ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಾಜಕೀಯ ಬೇಡ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ಇದೇ ಮೊದಲ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ. ಈಗ ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಗಡಿಭಾಗದ ಜನರೊಂದಿಗೆ ನಾವು ನಿಲ್ಲಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಶಿಂಧೆ ಹೇಳಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಾಜಕೀಯ ಬೇಡ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 19, 2022 | 12:52 PM

ಮುಂಬೈ: ಕರ್ನಾಟಕ-ಮಹಾರಾಷ್ಟ್ರ (Maharashtra)ರಾಜ್ಯಗಳ ನಡುವೆ ಗಡಿ ವಿವಾದ (border issue)ವಿಚಾರ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ (Maharashtra CM Eknath Shinde) ಗಡಿ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ. ಈಗ ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಗಡಿಭಾಗದ ಜನರೊಂದಿಗೆ ನಾವು ನಿಲ್ಲಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಶಿಂಧೆ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಕೆಲ ಗಡಿ ಗ್ರಾಮಗಳ ನೀರಿನ ಸಮಸ್ಯೆ ನೀಗಿಸಿದ್ದೇವೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಮನವಿಗೆ ಮಧ್ಯಸ್ಥಿಕೆ ವಹಿಸಿದ್ದಾರೆ. ಮೊದಲ ಬಾರಿಗೆ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಾವು ಗಡಿ ನಿವಾಸಿಗಳೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಇದು ನಮ್ಮ ಹೆಮ್ಮೆಯ ವಿಚಾರ ಎಂದಿದ್ದಾರೆ.

ಕರ್ನಾಟಕದ ಗಡಿ ವಿವಾದದ ಬಗ್ಗೆ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾವನೆ ತರಲಿದೆ ಎಂದು ಶಿಂಧೆ ಹೇಳಿದರು. ಡಿಸೆಂಬರ್ 14 ರಂದು ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಅಮಿತ್ ಶಾ ಸಭೆ ನಡೆಸಿದ್ದಾರೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ಉಭಯ ರಾಜ್ಯಗಳು ಪರಸ್ಪರ ಹಕ್ಕು ಸಾಧಿಸುವುದಿಲ್ಲ ಎಂದು ಹೇಳಿದರು. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರವಾಗಿ ನಡೆದ ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ ಎಂದು ಶಾ ಹೇಳಿದರು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಗಡಿಗೂ ಹಬ್ಬಿದ ಭಾಷಾ ವಿವಾದ: ಮರಾಠಿ ಸಿನಿಮಾ ಪೋಸ್ಟರ್​ಗೆ ಮಸಿ ಬಳಿದ ಕರವೇ ಕಾರ್ಯಕರ್ತರು

“ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ, ಕರ್ನಾಟಕದ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಇತರ ಹಿರಿಯ ನಾಯಕರನ್ನು ಕರೆದಿದ್ದೇನೆ. ಸಕಾರಾತ್ಮಕ ಧೋರಣೆಯನ್ನು ಇಟ್ಟುಕೊಂಡು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಾಂವಿಧಾನಿಕ ರೀತಿಯಲ್ಲಿ ನಿರ್ಣಯಕ್ಕೆ ಬರಬೇಕು” ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ಯಾವುದೇ ರಾಜ್ಯಗಳು ಹಕ್ಕು ಸಾಧಿಸಬಾರದು. ಎರಡೂ ರಾಜ್ಯಗಳ ಮೂವರು ಸಚಿವರು ಸಭೆ ಸೇರಿ ಈ ವಿಷಯವನ್ನು ಚರ್ಚಿಸಬೇಕು. ಎರಡು ರಾಜ್ಯಗಳ ನಡುವೆ ಬಾಕಿ ಇರುವ ಸಮಸ್ಯೆಗಳನ್ನೂ ಈ ಸಚಿವರು ಇತ್ಯರ್ಥಗೊಳಿಸಬೇಕು ಎಂದು ಶಾ ಹೇಳಿದ್ದಾರೆ.

ಎರಡೂ ರಾಜ್ಯಗಳಲ್ಲಿನ ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಯ ವಿಷಯವನ್ನಾಗಿ ಮಾಡಬಾರದು ಎಂದು ಅಮಿತ್ ಶಾ ಹೇಳಿದ್ದಾರೆ. ಈ ವಿಚಾರವನ್ನು ಇತ್ಯರ್ಥಗೊಳಿಸುವುದಕ್ಕಾಗಿ ರೂಪಿಸಿದ ಸಮಿತಿಯ ನಿರ್ಧಾರ ಮತ್ತು ಸುಪ್ರೀಂಕೋರ್ಟ್ ತೀರ್ಪಿಗಾಗಿ ನಾವು ಕಾಯಬೇಕು. ಎನ್​​ಸಿಪಿ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಗುಂಪು ಈ ವಿಷಯದಲ್ಲಿ ಸಹಕರಿಸುತ್ತದೆ ಎಂಬ ಭರವಸೆ ನನಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಕೋರ್ಟ್ ಆದೇಶವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ ಎಂದ ಅಮಿತ್ ಶಾ

ರಾಜ್ಯ ಮರುಸಂಘಟನೆ ಕಾಯ್ದೆ 1956ರ ಪ್ರಕಾರ ಮಹಾರಾಷ್ಟ್ರ ಸರ್ಕಾರ ಕರ್ನಾಟಕದೊಂದಿಗಿನ ಗಡಿಯನ್ನು ಮರು ಹೊಂದಿಸಬೇಕು ಎಂದು ಒತ್ತಾಯಿಸಿದೆ. ಈ ಹಿನ್ನಲೆಯಲ್ಲಿ ಎರಡೂ ರಾಜ್ಯಗಳು ನಾಲ್ವರು ಸದಸ್ಯರ ಸಮಿತಿ ರೂಪಿಸಿವೆ. ಮಹಾರಾಷ್ಟ್ರ ಸರ್ಕಾರ ಕನ್ನಡ ಮಾತನಾಡುವ 260 ಹಳ್ಳಿಗಳನ್ನು ವರ್ಗಾಯಿಸಲು ಇಚ್ಛೆ ವ್ಯಕ್ತಪಡಿಸಿತ್ತು, ಆದರೆ ಕರ್ನಾಟಕ ಅದನ್ನು ತಿರಸ್ಕರಿಸಿತು. ಇದೀಗ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳೆರಡೂ ಪ್ರಕರಣವನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು, ಪ್ರಕರಣ ಇನ್ನೂ ಬಾಕಿ ಉಳಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Mon, 19 December 22