ರಾಹುಲ್​ ಗಾಂಧಿ ಕ್ಷೇತ್ರ ವಯನಾಡ್​​ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ; ಅಮೇಠಿ ಇತಿಹಾಸ ಮರುಕಳಿಸಲಿದೆಯಾ?

| Updated By: Lakshmi Hegde

Updated on: May 03, 2022 | 1:24 PM

ಸ್ಮೃತಿ ಇರಾನಿ ಸೋಮವಾರ ರಾತ್ರಿಯೇ ಕೇರಳದ ವಯನಾಡ್​​ನ್ನು ತಲುಪಿದ್ದಾರೆ. ಇಂದು ಮುಂಜಾನೆ 10ಗಂಟೆಯಿಂದ 4.40ರವರೆಗೆ ಒಟ್ಟು ಏಳು ಕಾರ್ಯಕ್ರಮಗಳಲ್ಲಿ ಸ್ಮೃತಿ ಇರಾನಿ ಪಾಲ್ಗೊಳ್ಳಲಿದ್ದಾರೆ.

ರಾಹುಲ್​ ಗಾಂಧಿ ಕ್ಷೇತ್ರ ವಯನಾಡ್​​ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ; ಅಮೇಠಿ ಇತಿಹಾಸ ಮರುಕಳಿಸಲಿದೆಯಾ?
ಸ್ಮೃತಿ ಇರಾನಿ
Follow us on

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಇಂದು ಕೇರಳದ ವಯಾನಾಡ್​ಗೆ ಭೇಟಿ ಕೊಟ್ಟಿದ್ದಾರೆ. ಸ್ಮೃತಿ ಇರಾನಿ ಕೇರಳ ಭೇಟಿ, ಅದರಲ್ಲೂ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯ ಲೋಕಸಭಾ ಕ್ಷೇತ್ರವಾದ ವಯಾನಾಡಿಗೆ ತೆರಳಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.  2014ರಲ್ಲಿ ರಾಹುಲ್​ ಗಾಂಧಿ ಗೆದ್ದು ಸಂಸದರಾಗಿದ್ದ ಕ್ಷೇತ್ರ ಉತ್ತರ ಪ್ರದೇಶದ ಅಮೇಠಿಯನ್ನು 2019ರಲ್ಲಿ ಸ್ಮೃತಿ ಇರಾನಿ ಗೆದ್ದುಕೊಂಡರು. ಅಮೇಠಿಯೊಂದಿಗೆ ಕೇರಳದ ವಯಾನಾಡಿನಲ್ಲೂ ಸ್ಪರ್ಧಿಸಿದ್ದ ರಾಹುಲ್​ ಗಾಂಧಿ, ಇಲ್ಲಿ ಗೆದ್ದು ಸಂಸದರಾಗಿದ್ದರು. ಆದರೆ ಈಗ ಸ್ಮೃತಿ ಇರಾನಿ, ರಾಹುಲ್ ಗಾಂಧಿಯವರನ್ನು ಬೆನ್ನಟ್ಟಿದಂತೆ ಕಾಣುತ್ತಿದೆ. 2024ರ ಲೋಕಸಭೆ ಚುನಾವಣೆಗೆ ಇನ್ನೆರಡು ವರ್ಷ ಬಾಕಿ ಇರುವಾಗಲೇ ವಯಾನಾಡ್​ಗೆ ಆಗಮಿಸಿದ್ದಾರೆ.  

ಸ್ಮೃತಿ ಇರಾನಿ ಸೋಮವಾರ ರಾತ್ರಿಯೇ ಕೇರಳದ ವಯನಾಡ್​​ನ್ನು ತಲುಪಿದ್ದಾರೆ. ಇಂದು ಮುಂಜಾನೆ 10ಗಂಟೆಯಿಂದ 4.40ರವರೆಗೆ ಒಟ್ಟು ಏಳು ಕಾರ್ಯಕ್ರಮಗಳಲ್ಲಿ ಸ್ಮೃತಿ ಇರಾನಿ ಪಾಲ್ಗೊಳ್ಳಲಿದ್ದು ಅವು ಯಾವವೂ ರಾಜಕೀಯ ಕಾರ್ಯಕ್ರಮಗಳಲ್ಲ ಎಂಬುದು ಗಮನಾರ್ಹ ಸಂಗತಿ. ಆದರೆ ಇಂದು ಬೆಳಗ್ಗೆ ಅವರು ಸ್ಥಳೀಯ ಜಿಲ್ಲಾಧಿಕಾರಿ ಸೇರಿ, ವಿವಿಧ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹಾಗೇ ಅವರಿಂದು, ಒನ್ ಸ್ಟಾಪ್ ಸೆಂಟರ್, ಮರವಯಲ್ ಬುಡಕಟ್ಟು ವಸಾಹತು, ಪೊನ್ನಡ ಅಂಗನವಾಡಿ ಮತ್ತು ವರದೂರು ಸ್ಮಾರ್ಟ್ ಅಂಗನವಾಡಿಗಳಿಗೆ  ಭೇಟಿ ನೀಡಿ, ಬಳಿಕ ದೆಹಲಿಗೆ ವಾಪಸ್ ಆಗುತ್ತಾರೆ ಎನ್ನಲಾಗಿದೆ. ಅಂದಹಾಗೇ, ಈ ವಯನಾಡು ಇರುವುದು ತಿರುವನಂತಪುರಂನಿಂದ 450 ಕಿಮೀ ದೂರದಲ್ಲಿ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ (Aspirational Districts Programme (ADP)ಮವನ್ನು ಉದ್ಘಾಟಿಸಿದ್ದು. ದೇಶಾದ್ಯಂತ ಇರುವ ಅತ್ಯಂತ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಉದ್ಘಾಟಿಸಲಾಗಿದ್ದು, ಅದರಡಿಯಲ್ಲಿ ಬರುವ 112 ಜಿಲ್ಲೆಗಳಲ್ಲಿ ಇದೂ ಒಂದಾಗಿದೆ.

ಅಮೇಠಿಯಲ್ಲಿ ಗೆದ್ದಿದ್ದ ಸ್ಮೃತಿ ಇರಾನಿ

ಕಾಂಗ್ರೆಸ್​ನ ಭದ್ರಕೋಟೆಯೆಂದೇ ಬಿಂಬಿತವಾಗಿದ್ದ ಅಮೇಠಿಯಲ್ಲಿ ರಾಹುಲ್ ಗಾಂಧಿಯನ್ನು, ಸ್ಮೃತಿ ಇರಾನಿ ಸೋಲಿಸಿದ್ದು ಇತಿಹಾಸ ಮತ್ತು ದಾಖಲೆ. 2014ರಲ್ಲಿ ರಾಹುಲ್​ ಗಾಂಧಿ ವಿರುದ್ಧ ಸೋತಿದ್ದ ಸ್ಮೃತಿ ಇರಾನಿ, ಸುಮ್ಮನೆ ಕುಳಿತುಕೊಳ್ಳದೆ ಅಮೇಠಿಯಲ್ಲಿ ನಿರಂತರವಾಗಿ ಅಭಿಯಾನ ನಡೆಸಿದ್ದರು. ಅಲ್ಲಿನ ಜನರಿಗೆ ಹತ್ತಿರವಾಗಿದ್ದರು. 2014-2019ರವರೆಗೆ ಅಲ್ಲಿಗೆ ಪದೇಪದೆ ಭೇಟಿ ಕೊಟ್ಟು, ಜನರ ಸಮಸ್ಯೆ ಆಲಿಸಿದ್ದರು. ಜನೋಪಯೋಗಿ ಕೆಲಸಗಳನ್ನು ನಡೆಸಿದ್ದರು. ಈ ಶ್ರಮ ವ್ಯರ್ಥವಾಗದೆ, 2019ರ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದ್ದರು. ಈಗಂತೂ ರಾಹುಲ್​ ಗಾಂಧಿ ವಯಾನಾಡಿನ ಸಂಸದ ಎನ್ನುವುದು ಬಿಟ್ಟರೆ ಅಲ್ಲಿಗೆ ಭೇಟಿ ಕೊಡುವುದೂ ತುಂಬ ಕಡಿಮೆ. ಅಷ್ಟೇ ಅಲ್ಲ, ರಾಜಕೀಯದಲ್ಲೇ ಸಕ್ರಿಯವಾಗಿ ಇಲ್ಲ. ಈ ಮಧ್ಯೆ ಸ್ಮೃತಿ ಇರಾನಿ ವಯನಾಡ್​ ಭೇಟಿ ಇನ್ನಷ್ಟು ಕುತೂಹಲ ಹುಟ್ಟುಹಾಕಿದೆ.

ಇದನ್ನೂ ಓದಿ: PSI Recruitment Scam: ಆಯ್ಕೆ ಪಟ್ಟಿ ರದ್ದತಿ ಮುಖ್ಯವಲ್ಲ, ಅಕ್ರಮದಲ್ಲಿ ಭಾಗಿಯಾದವರು ಹೊರಬರಬೇಕು; ಡಿಕೆ ಶಿವಕುಮಾರ್

Published On - 1:09 pm, Tue, 3 May 22