ರಾಜಸ್ಥಾನದ ಸಚಿವರ ಮಗನ ವಿರುದ್ಧ ಆತ್ಯಾಚಾರ ಆರೋಪ; ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲು
ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ರೋಹಿತ್ ಜೋಶಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ. ಅಂದಿನಿಂದ ಆತ ಸಂಪರ್ಕದಲ್ಲಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ನಾವಿಬ್ಬರೂ ಮೊದಲು ಜೈಪುರದಲ್ಲಿ ಭೇಟಿಯಾಗಿದ್ದೆವು. ಜನವರಿ 8, 2021 ರಂದು ಸವಾಯಿ ಮಾಧೋಪುರಕ್ಕೆ ಆತ ನನ್ನನ್ನು ಆಹ್ವಾನಿಸಿದ್ದ...
ದೆಹಲಿ: ರಾಜಸ್ಥಾನದ ಸಚಿವ ಮಹೇಶ್ ಜೋಷಿ (Mahesh Joshi) ಅವರ ಪುತ್ರ ರೋಹಿತ್ ಜೋಶಿ(Rohit Joshi) ತನ್ನ ಮೇಲೆ ಒಂದು ವರ್ಷದಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ (Rape) ಎಂದು ಜೈಪುರದ 23 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದು, ದಿಲ್ಲಿ ಪೊಲೀಸರು ಝೀರೊ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ಬಗ್ಗೆ ರಾಜಸ್ಥಾನ ಪೊಲೀಸರಿಗೆ ತಿಳಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 8 ರಂದು ಉತ್ತರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ 376 (ಅತ್ಯಾಚಾರ), 328 (ಅಪರಾಧ ಮಾಡುವ ಉದ್ದೇಶದಿಂದ ನೋವುಂಟುಮಾಡುವುದು, ಇತ್ಯಾದಿ), 312 (ಗರ್ಭಪಾತಕ್ಕೆ ಕಾರಣ), 366 (ಅಪಹರಣ, ಮಹಿಳೆಯನ್ನು ಅಪಹರಣ ಮಾಡುವುದು ಅಥವಾ ಮದುವೆಗೆ ಒತ್ತಾಯಿಸುವುದು ಇತ್ಯಾದಿ), 377 (ಅಸ್ವಾಭಾವಿಕ ಅಪರಾಧಗಳು)ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಸಚಿವ ಮಹೇಶ್ ಜೋಶಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲಾಗಿದ್ದರೂ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ. ಕಳೆದ ವರ್ಷ ಜನವರಿ 8 ರಿಂದ ಈ ವರ್ಷದ ಏಪ್ರಿಲ್ 17 ರ ನಡುವೆ ಸಚಿವರ ಮಗ ತನ್ನ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾನೆ ಮತ್ತು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ರೋಹಿತ್ ಜೋಶಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ. ಅಂದಿನಿಂದ ಆತ ಸಂಪರ್ಕದಲ್ಲಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ನಾವಿಬ್ಬರೂ ಮೊದಲು ಜೈಪುರದಲ್ಲಿ ಭೇಟಿಯಾಗಿದ್ದೆವು. ಜನವರಿ 8, 2021 ರಂದು ಸವಾಯಿ ಮಾಧೋಪುರಕ್ಕೆ ಆತ ನನ್ನನ್ನು ಆಹ್ವಾನಿಸಿದ್ದ. ನಮ್ಮ ಮೊದಲ ಭೇಟಿಯ ಸಮಯದಲ್ಲಿ ಆತ ಹೆಚ್ಚಿಗೆ ಮದ್ಯ ಕುಡಿಸಿ ಅದರ ಲಾಭ ಪಡೆದ. ಮರುದಿನ ಬೆಳಿಗ್ಗೆ ನಾನು ಎದ್ದಾಗ ನನ್ನ ಬೆತ್ತಲೆ ಛಾಯಾಚಿತ್ರಗಳು ಮತ್ತು ವಿಡಿಯೊಗಳನ್ನು ತೋರಿಸಿ. ಇದು ನನ್ನನ್ನು ಚಿಂತೆಗೀಡುಮಾಡಿತು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಮತ್ತೊಮ್ಮೆ ಭೇಟಿಯಾದಾಗ ರೋಹಿತ್ ಜೋಶಿ ದೆಹಲಿಯಲ್ಲಿ ನನ್ನ ಮೇಲೆ ದೌರ್ಜನ್ಯವೆಸಗಿದ್ದ. “ರೋಹಿತ್ ನಾವಿಬ್ಬರೂ ಪತಿ-ಪತ್ನಿ ಎಂದು ಹೋಟೆಲ್‌ನಲ್ಲಿ ನೋಂದಾಯಿಸಿ ಉಳಿಯುವಂತೆ ಮಾಡಿದ. ನಂತರ ಆತ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ ನಂತರ ಆತ ಕುಡಿದು ನನ್ನನ್ನು ಬೈದ,ಹೊಡೆದ. ನನ್ನ ಅಶ್ಲೀಲ ವೀಡಿಯೊಗಳನ್ನು ಮಾಡಿ ಅವುಗಳನ್ನು ಅಪ್ಲೋಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ.
ಆಗಸ್ಟ್ 11, 2021 ರಂದು ನಾನು ಗರ್ಭಿಣಿ ಎಂಬುದು ಗೊತ್ತಾಯಿತು. ಅವನು ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ, ನಾನು ಒಪ್ಪಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾಳೆ. ಮಹಿಳೆಯ ಪ್ರಕಾರ ಆರೋಪಿ ತನ್ನ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾನೆ. “ಮಹಿಳೆಯ ದೂರಿನ ಆಧಾರದ ಮೇಲೆ, ನಾವು ಝೀರೊ ಎಫ್‌ಐಆರ್ ಅನ್ನು ದಾಖಲಿಸಿದ್ದೇವೆ. ನಾವು ರಾಜಸ್ಥಾನ ಪೊಲೀಸರಿಗೆ ತಿಳಿಸಿದ್ದೇವೆ, ಅವರು ಈ ವಿಷಯವನ್ನು ಹೆಚ್ಚಿನ ತನಿಖೆ ನಡೆಸುತ್ತಾರೆ” ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಝೀರೊ ಎಫ್‌ಐಆರ್ ಅನ್ನು ದೇಶದಲ್ಲಿ ಎಲ್ಲಿ ಬೇಕಾದರೂ ದಾಖಲಿಸಬಹುದು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 10:06 pm, Sun, 8 May 22