International Dance Day 2025: ಡ್ಯಾನ್ಸ್‌ಗೂ ಒಂದು ದಿನ; ಈ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶವೇನು ತಿಳಿಯಿರಿ
ನೃತ್ಯ ಎಂದರೆ ಅದೆಷ್ಟೋ ಕಲಾವಿದರಿಗೆ ಪಂಚಪ್ರಾಣ. ತಮ್ಮ ನೃತ್ಯ ಕಲೆಯಿಂದಲೇ ಮನೆ ಮಾತಾದ ಅದೆಷ್ಟೋ ನೃತ್ಯಗಾರರಿದ್ದಾರೆ. ಇಂತಹ ಅದ್ಭುತ ನೃತ್ಯಗಾರರನ್ನು ಗುರುತಿಸಿ ಅವರ ಕಲೆಯನ್ನು ಗೌರವಿಸಲು, ನೃತ್ಯ ಕಲೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಈ ದಿನದ ಇತಿಹಾಸ ಮತ್ತು ಮಹತ್ವವೇನು ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನೃತ್ಯ (Dance) ಕೂಡಾ ಕಲೆಯ (art) ಒಂದು ಪ್ರಕಾರವಾಗಿದ್ದು, ಈ ನೃತ್ಯ ಕಲೆಯ ಮೂಲಕವೇ ಖ್ಯಾತಿ ಪಡೆದ ಅದೆಷ್ಟೋ ನೃತ್ಯಗಾರರಿದ್ದಾರೆ. ಈ ನೃತ್ಯ ಕಲೆ ಮನೋರಂಜನೆಯನ್ನು ನೀಡುವುದು, ಭಾವನೆಯನ್ನು ವ್ಯಕ್ತಪಡಿಸುವುದು, ಸಂಸ್ಕೃತಿಯನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಭರತನಾಟ್ಯ, ಕೂಚಿಪುಡಿ, ಕಥಕ್, ಬ್ಯಾಲೆ, ಸಾಲ್ಸಾ, ಹಿಪ್ ಹಾಪ್ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ನೃತ್ಯ ಪ್ರಕಾರಗಳಿವೆ. ಇಂತಹ ನೃತ್ಯ ಪ್ರಕಾರಗಳ ಬಗ್ಗೆ ಜನರಿಗೆ ತಿಳಿಸಲು, ನೃತ್ಯ ಕಲೆ ಹಾಗೂ ನೃತ್ಯಗಾರರಿಗೆ ಗೌರವವನ್ನು ಸಲ್ಲಿಸಲು ಪ್ರತಿವರ್ಷ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ (International Dance Day) ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಉದ್ದೇಶವೇನು? ಇದರ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಅಂತಾರಾಷ್ಟ್ರೀಯ ನೃತ್ಯ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?
ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯನ್ನು 1982 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯ (ಐಟಿಐ) ಅಂತಾರಾಷ್ಟ್ರೀಯ ನೃತ್ಯ ಸಮಿತಿಯು ಪ್ರಾರಂಭಿಸಿತು. ಐಟಿಐ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ಯ ಭಾಗವಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನು ನೃತ್ಯ ಮಾಂತ್ರಿಕ ಜೀನ್ ಜಾರ್ಜಸ್ ನೊವೆರೆ ಅವರಿಗಾಗಿ ಸಮರ್ಪಿಸಲಾಗಿದೆ. ಜಾರ್ಜಸ್ ನೊವೆರೆ ಒಬ್ಬ ಪ್ರಸಿದ್ಧ ಬ್ಯಾಲೆ ಮಾಸ್ಟರ್ ಆಗಿದ್ದರು, ಅವರನ್ನು ಬ್ಯಾಲೆಯ ಪಿತಾಮಹ ಎಂದೂ ಕರೆಯುತ್ತಾರೆ. ಈ ಡ್ಯಾನ್ಸ್ ಮಾಂತ್ರಿಕನ ಜನ್ಮ ದಿನದ ಸವಿ ನೆನಪಿಗಾಗಿ 1982 ರಲ್ಲಿ, ಐಟಿಐನ ನೃತ್ಯ ಸಮಿತಿಯು ಜಾರ್ಜಸ್ ನೊವೆರ್ರೆ ಅವರ ಜನ್ಮದಿನವಾದ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿತು. ಆ ಬಳಿಕ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ?
ಪ್ರತಿ ವರ್ಷ ಏಪ್ರಿಲ್ 29 ರಂದು, ನೃತ್ಯ ಕಲೆಯನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ. ನೃತ್ಯ ಕಲೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರಿಗೆ ನೃತ್ಯ ಕಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು, ನೃತ್ಯ ಕಲೆಯನ್ನು ವೈಭವೀಕರಿಸುವ ವಿವಿಧ ನೃತ್ಯ ಸಂಬಂಧಿತ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ ನೃತ್ಯಗಾರರನ್ನು ಗೌರವಿಸುವುದ ಜೊತೆಗೆ ನೃತ್ಯದ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ನೃತ್ಯ ದಿನದ ಮಹತ್ವ:
ಅಂತಾರಾಷ್ಟ್ರೀಯ ನೃತ್ಯ ದಿನವು ನೃತ್ಯ ಕಲೆಯ ಮಹತ್ವವನ್ನು ಆಚರಿಸುವ ಮತ್ತು ಬೆಂಬಲಿಸುವ ಮಹತ್ವದ ದಿನವಾಗಿದೆ. ಈ ದಿನವು ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಅಲ್ಲದೆ ಇದು ಹಲವಾರು ಪ್ರಕಾರದ ನೃತ್ಯ ಪ್ರಕಾರಗಳು ಹಾಗೂ ನೃತ್ಯ ಕಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನ ಹಲವಾರು ನೃತ್ಯ ಪ್ರದರ್ಶನಗಳು, ಶೈಕ್ಷಣಿಕ ಕಾರ್ಯಾಗಾರಗಳು, ನೃತ್ಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳು:
ವೈವಿಧ್ಯಮಯ ಸಂಸ್ಕೃತಿಗಳ ನಾಡಾಗಿರುವ ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಹಲವಾರು ನೃತ್ಯ ಪ್ರಕಾರಗಳು ಕೂಡಾ ಇವೆ. ಅವುಗಳೆಂದರೆ ಭರತನಾಟ್ಯ, ಕೂಚಿಪುಡಿ, ಕಥಕ್ಕಳಿ, ಕಥಕ್, ಒಡಿಸ್ಸಿ, ಸತ್ರಿಯಾ, ಮಣಿಪುರಿ, ಮೋಹಿನಿಯಾಟ್ಟಂ, ಗೂಮರ್, ಲಾವಣಿ, ಬಿಹು, ಗರ್ಭಾ, ಭಂಗ್ರ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








