ಹೈದರಾಬಾದ್: ಟಿಆರ್‌ಎಸ್(TRS) ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ವೈಎಸ್‌ಆರ್‌ಟಿಪಿ (YSRTP) ನಾಯಕಿ ವೈಎಸ್ ಶರ್ಮಿಳಾ(YS Sharmila) ಅವರನ್ನು ಹೈದರಾಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಜಖಂಗೊಂಡ ಕಾರನ್ನು ಚಲಾಯಿಸಿ ಮುಖ್ಯಮಂತ್ರಿಯವರ ನಿವಾಸ ಬಳಿ ಬಂದ ಶರ್ಮಿಳಾಗೆ ಪೊಲೀಸ್ ತಡೆಯೊಡ್ಡಿದ್ದಾರೆ. ಸೋಮಾಜಿಗುಡದ ಯಶೋದಾ ಆಸ್ಪತ್ರೆ ಬಳಿ ಜನನಿಬಿಡ ರಸ್ತೆಯಲ್ಲಿ ಪ್ರಗತಿ ಭವನದತ್ತ ಕಾರನ್ನು ಚಲಾಯಿಸುತ್ತಿದ್ದ ವೈಎಸ್ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಸೋಮಾಜಿಗುಡ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಿದ್ದಾಗ ತನ್ನನ್ನು ಏಕೆ ತಡೆಯುತ್ತಿದ್ದಿರಿ ಎಂದು ವೈಎಸ್‌ಆರ್‌ಟಿಪಿ ನಾಯಕಿ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಕಾರಿನ ಮೇಲೆ ಟಿಆರ್‌ಎಸ್ ನಾಯಕರು ದಾಳಿ ನಡೆಸಿದಾಗ ಯಾರೂ ತಡೆಯಲಿಲ್ಲ, ಆದರೆ ಸಿಎಂ ಕ್ಯಾಂಪ್ ಕಚೇರಿಗೆ ಪ್ರತಿಭಟನೆಗೆ ಬರದಂತೆ ತಡೆದರು ಎಂದು ವೈಎಸ್‌ಆರ್‌ಟಿಪಿ ನಾಯಕಿ ತಮ್ಮ ಕಾರಿನಲ್ಲಿ ಕುಳಿತು ಹೇಳಿದ್ದಾರೆ. ನನ್ನ ಬಸ್ ಅನ್ನು ಸುಟ್ಟುಹಾಕಿದ ಮತ್ತು ಕಾರನ್ನು ಧ್ವಂಸಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ನನ್ನನ್ನೇ ಬಂಧಿಸಲಾಗುತ್ತಿದೆ ಎಂದು ಶರ್ಮಿಳಾ ಹೇಳಿದ್ದಾರೆ.
#WATCH | Hyderabad: Police drags away the car of YSRTP Chief Sharmila Reddy with the help of a crane, even as she sits inside it for protesting against the Telangana CM KCR pic.twitter.com/i7UTjAEozD
— ANI (@ANI) November 29, 2022
ಅಕ್ಟೋಬರ್‌ನಿಂದ ಶರ್ಮಿಳಾ ಅವರು ತಮ್ಮ ಬೆಂಬಲಿಗರೊಂದಿಗೆ 3,500 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ. ಭಾನುವಾರ ನರಸಂಪೇಟೆಯಲ್ಲಿದ್ದ ಅವರು ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಈ ಟೀಕೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಪಕ್ಷದ ಕಾರ್ಯಕರ್ತರನ್ನು ಕೆರಳಿಸಿದ್ದು, ಶರ್ಮಿಳಾ ಅವರ ‘ಪಾದಯಾತ್ರೆ’ ಸಮಯದಲ್ಲಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇದು ಶರ್ಮಿಳಾ ಅವರ ಬೆಂಬಲಿಗರನ್ನು ಕೆರಳಿಸಿದ್ದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ.
ಇದರ ನಂತರ ಶರ್ಮಿಳಾ ಅವರನ್ನು ವಾರಂಗಲ್ ಪೊಲೀಸರು ವಶಕ್ಕೆ ಪಡೆದು ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ಆಕೆಯ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಸ್ತೆಗಳನ್ನು ತಡೆದರು, ಅವರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದರು.
#WATCH | Hyderabad: Police drags away the car of YSRTP Chief Sharmila Reddy with the help of a crane, even as she sits inside it for protesting against the Telangana CM KCR pic.twitter.com/cXnK44N2Xd
— ANI (@ANI) November 29, 2022
ಏತನ್ಮಧ್ಯೆ, ಅವರು ಕಾರಿನಿಂದ ಇಳಿಯಲು ನಿರಾಕರಿಸಿದ್ದರಿಂದ ಹೈದರಾಬಾದ್ ಪೊಲೀಸರು ಆಕೆ ಕಾರಿನಲ್ಲಿ ಕುಳಿತಿದ್ದರೂ ಟ್ರಾಫಿಕ್ ಟೋ ಟ್ರಕ್ ಅನ್ನು ಬಳಸಿ ವಾಹನವನ್ನು ಎಳೆದೊಯ್ದಿದ್ದಾರೆ. ವೈಎಸ್‌ಆರ್ ತೆಲಂಗಾಣ ಪಕ್ಷದ ಕೆಲವು ನಾಯಕರು ಕೂಡ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಇನ್ನೋವಾ ಕಾರನ್ನು ಎಸ್‌ಆರ್‌ನಗರ ಸಂಚಾರ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಶರ್ಮಿಳಾ ತಮ್ಮ ಕಾರನ್ನು ಲಾಕ್ ಮಾಡಿ ಕಾರಿನಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪೊಲೀಸರು ಅವರೊಂದಿಗೆ ಮಾತನಾಡಲು ಮತ್ತು ವಾಹನದಿಂದ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Published On - 2:10 pm, Tue, 29 November 22