Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!

India's Five Most Dangerous Lady Dons: ಭಾರತದ ಪಾತಕ ಲೋಕದಲ್ಲಿ ಅತ್ಯಂತ ಅಪಾಯಕಾರಿ ಲೇಡಿ ಡಾನ್‌ಗಳ ಪರಿಚಯ ಇಲ್ಲಿದೆ! ಒಬ್ಬಳು ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಮದುವೆಗೆ ಒತ್ತಾಯಿಸಿದ್ದಳು. ಮತ್ತೊಬ್ಬಳು 21 ಪ್ರಭಾವಿ ಠಾಕೂರ್‌ಗಳನ್ನು ಕೊಂದುಬಿಸಾಕಿದಳು!

Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!
ಇಂಟರೆಸ್ಟಿಂಗ್ ಕ್ರೈಂ! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ!
Follow us
|

Updated on:Jun 29, 2024 | 3:31 PM

ಇವರು ಗಾಡ್​ಫಾದರ್​​ಗಳಲ್ಲ; ಬದಲಿಗೆ ಗಾಡ್​ಮದರ್​​ಗಳು:​​ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ, ಡಾನ್ ಅಥವಾ ದರೋಡೆಕೋರರನ್ನು ಸಾಮಾನ್ಯವಾಗಿ ಪುರುಷರಿಗಿಂತ ಒಂದು ಕೆಳಹಂತದಲ್ಲಿಯೇ ಬಿಂಬಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ನಿಜ ಜೀವನದಲ್ಲಿ ಡಾನ್‌ಗಳು ಪುರುಷರಷ್ಟೇ ಅಲ್ಲದೆ ಅನೇಕ ಮಹಿಳೆಯರೂ ಇದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇವರು ಜನ್ಮತಃ ಪಾತಕಿಗಳಲ್ಲ; ಅವರಲ್ಲಿ ಕೆಲ ಮಹಿಳೆಯರು ತಮಗಾದ ಅನ್ಯಾಯ/ನಿಂದನೆಗೆ ಸೇಡು ತೀರಿಸಿಕೊಳ್ಳಲು ಗ್ಯಾಂಗ್ ಕಟ್ಟಿಕೊಂಡವರು ಅಥವಾ ಮಾಫಿಯಾಗಳನ್ನು ಕಟ್ಟಿಕೊಂಡರು. ಅಂತಹ ಅನೇಕ ಭಾರತೀಯ ಮಹಿಳೆಯರ ರಂಗೀನ್​​ ಲೋಕ, ಕರಾಳ ದಾಖಲೆಗಳು ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ದಾಖಲಾಗಿದೆ. ಹಾಗಂತ ಪಾತಕ ಲೋಕ ಪ್ರವೇಶಿಸಿದ ಮೇಲೆ ಅವರು ಮುಗ್ಧರಾಗಿಯೇ ಉಳಿಯಲಿಲ್ಲ; ಬದಲಿಗೆ ಬದಲಾ ತೀರಿಸಿಕೊಳ್ಳಲು ಭಯಾನಕ ಮತ್ತು ಅತ್ಯಂತ ಅಪಾಯಕಾರಿ ಎನಿಸಿದರು. ಪುರುಷ ಸಾಮ್ರಾಜ್ಯವನ್ನು ಥರಗುಟ್ಟುವಂತೆ ಮಾಡಿದ್ದು ಸುಳ್ಳಲ್ಲ. ಅವರಲ್ಲಿ ಕೆಲವರು ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಬಂಡೆದ್ದರು. ಅದಕ್ಕಾಗಿಯೇ ಅವರು ಈ ಅಪರಾಧ ಕ್ಷೇತ್ರಕ್ಕೆ ಕಾಲಿಟ್ಟರು. ಅದನ್ನು ನಾಗರಿಕ ಸಮಾಜ ಎಂದಿಗೂ ಬೆಂಬಲಿಸುವುದಿಲ್ಲ.

ಆದರೆ, ಅವರು ಅಪರಾಧ ಲೋಕವನ್ನು ಏಕೆ ಪ್ರವೇಶಿಸಲು ಬಯಸಿದರು? ಅದರ ಹಿಂದಿನ ಕಥೆ ಏನು? ಭಾರತದ ಆ ಲೇಡಿ ಡಾನ್‌ಗಳು ಮತ್ತು ಲೇಡಿ ಗ್ಯಾಂಗ್‌ಸ್ಟರ್‌ಗಳು ಯಾರು? ಸೇಡಿನ ಜನರನ್ನು ಮಾತ್ರವಲ್ಲದೆ ಪೊಲೀಸ್ ಪಡೆಯ ಅನೇಕ ಹಿರಿಯ ಅಧಿಕಾರಿಗಳನ್ನೂ ಹೆದರಿಸಿಟ್ಟಿದ್ದ ಆ ಲೇಡಿಗಳು ಯಾರು? ಆ ಸ್ತ್ರೀಯರ ‘ಕೀರ್ತಿ’ ಎಷ್ಟಿತ್ತೆಂದರೆ ಅವರಲ್ಲಿ ಕೆಲವರು ಪಾತಕ ಪ್ರಪಂಚದಲ್ಲಿ ಮದವೇರಿ ಕೊನೆಗೆ ಕೀರ್ತಿಶನಿಗೆ ಬಲಿಯಾದರು. ಈ ಲೇಖನದಲ್ಲಿ ನಮ್ಮ ದೇಶದ ಅಂತಹ ಅತ್ಯಂತ ಅಪಾಯಕಾರಿ ಪಂಚ ಲೇಡಿ ಡಾನ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಲೇಡಿ ಡಾನ್‌ಗಳಲ್ಲಿ ಒಬ್ಬರು ನೇರವಾಗಿ ದೇಶದ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ‘ನನ್ನನ್ನು ಮದುವೆಯಾಗು’ ಎಂದು ಪಂಥಾಹ್ವಾನ ನೀಡಿದ್ದಳು.

1. Crime India’s Five Most Dangerous Lady Dons: ಗುಜರಾತ್‌ನ ಗಾಡ್​ಮದರ್​​ ಸಂತೋಕ್‌ಬೆನ್ ಸರಮಾನ್ ಭಾಯಿ ಜಡೇಜಾ

ಗುಜರಾತ್‌ನ ಗಾಡ್​ಮದರ್​​ ಸಂತೋಕ್‌ಬೆನ್ ಸರಮಾನ್ ಭಾಯಿ ಜಡೇಜಾ (The Godfather Santokben Sarman Jadeja) ಪೋರಬಂದರ್ ಜಿಲ್ಲೆಯ ಕುಟಿಯಾನಾ ಪಟ್ಟಣದ ನಿವಾಸಿ. ಅವಳ ಜೀವನವು ಒಬ್ಬ ಸಾಮಾನ್ಯ ಮಹಿಳೆಯಂತೆ ಪ್ರಾರಂಭವಾಗುತ್ತದೆ. ಮಕ್ಕಳನ್ನು ಬೆಳೆಸಲು ಮತ್ತು ತನ್ನ ಪತಿ ಸರಮಾನ್ ಜಡೇಜಾಗೆ ಅಡುಗೆ ಮಾಡಿಹಾಕುತ್ತಾ, ಸಾಧಾರಣ ಗೃಹಿಣಿಯಂತೆ ಅವಳು ತನ್ನನ್ನು ತೊಡಗಿಸಿಕೊಂಡಳು. ಪತಿ ಸರಮಾನ್ ಜಡೇಜಾ (Sarman Jadeja) ಸಹ ಸಾಮಾನ್ಯನೇ. ಗುಜರಾತ್‌ನ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಒಮ್ಮೆ ಕಾರ್ಮಿಕರು ಗಿರಣಿಯಲ್ಲಿ ಮುಷ್ಕರ ನಡೆಸಿದರು. ಮುಷ್ಕರವನ್ನು ಮುರಿಯಲು ಗಿರಣಿ ಮಾಲೀಕರು ಸ್ಥಳೀಯ ಗೂಂಡಾ​​ಗಳಿಗೆ ರಣವೀಳ್ಯ ಕೊಟ್ಟರು. ಇದು ಅಲ್ಲಿನ ಗೂಂಡಾಗಳು ಮತ್ತು ಕಾರ್ಮಿಕರ ನಡುವೆ ದೊಡ್ಡ ಗಲಾಟೆಯನ್ನು ಹುಟ್ಟುಹಾಕಿತು. ಒಮ್ಮೆ ವಾಗ್ವಾದ ನಡೆದು ಕೋಪದ ಭರದಲ್ಲಿ ಸರಮಾನ್ ಜಡೇಜಾ ಒಬ್ಬ ಗೂಂಡಾನನ್ನು ಕೊಂದುಬಿಟ್ಟ. ಈ ಅಚಾನಕ್​​ ಹತ್ಯೆಯು ಸರಮಾನನನ್ನು ಕಾರ್ಮಿಕರ ಮುಖ್ಯಸ್ಥನನ್ನಾಗಿ ಮಾಡಿತು. ಅವನ ಹೆಸರು ಆ ಭಾಗದ ಜನರಲ್ಲಿ ನಡುಕ ಹುಟ್ಟಿಸಿತ್ತು.

1986 ರಲ್ಲಿ, ಸರಮಾನ್ ಜಡೇಜಾ ಸ್ವಾಧ್ಯಾಯ ಚಳವಳಿಯ (Swadhyaya movement) ಪಾಂಡುರಂಗ ಶಾಸ್ತ್ರಿ ಅವರ ಪ್ರಭಾವದಿಂದ ಅಪರಾಧ ಪ್ರಪಂಚವನ್ನು ತೊರೆದನು. ಆದರೆ, ಅವನ ಭೂತಕಾಲ ಅವನನ್ನು ಬಿಡಲಿಲ್ಲ. ಡಿಸೆಂಬರ್ 1986 ರಲ್ಲಿ, ಸರಮಾನ್ ಜಡೇಜಾನನ್ನು ಹಳೆಯ ದ್ವೇಷದ ಕಾರಣ ಕಾಲಾ ಕೇಶವ್ ಗ್ಯಾಂಗ್ ಗುಂಡಿಕ್ಕಿ ಕೊಂದಿತು. ಅಷ್ಟೇ ಅಲ್ಲ, ಮಕ್ಕಳೊಂದಿಗೆ ಪತ್ನಿ ಸಂತೋಕ್‌ಬೆನ್‌ ಅವಳನ್ನು ಸಹ ಹತ್ಯೆಗೈಯಲು ಯತ್ನಿಸಿತು. ಈ ಘಟನೆಯಿಂದ ಸಂತೋಕ್‌ಬೆನ್ ಬೆಚ್ಚಿಬಿದ್ದಳು. ಅದಾಗಲೇ ಅವಳು ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಆದರೆ, ಮಕ್ಕಳ ಜೀವ ಉಳಿಸಲು ಅವಳು ತನ್ನ ಕೈಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಳು. ತನ್ನ ಗಂಡನ ಕೆಲವು ಹಳೆಯ ಸಹಚರರ ಜೊತೆ ಪ್ರತ್ಯೇಕ ಗ್ಯಾಂಗ್ ರಚಿಸಿಕೊಂಡಳು. ಸಾದ್ವಿ ಸಂತೋಕ್‌ಬೆನ್‌ನ ಉಗ್ರ ಕಣ್ಣುಗಳು ತನ್ನ ಗಂಡನ ಕೊಲೆಗಾರರನ್ನು ಹುಡುಕತೊಡಗಿದವು. ಆಕೆ ಅವರನ್ನೆಲ್ಲಾ ಪತ್ತೆ ಹಚ್ಚಿ ತನ್ನ ಪತಿಯನ್ನು ಕೊಲೆ ಮಾಡಿದ ಶಂಕಿತ 14 ಜನರನ್ನು ಕೊಂದಳು. ಈ ಕೊಲೆಯಿಂದಾಗಿ ಸಂತೋಕ್‌ಬೆನ್‌ಳ ಪ್ರಭಾವ ಹೆಚ್ಚಾಯಿತು. ಪೋರಬಂದರ್‌ನ ಅಪರಾಧ ಚಟುವಟಿಕೆಗಳಲ್ಲಿ ಅವಳು ಪ್ರಮುಖ ಪಾತ್ರ ವಹಿಸಲು ಪ್ರಾರಂಭಿಸಿದಳು. ಒಂದಲ್ಲ ಎರಡಲ್ಲ 500ಕ್ಕೂ ಹೆಚ್ಚು ಪ್ರಕರಣಗಳು ಸಂತೋಕ್ ಬೆನ್ ಮತ್ತು ಆಕೆಯ ತಂಡದ ಸದಸ್ಯರ ವಿರುದ್ಧ ದಾಖಲಾಗಿವೆ. ಅವಳು ಅಪರಾಧ ಜಗತ್ತಿನಲ್ಲಿ (criminal world) ಗಾಡ್​ಮದರ್​​ ಎಂದು ಪ್ರಸಿದ್ಧಳಾದಳು.

ಗುಜರಾತ್‌ನ ಪೋರಬಂದರಿನಲ್ಲಿ ಅವಳ ಕುಖ್ಯಾತಿ ಇಡೀ ಜಿಲ್ಲೆಗೆ ಹಬ್ಬಿತು. ಮುಂದೆ ರಾಜಕೀಯಕ್ಕೆ ಧುಮುಕಿದಳು. 1990 ರಲ್ಲಿ ಜನತಾ ದಳ ಟಿಕೆಟ್‌ನಲ್ಲಿ ಕುಟಿಯಾನಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಳು. ಈ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಗುಜರಾತ್ ವಿಧಾನಸಭೆಗೆ ತಲುಪಿದ ಮೊದಲ ಮಹಿಳಾ ಡಾನ್ ಎನಿಸಿದಳು! 1990 ರಿಂದ 1995 ರವರೆಗೆ ಕುಟಿಯಾನಾ ವಿಧಾನಸಭಾ ಕ್ಷೇತ್ರವನ್ನು ಸಂತೋಕ್‌ಬೆನ್ ಪ್ರತಿನಿಧಿಸಿದಳು. ಡಿಸೆಂಬರ್ 2002 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದಳು. ಆದರೆ, ಅಷ್ಟೊತ್ತಿಗಾಗಲೇ ಅವಳ ಛಾಪು ಮೊನಚು ಕಳೆದುಕೊಂಡಿತ್ತು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಅರ್ಜಿ ಹಿಂಪಡೆದಳು.

2005ರಲ್ಲಿ ಪೋರಬಂದರ್ ಮುನ್ಸಿಪಲ್ ಕೌನ್ಸಿಲರ್ ಕೇಶು ಒಡೇದರ ಹತ್ಯೆಗೀಡಾದ. ಈ ಕೊಲೆ ಪ್ರಕರಣದಲ್ಲಿ ಸಂತೋಕ್‌ಬೆನ್‌ ಹೆಸರು ಕೇಳಿಬಂದಿತ್ತು. 2007 ರಲ್ಲಿ ಸಂತೋಕ್‌ಬೆನ್ ನಾದಿನಿ ಆರ್ಸಿ ಜಡೇಜಾಳ ಮಗ ನವಘನ್ ಆರ್ಸಿ ಕೊಲ್ಲಲ್ಪಟ್ಟ. 2008 ರಲ್ಲಿ ಆತನ ಪತ್ನಿಯನ್ನು ಕರಣ್ ಜಡೇಜಾ ಗುಂಡಿಕ್ಕಿ ಕೊಂದ. ಈ ಎರಡು ಘಟನೆಗಳು ಸಂತೋಕ್‌ಬೆನ್‌ನ ಹೆಸರನ್ನು ಮತ್ತೆ ಬೆಳಕಿಗೆ ತಂದವು. ಸಂತೋಕ್‌ಬೆನ್ ಸಾರಥ್ಯದ ಗ್ಯಾಂಗ್ 100 ಕ್ಕೂ ಹೆಚ್ಚು ಜನರನ್ನು ಒಳಗೊಂಡಿತ್ತು. ಅವರಲ್ಲಿ ಹೆಚ್ಚಿನವರು ಮೆರ್ ಸಮುದಾಯಕ್ಕೆ ಸೇರಿದವರು. 1980 ರ ದಶಕದಲ್ಲಿ ಪ್ರಾರಂಭವಾದ ಈ ಮಹಿಳಾ ಡಾನ್ ಪ್ರಯಾಣ ಮುಂದೆ ರಾಜ್‌ಕೋಟ್‌ಗೆ ಬಂದಿತು.

2. 22 ಡಾನ್‌ಗಳ ಸಾಮ್ರಜ್ಯ ಹೊಂದಿದ್ದ ಜೆನಾಬಾಯಿಗೆ ದಾರುವಾಲಿ ಹೆಸರು ಬಂದಿದ್ದೇ ರೋಚಕ!

ಅದು 1920 ರ ಆ ಸಮಯ… ಮುಂಬೈನ ಗುಡ್ಡಗಾಡು ಪ್ರದೇಶಗಳು ಆ ಸಮಯದಲ್ಲಿ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಕೇಂದ್ರವಾಗಿತ್ತು. ಮುಹಮ್ಮದ್ ಅಲಿ ರಸ್ತೆಯ ಗುಡ್ಡದ ಚಾಲಿಯಲ್ಲಿ ವಾಸಿಸುವ ಕುಟುಂಬದಲ್ಲಿ ಜೆನಾಬಾಯಿ ಜನಿಸಿದಳು. ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಎಲ್ಲಾ ಜಾತಿಯ ಪುರುಷರು ಮತ್ತು ಮಹಿಳೆಯರು ಇದರಲ್ಲಿ ಭಾಗವಹಿಸುತ್ತಿದ್ದರು. ಜೆನಾಬಾಯಿ ಕೂಡ ಈ ಚಳವಳಿಯಲ್ಲಿ ಸೇರಿಕೊಂಡಳು. ಅವಳು ಗಾಂಧೀಜಿ ಮತ್ತು ಸ್ವಾತಂತ್ರ್ಯ ಚಳವಳಿಯ ಕಟ್ಟಾ ಬೆಂಬಲಿಗಳಾಗಿದ್ದಳು. ಅವಳು ಶಾಲೆಗೆ ಹೋಗಲಿಲ್ಲ. ಬೀದಿಯಲ್ಲಿ ನಿಂತು ಸ್ವಾತಂತ್ರ್ಯ ಹೋರಾಟಕ್ಕೆ ಜೈ ಎಂದಳು. ಜೆನಾಬಾಯಿ 14 ವರ್ಷದವಳಿದ್ದಾಗ, ಮೊಹಮ್ಮದ್ ಶಾ ದರ್ವೇಶನನ್ನು ವಿವಾಹವಾದಳು. ಅವರಿಗೆ ಒಟ್ಟು ಐದು ಮಕ್ಕಳಿದ್ದರು.

ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾವು ಜೋರಿತ್ತು. ಹಿಂದೂ ಮುಸ್ಲಿಂ ಗಲಭೆಯೂ ಶುರುವಾಗಿತ್ತು. ಗಲಭೆ ಸಂದರ್ಭದಲ್ಲಿ ಹಿಂದೂಗಳನ್ನು ರಕ್ಷಿಸುತ್ತಿದ್ದಳು ಎಂಬ ಕಾರಣಕ್ಕೆ ಪತಿ ಮೊಹಮ್ಮದ್ ಜೆನಾಬಾಯಿಯನ್ನು ಥಳಿಸುತ್ತಿದ್ದ. ದೇಶ ವಿಭಜನೆಯ ನಂತರ ಪತಿ ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಯೋಚಿಸಿದ್ದ. ಆದರೆ, ಜೆನಾಬಾಯಿ ಮುಂಬೈನಲ್ಲಿ ಉಳಿಯಲು ನಿರ್ಧರಿಸಿದಳು. ಹಾಗಾಗಿ ಆಕೆಯ ಪತಿರಾಯ ಜೆನಾಬಾಯಿ ಮತ್ತು ಐದು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ. ಇತ್5ತ ಗಂಡಿನಿಲ್ಲದೆ ಜೆನಾಬಾಯಿ ತನ್ನ ಮಕ್ಕಳನ್ನು ಪೋಷಿಸಲು ಧಾನ್ಯ ಮಾರುಕಟ್ಟೆಯಲ್ಲಿ ಧನದಾಹಿ ಸಗಟು ವ್ಯಾಪಾರಿಗಳಿಗೆ ಬ್ರೋಕರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಳು. ಕ್ರಮೇಣ, ಅವಳ ಧಾನ್ಯ-ಕಾಳುಗಳ ಕಪ್ಪು ಮಾರುಕಟ್ಟೆ ವ್ಯಾಪಾರ ವೃದ್ಧಿಸಿತು. ನಂತರ ಅವಳು ಆಗಿನ ಮದ್ಯ ಮಾರಾಟಗಾರ ಕುಖ್ಯಾತ ವರದರಾಜನ್ ಜತೆ ಪರಿಚಯ ಬೆಳೆಯಿತು. ಇದರಿಂದಾಗಿ ಅವಳು ಮದ್ಯದ ಕರಾಳ ಮಾರುಕಟ್ಟೆಯಲ್ಲೂ ಕಾಲೂರಿದಳು. ಹಾಗಾಗಿ ಆಕೆಗೆ ಜೆನಾಬಾಯಿ ದಾರುವಾಲಿ ಎಂಬ ಹೆಸರು ಬಂತು!

ಇದನ್ನೂ ಓದಿ:  ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?

ವರದರಾಜನ್, ಆಗಿನ ಡಾನ್ ಹಾಜಿ ಮಸ್ತಾನನಿಗೆ ಜೆನಾಬಾಯಿಯನ್ನು ಪರಿಚಯಿಸಿದ. ಅವಳು ಹಾಜಿ ಮಸ್ತಾನ್ ಅನ್ನು ಅಪಾರವಾಗಿ ನಂಬಿದಳು. ಹಾಜಿ ಮಸ್ತಾನ್ ಆಕೆಯನ್ನು ‘ಅಪಾ’ ಎಂದು ಕರೆಯುತ್ತಿದ್ದ. ಮುಂದೆ, ಮುಂಬೈನ ದೊಡ್ಡ ಕ್ರಿಮಿನಲ್ ಗಳ ಮೇಲೆ ಆಕೆ ಭಾರೀ ಹಿಡಿತ ಸಾಧಿಸಿದಳು. ಹಾಗಂತ ಅವಳದ್ದೇ ಆದ ಯಾವುದೇ ಗ್ಯಾಂಗ್ ಇರಲಿಲ್ಲ. ಆದರೆ ದೊಡ್ಡ ದೊಡ್ಡ ಗ್ಯಾಂಗ್​​ಸ್ಟರ್​​ಗಳೂ ಅವಳನ್ನು ಗೌರವಿಸುತ್ತಿದ್ದರು. ಆಗಾಗ್ಗೆ ಕರೀಂ ಲಾಲಾ, ಹಾಜಿ ಮಸ್ತಾನನಂತಹ ದೊಡ್ಡ ಭೂಗತ ಡಾನ್​​ಗಳು, ಅಪರಾಧ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಗಳು ಮುಂಬೈನ ನಾಗ್ಪಾಡಾದಲ್ಲಿರುವ ಆಕೆಯ ಮನೆಗೆ ಬಂದುಹೋಗುತ್ತಿದ್ದರು.

ಮುಂಬೈನಲ್ಲಿ ಯಾವ ಗ್ಯಾಂಗ್​​​ ಮೇಲುಗೈ ಸಾಧಿಸಿದೆ? ಇದೇ ವಿಷಯವಾಗಿ ಸಣ್ಣ ಪುಟ್ಟ ಗ್ಯಾಂಗ್ ವಾರ್ ಗಳು ಆಗಾಗ ನಡೆಯುತ್ತಿದ್ದವು. ಇದರಿಂದ ಹಾಜಿ ಮಸ್ತಾನ್ ಅಸಹ್ಯಪಟ್ಟುಕೊಂಡ. ಎಲ್ಲ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಆಲೋಚಿಸತೊಡಗಿದ. ಜೆನಾಬಾಯಿಯನ್ನು ಹತ್ತಿರಕ್ಕೆ ಕರೆದುಕೊಂಡು ಸತ್ಯವನ್ನೆಲ್ಲಾ ಹೇಳಿ ಅದನ್ನೆಲ್ಲಾ ನಿಲ್ಲಿಸುವ ಜವಾಬ್ದಾರಿಯನ್ನು ಅವಳಿಗೆ ಕೊಟ್ಟನು. ಆಗ ದಾವೂದ್ ಇಬ್ರಾಹಿಂ ಪ್ರಾಬಲ್ಯವೂ ಹೆಚ್ಚುತ್ತಿತ್ತು. ದಾವೂದ್ ಇಬ್ರಾಹಿಂ ಆಕೆಯನ್ನು ಚಿಕ್ಕಮ್ಮನಂತೆ ಪರಿಗಣಿಸುತ್ತಿದ್ದ. ಆದ್ದರಿಂದ ಅವಳು ಪಠಾಣ್ ಗ್ಯಾಂಗ್​​ ಮತ್ತು ದಾವೂದ್ ಗ್ಯಾಂಗ್​​ಗಳ ನಡುವೆ ದೊಡ್ಡ ಸಮಜೌತಾ/ಸಹಮತ ತಂದಳು. ಆದ್ದರಿಂದ, ಮಸ್ತಾನನ ಮನಸ್ಸಿನಲ್ಲಿ ಅವಳಿಗೆ ವಿಭಿನ್ನ/ ವಿಶೇಷ ಸ್ಥಾನ ಸೃಷ್ಟಿಯಾಯಿತು.

ಜೆನಾಬಾಯಿ ದಾರುವಾಲಿ ಮಕ್ಕಾದಲ್ಲಿ ಸುಮಾರು 22 ಡಾನ್‌ಗಳನ್ನು ಗುಡ್ಡೆಹಾಕಿದಳು. ಮತ್ತು ಅವರುಗಳ ಮಧ್ಯೆ ಸಮಜೌತಾ ತಂದಳು. ಇದಕ್ಕೆ ಪ್ರಮುಖ ಕಾರಣವೆಂದರೆ ಆಗ ಮುಂಬೈನಲ್ಲಿದ್ದ ಈ 22 ತೊಲಾಯಿಗಳ (ಸಣ್ಣಪುಟ್ಟ ಗ್ಯಾಂಗ್​​​) ನಾಯಕರು ಜೆನಾಬಾಯಿಯನ್ನು ಭೂಗತ ಜಗತ್ತಿನ ಪ್ರಮುಖ ಮಹಿಳೆ ಎಂದು ಪರಿಗಣಿಸಿದ್ದರು. ಜೆನಾಬಾಯಿ ದಾರುವಾಲಿ ಮುಂಬೈ ಉತ್ತರಕ್ಕೆ ಮಲಾಡ್ ಉಪನಗರ ಭಾಗದಲ್ಲಿ ಅತ್ಯಂತ ಕುತಂತ್ರಿ ಎಂಬ ಕುಖ್ಯಾತಿಯನ್ನು ಹೊಂದಿದ್ದಳು. ಆದರೆ 1993 ರಲ್ಲಿ ಮುಂಬೈನಲ್ಲಿ ಹಿಂದೂ ಮುಸ್ಲಿಂ ಗಲಭೆಗಳು ಭುಗಿಲೆದ್ದಾಗ… ಗಲಭೆಯಲ್ಲಿ ರಕ್ತಪಾತವನ್ನು ಕಂಡು ಅವಳ ಹೆಣ್ಣು ಹೃದಯ ಕರಗಿತು. ಡೋಂಗ್ರಿಯಲ್ಲಿ ಒಂದು ಬದಿಯಲ್ಲಿ ಮಸೀದಿ ಮತ್ತು ಇನ್ನೊಂದು ಬದಿಯಲ್ಲಿ ದೇವಸ್ಥಾನವಿರುವ ರಸ್ತೆಯ ಮಧ್ಯೆ ನಿಂತುಬಿಟ್ಟಳು. ಎರಡೂ ಕೈಯಲ್ಲಿ ಬಿಳಿ ಧ್ವಜ ಹಿಡಿದು ಶಾಂತವಾಗುವಂತೆ ಎರಡು ಸಮುದಾಯದ ಜನರನ್ನು ಕೈಮುಗಿದು ಕೇಳಿಕೊಂಡಳು. 1993 ರ ಬಾಂಬ್ ಸ್ಫೋಟಗಳು ಅವಳನ್ನು ಆಘಾತಕ್ಕೆ ದೂಡಿತು. ಅವಳು ಅನಾರೋಗ್ಯಕ್ಕೆ ಒಳಗಾದಳು. ಕೆಲವು ದಿನಗಳ ನಂತರ ಕೊನೆಯುಸಿರೆಳೆದಳು.

3. Crime India’s Five Most Dangerous Lady Dons: ಡಾನ್ ದಾವೂದ್ ಇಬ್ರಾಹಿಂ ಸಹೋದರಿ – ಹಸೀನಾ ‘ಅಪಾ’

ನಾಗ್ಪಾಡಾದಲ್ಲಿ ಪುಟ್ಟ ಹುಡುಗಿಯಾಗಿ ಬೆಳೆದ ಅವಳು ಕಾಲಾಂತರದಲ್ಲಿ ನಾಲ್ಕು ಮಕ್ಕಳ ತಾಯಿಯಾಗಿ ಮತ್ತು ನಾಗ್ಪಾಡಾದ ಗಾಡ್​​ಮದರ್​​​ ಬದಲಾದಳು. ಭೂಗತ ಪಾತಕಿ ದಾವೂದ್ ಇಬ್ರಾಹಿಂನ (Don Dawood Ibrahim) ತಂಗಿ ಹಸೀನಾ ಪಾರ್ಕರ್ ಭೂಗತ ಲೋಕದಲ್ಲಿ ‘ಹಸೀನಾ ಆಪಾ’ ಎಂಬ ಹೆಸರಿನಿಂದ ಪರಿಚಿತಳಾಗಿದ್ದಾಳೆ. ಅವಳು (Hasina Apa) 2014 ರಲ್ಲಿ ಮುಂಬೈನಲ್ಲಿ ತೀವ್ರ ಹೃದಯಾಘಾತದಿಂದ ಅಸುನೀಗಿದಳು. ಆದರೆ, ಮೊನ್ನೆಮೊನ್ನೆಯವರೆಗೂ ‘ಹಸೀನಾ ಆಪಾ’ ಎಂಬ ಹೆಸರು ಕೇಳಿಬಂದರೆ ಜನ ನಡುಗುತ್ತಿದ್ದರು.

ಇಂತಿಪ್ಪ ಹಸೀನಾ ಪಾರ್ಕರ್, ಇಸ್ಮಾಯಿಲ್ ಪಾರ್ಕರ್ ಎಂಬುವವನನ್ನು ವಿವಾಹವಾಗಿದ್ದಳು. ಅವರಿಗೆ ಡ್ಯಾನಿಶ್ ಮತ್ತು ಅಲಿಶಾ ಎಂಬ ಇಬ್ಬರು ಮಕ್ಕಳಿದ್ದರು. ಇವರಲ್ಲಿ ಡ್ಯಾನಿಶ್ ದಾವೂದ್ ನ ನೆಚ್ಚಿನ ಸೋದರಳಿಯನಾಗಿದ್ದ. ಏಕೆಂದರೆ ಅವನು ದಾವೂದ್ ಇಬ್ರಾಹಿಂ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ಮುಂಬೈನಲ್ಲಿ ಈ ಗ್ಯಾಂಗ್​​ನ ಪ್ರಮುಖ ಪ್ರತಿಸ್ಪರ್ಧಿ ದಾಗ್ಡಿ ಚಾಲಿ ಭಾಗದ ಅರುಣ್ ಗಾವ್ಲಿ. ಈ ಎರಡೂ ಗುಂಪುಗಳು ಸದಾ ಕದನದಲ್ಲಿ ತೊಡಗುತ್ತಿದ್ದವು. ಇದರಲ್ಲಿ ದಾವೂದ್‌ನ ಸೋದರ ಮಾವ ಇಸ್ಮಾಯಿಲ್ ಪಾರ್ಕರ್‌ನನ್ನು ಗಾವ್ಲಿ ಗ್ಯಾಂಗ್ ಕೊಂದಿದ್ದು, ಹಸೀನಾ ಪಾರ್ಕರ್‌ಗೆ ಭೂಗತ ಜಗತ್ತಿಗೆ ಅಧಿಕೃತ ಎಂಟ್ರಿ ಕೊಡುವುದಕ್ಕೆ ನಾಂದಿ ಹಾಡಿತು. ದಾವೂದ್ ತನ್ನ ಸೋದರ ಮಾವ ಇಸ್ಮಾಯಿಲ್‌ನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪಣತೊಡುತ್ತಾನೆ. ಜೇ ಜೇ ಆಸ್ಪತ್ರೆಯಲ್ಲಿದ್ದ ಗಾವ್ಳಿನನ್ನು ಕೊಂದುಹಾಕುವಂತೆ ತನ್ನ ಶಾರ್ಪ್‌ಶೂಟರ್‌ಗಳನ್ನು ಕಳುಹಿಸುತ್ತಾನೆ. 1991 ರಲ್ಲಿ, ‘ಜೆಜೆ ಆಸ್ಪತ್ರೆ ಶೂಟೌಟ್’ ಎಂದು ಕುಖ್ಯಾತಗೊಂಡ ಈ ಘಟನೆಯು ಮುಂಬೈನಲ್ಲಿ ದೊಡ್ಡ ಗೊಂದಲ/ ಹಲ್​ಚಲ್​​ಅನ್ನೇ ಸೃಷ್ಟಿಸಿತು. ಏಕೆಂದರೆ ದಾವೂದ್ 1986ರಲ್ಲಿಯೇ ದುಬೈಗೆ ಪಲಾಯನ ಮಾಡಿಬಿಟ್ಟಿದ್ದ. ಆದರೆ ಇತ್ತ ಮುಂಬೈನಲ್ಲಿ ಅವನೆಲ್ಲಾ ಭೂಗತ ವ್ಯವಹಾರಗಳನ್ನು ಅಪಾ ಹಸೀನಾಳೇ ನೋಡಿಕೊಳ್ಳುತ್ತಿದ್ದಳು. ಹಾಗಾಗಿ ಹಸೀನಾ ಆಪಾಳ ಇಶಾರೆ ಮೇರೆಗೆ ಗಾವ್ಳಿ ಮೇಲೆ ಆ ದಾಳಿ ನಡೆದಿತ್ತು ಎಂಬ ಮಾತು ಭಾರೀ ಚರ್ಚೆಗೆ ಬಂತು.

ಇದನ್ನೂ ಓದಿ:  Trending -Late Marriages -ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

ನಾಗ್ಪಾಡಾ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ದಿಮಿತಿಮ್ಕರ್ ಮಾರ್ಗದಲ್ಲಿರುವ ಗಾರ್ಡನ್ ಹೌಸ್ ಕಟ್ಟಡ ಹಸೀನಾಳ ಅಡ್ಡೆಯಾಗಿತ್ತು. ದಾವೂದ್ ಹೆಸರನ್ನು ಭಯಂಕರವಾಗಿ ಬಳಸುತ್ತಾ, ಅವನು ಹೇಳಿದ್ದಾನೆ ಎಂದು ಹುಕುಂ ಚಲಾಯಿಸುತ್ತಿದ್ದಳು. ತನ್ನ ಮಾತೇ ಶಾಸನ ಎಂದು ಆರ್ಭಟಿಸತೊಡಗಿದಳು. ಆ ಸಮಯದಲ್ಲಿ ಮುಂಬೈನಲ್ಲಿ ರಿಯಲ್​ ಎಸ್ಟೇಟ್​/ ಗೃಹ ನಿರ್ಮಾಣ ವ್ಯವಹಾರವು ವೇಗವನ್ನು ಪಡೆಯುತ್ತಿತ್ತು. ಗ್ಯಾಂಗ್​ಸ್ಟರ್​​​​ಗಳು ‘ರಕ್ಷಣೆ ಹಣ’ ಎಂದು ಹೆಸರಿಟ್ಟು ದೊಡ್ಡ ದೊಡ್ಡ ಬಿಲ್ಡರ್‌ಗಳಿಂದ ಹಣ ವಸೂಲಿ ಮಾಡುತ್ತಿದ್ದರು. ಹೊಸ ಹೊಸ ಬಿಲ್ಡರ್‌ಗಳು ಗುಡಿಸಲುಗಳು ಮತ್ತು ಸಣ್ಣಪುಟ್ಟ ಜೋಪಡಿಗಳನ್ನು ಪುನರ್​​ನಿರ್ಮಾಣ ಮಾಡುತ್ತೇವೆ ಎಂದು ಮುಂದೆಬರುತ್ತಿದ್ದರು. ಆ ಬಿಲ್ಡರ್‌ಗಳಿಗೆ ಸ್ಲಂ ನಿವಾಸಿಗಳು ಮತ್ತು ಬೀದಿಬದಿ ವ್ಯಾಪಾರಿಗಳ ಒಪ್ಪಿಗೆ ಪಡೆಯುವಲ್ಲಿ ಹಸೀನಾ ಪ್ರಮುಖ ಪಾತ್ರ ವಹಿಸುತ್ತಿದ್ದಳು. ಅವಳು ಎಷ್ಟು ಭೀಭತ್ಸ ಲೋಕ ಸೃಷ್ಟಿಸಿದ್ದಳೆಂದರೆ ಅವಳ ಹುಕುಂ ಇಲ್ಲದೆ ದಕ್ಷಿಣ ಮುಂಬೈನಿಂದ ಬಾಂದ್ರಾ ಮತ್ತು ಕುರ್ಲಾವರೆಗೆ ಯಾವುದೇ ಕಟ್ಟಡವನ್ನು ಎಬ್ಬಿಸುವುದಕ್ಕೆ ಬಿಲ್ಡರ್​​​ಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಅವಳ ಇನ್ನೂ ಒಂದು ದೇಶದ್ರೋಹಿ ವ್ಯವಹಾರವೆಂದರೆ ಭಾರತದಿಂದ ಮಧ್ಯಪ್ರಾಚ್ಯ ಏಷ್ಯಾಕ್ಕೆ ಹವಾಲಾ ಮೂಲಕ ಹಣವನ್ನು ವಿನಿಮಯ ಮಾಡುವುದಾಗಿತ್ತು.

4. Crime India’s Five Most Dangerous Lady Dons: ಠಾಕೂರರ ಸಾಮ್ರಾಜ್ಯವನ್ನು ಅಳಿಸಿಹಾಕಿದ ಚಂಬಲ್ ಕಣಿವೆಯ ಡಾಕು ರಾಣಿ ಫೂಲನ್​​ ದೇವಿ

ಗದ್ದೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಬಡ ಕುಟುಂಬದ ಹುಡುಗಿಯೊಬ್ಬಳು ಕೈಗೆ ಬಂದೂಕನ್ನು ತೆಗೆದುಕೊಂಡು ಬರೋಬ್ಬರಿ 21 ಮಂದಿ ಠಾಕೂರರನ್ನು ಕೊಲ್ಲುತ್ತಾಳೆ. ದುರಾದೃಷ್ಟವೆಂದರೆ, ಇದಕ್ಕೆ ಸಮಾಜವೇ ಹೊಣೆ ಎಂಬುದನ್ನು ಫೂಲನ್​​ ದೇವಿಯ ಕಥೆ ಒತ್ತಿ ಹೇಳುತ್ತದೆ. 1963ರ ಆಗಸ್ಟ್ 10ರಂದು ದೇಶದಲ್ಲಿ ವಸಂತೋತ್ಸವ ಕಾಲಿಟ್ಟಿತ್ತು. ಅಂತಹ ಸುದಿನಗಳಲ್ಲಿ ಜನಿಸಿದ ಕಾರಣಕ್ಕೆ ಆಕೆಯನ್ನು ಪೋಷಕರು ಪ್ರೀತಿಯಿಂದ ಫೂಲನ್​​ ಎಂದು ಕರೆದರು. ತಂದೆ ತುಂಬಾ ಬಡವರು ಮತ್ತು ತಾಯಿ ಕಠಿಣ ಶಿಸ್ತಿನವಳು. ಒಡಹುಟ್ಟಿದವರು ನಾಲ್ವರು – ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ. ಫೂಲನ್ ಎರಡನೆಯವಳು. ಫೂಲನ್​ ತಂದೆಯ ಕೃಷಿ ಭೂಮಿಯನ್ನು ಅವನ ಸಹೋದರನೇ ಮೋಸದಿಂದ ಕಬ್ಜಾ ಮಾಡಿಕೊಂಡಿದ್ದ. ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದರಿಂದ ಫೂಲನ್ ಕುಟುಂಬದವರು ಹಸಿವಿನಿಂದ ನರಳಬೇಕಾಗುತ್ತಿತ್ತು.

ಫೂಲನ್ ಮನೆಗೆಲಸಗಳನ್ನೆಲ್ಲಾ ಮಾಡುತ್ತಿದ್ದಳು. ಬೇರೆಯವರ ತೋಟಗಳಲ್ಲಿಯೂ ಕೆಲಸ ಮಾಡಲು ಅವಳನ್ನು ಬಳಸಿಕೊಳ್ಳಲಾಗುತ್ತಿತ್ತು. ತಂದೆಯೊಂದಿಗೆ ಮೇಸ್ತ್ರಿ ಕೆಲಸವನ್ನೂ ಮಾಡತೊಡಗಿದಳು. ಈ ಮಧ್ಯೆ ದೊಡ್ಡಕ್ಕನ ಮದುವೆಯಾಯಿತು. ಅವಳನ್ನು ಅನುಸರಿಸಿ, ಎರಡನೆಯವಳಾದ ಫೂಲನ್ ಕೂಡ 11 ನೇ ವಯಸ್ಸಿನಲ್ಲಿಯೇ ವಿವಾಹವಾದಳು. ತನ್ನ ತಂದೆಯ ವಯಸ್ಸಿನ ಪುಟ್ಟಿಲಾಲ ಫೂಲನ್​ಳನ್ನು ಮದುವೆಯಾದ. ಮದುವೆಯ ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡತೊಡಗಿದ. ಅಪ್ರಾಪ್ತ ವಯಸ್ಸಿನ ಫೂಲನ್​ಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸತೊಡಗಿದ. ಅವನ ಕಾಟ ತಾಳಲಾರದೆ ಫೂಲನ್ ಎರಡು ಮೂರು ಬಾರಿ ತವರು ಮನೆಗೆ ಓಡಿಬಂದಿದ್ದಳು. ಆದರೆ, ಮನೆಯವರು ಮತ್ತೆ ಮತ್ತೆ ಅವಳನ್ನು ಪತಿಯ ಬಳಿಗೆ ಕಳುಹಿಸಿದರು. ಈ ಮಧ್ಯೆ ಪತಿ ಅದೊಮ್ಮೆ ಫೂಲನ್​ಳನ್ನು ದೋಣಿಯಲ್ಲಿ ಬಿಟ್ಟು ಓಡಿ ಹೋಗುತ್ತಾನೆ. ಪತಿ ಅವಳನ್ನು ತೊರೆದ ನಂತರ, ಅವಳು ತನ್ನ ಹಳ್ಳಿಗೆ ಮರಳಿದಳು. ಆದರೆ, ಅಲ್ಲಿ ಗ್ರಾಮಸ್ಥರು ಆಕೆಯನ್ನು ಚುಡಾಯಿಸತೊಡಗಿದರು. ಆಕೆಯ ಸಂಬಂಧಿಯೂ ಆದ ಗ್ರಾಮದ ಸರಪಂಚ್ ಪಾಟೀಲ ಅವಳನ್ನು ಗೋಳುಹೊಯ್ದುಕೊಳ್ಳಲು ಶುರುಮಾಡಿಬಿಟ್ಟ.

ಫೂಲನ್ ಆಗಷ್ಟೇ ಅರಳಿದ 15 ವರ್ಷದ ಕುಸುಮವಾಗಿದ್ದಳು. ಗ್ರಾಮದ ಸರಪಂಚನ ಮಗ ಅವಳ ಮೇಲೆ ಕಣ್ಣುಹಾಕಿದ್ದ. ಅವಳನ್ನು ಒತ್ತಾಯಿಸತೊಡಗಿದನು. ಅದನ್ನೆಲ್ಲಾ ಅವಳು ಮನೆಯವರ ಬಳಿ ಹೇಳಿಕೊಂಡಳು. ಆದರೆ, ಪೋಷಕರು ನಿರ್ಲಕ್ಷಿಸಿಬಿಟ್ಟರು. ಏಕೆಂದರೆ ಅವನು ಸರಪಂಚನ ಮಗ. ಗತ್ಯಂತರವಿಲ್ಲದೆ ಅವಳು ಸೀದಾ ಪೊಲೀಸರ ಬಳಿ ಹೋದಳು. ಅವರೂ ಅವಳ ಮೇಲೆಯೇ ತಮ್ಮ ಪ್ರತಾಪ ತೋರಿದರು. ಕೆಲವು ದಿನಗಳ ನಂತರ, ಅವಳು ತನ್ನ ಸಹೋದರಿ ಮನೆಗೆ ಹೋಗುತ್ತಾಳೆ. ಅಲ್ಲಿಗೆ ಸರಪಂಚನ ಮಗ ಮತ್ತು ಸೋದರಸಂಬಂಧಿ ಹೋಗಿ ಅವಳನ್ನು ಡಕಾಯಿತೆ ಎಂದು ಆರೋಪಿಸುತ್ತಾರೆ. ಆ ದೂರಿನ ಆಧಾರದ ಮೇಲೆ ಪೊಲೀಸರು ಅವಳನ್ನು ಹಿಡಿದು ಜೈಲಿಗೆ ಹಾಕಿದರು. ಫೂಲನ್‌ಳ ದುರದೃಷ್ಟದ ಚಕ್ರ ಅಲ್ಲಿಗೆ ಮುಗಿಯಲಿಲ್ಲ. ಜೈಲಿನಲ್ಲಿದ್ದಾಗ ಪೊಲೀಸ್ ಅಧಿಕಾರಿಗಳು ಆಕೆಯನ್ನು ತಮ್ಮ ಕಾಮತೃಷೆಗೆ ಬಲಿಪಶು ಮಾಡಿದರು. ಚಿತ್ರಹಿಂಸೆಯಿಂದ ಬೇಸತ್ತು ಅವಳು ತಾನು ಡಕಾಯಿತಳು ಎಂದು ಒಪ್ಪಿಕೊಳ್ಳುತ್ತಾಳೆ. ತಾಯಿ ಸಾಲ ಮಾಡಿ ಜಾಮೀನು ದಕ್ಕಿಸಿಕೊಳ್ಳುತ್ತಾಳೆ. ಅದರೊಂದಿಗೆ ಸದ್ಯ ಅವಳು ಚಿತ್ರಹಿಂಸೆಯಿಂದ ಮುಕ್ತಳಾಗುತ್ತಾಳೆ.

ಜೈಲಿನಿಂದ ಹೊರಬಂದ ನಂತರ ಫೂಲನ್ ಹಳ್ಳಿಗೆ ಮರಳುತ್ತಾಳೆ. ಆದರೆ, ಸರಪಂಚ ಮತ್ತು ಸೋದರ ಸಂಬಂಧಿಗಳು ಅವಳನ್ನು ಕೊಲ್ಲಲು ಬಾಬು ಗುಜ್ಜರ್ ಎಂಬ ಡಕಾಯಿತನಿಗೆ ವೀಳ್ಯ ಕೊಡುತ್ತಾರೆ. ಬಾಬು ಗುಜ್ಜರ್ ಅವಳ ಮೇಲೆ ಅತ್ಯಾಚಾರ ಮಾಡುತ್ತಾನೆ. ಆದರೆ, ಡಕಾಯಿತರ ಗ್ಯಾಂಗಿನಲ್ಲಿದ್ದ ವಿಕ್ರಮ್ ಮಲ್ಲ ಎಂಬುವವನು ಡಕಾಯಿತ ಬಾಬು ಗುಜ್ಜರನನ್ನು ಕೊಂದುಬಿಡುತ್ತಾನೆ. ಕೆಲವು ದಿನಗಳ ನಂತರ ವಿಕ್ರಮ್ ಅವಳನ್ನು ಮದುವೆಯಾಗುತ್ತಾನೆ. ಈ ಮಧ್ಯೆ, ವಿಕ್ರಮ ಮಲ್ಲನ ಸ್ನೇಹಿತನಾದ, ಡಕಾಯಿತ ಶ್ರೀರಾಮ್ ಠಾಕೂರ್ ಅವನನ್ನು ಕೊಲ್ಲುತ್ತಾನೆ. ಫೂಲನ್ ಹಳ್ಳಿಯಿಂದ ಬೆತ್ತಲೆ ಓಡಿ, ಬಚಾವಾಗಲು ಪ್ರಯತ್ನಿಸುತ್ತಾಳೆ. ಆದರೆ ಕೋಣೆಯೊಂದರಲ್ಲಿ ಅವಳನ್ನು ಲಾಕ್ ಮಾಡಲಾಗುತ್ತದೆ. ಅನೇಕರು ಅವಳ ಮೇಲೆ ಮುಗಿಬೀಳುತ್ತಾರೆ. ಆದರೆ, ಒಬ್ಬ ಬ್ರಾಹ್ಮಣ ವ್ಯಕ್ತಿಯ ಸಹಾಯದಿಂದ ಫೂಲನ್ ತಪ್ಪಿಸಿಕೊಳ್ಳುತ್ತಾಳೆ. ಅವಳು ಹಳ್ಳಿಯಲ್ಲಿ ತನಗಾದ ಅವಮಾನದಿಂದ ವ್ಯಗ್ರಗೊಳ್ಳುತ್ತಾಳೆ. ತನ್ನೊಂದಿಗೆ ಕೆಲವು ಡಕಾಯಿತರನ್ನು ಕರೆದುಕೊಂಡು ಹೊಸ ಗ್ಯಾಂಗ್ ಅನ್ನು ಕಟ್ಟುತ್ತಾಳೆ. ಅವಳು ಡಕಾಯಿತ ಶ್ರೀರಾಮ್ ಮಾಡಿದ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅವನನ್ನು ಹುಡುಕಾಡುತ್ತಾಳೆ. ಮುಂದೆ ಶ್ರೀರಾಮನ ಜೊತೆಗೆ, ತನ್ನನ್ನು ಹಿಂಸಿಸುತ್ತಿದ್ದ ಹಳ್ಳಿಯ ಇನ್ನೂ 22 ಠಾಕೂರರನ್ನು ಗುಂಡಿಕ್ಕಿ ಕೊಲ್ಲುತ್ತಾಳೆ. ನಂತರ ಅವಳು ಸರಪಂಚ್ ಪಾಟೀಲ್ ಮತ್ತು ಸೋದರಸಂಬಂಧಿಯನ್ನು ಸಹ ಕೊಲ್ಲುತ್ತಾಳೆ.

ಇದರ ಬೆನ್ನಿಗೆ ಫೂಲನ್ ದೇವಿ ರಾತ್ರೋರಾತ್ರಿ ದೇಶಾದ್ಯಂತ ಚರ್ಚೆಯ ವಿಷಯವಾಗುತ್ತಾಳೆ. ಆಕೆಯನ್ನು ಸೆರೆ ಹಿಡಿದವರಿಗೆ ಸರ್ಕಾರ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸುತ್ತದೆ. ಆದರೆ, ಅದು ಕೈಗೂಡುವುದಿಲ್ಲ. ಮುಂದೆ, ಅಂತಿಮವಾಗಿ ಅವಳು ಸ್ವಯಂ ಶರಣಾಗಲು ನಿರ್ಧರಿಸುತ್ತಾಳೆ. 12 ಫೆಬ್ರವರಿ 1982 ರಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಮುಂದೆ ಫೂಲನ್ ಶರಣಾದಳು. ಫೂಲನ್ ದೇವಿ ಶರಣಾಗತಿಯ ನಂತರ, ಚಂಬಲ್ ಕಣಿವೆಯಲ್ಲಿ ಡಕಾಯಿತರ ಭಯ ಕ್ರಮೇಣ ಕ್ಷೀಣವಾಗುತ್ತದೆ. 1994 ರಲ್ಲಿ ಆಕೆಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಯಿತು. ಜೈಲಿನಿಂದ ಡುಗಡೆಯಾಗುತ್ತಾಳೆ. 1996 ರಲ್ಲಿ, ಫೂಲನ್ ಸಮಾಜವಾದಿ ಪಕ್ಷದಿಂದ ಮಿರ್ಜಾಪುರದ ಸಂಸದಳಾಗಿ ಆಯ್ಕೆಯಾದಳು. ಸಂಸತ್ತಿಗೂ ಪ್ರವೇಶಿಸಿದಳು. 1999 ರಲ್ಲಿ ಫೂಲನ್ ಮತ್ತೆ ಸಂಸದಳಾಗಿ ಆಯ್ಕೆಯಾಗುತ್ತಾಳೆ. ಆದರೆ, ಜುಲೈ 25, 2001 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕೆಯ ಕೊಲೆಯಾಯಿತು.

5. ನಿರ್ಭೀತ, ನಿರ್ಭೀಡೆಯ ಗಂಗೂಬಾಯಿ ಕಥಿಯಾವಾಡಿ ನೆಹರೂ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಿದ್ದಳು…

ಅರವತ್ತರ ದಶಕದಲ್ಲಿ ಮುಂಬೈನ ಕಾಮಾಟಿಪುರದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ಪ್ರಾಬಲ್ಯ ಮೆರೆದ ಗಂಗಾ ಹರಜೀವನದಾಸ್ ಕಥೇವಾಡಿ ಅಲಿಯಾಸ್ ಗಂಗೂಬಾಯಿ (Ganga Harjivandas Kathewadi alias Gangubai) ಎಂಬ ಹೆಸರು ಬಹಳ ಜನಪ್ರಿಯವಾಗಿತ್ತು. ಗಂಗೂಬಾಯಿ ಹಿಂಸಾತ್ಮಕ, ಭೂಗತ ಗ್ಯಾಂಗ್​ಸ್ಟರ್​​ ಆಗಿರಲಿಲ್ಲ. ಅವಳು ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಳು. ಗುಜರಾತಿನ ಕಥಿಯಾವಾರದ ಸುಶಿಕ್ಷಿತ ಕುಟುಂಬದ, ಶಿಕ್ಷಣ ತಜ್ಞರು ಮತ್ತು ವಕೀಲರ ಸಂಪ್ರದಾಯವನ್ನು ಹೊಂದಿದ್ದ ಉತ್ತಮ ಕುಟುಂಬದಿಂದ ಬಂದ ಆ ಹುಡುಗಿ ವೇಶ್ಯಾವಾಟಿಕೆಯತ್ತ ಯಾಕೆ ಹೆಜ್ಜೆ ಹಾಕಿದಳು, ಮುಖ ಮಾಡಿದಳು? ಅವಳ ಕಥೆ ಏನು? ಮುಂದೆ ಓದಿ

ಗುಜರಾತಿನ ಕಥೇವಾಡಿ ಗ್ರಾಮದ ಗಂಗಾ ಎಂಬ ಅಬೋಧ ಹುಡುಗಿ ರಂಗೀನ್​ಲೋಕದ ಮುಂಬೈಗೆ ಹೋಗಿ ಸಿನಿಮಾಗಳಲ್ಲಿ ನಾಯಕಿಯಾಗಬೇಕು ಎಂದು ಬಾಲ್ಯದ ಕನಸು ಮಂಡಿದ್ದಳು. ತಂದೆಯ ಬಳಿ ರಾಮ್ನಿಕ್ ಲಾಲ್ ಎಂಬ ಅಕೌಂಟೆಂಟ್ ಇದ್ದ. 16 ವರ್ಷದ ಗಂಗಾ ಆತನನ್ನು ಪ್ರೀತಿಸುತ್ತಾಳೆ. ನಿನ್ನನ್ನು ಮುಂಬೈಗೆ ಕರೆದೊಯ್ದು ನಟಿಯನ್ನಾಗಿ ಮಾಡುತ್ತೇನೆ ಎಂದು ಅವ ನೀಡಿದ ಭರವಸೆಯಿಂದ ಅವಳು ಚಿತ್​ ಆಗುತ್ತಾಳೆ. ಗಂಗಾ ಅವನನ್ನು ಮದುವೆಯಾಗುತ್ತಾಳೆ. ಮುಂದೆ ಇಬ್ಬರೂ ಮುಂಬೈಗೆ ಓಡಿಹೋದರು. ಕೆಲ ದಿನಗಳಲ್ಲೇ ಅವರಿಬ್ಬರ ಪ್ರೀತಿ ಅರಳುತ್ತದೆ. ಒಂದು ದಿನ ರಾಮ್ನಿಕ್ ಅವಳನ್ನು ಕಾಮಾಟಿಪುರಕ್ಕೆ ಕರೆದುಕೊಂಡು ಹೋಗಿ 500 ರೂಪಾಯಿಗೆಲ್ಲ ಮಾರಿಬಿಡುತ್ತಾನೆ. ಹಾಗೆ ಕಾಮಾಟಿಪುರಕ್ಕೆ ಎಂಟ್ರಿ ಕೊಟ್ಟ ನಳಿಕ ತನಗಿನ್ನು ಹಿಂತಿರುಗುವ ಮಾರ್ಗ ಇಲ್ಲ ಎಂಬುದು ಗಂಗಾ ಅರಿವಿಗೆ ಬರುತ್ತದೆ. ಊಎಇಗೆ ವಾಪಸ್​ ಹೋಗಲೂ ಆಗದ ದುಸ್ಥಿತಿ ಅವಳದ್ದಾಗುತ್ತದೆ, ವಿಧಿಯಿಲ್ಲದೆ ತನ್ನ ಕರಾಳ ಪರಿಸ್ಥಿತಿಯನ್ನು ಒಪ್ಪಿಕೊಳ್ಳುತ್ತಾಳೆ. ಕಾಲಾಂತರದಲ್ಲಿ ಗಂಗಾ, ಗಂಗೂಬಾಯಿ ಆಗುತ್ತಾಳೆ.

ಶೌಕತ್ ಖಾನ್​​ ಎಂಬ ಪಠಾಣನು ತನ್ನ ಕಾಮದ ಹಸಿವನ್ನು ನೀಗಿಸಿಕೊಳ್ಳಲು ಪ್ರತಿದಿನ ಗಂಗೂಬಾಯಿ ಬಳಿಗೆ ಬರುತ್ತಿದ್ದ. ತನ್ನ ಕಾಮತೃಷೆ ನೀಗಿಸಲು ಅವಳನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದ. ಒಮ್ಮೆ ಅವನು ದೊಡ್ಡ ಹಂಗಾಮಾ ಸೃಷ್ಟಿಸಿಬಿಟ್ಟ. ಅವಳನ್ನು ದೈಹಿಕವಾಗಿ ಹಿಂಸಿಸಿದ ನಂತರ, ಹಣವನ್ನೂ ನೀಡದೆ ಹೊರಟುಬಿಡುತ್ತಾನೆ. ಗಂಗೂಬಾಯಿ ತನಗಾದ ದೈಹಿಕ ಗಾಯಗಳಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮುಂದೆ ಚೇತರಿಸಿಕೊಂಡ ಬಳಿಕ ಆ ಪಠಾಣ್ ನ ಮಾಹಿತಿ ತೆಗೆಯುತ್ತಾಳೆ. ಆ ಪಠಾಣನು ಕುಖ್ಯಾತ ದರೋಡೆಕೋರ ಕರೀಂ ಲಾಲಾ ಗ್ಯಾಂಗ್‌ನಲ್ಲಿದ್ದಾನೆ ಎಂದು ತಿಳಿದು ಬರುತ್ತದೆ. ಗಂಗೂಬಾಯಿ ಕರಿಮಲಾಲನನ್ನು ಭೇಟಿಯಾಗಿ ತನ್ನ ಕಷ್ಟವನ್ನು ಹೇಳಿಕೊಳ್ಲುತ್ತಾಳೆ. ಮುಂದೊಂದು ದಿನ ಶೌಕತ್ ಖಾನ್ ಗಂಗೂ ಮನೆಗೆ ಬಂದಾಗ, ಕರೀಂಲಾಲಾ ಅವನ ಮೇಲೆ ಕತ್ತಿ ಝಳಪಿಸುತ್ತಾ ಓಡಿಸಿಬಿಡುತ್ತಾನೆ. ಆ ಕ್ಷಣದಲ್ಲಿ ಗಂಗೂಬಾಯಿ ಕರೀಂಲಾಲಾಗೆ ರಾಖಿ ಕಟ್ಟಿ, ಆತನನ್ನು ಸೋದರನಂತೆ ಕಾಣತೊಡಗುತ್ತಾಳೆ. ಈ ಘಟನೆಯಿಂದ ಕಾಮಾಟಿಪುರ ಪ್ರದೇಶದಲ್ಲಿ ಗಂಗೂಬಾಯಿಯ ಆರ್ಭಟ ಹೆಚ್ಚಾಯಿತು.

ಗಂಗೂಬಾಯಿ ಮುಂದೆ ಅದೇ ಕಾಮಾಟಿಪುರದಲ್ಲಿ ಘರ್​​ವಾಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾಳೆ. ಅದಾದ ಮೇಲೆ ಗಂಗೂಬಾಯಿ, ಯಾವುದೇ ಹುಡುಗಿ ಅವಳ ಇಚ್ಛೆಗೆ ವಿರುದ್ಧವಾಗಿ ಕಾಮಾಟಿಪುರದಲ್ಲಿ ಬಲವಂತದ ದೈಹಿಕ ಶೋಷಣೆಗೆ ಈಡಾಗುವುದನ್ನು ಒಪ್ಪುವುದಿಲ್ಲ. ಮುಂದೆಂದಿಗೂ ಯುವತಿಯರು, ಮಹಿಳೆಯರನ್ನು ಶೋಷಣೆ ಮಾಡಲಿಲ್ಲ. ಕಾಮಾಟಿಪುರದ ಹೆಂಗಸರು, ಹುಡುಗಿಯರು ಮತ್ತು ಗಂಡುಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದಳು. ತಾಯಿಯಂತೆ ಅವರನ್ನು ನೋಡಿಕೊಳ್ಳುತ್ತಿದ್ದಳು. ಹಾಗಾಗಿ ಕಾಮಾಟಿಪುರದ ಘರ್​​ವಾಲಿ ಮೇಲೆ ಅವರಿಗೆಲ್ಲ ಅಭಿಮಾನವಿತ್ತು. ಗಂಗೂಬಾಯಿ ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದವಳು. ಅದೊಮ್ಮೆ ಎಲ್ಲರಿಗೂ ಸೆರಗು ಹಾಸುತ್ತಿದ್ದ ಗಂಗೂಬಾಯಿ ಕೊನೆಕೊನೆಗೆ ಚಿನ್ನದ ಸೆರಗಿನ ಸೀರೆಗಳು, ಚಿನ್ನದ ಗುಂಡಿಗಳಿದ್ದ ಕುಪ್ಪಸ ಮತ್ತು ಚಿನ್ನದ ಕಟ್ಟಿಗಳಿದ್ದ ಕನ್ನಡಕ ಧರಿಸಿ ಕಾರಿನಲ್ಲಿ ತಿರುಗಲಾರಂಭಿಸಿದಳು.

ಮುಂಬೈನ ಕುಖ್ಯಾತ ಕಾಮಾಟಿಪುರ ಪ್ರದೇಶದಲ್ಲಿ 1960 ರ ದಶಕದಲ್ಲಿ, ಸೇಂಟ್ ಅಂತೋಣಿ ಬಾಲಕಿಯರ ಪ್ರೌಢಶಾಲೆ ಹುಟ್ಟಿಕಂಡಿತು. ವೇಶ್ಯಾವಾಟಿಕೆ ಚಟುವಟಿಕೆಗಳಿಂದ ಮುಗ್ಧ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕೆಂಪುದೀಪ ಜಾಗದ ಕೆಲ ಭಾಗವನ್ನು ತೆರವು ಮಾಡುವಂತೆ ಆಗಲೇ ಬೇಡಿಕೆಗಳು ಬಂದಿದ್ದವು. ಆದರೆ ಅದು ಅನೇಕ ಮಹಿಳೆಯರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂದು ಸೊಪ್ಪುಹಾಕಲಿಲ್ಲ. ಅದರ ವಿರುದ್ಧ ದೊಡ್ಡ ಚಳವಳಿಯೇ ನಡೆಯಿತು. ವೇಶ್ಯಾವಾಟಿಕೆ ಅಪರಾಧವಲ್ಲ. ಅದೊಂದು ಸಾಮಾಜಿಕ ಅಗತ್ಯ. ‘ನಾನೂ ಕುಟುಂಬಸ್ಥಳು, ಆದರೆ ಮನೆಮುರುಕಿ ಅಲ್ಲ’ ಎಂದು ಗಂಗೂಬಾಯಿ ಸಾರಿದಳು. ವ್ಯಭಿಚಾರಿಯಾಗಿ ದುಡಿಯುವ ಹೆಂಗಸರ ಪರ ದನಿಯೆತ್ತಿದಳು.

ತನ್ನ ರಾಜಕೀಯ ನೆಂಟಸ್ತಿಕೆಯಿಂದ ಗಂಗೂಬಾಯಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರ್ ಅವರೊಂದಿಗೆ ಅಪಾಯಿಂಟ್ಮೆಂಟ್ ಪಡೆದಳು. ಈ ಭೇಟಿಯಲ್ಲಿ ಅವರು ದೇಶದಲ್ಲಿ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿದರು. ಉತ್ತಮ ಕೆಲಸ ಅಥವಾ ಪತಿ ಪಡೆಯಬೇಕಿದ್ದವಳು ಈ ವೃತ್ತಿಗೆ ಏಕೆ ಬಂದೆ ಎಂದು ನೆಹರು ಕೇಳಿದರು. ಆಗ ಗಂಗೂಬಾಯಿ ನೇರವಾಗಿ ನೆಹರೂಗೆ ತನ್ನನ್ನು ಮದುವೆಯಾಗುವಂತೆ ಪ್ರಸ್ತಾಪ ಮಾಡಿದಳು. ನೆಹರೂ ಅವರಿಗೆ ತನ್ನಂತಹ ಘರ್​ವಾಲಿಗಳ ಬಗ್ಗೆ ತಿಳಿವಳಿಕೆ ನೀಡಿದಳು. ಶಾಂತವಾಗಿಯೇ ಮಾತನಾಡಿದ ಗಂಗೂಬಾಯಿ ಪ್ರಧಾನಿ ಕೋಪಗೊಳ್ಳಬೇಡಿ. ನಾನು ನನ್ನಂತಹವರ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಸಲಹೆ ನೀಡುವುದು ಸುಲಭ. ಆದರೆ, ವಾಸ್ತವ ಬೇರೆಯದ್ದೇ ಇದೆ ಎಂದು ಗಂಗೂಬಾಯಿ ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದಳು.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Sat, 29 June 24

ತಾಜಾ ಸುದ್ದಿ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ