಎಂ ಸ್ಥಾನ ಕೊಡಲಿಲ್ಲ; ಬಿಜೆಪಿ ಟೀಕೆ
ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಈ ಬಾರಿ ದಕ್ಷಿಣ ಭಾರತಲ್ಲಿ ಕಳೆದ ಚುನಾವಣೆಗಿಂತ ಉತ್ತಮ ಪ್ರದರ್ಶನ ನೀಡಿತ್ತು. ಕರ್ನಾಟಕದಲ್ಲಿ ಮಾತ್ರ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನಗಳು ಬಿಜೆಪಿಗೆ ಸಿಕ್ಕಿತ್ತು. ಇದರ ಜೊತೆಗೆ ಈ ಚುನಾವಣೆಯಲ್ಲಿ ಬಿಜೆಪಿ ಈಶಾನ್ಯ ರಾಜ್ಯಗಳತ್ತ ಹೆಚ್ಚು ಗಮನ ಕೇಂದ್ರೀಕರಿಸಿತ್ತು.
ನವದೆಹಲಿ: ಬುಡಕಟ್ಟು ಸಮುದಾಯದವರ ಪ್ರಾಬಲ್ಯ ಹೆಚ್ಚಾಗಿರುವ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ (BJP) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಉತ್ತಮ ಸಂಖ್ಯೆಯ ಸ್ಥಾನಗಳನ್ನು ಪಡೆದಿದೆ. ಅಸ್ಸಾಂನಲ್ಲಿ 9, ಅರುಣಾಚಲಪ್ರದೇಶದಲ್ಲಿ 1, ತ್ರಿಪುರದಲ್ಲಿ 2 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಇದರ ನಡುವೆ ಇದೀಗ ಒಡಿಶಾದಲ್ಲಿ (Odisha) ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ನಾಳೆ (ಬುಧವಾರ) ಬುಡಕಟ್ಟು ಸಮುದಾಯದ ನಾಯಕರಾದ ಮೋಹನ್ ಚರಣ್ ಮಾಝಿ (Mohan Charan Majhi) ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಬಿಜೆಪಿ ಬುಡಕಟ್ಟು ಸಮುದಾಯದ ನಾಯಕರಿಗೆ ರಾಜಕೀಯದಲ್ಲಿ ನೀಡಿದಷ್ಟು ಅವಕಾಶಗಳನ್ನು ಕಾಂಗ್ರೆಸ್ ನೀಡಿಲ್ಲ. ಕಾಂಗ್ರೆಸ್ ಇದುವರೆಗೂ ಬುಡಕಟ್ಟು ಸಮುದಾಯದ ಒಬ್ಬನೇ ಒಬ್ಬ ಮುಖ್ಯಮಂತ್ರಿಯನ್ನೂ ನೇಮಕ ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Mohan Charan Majhi: ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಆಯ್ಕೆ
Something worth thinking about…
Excluding the Northeastern states, which are largely tribal-dominated, Congress has appointed NO TRIBAL CM in the 21st century.
BJP has given 4 – Shri Babulal Marandi, Shri Arjun Munda, Shri Vishnu Deo Sai, and Shri Mohan Majhi.
And even in…
— Ashwini Vaishnaw (@AshwiniVaishnaw) June 11, 2024
ಬಹುಮಟ್ಟಿಗೆ ಬುಡಕಟ್ಟು ಸಮುದಾಯದ ಪ್ರಾಬಲ್ಯ ಹೊಂದಿರುವ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಕಾಂಗ್ರೆಸ್ 21ನೇ ಶತಮಾನದಲ್ಲಿ ಯಾವುದೇ ಬುಡಕಟ್ಟು ಮುಖ್ಯಮಂತ್ರಿಯನ್ನು ನೇಮಿಸಿಲ್ಲ. ಆದರೆ, ಬಿಜೆಪಿ 4 ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಗಳನ್ನು ನೀಡಿದೆ. ಜಾರ್ಖಂಡ್ ಮುಖ್ಯಮಂತ್ರಿಗಳಾಗಿ ಬಾಬುಲಾಲ್ ಮರಾಂಡಿ ಹಾಗೂ ಅರ್ಜುನ್ ಮುಂಡಾ, ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಮತ್ತು ಇದೀಗ ಒಡಿಶಾದ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಅವರಿಗೆ ಬಿಜೆಪಿ ಉನ್ನತ ಸ್ಥಾನಗಳನ್ನು ನೀಡಿದೆ ಎಂದು ಅಶ್ವಿನಿ ವೈಷ್ಣವ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: BJP President: ಬಿಜೆಪಿ ನೂತನ ಅಧ್ಯಕ್ಷ ಯಾರಾಗಲಿದ್ದಾರೆ?; ಅಚ್ಚರಿಯ ಪಟ್ಟಿಯಲ್ಲಿದೆ ಕರ್ನಾಟಕದ ನಾಯಕನ ಹೆಸರು!
ಅಸ್ಸಾಂನಲ್ಲಿಯೂ ಸಹ ಬಿಜೆಪಿ ಸರ್ಬಾನಂದ ಸೋನೋವಾಲ್ ಅವರನ್ನು ಸಿಎಂ ಮಾಡಿತು. ಆದರೆ, ಕಾಂಗ್ರೆಸ್ ಯಾವುದೇ ಬುಡಕಟ್ಟು ಜನಾಂಗದವರನ್ನು ಮುಖ್ಯಮಂತ್ರಿಯಾಗಿ ಮಾಡಲಿಲ್ಲ. ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಸಮುದಾಯದ ಮಹಿಳೆಯಾದ ದ್ರೌಪದಿ ಮುರ್ಮು ಅವರನ್ನು ನಾಮನಿರ್ದೇಶನ ಮಾಡಿದಾಗಲೂ ಕಾಂಗ್ರೆಸ್ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂದು ಸಚಿವ ಅಶ್ವಿನಿ ವೈಷ್ಣವ್ ಟೀಕಿಸಿದ್ದಾರೆ.
ಇದು ಬುಡಕಟ್ಟು ಸಬಲೀಕರಣದ ಬಗ್ಗೆ ಯಾವ ಪಕ್ಷ ಹೆಚ್ಚು ಕಾಳಜಿ ವಹಿಸುತ್ತದೆ ಮತ್ತು ಯಾರು ಕಾಳಜಿ ವಹಿಸುವುದಿಲ್ಲ ಎಂಬುದರ ಒಂದು ನೋಟವಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 pm, Tue, 11 June 24