West Bengal Assembly Elections 2021: ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಅಬ್ಬರಿಸಿದ ಮಮತಾ ಬ್ಯಾನರ್ಜಿ

Mamata Banerjee Election campaign: ಭಾನುವಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ, ನನಗೆ ನೋವಾಗಿದೆ, ಆರೋಗ್ಯ ಸರಿಯಿಲ್ಲ. ಆದರೆ ನನ್ನ ಗುರಿ ಬದಲಾಗಿಲ್ಲ. ನನ್ನ ದೇಹದಲ್ಲಿ ತುಂಬಾ ಗಾಯಗಳಿವೆ. 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದಾರೆ. ಆದರೆ ನಾನು ಗಾಲಿಕುರ್ಚಿಯಿಂದಲೇ ಇಡೀ ಬಂಗಾಳ ಸುತ್ತುವೆ ಎಂದಿದ್ದಾರೆ.

West Bengal Assembly Elections 2021: ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಅಬ್ಬರಿಸಿದ ಮಮತಾ ಬ್ಯಾನರ್ಜಿ
ಗಾಲಿ ಕುರ್ಚಿಯಲ್ಲಿ ಮಮತಾ ಬ್ಯಾನರ್ಜಿ (ಕೃಪೆ: ಟ್ವಿಟರ್)
Follow us
ರಶ್ಮಿ ಕಲ್ಲಕಟ್ಟ
|

Updated on:Mar 14, 2021 | 8:21 PM

ಕೊಲ್ಕತ್ತಾ: ಭಾನುವಾರ ಕೊಲ್ಕತ್ತಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಪ್ರಚಾರ ಭಾಷಣ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡ ಹುಲಿ, ಸತ್ತ ಹುಲಿಗಿಂತಲೂ ಅಪಾಯಕಾರಿ ಎಂದು ಹೇಳುವ ಮೂಲಕ ನಾವು ಗಾಯಗೊಂಡ ಹುಲಿ ಎಂದು ಅಬ್ಬರಿಸಿದ್ದಾರೆ. ನಂದಿಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಹಲ್ಲೆ ನಡೆದಿದೆ ಎಂದಿದ್ದರು ಮಮತಾ. ಈ ಘಟನೆಯಲ್ಲಿ ಮಮತಾ ಅವರ ಕಾಲು ಮತ್ತು ಭುಜಕ್ಕೆ ಏಟಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ದೀದಿ, ಯಾವುದೇ ಸಂಚು ಮುಂದೆ ನಾನು ತಲೆ ಬಾಗಲ್ಲ ಎಂದಿದ್ದಾರೆ.

ಕಾಲಿಗೆ ಬ್ಯಾಂಡೇಜ್ ಸುತ್ತಿದ್ದ ಮಮತಾ ತಮ್ಮ ನಿವಾಸ ಕಾಳಿಘಾಟ್ ನಿಂದ ಮಯೋ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಅಲ್ಲಿಂದ ನಂದಿಗ್ರಾಮ ಹುತಾತ್ಮರ ದಿನದ ಅಂಗವಾಗಿ ನಡೆಯುವ ಟಿಎಂಸಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. 2007 ಇದೇ ದಿನ ನಂದಿಗ್ರಾಮದಲ್ಲಿ ಭೂ ಸ್ವಾಧೀನ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು 14 ಮಂದಿ ಹುತಾತ್ಮರಾಗಿದ್ದರು.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರ ವಿರುದ್ಧ ಒಂದು ಕಾಲದಲ್ಲಿ ಮಮತಾ ಒಡನಾಡಿಯಾಗಿದ್ದ, ಟಿಎಂಸಿ ನೇತಾರ ಇದೀಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಕಣಕ್ಕಿಳಿಯಲಿದ್ದಾರೆ.

ಭಾನುವಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ನನಗೆ ನೋವಾಗಿದೆ, ಆರೋಗ್ಯ ಸರಿಯಿಲ್ಲ. ಆದರೆ ನನ್ನ ಗುರಿ ಬದಲಾಗಿಲ್ಲ. ನನ್ನ ದೇಹದಲ್ಲಿ ತುಂಬಾ ಗಾಯಗಳಿವೆ. 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದಾರೆ. ಆದರೆ ನಾನು ಗಾಲಿಕುರ್ಚಿಯಿಂದಲೇ ಇಡೀ ಬಂಗಾಳ ಸುತ್ತುವೆ. ನಾನು ವಿಶ್ರಾಂತಿ ತೆಗೆದುಕೊಂಡರೆ ಬಂಗಾಳದ ಜನರನ್ನು ತಲುಪುವವರು ಯಾರು ಎಂದು ಕೇಳಿದ್ದಾರೆ.

ಭಾನುವಾರ ಬೆಳಗ್ಗೆ ಸರಣಿ ಟ್ವೀಟ್  ಮಾಡಿದ ಮಮತಾ 2007ರಲ್ಲಿ ಇದೇ ದಿನ ನಂದಿಗ್ರಾಮದ ಮುಗ್ಧ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಹಲವರ ಮೃತದೇಹಗಳು ಸಿಗಲೇ ಇಲ್ಲ. ರಾಜ್ಯದ ಇತಿಹಾಸದಲ್ಲಿ ಇದು ಕರಾಳ ಅಧ್ಯಾಯ. ಪ್ರಾಣ ಕಳೆದುಕೊಂವರಿಗೆ ಶ್ರದ್ಧಾಂಜಲಿ. ನಂದಿಗ್ರಾಮದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಪ್ರತಿವರ್ಷ ಮಾರ್ಚ್ 14ನ್ನು ಕೃಷಕ್ ದಿವಸ್ (ಕೃಷಿಕರ ದಿನ) ಆಗಿ ಆಚರಿಸುತ್ತಿದ್ದು, ಕೃಷಿಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರೈತರು ನಮ್ಮ ಹೆಮ್ಮೆ. ನಮ್ಮ ಸರ್ಕಾರ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ಮಾಡುತ್ತಿದೆ ಎಂದಿದ್ದಾರೆ.

ಧೈರ್ಯದಿಂದಲೇ ಹೋರಾಟ ಮುಂದುವರಿಸುತ್ತೇನೆ: ಮಮತಾ ಬ್ಯಾನರ್ಜಿ

ನನಗೆ ಇನ್ನೂ ನೋವಾಗುತ್ತಿದೆ, ನನ್ನ ಜನರ ನೋವು ಅದಕ್ಕಿಂತ ದೊಡ್ಡ ನೋವು ಎಂಬುದು ನನಗರ್ಥವಾಗುತ್ತಿದೆ. ನಮ್ಮ ಭೂಮಿಯನ್ನು ರಕ್ಷಿಸಲು ನಾವು ತುಂಬಾ ಕಷ್ಟಪಟ್ಟಿದ್ದೇವೆ. ಇನ್ನೂ ಕಷ್ಟಪಡಲಿದ್ದೇವೆ. ಆದರೆ ನಾವು ಯಾವತ್ತೂ ಹೇಡಿಗಳ ಮುಂದೆ ತಲೆಬಾಗಲ್ಲ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಾನಿನ್ನೂ ನೋವು ಅನುಭವಿಸುತ್ತಿದ್ದೇನೆ, ಆದರೆ ಜನರ ನೋವು ಇನ್ನೂ ದೊಡ್ಡದು ಎನಿಸುತ್ತಿದೆ: ಮಮತಾ ಬ್ಯಾನರ್ಜಿ

West Bengal Elections 2021: ಗಾಲಿಕುರ್ಚಿಯ ಮೇಲೆ ಕುಳಿತೇ ಪ್ರಚಾರ ಮಾಡಲು ನಿರ್ಧರಿಸಿದ ಮಮತಾ ಬ್ಯಾನರ್ಜಿ

Published On - 8:14 pm, Sun, 14 March 21