ಲಖನೌ: ಉತ್ತರ ಪ್ರದೇಶ ಬಿಜೆಪಿ (BJP) ಶಾಸಕಾಂಗ ಪಕ್ಷದ ನಾಯಕರಾಗಿ ಯೋಗಿ ಆದಿತ್ಯನಾಥ (Yogi Adityanath) ಅವರನ್ನು ಗುರುವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಶುಕ್ರವಾರ ಎರಡನೇ ಬಾರಿಗೆ ಯುಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸದಾಗಿ ಆಯ್ಕೆಯಾದ ಪಕ್ಷದ ಶಾಸಕರು ಲಖನೌದ ಲೋಕಭವನದಲ್ಲಿ ಭೇಟಿಯಾದರು. ಅಲ್ಲಿ ಪಕ್ಷದ ಹಿರಿಯ ನಾಯಕ ಸುರೇಶ್ ಕುಮಾರ್ ಖನ್ನಾ ಅವರು ಆದಿತ್ಯನಾಥ ಅವರ ಹೆಸರನ್ನು ಪ್ರಸ್ತಾಪಿಸಿದರು. ಆದಿತ್ಯನಾಥ ಅವರು ರಾಜ್ಯದಲ್ಲಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅಧಿಕಾರಕ್ಕೆ ಮರಳಿದ ಮೊದಲ ಯುಪಿ ಸಿಎಂ ಆಗಿದ್ದಾರೆ. ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ ಉತ್ತರಪ್ರದೇಶದಲ್ಲಿ ಉತ್ತಮ ಆಡಳಿತದ ಬಗ್ಗೆ ನನಗೆ ಮಾರ್ಗದರ್ಶನ ನೀಡಿದವರು ಪ್ರಧಾನಿ ನರೇಂದ್ರ ಮೋದಿ. “ನನಗೆ 2017 ರಲ್ಲಿ ಆಡಳಿತಾತ್ಮಕ ಅನುಭವ ಇರಲಿಲ್ಲ, ಯುಪಿಯಲ್ಲಿ ಉತ್ತಮ ಆಡಳಿತದ ಬಗ್ಗೆ ಪ್ರಧಾನಿ ಮೋದಿ ನನಗೆ ಮಾರ್ಗದರ್ಶನ ನೀಡಿದರು” ಎಂದಿದ್ದಾರೆ. ಮೋದಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರವು ವಿರೋಧದ ಪ್ರಚಾರದ ನಡುವೆಯೂ ಪ್ರಭಾವ ಬೀರಿತು ಎಂದು ಹೇಳಿದ ಅವರು, ಈಗ ಉತ್ತರ ಪ್ರದೇಶದಲ್ಲಿ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬಹುದು ಎಂದು ಹೇಳಿದರು. ಇತ್ತೀಚೆಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಉಲ್ಲೇಖಿಸಿದ ಆದಿತ್ಯನಾಥ, ಜನರು ಜಾತಿವಾದವನ್ನು ಮೀರಿ ಬೆಳೆದಿದ್ದಾರೆ.ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುತ್ತಿದ್ದ ತಡೆಗೋಡೆ ಕಳೆದ ಐದು ವರ್ಷಗಳಲ್ಲಿ ಮುರಿದುಹೋಗಿದೆ. “ಬಡವರಿಗಾಗಿಯೂ ಮನೆ ನಿರ್ಮಿಸಬಹುದು ಎಂದು ಜನರು ಮೊದಲ ಬಾರಿಗೆ ಭಾವಿಸಿದರು. ಮೊದಲ ಬಾರಿಗೆ ನೇರವಾಗಿ ಬಡವರ ಖಾತೆಗೆ ಹಣ ಹೋಗುತ್ತದೆ ಎಂದು ತಿಳಿಯಿತು ಎಂದು ಎಂದು ಆದಿತ್ಯನಾಥ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಆದಿತ್ಯನಾಥ ಅವರ ಪ್ರಮಾಣ ವಚನ ಸಮಾರಂಭವು ಶುಕ್ರವಾರ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರ ಸಮ್ಮುಖದಲ್ಲಿ ನಡೆಯಲಿದೆ.
ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ತೆರಿಗೆ ಮುಕ್ತ ಮಾಡುವುದಕ್ಕಿಂತ ಯೂಟ್ಯೂಬ್ನಲ್ಲೇ ಹಾಕಿಬಿಡಿ, ಎಲ್ಲರೂ ನೋಡಲಿ: ಅರವಿಂದ ಕೇಜ್ರಿವಾಲ್
Published On - 9:46 pm, Thu, 24 March 22