Kerala Assembly Elections 2021: ಕೇರಳ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Kerala Assembly Elections 2021:ಕೇರಳದ ಜನರು ಕಾತರದಿಂದ ಕಾಯುತ್ತಿರುವ ನೇಮಂ ವಿಧಾನಸಭೆ ಕ್ಷೇತ್ರದಲ್ಲಿ ಕೆ. ಮುರಳೀಧರನ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.
ತಿರುವನಂತಪುರಂ: ಹಲವಾರು ಡ್ರಾಮಾ, ವಿವಾದಗಳ ನಡುವೆಯೇ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಯುಡಿಎಫ್ ಮೈತ್ರಿಕೂಟದಲ್ಲಿ 92 ಸೀಟುಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಈ ಪೈಕಿ 86 ಸೀಟುಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ 25 -50 ವರ್ಷದ ಮಧ್ಯೆಯಿರುವ 46 ಮಂದಿ ಅಭ್ಯರ್ಥಿಗಳಾಗಿದ್ದಾರೆ. 51- 60 ವರ್ಷದ 22 ಮಂದಿ, 61-70 ವರ್ಷದವರು 15, 70 ವರ್ಷಕ್ಕಿಂತ ಮೇಲ್ಪಟ್ಟ ಮೂವರು ಸ್ಪರ್ಧಿಸಲಿದ್ದಾರೆ. ಕಲ್ಪಟ್ಟ, ನಿಲಂಬೂರ್, ವಟ್ಟಿಯೂರ್ಕಾವ್, ಕುಂಡರಾ, ತವನೂರ್, ಪಟ್ಟಾಂಬಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗ ಹೆಸರು ಆನಂತರ ಬಿಡುಗಡೆ ಮಾಡಲಾಗುವುದು ಎಂದು ಪಕ್ಷ ಹೇಳಿದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಎಲ್ಲವೂ ಸರಿಹೋದರೆ ನಾಳೆಯೇ ಉಳಿದ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.
ಕೇರಳದ ಜನರು ಕಾತರದಿಂದ ಕಾಯುತ್ತಿರುವ ನೇಮಂ ವಿಧಾನಸಭೆ ಕ್ಷೇತ್ರದಲ್ಲಿ ಕೆ. ಮುರಳೀಧರನ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮುಲ್ಲಪ್ಪಳ್ಳಿ ಹೇಳಿದ್ದಾರೆ. ಸದೃಢ ಆಡಳಿತ ನೀಡುವುದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನನಗೆ ತುಂಬಾ ನಿರೀಕ್ಷೆ ಇದೆ. ಅನುಭವಸ್ಥರು ಮತ್ತು ಯುವಜನರಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಶೈಕ್ಷಣಿಕ ಅರ್ಹತೆ ನೋಡಿ ಮಣೆ ಸಿಪಿಎಂ ಈ ಬಾರಿ ಶೈಕ್ಷಣಿಕ ಅರ್ಹತೆ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಂತೆ ಕಾಂಗ್ರೆಸ್ ಪಕ್ಷವೂ ಶೈಕ್ಷಣಿಕ ಅರ್ಹತೆಗೆ ಮಣೆ ಹಾಕಿದೆ. ಭಾನುವಾರ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಡಾಕ್ಟರ್, ಇಬ್ಬರು ಪಿಎಚ್ಡಿ ಅರ್ಹತೆ ಹೊಂದಿದವರಾಗಿದ್ದಾರೆ. 12 ಮಂದಿ ಸ್ನಾತಕೋತ್ತರ ಪದವೀಧರರು ಮತ್ತು 42 ಪದವೀಧರರು ಈ ಪಟ್ಟಿಯಲ್ಲಿದ್ದಾರೆ. ಒಟ್ಟಪ್ಪಾಲದಲ್ಲಿ ಕಣಕ್ಕಿಳಿದಿರುವ ಪಿ.ಆರ್. ಸರೀನ್, ಕಳಕ್ಕೂಟ್ಟದಲ್ಲಿ ಸ್ಪರ್ಧಿಸುತ್ತಿರುವ ಎಸ್.ಎಸ್ ಲಾಲ್ ಎಂಬಿಬಿಎಸ್ ಪದವೀಧರರಾಗಿದ್ದು, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುವಾಟ್ಟುಪ್ಪಳದಲ್ಲಿ ಸ್ಪರ್ಧಿಸುತ್ತಿರುವ ಮ್ಯಾಥ್ಯೂ ಕುಳಲ್ ನಾಡನ್, ವೈಕಂನಲ್ಲಿ ಪಿ.ಆರ್.ಸೋನಾ ಪಿಎಚ್ ಡಿ ಅರ್ಹತೆಯುಳ್ಳವರಾಗಿದ್ದಾರೆ. ಮಲಯಾಳಂ ನಟ ಧರ್ಮಜನ್ ಬೋಳ್ಗಾಟ್ಟಿ ಬಾಲುಶ್ಶೇರಿಯಲ್ಲಿ ಸ್ಪರ್ಧಿಸಲಿದ್ದಾರೆ.
9 ಮಹಿಳೆಯರಿಗೆ ಕಾಂಗ್ರೆಸ್ ಅವಕಾಶ ಮಾನಂತವಾಡಿಯಲ್ಲಿ ಪಿ.ಕೆ.ಜಯಲಕ್ಷ್ಮಿ, ತರೂರ್ ನಲ್ಲಿ ಕೆ.ಎ.ಶೀಬಾ , ತ್ರಿಶ್ಶೂರ್ ನಲ್ಲಿ ಪದ್ಮಜಾ ವೇಣುಗೋಪಾಲ್, ವೈಕಂನಲ್ಲಿ ಡಾ.ಪಿ.ಆರ್ ಸೋನಾ, ಕಾಯಂಕುಳಂನಲ್ಲಿ ಆರಿತಾ ಬಾಬು, ಆರೂರ್ ನಲ್ಲಿ ಶಾನಿ ಮೋಳ್ ಉಸ್ಮಾನ್, ಕೊಲ್ಲಂನಲ್ಲಿ ಬಿಂದು ಕೃಷ್ಣಾ, ಕೊಟ್ಟಾರಕ್ಕರದಲ್ಲಿ ರಶ್ಮಿ ಆರ್, ಪಾರಶ್ಶಾಲದಲ್ಲಿ ಅನ್ಸಜಿತಾ ರಸ್ಸಲ್ ಸ್ಪರ್ಧಿಸಲಿದ್ದಾರೆ.
ಪುದುಪ್ಪಳ್ಳಿಯಲ್ಲಿ ಉಮ್ಮನ್ ಚಾಂಡಿ, ಹರಿಪ್ಪಾಡ್ ನಲ್ಲಿ ರಮೇಶ್ ಚೆನ್ನಿತ್ತಲ , ತಿರುವನಂತಪುರಂನಲ್ಲಿ ವಿ.ಎಸ್.ಶಿವಕುಮಾರ್, ತೃತ್ತಾಲದಲ್ಲಿ ವಿ.ಟಿ.ಬಲರಾಂ ಕಣಕ್ಕಿಳಿಯಲಿದ್ದಾರೆ.
We’re announcing names of 86 candidates for Kerala Assembly polls today. KSU state president KM Abhijeet will contest from Kozhikode, VT Balram from Thrithala, Shafi Parambil from Palakkad, & Anil Akkara from Wadakkanchery: Kerala Congress president Mullappally Ramachandran pic.twitter.com/ywHhew2xH2
— ANI (@ANI) March 14, 2021
ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದ ದೇವರಾಜನ್
ಕೇರಳದ ಧರ್ಮಡಂ ವಿಧಾನಸಭೆ ಕ್ಷೇತ್ರದಲ್ಲಿ ಎಲ್ಡಿಎಫ್ ಅಭ್ಯರ್ಥಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧೆಗಿಳಿಯಲ್ಲ ಎಂದು ಜಿ.ದೇವರಾಜನ್ ಹೇಳಿದ್ದಾರೆ. ಧರ್ಮಡಂನಲ್ಲಿ ಪಿಣರಾಯಿ ವಿರುದ್ಧ ಫಾರ್ವರ್ಡ್ ಬ್ಲಾಕ್ ರಾಷ್ಟ್ರೀಯ ಕಾರ್ಯದರ್ಶಿ ಜಿ.ದೇವರಾಜನ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಹಾಗಾಗಿ ಭಾನುವಾರ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಧರ್ಮಡಂ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ.
ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯರ ವಿರುದ್ಧ ರಾಷ್ಟ್ರೀಯ ಕಾರ್ಯದರ್ಶಿ ಸ್ಪರ್ಧಿಸುವುದು ಬೇಡ ಎಂದು ಫಾರ್ವರ್ಡ್ ಬ್ಲಾಕ್ ಕೇಂದ್ರ ಸಮಿತಿ ನಿರ್ಧಾರವನ್ನು ರಾಜ್ಯ ಸಮಿತಿ ಒಪ್ಪಿದೆ. ನನ್ನ ಬದಲು ಬೇರೆ ಯಾರನ್ನಾದರೂ ಕಣಕ್ಕಿಳಿಸಿ ಎಂದು ದೇವರಾಜನ್ ಕಾಂಗ್ರೆಸ್ ನಾಯಕರಿಗೆ ಹೇಳಿರುವುದಾಗಿ ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.
Kerala Assembly Elections 2021: ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಿರ್ಣಯಕ್ಕೆ ಹೈ ಡ್ರಾಮಾ