Zojila Tunnel: ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ಮಾರ್ಗದ ಕಾಮಗಾರಿ ವೀಕ್ಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

| Updated By: ಸುಷ್ಮಾ ಚಕ್ರೆ

Updated on: Sep 28, 2021 | 1:35 PM

Nitin Gadkari in Zojila Tunnel | ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ಮಾರ್ಗಕ್ಕೆ ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿದ್ದಾರೆ. ಲಡಾಖ್​ನಲ್ಲಿರುವ ಈ ಸುರಂಗ ಮಾರ್ಗವನ್ನು ನಿತಿನ್ ಗಡ್ಕರಿ ವೀಕ್ಷಿಸಿದ್ದಾರೆ.

Zojila Tunnel: ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ಮಾರ್ಗದ ಕಾಮಗಾರಿ ವೀಕ್ಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಜೋಜಿಲಾ ಸುರಂಗಮಾರ್ಗ ವೀಕ್ಷಿಸಿದ ನಿತಿನ್ ಗಡ್ಕರಿ
Follow us on

ಲಡಾಖ್: ಕಾರ್ಗಿಲ್ ಜಿಲ್ಲೆಯಲ್ಲಿ 2,300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ಮಾರ್ಗಕ್ಕೆ (Zojila Tunnel) ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಭೇಟಿ ನೀಡಿದ್ದಾರೆ. ಲಡಾಖ್​ನಲ್ಲಿರುವ ಈ ಸುರಂಗ ಮಾರ್ಗವನ್ನು ನಿತಿನ್ ಗಡ್ಕರಿ ವೀಕ್ಷಿಸಿದ್ದಾರೆ. ಈ ಸುರಂಗ ಮಾರ್ಗದಿಂದಾಗಿ ಇನ್ನು ಮುಂದೆ ಚಳಿಗಾಲದಲ್ಲಿ (Winter) ಹಿಮಪಾತದ ಸಂದರ್ಭದಲ್ಲಿ ಶ್ರೀನಗರ- ಲೇಹ್ ಲಡಾಖ್ ಹೆದ್ದಾರಿ (Ladakh Highway) ಬಂದ್ ಆಗುವುದಿಲ್ಲ. ವರ್ಷಪೂರ್ತಿ ಈ ಮಾರ್ಗದಲ್ಲಿ ಜನರು ಸಂಚರಿಸಲು ಅನುಕೂಲವಾದಂತಾಗಿದೆ.

ಇಂದು ಸುರಂಗ ಮಾರ್ಗ ವೀಕ್ಷಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ಮಹತ್ವದ ಸುರಂಗ ಮಾರ್ಗದ ಕಾಮಗಾರಿಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸದ್ಯದಲ್ಲೇ 4.15 ಕಿ.ಮೀ. ಜೋಜಿಲಾ ಸುರಂಗಮಾರ್ಗ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಅದರಲ್ಲೂ ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ತ್ರಿಪುರ, ಮೇಘಾಲಯ, ಅಸ್ಸಾಂ, ಉತ್ತರಾಖಂಡ ರಾಜ್ಯಗಳನ್ನು ಎಲ್ಲ ಸರ್ಕಾರಗಳೂ ನಿರ್ಲಕ್ಷ್ಯ ಮಾಡುತ್ತಿವೆ ಎಂದು ನಮಗೆ ಅನಿಸಿತ್ತು. ಹೀಗಾಗಿ, ಈ ಭಾಗದ ಅಭಿವೃದ್ಧಿಗೆ ಮೋದಿ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದಿದ್ದಾರೆ.

ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಕಂಪನಿಯು ಈ ಸುರಂಗ ನಿರ್ಮಾಣ ಮಾಡುತ್ತಿದೆ. ಒಟ್ಟು 14.15 ಕಿ.ಮೀ ಸುರಂಗಮಾರ್ಗ ಇದಾಗಿದ್ದು, ಭಾರತದ ಅತ್ಯಂತ ಮಹತ್ವದ ಯೋಜನೆಯಲ್ಲೊಂದಾಗಿದೆ. 2026ರೊಳಗೆ ಈ ಸುರಂಗ ಮಾರ್ಗದ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷಿಯಿದೆ. ಸೋನ್​ಮಾರ್ಗ್ ಅಲ್ಲದೆ ಈ ಸುರಂಗ ಮಾರ್ಗದಿಂದ ಚಳಿಗಾಲದಲ್ಲೂ ಶ್ರೀನಗರ- ಲಡಾಖ್ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ಸೇನಾಪಡೆಗೆ ಸಾಕಷ್ಟು ಅನುಕೂಲವಾಗಲಿದೆ. ಇಲ್ಲದಿದ್ದರೆ ಚಳಿಗಾಲದಲ್ಲಿ ಹಿಮಪಾತದಿಂದ ಈ ಮಾರ್ಗ ಬಂದ್ ಆಗುವುದರಿಂದ ಭಾರೀ ಸಮಸ್ಯೆ ಎದುರಿಸಬೇಕಾಗಿತ್ತು.

ಈ ಸುರಂಗ ಮಾರ್ಗದಿಂದ ಶ್ರೀನಗರ- ಲಡಾಖ್ ಮಾರ್ಗದ ಸಂಚಾರದ ಸಮಯವೂ ಕಡಿಮೆಯಾಗುತ್ತದೆ. ಜೋಜಿಲಾ ಸುರಂಗ ಮಾರ್ಗ ಕಾಮಗಾರಿಗೆ 2020ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಅತ್ಯಾಧುನಿಕ ಸುರಂಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅತಿಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಅಗ್ನಿ ನಿಯಂತ್ರಣ ವ್ಯವಸ್ಥೆಗಳಿವೆ.

(Zojila Tunnel Union Minister Nitin Gadkari Visits Asias Longest Zozila Tunnel)

Published On - 1:28 pm, Tue, 28 September 21