ಹಸುವಿನ ಹಾಲು ಕರೆಯಲು ಎಲ್ಲರಿಗೂ ಸಾಧ್ಯ, ನಾವು ಎತ್ತಿನ ಹಾಲು ಕರೆದೆವು: ಗುಜರಾತ್ ಚುನಾವಣೆ ಬಗ್ಗೆ ಕೇಜ್ರಿವಾಲ್

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಜ್ರಿವಾಲ್, ಒಂದು ವರ್ಷದಲ್ಲಿ ನಾವು ಪಂಜಾಬ್​​ನಲ್ಲಿ ಗೆದ್ದೆವು, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಗೆದ್ದೆವು. ಗೋವಾದಲ್ಲಿ 2 ಶಾಸಕರು ಮತ್ತು ಗುಜರಾತಿನಲ್ಲಿ ಶೇ 14ರಷ್ಟು ಮತ ಪಡೆದು 5 ಸೀಟು ಗೆದ್ದೆವು

ಹಸುವಿನ ಹಾಲು ಕರೆಯಲು ಎಲ್ಲರಿಗೂ ಸಾಧ್ಯ, ನಾವು ಎತ್ತಿನ ಹಾಲು ಕರೆದೆವು: ಗುಜರಾತ್ ಚುನಾವಣೆ ಬಗ್ಗೆ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 19, 2022 | 2:02 PM

ದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Assembly polls) ಆಮ್ ಆದ್ಮಿ ಪಕ್ಷಕ್ಕೆ (Aam Adami Party) ಶೇ 14ರಷ್ಟು ಮತ ಸಿಕ್ಕಿರುವ ಬಗ್ಗೆ ಮಾತನಾಡಿದ ದೆಹಲಿ ಸಿಎಂ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ (Arvind Kejriwal), ಗುಜರಾತಿನಲ್ಲಿ ಐದು ಸೀಟು ಗೆಲ್ಲುವುದು ಎಷ್ಟು ಕಷ್ಟ ಎಂದರೆ ಎತ್ತಿನ ಹಾಲು ಕರೆದಂತೆ ಎಂದಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಜ್ರಿವಾಲ್, ಒಂದು ವರ್ಷದಲ್ಲಿ ನಾವು ಪಂಜಾಬ್​​ನಲ್ಲಿ ಗೆದ್ದೆವು, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಗೆದ್ದೆವು. ಗೋವಾದಲ್ಲಿ 2 ಶಾಸಕರು ಮತ್ತು ಗುಜರಾತಿನಲ್ಲಿ ಶೇ 14ರಷ್ಟು ಮತ ಪಡೆದು 5 ಸೀಟು ಗೆದ್ದೆವು. ಗುಜರಾತಿನ ಚುನಾವಣೆಯಲ್ಲಿನ ಗೆಲುವು ಬಗ್ಗೆ ಒಬ್ಬ ವ್ಯಕ್ತಿ ನಾವು ಎತ್ತಿನ ಹಾಲು ಹಿಂಡಿದ್ದೇವೆ ಎಂದರು. ಎಲ್ಲರಿಗೂ ಹಸುವಿನ ಹಾಲು ಕರೆಯಬಹುದು, ಆದರೆ ನಾವು ಎತ್ತಿನ ಹಾಲು ಕರೆದಿದ್ದೇವೆ. 2027ರಲ್ಲಿ ಗುಜರಾತಿನಲ್ಲಿ ನಾವು ಸರ್ಕಾರ ರಚಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆಮ್ ಆದ್ಮಿ ಎಎಪಿ ತನ್ನ ರಾಷ್ಟ್ರೀಯ ಸ್ಥಾನಮಾನವನ್ನು ಪಡೆದ ನಂತರ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಭಾನುವಾರ ಸಭೆ ಸೇರಿತು. ರಾಷ್ಟ್ರೀಯ ಕೌನ್ಸಿಲ್‌ನಲ್ಲಿ, ಪಕ್ಷದ ನಾಯಕರು ವಿವಿಧ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿ, ನಿರ್ಣಯಗಳನ್ನು ಅಂಗೀಕರಿಸಿದರು. ಈ ಹೊತ್ತಲ್ಲಿ ಅರವಿಂದ ಕೇಜ್ರಿವಾಲ್ ಅವರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಜನರಿಗೆ ಮನವಿ ಮಾಡಿದರು. ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರಕ್ಕೆ ಸೈನಿಕರ ಪ್ರಾಣದ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ.

ಕಳೆದ ವಾರ ಗಡಿ ಮುಖಾಮುಖಿಯ ಸಂದರ್ಭದಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಭಾರತೀಯ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆದರು, ಇದು ಎರಡೂ ಕಡೆಗಳಲ್ಲಿ ಗಾಯಗಳಿಗೆ ಕಾರಣವಾಯಿತು ಎಂದು ಸರ್ಕಾರವು ಈ ವಾರದ ಆರಂಭದಲ್ಲಿ ತಿಳಿಸಿದೆ. ಜೂನ್ 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ಮುಖಾಮುಖಿ ನಡೆದಿದ್ದು ಇದರಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಾಜಕೀಯ ಬೇಡ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ಚೀನಾದಿಂದ ಯಾರು ವಸ್ತುಗಳನ್ನು ಖರೀದಿಸುತ್ತಿದ್ದಾರೆ? ಚೀನಾದಿಂದ ವಸ್ತುಗಳನ್ನು ಖರೀದಿಸುವಂತೆ ಬಿಜೆಪಿ ಮೇಲೆ ಒತ್ತಾಯ ಹೇರುತ್ತಿರುವವರು ಯಾರು? ನಾವು ಯಾಕೆ ಉತ್ಪಾದನೆ ಹೆಚ್ಚಿಸಬಾರದು? ನಾವು ಚೀನಾದಿಂದ ಖರೀದಿಸುವ ಅದೇ ವಸ್ತುವನ್ನು ಭಾರತದಲ್ಲಿ ಉತ್ಪಾದಿಸಬಹುದು ಎದು ಅವರು ಹೇಳಿದ್ದಾರೆ.

ಸರ್ಕಾರವು ದೇಶದಲ್ಲಿರುವ ಜನರನ್ನು ಹೊರಗೋಡಿಸಿ ಚೀನಾದಲ್ಲಿನ ಜನರನ್ನು ಆಲಿಂಗನ ಮಾಡುತ್ತಿದೆ. ವ್ಯಾಪಾರಿಗಳು ಮತ್ತು ಉದ್ಯಮಿಗಳು ಭಾರತ ಬಿಟ್ಟು ಹೋಗುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಸಮಾರಂಭದಲ್ಲಿ ಕೇಜ್ರಿವಾಲ್ ಅವರು ಎಎಪಿ ಮತ್ತು ಇತರ ಪಕ್ಷಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಸೂಚಿಸಿದರು. “ಒಂದು ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿದೆ, ಆದರೆ ಇನ್ನೊಂದು ಪಕ್ಷವು ಗೂಂಡಾಗಿರಿಯನ್ನು ಉತ್ತೇಜಿಸುತ್ತದೆ. ಅದು ಗೂಂಡಾಗಳಿಗೆ ಆಶ್ರಯ ನೀಡುತ್ತದೆ. ಎಎಪಿ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತವಾಗಿ ನಿಂತಿರುವುದನ್ನು ಜನರು ನೋಡುತ್ತಿದ್ದಾರೆ ಎಂದಿದ್ದಾರೆ ಕೇಜ್ರಿವಾಲ್.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ