ಭಾರತದ ಆಡಳಿತಶಾಹಿಗೆ ಅನಾದಿಕಾಲದಿಂದಲೂ ಕೌಟಿಲ್ಯನ ಅರ್ಥಶಾಸ್ತ್ರ ಭದ್ರಬುನಾದಿ ಆಗಿದೆ. ಕಾಯಕವೇ ಕೈಲಾಸ ಎಂದ ಜಗಜ್ಯೋತಿ ಬಸವಣ್ಣನವರೂ ಸಹ ಕಾರ್ಯಂಗಕ್ಕೆ ಸ್ಪಷ್ಟ ದಿಕ್ಕುದೆಸೆ ಕಲ್ಪಿಸಿದವರು. ಅದರ ಮುಂದುವರಿದ ಭಾಗವಾಗಿ ಈಗಿನ ಚಾಣಕ್ಯರು ಬ್ರಿಟಿಷರ ಕಾಲದ ಕಾರ್ಯಾಂಗಕ್ಕೆ ತುಸು ಮಾರ್ಪಾಡು ತಂದು ಕಾಲಕ್ಕೆ ತಕ್ಕಂತೆ ಅದಕ್ಕೆ ನೀರೆರೆಯುವ ಕೆಲಸವನ್ನು ಮಾಡಿದರು. ಆದರೆ ಬ್ರಿಟಿಷ್ ಅಧಿಪತ್ಯದ ನಂತರದ ಅಧಿಕಾರಶಾಹಿಯನ್ನು ಗುತ್ತಿಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ಕಾರ್ಯಾಂಗವನ್ನು ಹೇಗೆ ‘ಪೋಷಿಸಿಕೊಂಡು’ ಬಂದಿತ್ತು, ಮತ್ತು ಈಗ ಅದಕ್ಕೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬುದನ್ನು ಇಲ್ಲಿ ವಿಶಾಲವಾಗಿ ಚಿತ್ರಿಸಲಾಗಿದೆ.
ಭಾರತದ ಆಡಳಿತರಂಗಕ್ಕೆ ಕಾಲಕ್ಕೆ ತಕ್ಕಂತೆ ಕಾರ್ಪೊರೇಟ್ ಕಲ್ಚರ್ ತರಲು, ವೃತ್ತಿಪರತೆ ತುಂಬಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಹಿಂದೆ ಪಣತೊಟ್ಟಿತು. ಆ ಪಯತ್ನದ ಮುಂದುವರಿದ ಭಾಗವಾಗಿ ಇತ್ತೀಚೆಗೆ ಕೇಂದ್ರ ಸರ್ಕಾರದಲ್ಲಿ ಕೆಲವು ಉನ್ನತಮಟ್ಟದ, ಆಯಕಟ್ಟಿನ ಸ್ಥಾನಗಳನ್ನು ತುಂಬಲು ಸರ್ಕಾರಿ ವ್ಯವಸ್ಥೆಯಿಂದ ಹೊರಬಂದು ವೃತ್ತಿ ಪರಿಣತರನ್ನು ನೇಮಕ ಮಾಡಿಕೊಳ್ಳಲು ಪ್ರಧಾನಿ ಮೋದಿ ಸರ್ಕಾರ ಕೇಂದ್ರ ಲೋಕಸೇವಾ ಆಯೋಗದ (UPSC) ಮೂಲಕ ಜಾಹೀರಾತು ಹೊರಡಿಸಿತು. ತನ್ಮೂಲಕ ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಎಂಟ್ರಿಗೆ ಅಧಿಕೃತ ಮುದ್ರೆಯೊತ್ತಿತು. ಯುಪಿಎಸ್‌ಸಿ ಸಂಸ್ಥೆಯು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರ ಮಟ್ಟದ 45 ಹುದ್ದೆಗಳನ್ನು ಲ್ಯಾಟರಲ್ ಆಯ್ಕೆ ಮೂಲಕ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿತು.
ಪ್ರಧಾನಿ ನರೇಂದ್ರ ಮೋದಿ ನೃತೃತ್ವದ ಎನ್‌ಡಿಎ ಸರ್ಕಾರವು ತನ್ನ ಹಿಂದಿನ ಆಡಳಿತಾವಾಧಿಯಲ್ಲಿ (2014 ಮತ್ತು 2019) ಲ್ಯಾಟರಲ್ ಎಂಟ್ರಿ ಮೂಲಕ ಇಲ್ಲಿಯವರೆಗೆ ಡೊಮೇನ್ ಪರಿಣತಿಯನ್ನು ಹೊಂದಿರುವ 60 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದು ಇಲ್ಲಿ ದಾಖಲಾರ್ಹ ಸಂಗತಿಯಾಗಿದೆ.
ಯುಪಿಎಸ್‌ಸಿ ಅಂದರೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭಾರತದ ಆಡಳಿತವನ್ನು ನಿರ್ವಹಿಸುವ ನಾಗರಿಕ ಸೇವೆಗಳಿಗೆ ಯುವ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ. ಮುಂದೆ ಈ ಅಧಿಕಾರಿಗಳು ಅನುಭವ ಹೊಂದುತ್ತಾ ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ ದೇಶದ ಅಭಿವರ್ಧನೆಗೆ ಅನುಗುಣವಾಗಿ ನೀತಿ ನಿರೂಪಣೆ ಮತ್ತು ಆಡಳಿತದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ವಿವಿಧ ರಂಗಗಳಲ್ಲಿ ಕ್ಷೇತ್ರ ಪರಿಣತಿಯನ್ನು ಹೊಂದಿರುವ ಖಾಸಗಿ ವಲಯದ ಅನುಭವಿ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದು ಅಧಿಸೂಚನೆಯ ಉದ್ದೇಶವಾಗಿತ್ತು.
ಆದರೆ ಸರಿಯಾಗಿ ಅದೇ ಕಾಲಕ್ಕೆ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರ ಪಕ್ಷಗಳು ಅದಕ್ಕೆ ಅವಕಾಶ ನೀಡದಂತೆ ಹೊಸ ಜಾಹೀರಾತಿಗೆ ಕಡಿವಾಣ ಹಾಕಿತು. ಮುಖ್ಯವಾಗಿ ಸಂವಿಧಾನಬದ್ಧ ಮೀಸಲಾತಿಗೆ ಕಡಿವಾಣ ಬೀಳುತ್ತದೆ ಎಂಬುದು ವಿರೋಧ ಪಕ್ಷಗಳ ಕೂಗಾಗಿತ್ತು. ಈ ಕ್ರಮವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಹ ತೀವ್ರವಾಗಿ ವಿರೋಧಿಸಿದವು. ಇನ್ನು ಬಿಜೆಪಿಯು ತನ್ನ ಕೆಲ ಮಿತ್ರಪಕ್ಷಗಳಿಂದಲೂ ಪ್ರತಿರೋಧವನ್ನು ಎದುರಿಸಿತು. ಜನತಾ ದಳ (ಯುನೈಟೆಡ್) ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಈ ಕ್ರಮವನ್ನು ವಿರೋಧಿಸಿದರೆ, ತೆಲುಗು ದೇಶಂ ಪಕ್ಷ ಅದನ್ನು ಬೆಂಬಲಿಸಿತು. ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಆಯ್ಕೆಯು ಆಡಳಿತದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಟಿಡಿಪಿ ಪ್ರತಿಪಾದಿಸಿತು.
‘ಲ್ಯಾಟರಲ್ ಆಯ್ಕೆ ಪ್ರಕ್ರಿಯೆಯಲ್ಲಿ ಮೀಸಲಾತಿಗೆ ಅವಕಾಶ ಇರಲಿಲ್ಲ- ಕೇವಲ ಪ್ರತಿಭೆಗೆ ಮಣೆ ಹಾಕಲಾಗಿತ್ತು. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಕಲ್ಪಿಸದು’ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದರು. ಇದು ಸಂವಿಧಾನ ವಿರೋಧಿ ಎಂದು ಜರಿದರು. ಹಾಗಾಗಿ ಲ್ಯಾಟರಲ್ ಆಯ್ಕೆ ವ್ಯವಸ್ಥೆಯನ್ನು ಶಿಶುವಿನಲ್ಲೇ ಸಾಯಿಸಲಾಯಿತು.
ಇದೆಲ್ಲಾ ಅಂದರೆ ಲ್ಯಾಟರಲ್ ಆಯ್ಕೆ ಬೆಳವಣಿಗೆಗಳು ಒತ್ತಟ್ಟಿಗಿರಲಿ. ಅದಕ್ಕೂ ಮುಂಚೆ ಅಂದರೆ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯುವುದಕ್ಕೆ ಮುನ್ನ ದೀರ್ಘಾವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ನಡೆದಿದ್ದೇನು? ಆಗಿನ ಅಧಿಕಾರಶಾಹಿ ನೇಮಕ/ ಆಯ್ಕೆ ವೃತ್ತಾಂತವನ್ನು ಎಳೆಎಳೆಯಾಗಿ ಬಿಚ್ಚಿನೋಡುವುದಾದರೆ… ಪ್ರಧಾನಿ ಜವಾಹರಲಾಲ ನೆಹರೂವಿನಿಂದ ಹಿಡಿದು ಪುರಾತನ ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿದ್ದೇನು? ಅಸಲಿಗೆ ವೀರಪ್ಪ ಮೊಯ್ಲಿ ಆಯೋಗ ತಂದ ಸುಧಾರಣೆಯೇ ಬೇಡವಾಯಿತೇ? ಎಂಬ ಪ್ರಶ್ನೆಗಳು ಸಂದೇಹಗಳು ಸಹಜವಾಗಿ ಏಳುತ್ತವೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆದ ಮಾಜಿ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ನೇತತ್ವದಲ್ಲಿ ಎರಡನೇ ಆಡಳಿತ ಸುಧಾರಣಾ ಆಯೋಗವು (ಎಆರ್‌ಸಿ) ಸರಕಾರಿ ಸೇವೆಗಳಿಗೆ ಲ್ಯಾಟರಲ್ ಎಂಟ್ರಿಗೆ (ರಿಫರ್ಬಿಶಿಂಗ್ ಪರ್ಸನಲ್ ಅಡಿನಿಸ್ಟ್ರೇಷನ್ ) 2005 ರಲ್ಲಿ ಶಿಫಾರಸು ಮಾಡಿತ್ತು ಎಂಬುದು ಗಮನಾರ್ಹ. ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಮತ್ತಿತರ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ ಮೊಯ್ಲಿ ಆಯೋಗವು ಲ್ಯಾಟರಲ್ ಎಂಟ್ರಿ ವ್ಯವಸ್ಥೆಯನ್ನು ಪ್ರಸ್ತಾಪಿಸಿತ್ತು.
ಅದರಂತೆ ಡಾ ಮನಮೋಹನ್ ಸಿಂಗ್ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅಂತಹ ಪ್ರತಿಭಾನ್ವಿತರು ಲ್ಯಾಟರಲ್ ಎಂಟ್ರಿ ಮೂಲಕ ಆಡಳಿತ ವ್ಯವಸ್ಥೆಗೆ ಎಂಟ್ರಿ ಕೊಟ್ಟಿದ್ದರು. ಇಂತಹ ಇನ್ನೂ ಅನೇಕ ಯಶಸ್ಸಿನ ಕಥೆಗಳೂ ಇವೆ. ಯಾವುದೇ ವ್ಯವಸ್ಥಿತ ವಿಧಾನವಿಲ್ಲದಿದ್ದರೂ, ಅದನ್ನು ಅರ್ಹತೆಯ ಮೇಲೆ ಮಾಡಲಾಗಿತ್ತು ಮತ್ತು ಫಲಿತಾಂಶಗಳು ಸಹ ಲಾಭದಾಯಕವಾಗಿದ್ದವು.
ಇದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ಕನ್ನಡಿಗರೇ ಆದ ನಂದನ್ ನಿಲೇಕಣಿ ಅವರನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ -ಆಧಾರ್) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು. ಇದು ಸಹ ಅಪಾರ ಯಶಸ್ಸು ತಂದುಕೊಟ್ಟಿದೆ. ಅಷ್ಟೇ ಅಲ್ಲ ಇದು ಜಗತ್ತಿಗೂ ಮಾದರಿಯಾಗುವಂತಹ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ. ಆದರೆ ಅದೇ ಕಾಂಗ್ರೆಸ್ ಪಕ್ಷ ಈಗ ಮೀಸಲಾತಿ ಕಾಪಾಡುವ ಹೆಸರಿನಲ್ಲಿ ರಾಜಕೀಯವಾಗಿ ಲ್ಯಾಟರಲ್ ಎಂಟ್ರಿಯನ್ನು ವಿರೋಧಿಸಿದೆ ಎಂದು ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ವ್ಯಾಖ್ಯಾನಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಆಡಳಿತದ ಸರ್ಕಾರಗಳಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರಾದ ಬಿಮಲ್ ಜಲನ್, ಮನಮೋಹನ್ ಸಿಂಗ್, ವಿಜಯ್ ಕೇಳ್ಕರ್ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿಯಿಂದ ಹಿಡಿದು ಹಣಕಾಸು ಕಾರ್ಯದರ್ಶಿ ಮತ್ತು ಉನ್ನತ ಹುದ್ದೆಗಳವರೆಗೆ ಸರ್ಕಾರಿ ಸೇವೆಗಳಿಗೆ ಸೇರ್ಪಡೆಗೊಂಡರು. ಯೋಜನಾ ಆಯೋಗದಲ್ಲಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?
ಈ ಸೇರ್ಪಡೆಗಳನ್ನು ಮೊದಲ ಆಡಳಿತ ಸುಧಾರಣಾ ಆಯೋಗ (1966), ಸಂವಿಧಾನ ಪರಿಶೀಲನಾ ಆಯೋಗ (2002) ಮತ್ತು ಎರಡನೇ ಆಡಳಿತ ಸುಧಾರಣಾ ಆಯೋಗ (2005) ಮಾಡಿದ ಶಿಫಾರಸುಗಳಿಂದ ಬೆಂಬಲಿಸಲಾಗಿತ್ತು.
2002 ರಲ್ಲಿ ನೇಮಕಗೊಂಡ ಆಯೋಗವನ್ನು ಹೊರತುಪಡಿಸಿ, ಉಳಿದ ಎರಡು ಆಯೋಗಗಳನ್ನು ವಾಸ್ತವವಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೇಮಕ ಮಾಡಲಾಗಿತ್ತು ಎಂಬುದು ಗಮನಾರ್ಹ. ಎಲ್ಲಾ ಮೂರು ಪ್ಯಾನೆಲ್‌ಗಳು ಸರ್ಕಾರಿ ಸೇವೆಗಳಲ್ಲಿ ವಿಷಯ ತಜ್ಞರನ್ನು ಹೊಂದುವುದರ ಪ್ರಯೋಜನಗಳನ್ನು ಒತ್ತಿಹೇಳಿದ್ದವು.
ಇದನ್ನೆಲ್ಲಾ ಒತ್ತಟ್ಟಿಗಿಟ್ಟು ಕಾಂಗ್ರೆಸ್ನ ಮತ್ತೊಂದು ಪರಂಪರೆಯನ್ನು ನೋಡುವುದಾದರೆ ಯುಪಿಎಸ್‌ಸಿ ಪರೀಕ್ಷೆ ಬರೆಯದೆಯೇ, ಮುಂದೆ ದೇಶದ ರಾಷ್ಟ್ರಪತಿಯಾದ ಕೆ ಆರ್ ನಾರಾಯಣನ್ ಅವರನ್ನು ಐಎಫ್‌ಎಸ್‌ಗೆ ಸೇರಿಸಲಾಗಿತ್ತು. ಆ ಪ್ರಹಸನ ಹೀಗಿತ್ತು ನೋಡಿ.
ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಅಧಿಕಾರಾವಧಿಯಿಂದ, ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಹಲವಾರು ಸರ್ಕಾರಗಳು ಸಾಂಪ್ರದಾಯಿಕವಲ್ಲದ ನೇಮಕಾತಿ ವಿಧಾನಗಳ ಮೂಲಕ ವಿಶೇಷ ಹುದ್ದೆಗಳಿಗಾಗಿ ಖಾಸಗಿ ವಲಯದ ತಜ್ಞರನ್ನು ನೇಮಿಸಿಕೊಂಡಿವೆ.
ಕೆಆರ್ ನಾರಾಯಣನ್ IFS ಆಗಿದ್ದು ಹೇಗೆ?
ಬ್ರಿಟನ್ನಿನ ಪ್ರಭಾವಿ ವ್ಯಕ್ತಿಯೊಬ್ಬರು ನೀಡಿದ್ದ ಶಿಫಾರಸು ಪತ್ರ ಹಿಡಿದು ಬಂದಿದ್ದ LSE (London School of Economics) ಪದವೀಧರನನ್ನು IFS ಗೆ ನೇರ ನೇಮಕ ಮಾಡಿಕೊಳ್ಳಲಾಗಿತ್ತು. ಲೇಖನದಲ್ಲಿ ಈ ಹಿಂದೆ ಉಲ್ಲೇಖಿಸಲಾದ ಪ್ರಸಿದ್ಧ ಲ್ಯಾಟರಲ್ ನೇಮಕ ಉದಾಹರಣೆಗಳ ಹೊರತಾಗಿ, ಕಾಂಗ್ರೆಸ್ ನಾಯಕ ಮತ್ತು ಭಾರತದ 10 ನೇ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಅವರು ಈ ಹಿಂದೆ, ನಾಗರಿಕ ಸೇವಾ ಪರೀಕ್ಷೆಗಳಿಗೆ (ಸಿಎಸ್‌ಇ) ಹಾಜರಾಗದೆ ಕೇಂದ್ರ ಸರ್ಕಾರದ ಭಾರತೀಯ ವಿದೇಶಾಂಗ ಸೇವೆಗಳಿಗೆ (ಐಎಫ್‌ಎಸ್) ಸೇರ್ಪಡೆಗೊಂಡಿದ್ದರು. ಅಂದಹಾಗೆ UPSC – CSE ನೇಮಕಾತಿ ಪರೀಕ್ಷೆಯು ವಿಶ್ವದ 12 ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ.
ಪ್ರತಿಷ್ಠಿತ ಫ್ರಂಟ್‌ಲೈನ್ ಪಾಕ್ಷಿಕ ಪತ್ರಿಕೆಯಲ್ಲಿ (30 ಆಗಸ್ಟ್ 2009 ದಿನಾಂಕದ) ಪ್ರಕಟವಾದ ಲೇಖನದಲ್ಲಿ, ಮಾಜಿ ನಾಗರಿಕ ಸೇವಕ ಮತ್ತು ಪ್ರಸಿದ್ಧ ಲೇಖಕ ಗೋಪಾಲಕೃಷ್ಣ ಗಾಂಧಿ ಅವರು ನಾರಾಯಣನ್ ಅವರ ಜೀವನವನ್ನು ನೆನಪಿಸಿಕೊಂಡು ಹೀಗೆ ಬರೆದಿದ್ದರು. ಕೆ ಆರ್ ನಾರಾಯಣನ್ ಅವರು IFS ಗೆ ಪ್ರವೇಶ ಪಡೆದಿದ್ದು, ಅದಾದ ಮೇಲೆ ರಾಜಕೀಯಕ್ಕೆ ಧುಮುಕಿದ್ದು ಮತ್ತು ಅಂತಿಮವಾಗಿ ದೇಶದ ಪ್ರಥಮ ಪ್ರಜೆಯಾಗುವವರೆಗಿನ ಅವರ ಬೆಳವಣಿಗೆ ಬಗ್ಗೆ ಮಾರ್ಮಿಕವಾಗಿ ಬೆಳಕು ಚೆಲ್ಲಿದ್ದಾರೆ.
CSE ಸೇವೆಗಳಲ್ಲಿ IFS ನೇಮಕಾತಿ ಇಂದಿಗೂ ಅತ್ಯಂತ ಪ್ರತಿಷ್ಠಿತ ಆಯ್ಕೆಯಾಗಿದೆ. ಒಂದು ವರ್ಷದಲ್ಲಿ CSE ಆಯ್ಕೆಯ ಎಲ್ಲಾ ಸುತ್ತುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಸಂಖ್ಯೆ 800 ರಿಂದ 950 ರವರೆಗೆ ಇದ್ದರೆ, IFS ಗೆ ಪರಿಗಣಿಸಬೇಕಾದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸಾಮಾನ್ಯವಾಗಿ 90 ರಿಂದ 130 ಒಳಗಿನ rank ಪಡೆದಿರಬೇಕಾಗುತ್ತದೆ.
ಆದರೆ ಕೆ ಆರ್ ನಾರಾಯಣನ್ ಪ್ರಕರಣದಲ್ಲಿ… ನಾರಾಯಣನ್ ಅವರು ವಿದೇಶದಲ್ಲಿ ವ್ಯಾಸಂಗ ಮಾಡಿದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ವಿಶ್ವವಿದ್ಯಾಲಯದ ಪ್ರೊಫೆಸರ್ ಹೆರಾಲ್ಡ್ ಲಾಸ್ಕಿ ಅವರು ಬರೆದು ಕೊಟ್ಟಿದ್ದ ಒಂದು ಪುಟದ ಸರಳ ಶಿಫಾರಸು ಪತ್ರ ತನ್ನ ಪ್ರಭಾವ ಬೀರಿತ್ತು.
ಗೋಪಾಲಕೃಷ್ಣ ಗಾಂಧಿಯವರ ಪ್ರಕಾರ ಪ್ರೊಫೆಸರ್ ಹೆರಾಲ್ಡ್ ಲಾಸ್ಕಿ ಅವರು 20ನೇ ಶತಮಾನದ ಪ್ರಮುಖ ರಾಜಕೀಯ ಸಿದ್ಧಾಂತಿ. ಪ್ರಧಾನಿ ನೆಹರೂ ಅವರನ್ನು ವೈಯಕ್ತಿಕವಾಗಿ ಬಲ್ಲವರಾಗಿದ್ದರು. ಆ ಸಲುಗೆಯಲ್ಲಿ ನೆಹರೂ ಅವರನ್ನು ಅಡ್ರೆಸ್ ಮಾಡಿ ನಾರಾಯಣನ್ ಅವರನ್ನು ಪರಿಚಯಿಸುವ ಪತ್ರವೊಂದನ್ನು ಲಾಸ್ಕಿ ಅವರು ಬರೆದುಕಳಿಸಿದ್ದರಂತೆ. ಮತ್ತು ಅದನ್ನು ಖುದ್ದಾಗಿ ಭೇಟಿ ಮಾಡಿ ನೆಹರೂಗೆ ತಲುಪಿಸಲು ಸೂಚಿಸಿದ್ದರು ಎಂದು ಸ್ವತಃ ನಾರಾಯಣನ್ ಅವರೇ ಗಾಂಧಿಗೆ ವಿವರಿಸಿದ್ದರಂತೆ.
ದೆಹಲಿಗೆ ಬಂದಿಳಿದ ನಾರಾಯಣನ್ ಪ್ರೊಫೆಸರ್ ಹೆರಾಲ್ಡ್ ಲಾಸ್ಕಿ ಆಣತಿಯಂತೆ ನೇರವಾಗಿ ಪ್ರಧಾನಿ ನೆಹರೂರನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಲಂಡನ್ (ಸ್ಕೂಲ್) ನಿಂದ ದೇಶಕ್ಕೆ ಹಿಂದಿರುಗುತ್ತಿರುವ ಭಾರತೀಯ ವಿದ್ಯಾರ್ಥಿಯಾದ್ದರಿಂದ, ನಾರಾಯಣನ್ಗೆ ಪ್ರಧಾನಿ ಭೇಟಿಗೆ ಸ್ಲಾಟ್ ಸಿಗುತ್ತದೆ.
ಸಂಸತ್ ಭವನದಲ್ಲಿ ಅವರು ಪ್ರಧಾನಿ ನೆಹರೂರನ್ನು ಭೇಟಿಯಾಗುತ್ತಾರೆ. ಲಂಡನ್ ಮತ್ತಿತರ ವಿಷಯಗಳ ಬಗ್ಗೆ ಕೆಲವು ನಿಮಿಷಗಳ ಕಾಲ ಇಬ್ಬರೂ ಮಾತನಾಡುತ್ತಾರೆ. ಹೊರಡುವ ಸಮಯ ಬಂದಾಗ ಎದ್ದುನಿಂತ ನಾರಾಯಣನ್ ಪ್ರಧಾನಿಗೆ ವಿದಾಯ ಹೇಳಿ ಕೋಣೆಯಿಂದ ಹೊರಡಲು ಅನುವಾಗುತ್ತಾರೆ. ಆದರೆ ಹಾಗೆ ಹೋಗುವ ಮುನ್ನ ಪ್ರೊ. ಲಸ್ಕಿ ನೀಡಿದ್ದ (ಶಿಫಾರಸು) ಪತ್ರವನ್ನು ಕೊಟ್ಟು, ಕಾರಿಡಾರ್‌ನತ್ತ ಹೆಜ್ಜೆ ಹಾಕುತ್ತಾರೆ.
ಇತ್ತ ತಮ್ಮ ಛೇಂಬರಿನಲ್ಲಿ ಪ್ರೊ. ಲಸ್ಕಿ ನೀಡಿದ್ದ ಪತ್ರವನ್ನು ಲಘುಬಗೆಯಿಂದ ನೋಡಿದ ಪ್ರಧಾನಿ ನೆಹರೂ ಕಾರಿಡಾರಿನಲ್ಲಿ ಸಾಗುತ್ತಿದ್ದ ಯುವಕ ನಾರಾಯಣನ್ರನ್ನುದ್ದೇಶಿಸಿ ಚಪ್ಪಾಳೆ ತಟ್ಟುತ್ತಾ ಯಂಗ್ ಮ್ಯಾನ್ ಕಮ್ ಹಿಯರ್ ಎನ್ನುತ್ತಾರೆ. ಪಂಡಿತ್ಜಿ (ಪ್ರಧಾನಿ ನೆಹರು) ಹಿಂತಿರುಗಿ ಬರುವಂತೆ ಸನ್ನೆ ಮಾಡುವುದನ್ನು ನೋಡಿದ ಯುವಕ ನಾರಾಯಣನ್ ಅವರು ಸರಸರನೆ ಪ್ರಧಾನಿ ಛೇಂಬರಿಗೆ ಬರುತ್ತಾರೆ.
ಆಗ ಪ್ರಧಾನಿ ನೆಹರೂ ಯುವಕನನ್ನುದ್ದೇಶಿಸಿ ‘ಇದನ್ನು (ಪ್ರೊಫೆಸರ್ ಹೆರಾಲ್ಡ್ ಲಾಸ್ಕಿ ಪತ್ರವನ್ನು) ಮೊದಲೇ ಯಾಕೆ ಕೊಡಲಿಲ್ಲ? ಎಂದು ಗದರುವ ದನಿಯಲ್ಲಿ ಹೇಳುತ್ತಾರೆ. ನಾಲ್ಕಾರು ಮಾತುಗಳ ನಂತರ ಉದ್ಯೋಗದ ಸಂಬಂಧ ( ಲ್ಯಾಟರಲ್ ಎಂಟ್ರಿ ನೇಮಕಾತಿ!) ನಾಳೇಯೇ ಬಂದು ತನ್ನನ್ನು ಭೆಟಿಯಾಗುವಂತೆ ಪ್ರಧಾನಿ ನೆಹರೂ ಹೇಳುತ್ತಾರೆ. ಅಲ್ಲಿಗೆ ಕೆ ಆರ್ ನಾರಾಯಣನ್ಗೆ ನೇಮಕಾತಿ ಪಕ್ಕಾ ಆಗುತ್ತದೆ. ತನ್ಮೂಲಕ ಯಾವುದೇ ಕಠಿಣ ಪರೀಕ್ಷೆ ಎದುರಿಸದೇ ವಿದೇಶಿ ಪ್ರೊಫೆಸರ್ ರೆಕಮಂಡೇಶನ್ ಲೆಟರ್ ಮೂಲಕ ಯುವಕ ನಾರಾಯಣನ್ ಅವರು UPSC CSE ನೇಮಕಾತಿಯ IFS ( Indian Foreign Service) ಸೇವೆಗೆ ಆಯ್ಕೆಯಾಗುತ್ತಾರೆ.
ಮತ್ತಷ್ಟು ಪ್ರೀಮಿಯಂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Thu, 22 August 24