ಅಲೋಪಥಿ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಹಲವು ಅಲೋಪಥಿಕ್ ವೈದ್ಯರು, ಸಂಘಟನೆಗಳು ನೀಡಿದ ದೂರಿನ ಅನ್ವಯ ವಿವಿಧ ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗೆ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ಗಳ ವಿರುದ್ಧ ಬಾಬಾ ರಾಮ್ದೇವ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಯೋಗ ಗುರು ಬಾಬಾ ರಾಮ್ದೇವ್ ಅಲೋಪಥಿಕ್ ವೈದ್ಯಕೀಯ ಪದ್ಧತಿ ಮೂರ್ಖ ಪದ್ಧತಿ. ಇದರಿಂದ ಕೊವಿಡ್ 19 ಸೋಂಕು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿದ ಅಲೋಪಥಿಕ ವೈದ್ಯರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬಾಬಾ ರಾಮ್ದೇವ್ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದವು. ಹಾಗೇ ಪೊಲೀಸರಿಗೆ ದೂರನ್ನೂ ನೀಡಿದ್ದವು.
ಭಾರತೀಯ ವೈದ್ಯಕೀಯ ಸಂಘ ನೀಡಿದ ದೂರಿನ ಅನ್ವಯ ಬಿಹಾರ ಮತ್ತು ಛತ್ತೀಸ್ಗಢಗಳಲ್ಲಿ ಬಾಬಾ ರಾಮ್ದೇವ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಲೋಪಥಿಕ್ ವೈದ್ಯಕೀಯ ಪದ್ಧತಿಗೆ ಬಾಬಾ ರಾಮ್ ದೇವ್ ಅಗೌರವ ತೋರಿಸಿದ್ದಾರೆ. ಅಲ್ಲದೆ, ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಐಎಂಎ ದೂರಿನಲ್ಲಿ ಉಲ್ಲೇಖಿಸಿದೆ.
ಇದೀಗ ಬೇರೆಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನೆಲ್ಲ ಕ್ಲಬ್ (ಒಂದಾಗಿಸು) ಮಾಡಬೇಕು ಮತ್ತು ಅದನ್ನ ದೆಹಲಿಗೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಹಾಗೇ, ಈ ಎಫ್ಐಆರ್ಗಳ ವಿಚಾರಣೆಯಿಂದ ಮಧ್ಯಂತರ ತಡೆ ನೀಡಬೇಕು ಎಂದೂ ಕೇಳಿಕೊಂಡಿದ್ದಾರೆ. ಇನ್ನು ಬಾಬಾ ರಾಮ್ದೇವ್ ವಿರುದ್ಧ ಸೆಕ್ಷನ್ 188, 504, 269 ಇತ್ಯಾದಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Simply Explained : ಏನಿದು ಡೆಲ್ಟಾ.. ಡೆಲ್ಟಾ ಪ್ಲಸ್ ವೈರಸ್, 3rd Wave ಹೇಗಿರುತ್ತೆ: ?