ಪರಿಹಾರ ಧನ ಪಡೆಯಲು ರೈಲು ಅಪಘಾತದಲ್ಲಿ ಪತಿ ಸಾವಿಗೀಡಾಗಿದ್ದಾನೆ ಎಂದು ಸುಳ್ಳು ಹೇಳಿದ ಮಹಿಳೆ; ಗಂಡನಿಂದಲೇ ದೂರು

|

Updated on: Jun 07, 2023 | 4:15 PM

ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಮೃತದೇಹವೊಂದನ್ನು ಅದೇ ತನ್ನ ಪತಿಯ ಮೃತದೇಹ ಎಂದು ಗುರುತಿಸಿದ್ದರು

ಪರಿಹಾರ ಧನ ಪಡೆಯಲು ರೈಲು ಅಪಘಾತದಲ್ಲಿ ಪತಿ ಸಾವಿಗೀಡಾಗಿದ್ದಾನೆ ಎಂದು ಸುಳ್ಳು ಹೇಳಿದ ಮಹಿಳೆ; ಗಂಡನಿಂದಲೇ ದೂರು
ಒಡಿಶಾ ರೈಲು ಅಪಘಾತ
Follow us on

ಕಳೆದ ವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ (Odisha Train Accident) ತನ್ನ ಪತಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ಮಹಿಳೆಯೊಬ್ಬರು ಪರಿಹಾರ ಧನ (compensation)ಪಡೆಯಲು ಯತ್ನಿಸಿದ ಘಟನೆ ನಡೆದಿದೆ. ಒಡಿಶಾ ರೈಲು ಅಪಘಾತದಲ್ಲಿ ಸುಮಾರು 300 ಜನರು ಸಾವಿಗೀಡಾಗಿದ್ದರು. ರೈಲು ದುರಂತದಲ್ಲಿ ಸಾವಿಗೀಡಾದವರಿಗೆ ರೈಲ್ವೆ ಸಚಿವಾಲಯದಿಂದ (railways ministry) ₹10 ಲಕ್ಷ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿಯಿಂದ ₹ 5 ಲಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ₹ 2 ಲಕ್ಷ ನೀಡಲಾಗುತ್ತದೆ. ಹಾಗಾದರೆ ಒಟ್ಟು ₹ 17 ಲಕ್ಷ ಸಿಗಬಹುದು ಎಂಬ ದುರಾಸೆಯಿಂದ ಮಹಿಳೆ ಈ ನಾಟಕವಾಡಿದ್ದಾರೆ.

ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಮೃತದೇಹವೊಂದನ್ನು ಅದೇ ತನ್ನ ಪತಿಯ ಮೃತದೇಹ ಎಂದು ಗುರುತಿಸಿದ್ದರು. ದಾಖಲೆಗಳ ಪರಿಶೀಲನೆಯ ನಂತರ ಆಕೆ ಹೇಳುತ್ತಿರುವುದು ಸುಳ್ಳು ಎಂಬುದು ಗೊತ್ತಾಗಿದೆ.

ಸಾರ್ವಜನಿಕ ಹಣವನ್ನು ದೋಚಲು ಪ್ರಯತ್ನಿಸಿದ್ದಕ್ಕಾಗಿ ಮತ್ತು ತಾನು ಬದುಕಿದ್ದರೂ ಸತ್ತಿದ್ದೇನೆ ಎಂದು  ಹೇಳಿದ ತನ್ನ ಹೆಂಡತಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಬಿಜಯ್ ದತ್ತಾ. ಮೊದಲು ದೂರು ದಾಖಲಿಸಿದ ಮಣಿಬಂಡಾ ನಿಲ್ದಾಣದ ಉಸ್ತುವಾರಿ ಪೊಲೀಸ್ ಅಧಿಕಾರಿ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾದಲ್ಲಿನ ಪೊಲೀಸ್ ಠಾಣೆಗೆ ದೂರು ವರ್ಗಾಯಿಸಿದ್ದಾರೆ.

ಬುಧವಾರದಿಂದ ಕೋರಮಂಡಲ್ ಎಕ್ಸ್​ಪ್ರೆಸ್ ಸಂಚಾರ ಪುನರಾರಂಭ

ರೈಲು ದುರಂತದ ಐದು ದಿನಗಳ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣವನ್ನು ಜೂನ್ 7 ರಂದು ಪುನರಾರಂಭಿಸಲಿದೆ. ರೈಲು ಬುಧವಾರ ಮಧ್ಯಾಹ್ನ 3:30 ಕ್ಕೆ ಶಾಲಿಮಾರ್‌ನಿಂದ ಚೆನ್ನೈಗೆ ಹೊರಡುವ ಸಾಧ್ಯತೆಯಿದೆ.

ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಚೌಧರಿ ಪ್ರಕಾರ, ರೈಲು ಹಿಂದಿನ ಮಾರ್ಗದಲ್ಲೇ ಸಂಚರಿಸಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹ ಹೆಚ್ಚು ಕಾಲ ಇರಿಸಲು ಸಾಧ್ಯವಿಲ್ಲ: ವೈದ್ಯರು

ಅಪಘಾತಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದ 39 ಮೃತರ ಕುಟುಂಬಗಳಿಗೆ ಪರಿಹಾರ ಪಾವತಿಗಾಗಿ 1.95 ಕೋಟಿ ರೂ. ಘೋಷಿಸಿದ್ದಾರೆ. ಈ ಮಧ್ಯೆ, ರೈಲು ದುರಂತದ ಸ್ಥಳಕ್ಕೆ ಭೇಟಿ ನೀಡಿರುವ ಸಿಬಿಐ, ಈಗಾಗಲೇ ತನಿಖಾ ಪ್ರಕ್ರಿಯೆ ಆರಂಭಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Wed, 7 June 23