ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 62,258 ಮಂದಿಗೆ ಕೊರೊನಾ; 5 ತಿಂಗಳುಗಳಲ್ಲಿ ವರದಿ ಆಗಿರುವ ಅತಿಹೆಚ್ಚು ಪ್ರಕರಣ
ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಕರಣಗಳು ಸತತವಾಗಿ ಹೆಚ್ಚುತ್ತಿದ್ದು, ರಾಷ್ಟ್ರದಲ್ಲೇ ಅತಿಹೆಚ್ಚು ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗಿವೆ. ಅಲ್ಲಿನ ಸರ್ಕಾರ ನಾಳೆಯಿಂದ (ರವಿವಾರ) ರಾತ್ರಿ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಿದೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿಯಿಂದ ಈಗಾಗಲೇ ಆದೇಶ ಹೊರಬಿದ್ದಿದೆ.
ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಕ್ಷಿಪ್ರಗತಿಯಲ್ಲಿ ಹಬ್ಬುತ್ತಿದೆ ಎನ್ನುವುದಕ್ಕೆ ಕಳೆದ 24 ಗಂಟೆಗಳಲ್ಲಿ 62,258ಹೊಸ ಪ್ರಕರಣಗಳು ವರದಿಯಾಗಿರುವುದೇ ಸಾಕ್ಷಿಯಾಗಿದೆ. ಇದು ಕಳೆದ ಅಕ್ಟೋಬರ್ 16ರಿಂದ ದಾಖಲಾಗಿರುವ ಪ್ರಕರಣಗಲ್ಲಿ ಇದೇ ಅತಿಹೆಚ್ಚಿನ ಸಂಖ್ಯೆಯಾಗಿದೆ. ನಿನ್ನೆ, ಅಂದರೆ ಶುಕ್ರವಾರ ವರದಿಯಾಗಿರುವ ಪ್ರಕರಣಗಳಿಗೆ ಹೋಲಿಸಿದರೆ ಶನಿವಾರದ ಪ್ರಕರಣಗಳಲ್ಲಿ ಶೇಕಡಾ 5.3 ಹೆಚ್ಚಳವಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ 291 ಜನ ಸೋಂಕಿಗೆ ಬಲಿಯಾಗಿದ್ದು ಇದುವರೆಗೆ ಮರಣ ಹೊಂದಿದವರ ಸಂಖ್ಯೆ 1,61,240ತಲುಪಿದೆ. ಭಾರತದಲ್ಲಿ ಮೊದಲ ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿದ್ದು ಕಳೆದ ವರ್ಷ ಜನೆವರಿ 30ರಂದು. ಅಲ್ಲಿಂದೀಚೆಗೆ ಜಾಗತಿಕವಾಗಿ ಭಾರತ ಮೂರನೇ ಅತಿಹೆಚ್ಚು ಕೊವಿಡ್ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಅಮೇರಿಕ ಮತ್ತು ಬ್ರೆಜಿಲ್ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.
ಭಾರತದ ದೃಷ್ಟಿಯಿಂದ ನೋಡಿದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಕರಣಗಳು ಸತತವಾಗಿ ಹೆಚ್ಚುತ್ತಿದ್ದು, ರಾಷ್ಟ್ರದಲ್ಲೇ ಅತಿಹೆಚ್ಚು ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗಿವೆ. ಅಲ್ಲಿನ ಸರ್ಕಾರ ನಾಳೆಯಿಂದ (ರವಿವಾರ) ರಾತ್ರಿ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಿದೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿಯಿಂದ ಈಗಾಗಲೇ ಆದೇಶ ಹೊರಬಿದ್ದಿದೆ. ರಾಜ್ಯದೆಲ್ಲೆಡೆ ಶಾಪಿಂಗ್ ಮಾಲ್ಗಳು ರಾತ್ರಿ 8ರಿಂದ ಬೆಳಗ್ಗೆ 7 ಗಂಟೆಯವರೆಗೆ ಮುಚ್ಚಿರುತ್ತವೆ.
ಶನಿವಾರದಂದು ಮಹಾರಾಷ್ಟ್ರದಲ್ಲಿ ಸುಮಾರು 37,000 ತಾಜಾ ಪ್ರಕರಣಗಳು ವರದಿಯಾಗಿವೆ. ಮುಂಬೈ ಮಹಾನಗರದಲ್ಲಿ ಕಳೆದ 24 ಗಂಟೆಗಳಲ್ಲಿ 5.500 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿವೆ. ಒಂದು ದಿನದ ಅವಧಿಯ ಪ್ರಕರಣಗಳ ಸಂಖ್ಯೆಯಲ್ಲಿ ಅತಿಹೆಚ್ಚಿನ ಏರಿಕೆ ಇದಾಗಿದೆ.
ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರ ನಂತರ ಅತಿಹೆಚ್ಚು ಕೊವಿಡ್ ಕೇಸುಗಳು (2,665) ಬೆಳಕಿಗೆ ಬಂದಿದ್ದು ಛತ್ತೀಸ್ಘಡ್ನಲ್ಲಿ. ಈ ರಾಜ್ಯದಲ್ಲಿ ಈಗಿರುವ ಸಕ್ರಿಯ ಕೇಸುಗಳ ಸಂಖ್ಯೆ 31,581ಆಗಿದ್ದು ಇದೆವರೆಗಿನ ಒಟ್ಟಾರೆ ಪ್ರಕರಣಗಳ ಸಂಖ್ಯೆ 4,52,627ಕ್ಕೇರಿದೆ. ಕೇರಳದಲ್ಲಿ ಶನಿವಾರ 1.825 ಹೊಸ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಕೇರಳದ ನೆರೆರಾಜ್ಯ ಕರ್ನಾಟಕದಲ್ಲಿ 2,566 ತಾಜಾ ಕೇಸುಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ದೇಶಾದ್ಯಂತ ಇದುವರೆಗೆ 5.81 ಕೋಟಿ ಜನರಿಗೆ ಕೊರೊನಾ ಸೋಂಕನ್ನು ತಡೆಗಟ್ಟುವ ಲಸಿಕೆಯನ್ನು ನೀಡಲಾಗಿದೆ. ಓದುಗರಿಗೆ ಗೊತ್ತಿರುವ ಹಾಗೆ, ಸೋಂಕಿನ ವಿರುದ್ಧ ಲಸಿಕಾ ಅಭಿಯಾನವನ್ನು ಜನೆವರಿಯಲ್ಲಿ ಆರಂಭಿಸಲಾಯಿತು. ಮೂಲಗಳ ಪ್ರಕಾರ ಶುಕ್ರವಾರದಂದು 26.05 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.
ಲಸಿಕೆ ನೀಡುವ ಆದ್ಯತೆಯನ್ನು 45 ಕ್ಕಿಂತ ಹೆಚ್ಚಿನ ಪ್ರಾಯದವರಿಗೆ ಮಾತ್ರ ಸೀಮಿತಗೊಳಿಸುವ ಬದಲು ಅದಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರಿಗೂ ನೀಡುವ ಮೂಲಕ ಲಸಿಕಾ ಅಭಿಯಾನವನ್ನು ವಿಸ್ತೃತಗೊಳಿಸುವ ನಿರ್ಧಾರವನ್ನು ಸರ್ಕಾರ ಇಷ್ಟರಲ್ಲೇ ತೆಗೆದುಕೊಳ್ಳಲಿದೆಯೆಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಶುಕ್ರವಾರದಂದು ಹೇಳಿದರು. ಸ್ವದೇಶದ ಉತ್ಪಾದನೆಗಳಾಗಿರುವ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಸುರಕ್ಷಿತವಾಗಿವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಈ ಲಸಿಕೆಗಳ ಯಾವುದೇ ದೇಶದ ಯಾವುದೇ ಭಾಗದಲ್ಲಿ ಅತಂಕಕಾರಿ ಸಂಗತಿಗಳು ಎದುರಾಗಿಲ್ಲ, ಜನರು ನಿರಾತಂಕದಿಂದ ಲಸಿಕೆ ತೆಗೆದುಕೊಳ್ಳಬಹುದಾಗಿದೆ ಎಂದು ಸಚಿವರು ಹೇಳಿದರು.
ತನ್ನ ಜನರಿಗೆ ನೀಡಿರುವ ವ್ಯಾಕ್ಸಿನ್ಗಳಿಗಿಂತ ಹೆಚ್ಚಿನ ಸಂಖ್ಯೆಯ ವ್ಯಾಕ್ಸಿನ್ಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ತಾನು ಸರಬರಾಜು ಮಾಡಿರುವುದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಶುಕ್ರವಾರದಂದು ಭಾರತ ತಿಳಿಸಿದೆ. ವಿಶ್ವದ ಅತಿ ಬಡ ರಾಷ್ಟ್ರಗಳಿಗೆ ವ್ಯಾಕ್ಸಿನ್ ಲಭ್ಯವಾಗುತ್ತಿಲ್ಲವಾದ್ದರಿಂದ ಕೊರೊನಾ ವೈರಸ್ ಪಿಡುಗನ್ನು ತಡೆಗಟ್ಟಲು ಮತ್ತು ಅದನ್ನು ನಿರ್ನಾಮಗೊಳಿಸಲು, ಲಸಿಕೆ ಲಭ್ಯತೆ ಬಗ್ಗೆಯಿರುವ ತಾರತಮ್ಯವನ್ನು ಮೊದಲು ಹೋಗಲಾಡಿಸಬೇಕು ಎಂದು ಭಾರತ ಹೇಳಿದೆ. ಆದರೆ, ಇತ್ತೀಚಿಗೆ ಸೋಂಕಿನ ತಾಜಾ ಪ್ರಕರಣಗಳು ಜಾಸ್ತಿಯಾಗುತ್ತಿರುವುರಿಂದ ಭಾರತವು ವ್ಯಾಕ್ಸಿನ್ ರಫ್ತಿನ ಮೇಲೆ ನಿರ್ಬಂಧ ಹೇರಿದೆ.
ಜಾಗತಿಕವಾಗಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 12.54 ಕೋಟಿ ದಾಟಿದೆ. ಅತ್ಯಂತ ಮುಂದುವರಿದ ರಾಷ್ಟ್ರವೆಂದು ಕರೆಸಿಕೊಳ್ಳುವ ಅಮೇರಿಕ ಈಗಲೂ ಅತಿಹೆಚ್ಚು ಪ್ರಕರಣ ಮತ್ತು ಸಾವುಗಳನ್ನು ಕಂಡಿರುವ ರಾಷ್ಟ್ರವಾಗಿದೆ. ಈ ದೇಶದಲ್ಲಿ ಇದುವರೆಗೆ ಸುಮಾರು 5.5 ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ:Corona Cases and Lockdown News Live: ಕೊರೊನಾ ಸೋಂಕಿನ ಕುರಿತು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆಯಾ?
Published On - 4:31 pm, Sat, 27 March 21