ಭಾರತದಲ್ಲಿ ರಕ್ಷಣಾ ಕ್ಷೇತ್ರದಷ್ಟು ಬೇರೆ ಯಾವುದೇ ಕ್ಷೇತ್ರವು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಉಪಕ್ರಮಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಭಾರತೀಯ ನೌಕಾಪಡೆಯ ಹೊಸ ವಿಮಾನವಾಹಕ ಯುದ್ಧನೌಕೆ (Aircraft Carrier) ಐಎನ್ಎಸ್ ವಿಕ್ರಾಂತ್. ಕೊಚ್ಚಿನ್ ಶಿಪ್ಯಾರ್ಡ್ನಿಂದ ಹೊರಹೊಮ್ಮಿದ ಮೊದಲ ವಿಮಾನವಾಹಕ ಯುದ್ಧನೌಕೆ ಇದು. ಭಾರತದ ರಕ್ಷಣೆ ಮತ್ತು ದೇಶೀಯ ರಕ್ಷಣಾ ಉದ್ಯಮಗಳಿಗೆ ಐಎನ್ಎಸ್ ವಿಕ್ರಾಂತ್ ಹೇಗೆ ಹೊಸ ಬಲ ತುಂಬಿದೆ ಎಂದು ಈ ಬರಹದಲ್ಲಿ ವಿಶ್ಲೇಷಿಸಿದ್ದಾರೆ ಗಿರೀಶ್ ಲಿಂಗಣ್ಣ.
ಈ ವಿಮಾನವಾಹಕ ಯುದ್ಧನೌಕೆಯನ್ನು 2021ರ ಕೊನೆ ಅಥವಾ 2022ರ ಆರಂಭದಲ್ಲಿ ಕಾರ್ಯಾಚರಣೆಗೆ ಇಳಿಸುವುದು ನೌಕಾಪಡೆಯ ಉದ್ದೇಶ. ವಿಕ್ರಾಂತ್ ಈಗಾಗಲೇ ಹಲವು ಸಮುದ್ರ ಪರೀಕ್ಷಾರ್ಥ ಸಂಚಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಕ್ರಾಂತ್ ಎಂದರೆ ಧೈರ್ಯಶಾಲಿ ಎಂದು ಅರ್ಥ. ಸುಮಾರು 40,000 ಟನ್ ತೂಗುವ ಈ ಹಡಗನ್ನು ಸುಮಾರು 30 ವಿಮಾನಗಳನ್ನು ಸಾಗಿಸಲು ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ಸುಮಾರು 23,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಹಡಗು ಸಿದ್ಧಗೊಳಿಸುವಲ್ಲಿ ಹಲವು ಖಾಸಗಿ ಸಂಸ್ಥೆಗಳು ತೊಡಗಿಸಿಕೊಂಡಿವೆ. ವಿಕ್ರಾಂತ್ ಮೂಲಕ ಭಾರತವು ತನ್ನದೇ ಆದ ಯುದ್ಧನೌಕೆಯನ್ನು ನಿರ್ಮಾಣ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಐದು ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರಿದೆ.
ಐಎನ್ಎಸ್ ವಿಕ್ರಾಂತ್ ಯೋಜನೆಯು ಆತ್ಮನಿರ್ಭರ್ ಭಾರತ್ಗೆ (ಸ್ವಾವಲಂಬಿ ಭಾರತ) ಸ್ಪಷ್ಟ ಉದಾಹರಣೆ ಎಂದು ಇತ್ತೀಚಿಗೆ ರಕ್ಷಣಾ ಇಲಾಖೆ ಹೇಳಿದೆ. ಇದಕ್ಕೆ ಶೇ 75ರಷ್ಟು ದೇಶೀಯ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳನ್ನು ಬಳಸಲಾಗಿದೆ.
ಇದರಲ್ಲಿ 23,000 ಟನ್ ಉಕ್ಕು, 2,500 ಕಿಲೋಮೀಟರ್ನಷ್ಟು ಎಲೆಕ್ಟ್ರಿಕಲ್ ಕೇಬಲ್, 150 ಕಿಮೀ ಉದ್ದದ ಪೈಪುಗಳು ಮತ್ತು 2,000 ವಾಲ್ವ್ಗಳನ್ನು ಬಳಸಲಾಗಿದೆ. ಅದೇ ರೀತಿ, ಆ್ಯಂಕರ್ ಕ್ಯಾಪ್ ಸ್ಟನ್ಸ್, ರಿಜಿಡ್ ಹುಲ್ ಬೋಟ್ಸ್, ಗ್ಯಾಲರಿ ಇಕ್ವಿಪ್ಮೆಂಟ್, ಏರ್ ಕಂಡೀಶನಿಂಗ್ ಮತ್ತು ರೆಫ್ರಿಜರೇಷನ್ ಪ್ಲಾಂಟ್ಸ್, ಸ್ಟೀರಿಂಗ್ ಗೇರ್ಸ್ ಮತ್ತು 150ಕ್ಕೂ ಹೆಚ್ಚು ಪಂಪುಗಳು ಹಾಗೂ ಮೋಟರ್ಸ್, ಕಮ್ಯುನಿಕೇಷನ್ ಇಕ್ವಿಪ್ಮೆಂಟ್, ಶಿಪ್ಸ್ ಕಾಂಬ್ಯಾಟ್ ನೆಟ್ವರ್ಕ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಸ್ಟೀಲ್ ಅನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಪೂರೈಕೆ ಮಾಡಿದ್ದರೆ, ಡಿಆರ್ಡಿಒ ದೇಶೀಯ ಡಿಎಂಆರ್ 249 ಎ ಮತ್ತು ಬಿ ವಾರ್ ಶಿಪ್ ಗ್ರೇಡ್ ಸ್ಟೀಲ್ ಪೂರೈಸಿದೆ. ನೌಕಾಪಡೆಯ ಅಧಿಕಾರಿಗಳ ಪ್ರಕಾರ ಈ ಹಡಗಿಗೆ ಬಳಸಲಾಗಿರುವ ಸ್ಟೀಲ್ನಿಂದ ಮೂರು ಐಫೆಲ್ ಟವರ್ಗಳನ್ನು ನಿರ್ಮಿಸಬಹುದಾಗಿದೆ.
ಈ ಯುದ್ಧ ಹಡಗು ನಿರ್ಮಾಣಕ್ಕೆ ಲಾರ್ಸನ್ ಅಂಡ್ ಟರ್ಬೊ ಮೇನ್ ಸ್ವಿಚ್ ಗೇರ್, ಸ್ಟಿಯರಿಂಗ್ ಗೇರ್ ಮತ್ತು ವಾಟರ್ ಟೈಟ್ ಹ್ಯಾಚಸ್ ಪೂರೈಸಿದೆ. ಇದರ ಏರ್ ಕಂಡೀಶನಿಂಗ್ ಮತ್ತು ರೆಫ್ರಿಜರೇಶನ್ ಅನ್ನು ಕಿರ್ಲೋಸ್ಕರ್ ಗ್ರೂಪ್ ತಯಾರಿಸಿದೆ. ನಿಕ್ಕೋ ಎಂಜಿನಿಯರಿಂಗ್ 2,500 ಕಿಲೋಮೀಟರ್ ಉದ್ದದ ಕೇಬಲ್ಗಳನ್ನು ಒದಗಿಸಿದ್ದರೆ, ಕ್ಯಾರಿಯರ್ ನ ಇಂಟಗ್ರೇಟೆಡ್ ಪ್ಲಾಟ್ ಫಾರ್ಮ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಭಾರತ್ ಹವೆ ಎಲೆಕ್ಟ್ರಿಕಲ್ ವಿನ್ಯಾಸಗೊಳಿಸಿದೆ. ಗೇರ್ ಬಾಕ್ಸ್ಗಳನ್ನು ಎಲೆಕಾನ್ ಎಂಜಿನಿಯರಿಂಗ್ ಪೂರೈಸಿದೆ. ಇದು ಗುಜರಾತ್ ಮತ್ತು ಜರ್ಮನಿಯಲ್ಲಿ ಕಾರ್ಯನಿರ್ವಹಿಸುವ ಕಂಪನಿ. ಈ ಹಡಗು ನಿರ್ಮಾಣಕ್ಕೆ ಭಾರತ ಸರ್ಕಾರವು ₹ 23,000 ಕೋಟಿ ಹೂಡಿಕೆ ಮಾಡಿದೆ. ಈ ಮೊತ್ತದಲ್ಲಿ ಈಗಾಗಲೇ ಶೇ 80-85ರಷ್ಟು ಭಾರತೀಯ ಆರ್ಥಿಕತೆಗೆ ವಾಪಸ್ ಬಂದಿದೆ ಎಂದು ನೌಕಾಪಡೆ ತಿಳಿಸಿದೆ. ಈ ಯೋಜನೆಯು ಈಗಾಗಲೇ 2000 ಜನರಿಗೆ ನೇರ ಉದ್ಯೋಗ ನೀಡಿದ್ದರೆ, 40,000ಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗವನ್ನು ನೀಡಿದೆ.
ಭಾರತೀಯ ನೌಕಾ ನಿರ್ಮಾಣ ಇತಿಹಾಸದಲ್ಲಿಯೂ ಈ ಹಡಗು ಒಂದು ಮೈಲಿಗಲ್ಲು. 262 ಮೀಟರ್ ಉದ್ದ, 62 ಮೀಟರ್ ಅಗಲ ಹಾಗೂ 14 ಡೆಕ್ಗಳು ಈ ಹಡಗಿನಲ್ಲಿದೆ. ಒಟ್ಟಾರೆ ಗಾತ್ರದಲ್ಲಿ ಇದು ಐಎನ್ಎಸ್ ವಿಕ್ರಮಾದಿತ್ಯಕ್ಕಿಂತ ಸಾಕಷ್ಟು ದೊಡ್ಡದು. ನೌಕಾಪಡೆಯ ಪ್ರಕಾರ ಈ ಹಡಗನ್ನು ವಿಮಾನಗಳು ಶಾರ್ಟ್ ಟೇಕಾಫ್, ಬಟ್ ಅರೆಸ್ಟೆಡ್ ರಿಕವರಿಗೆ (STOBAR) ಬಳಸುತ್ತವೆ. 1500 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಹಡಗಿಗಿದೆ ಇದೆ. ಇದು 15,000 ಕಿಲೋಮೀಟರ್ ರೇಂಜ್ ಅನ್ನು ಹೊಂದಿದೆ ಮತ್ತು 150 ಮೀಟರ್ವರೆಗೆ ಟೇಕಾಫ್ ಸಾಮರ್ಥ್ಯವಿದೆ. ಇದು ಗ್ಯಾಸ್ ಟರ್ಬೈನ್ ಎಂಜಿನ್ ಬಳಸುತ್ತದೆ. ಇದರಲ್ಲಿ ನಾಲ್ಕು ಗ್ಯಾಸ್ ಟರ್ಬೈನ್ಗಳಿವೆ.
ಇದು 30 ನಾಟ್ (ಗಂಟೆಗೆ 55 ಕಿಮೀ) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ಸಂದರ್ಭಗಳಲ್ಲಿ 18 ನಾಟ್ (ಗಂಟೆಗೆ 32 ಕಿಮೀ) ವೇಗದಲ್ಲಿ 7500 ನಾಟಿಕಲ್ ಮೈಲು ಸಂಚರಿಸಬಲ್ಲದು. ವಿಕ್ರಾಂತ್ ಎಂದರೆ ಧೈರ್ಯಶಾಲಿ ಎಂದರ್ಥ. ಋಗ್ವೇದದಲ್ಲಿರುವ ಜಯೇನ ಸಂ ಯುಧಿ ಸೊರ್ದ ಈ ವಿಮಾನವಾಹಕ ನೌಕೆಯ ಘೋಷವಾಕ್ಯ. ಈ ಮಂತ್ರವನ್ನು ಕನ್ನಡಕ್ಕೆ ಅನುವಾದಿಸಿದರೆ ನನ್ನ ವಿರುದ್ಧ ಹೋರಾಡುವವರನ್ನು ನಾನು ಸೋಲಿಸುತ್ತೇನೆ ಎಂಬ ಅರ್ಥ ಬರುತ್ತದೆ.
ಭಾರತೀಯ ನೌಕಾಪಡೆಯ ನಿರ್ದೇಶನಾಲಯದ ನೌಕಾ ವಿನ್ಯಾಸದ ಪರಿಣಿತರು ವಿನ್ಯಾಸಗೊಳಿಸಿದ ಈ ಹಡಗನ್ನು ‘ಬ್ಲೂ ವಾಟರ್ ನೌಕಾಪಡೆ’ ವರ್ಗೀಕರಣಕ್ಕೆ ಸೇರಿಸಲಾಗಿದೆ. ಬ್ಲೂ ವಾಟರ್ ನೇವಿ ಎಂದರೆ ರಾಷ್ಟ್ರದ ಶಕ್ತಿ ಮತ್ತು ಇಚ್ಛಾಶಕ್ತಿಯನ್ನು ದೂರದ ಸಮುದ್ರಗಳಲ್ಲಿ ಪ್ರದರ್ಶಿಸುವ ಮತ್ತು ಸರ್ಕಾರದ ತೀರ್ಮಾನಗಳನ್ನು ಜಾರಿಗೆ ತರುವ ಸಾಮರ್ಥ್ಯ. ಈ ಹಡಗು 2300ಕ್ಕೂ ಹೆಚ್ಚು ವಿಭಾಗಗಳನ್ನು ಹೊಂದಿದೆ. ಮಹಿಳಾ ಅಧಿಕಾರಿಗಳಿಗೆ ಲಿಂಗ ಸೂಕ್ಷ್ಮ ವಸತಿ ಸೌಕರ್ಯವಿರುವ ಭಾರತದ ಮೊದಲ ಯುದ್ಧ ನೌಕೆ ಇದಾಗಿದೆ.
ಯಂತ್ರೋಪಕರಣಗಳ ಕಾರ್ಯಾಚರಣೆ, ಹಡಗು ಸಂಚಾರ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅಸ್ತಿತ್ವ ಉಳಿಸಿಕೊಳ್ಳುವ ಹಲವು ಆಯ್ಕೆಗಳನ್ನು ಈ ಹಡಗು ಹೊಂದಿದೆ. ಹಡಗನ್ನು ಸ್ಥಿರ ವಿಂಗ್ ಮತ್ತು ರೋಟರಿ ವಿಮಾನಗಳ ಹಾರಾಟ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಯುದ್ಧದ ಸಮಯದಲ್ಲಿ 40ರಿಂದ 42 ಹೆಲಿಕಾಪ್ಟರ್ಗಳನ್ನು ಒಯ್ಯಬಲ್ಲದು. ಶಾಂತಿ ಸಮಯದಲ್ಲಿ ಇದು 30 ವಿಮಾನ/ಹೆಲಿಕಾಪ್ಟರ್ಗಳನ್ನು ಒಯ್ಯುತ್ತದೆ.
ಮುಂಚೂಣಿ ದೇಶಗಳ ಗುಂಪಿನಲ್ಲಿ ಭಾರತ
ಈ ದೇಶೀಯ ವಿಮಾನವಾಹಕ ನೌಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ವಿಮಾನವಾಹಕ ನೌಕೆಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ಕೆಲವು ದೇಶಗಳ ಗುಂಪಿಗೆ ಸೇರಿದಂತೆ ಆಗಿದೆ. ವಿಶ್ವದ ಅತ್ಯಂತ ಮುಂದುವರಿದ ಹಾಗೂ ಸಂಕೀರ್ಣ ಯುದ್ಧನೌಕೆ ರೂಪಿಸುವ ಸಾಮರ್ಥ್ಯವಿರುವ ದೇಶಗಳ ಪಟ್ಟಿಗೆ ಭಾರತವೂ ಸೇರಿದಂತೆ ಆಗಿದೆ.
ಭಾರತದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ (ಎಚ್ಎಂಎಸ್ ಹರ್ಕ್ಯುಲಸ್) ಮತ್ತು ವಿರಾಟ್ ಬ್ರಿಟನ್ನಿಂದ ತರಿಸಲಾಗಿತ್ತು. ಇದೀಗ ಸೇವೆಯಲ್ಲಿರುವ ಐಎನ್ಎಸ್ ವಿಕ್ರಮಾದಿತ್ಯ ಸಹ ರಷ್ಯಾ ನಿರ್ಮಿತ ವಿಮಾನವಾಹಕ ಯುದ್ಧನೌಕೆಯಾಗಿದೆ. 1971ರ ಭಾರತ-ಪಾಕ್ ಯುದ್ಧದ ವೇಳೆ ಬಂಗಾಳಕೊಲ್ಲಿಯಲ್ಲಿ ನಿಯೋಜನೆಗೊಂಡಿದ್ದ ಐಎನ್ಎಸ್ ವಿಕ್ರಾಂತ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು.
ಭಾರತೀಯ ಸಂಸ್ಥೆಗಳಿಗೆ ವ್ಯಾಪಾರದ ಅವಕಾಶಗಳು
ಇದೀಗ ಸಮುದ್ರದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿರುವ ಐಎನ್ಎಸ್ ವಿಕ್ರಾಂತ್ ಭಾರತದ ಹೆಮ್ಮೆ ಎನಿಸಿದೆ. ರಕ್ಷಣಾ ವಲಯದಲ್ಲಿ ಉತ್ಪನ್ನಗಳನ್ನು ನಿರ್ಮಿಸಿಕೊಡುತ್ತಿರುವ ಉದ್ಯಮಿಗಳು ಮತ್ತು ಹೊಸದಾಗಿ ಕ್ಷೇತ್ರಕ್ಕೆ ಬರಲು ಆಸಕ್ತಿಯಿರುವವರಿಗೆ ಹೊಸ ಮಾರ್ಗಗಳನ್ನು ತೆರೆದಿದೆ. ರಕ್ಷಣಾ ಸಂಶೋಧಕರು ಹಾಗೂ ರಫ್ತುದಾರರ ಜಾಗತಿಕ ಭೂಪಟದಲ್ಲಿ ಭಾರತವನ್ನು ಕಾಣಿಸುವಂತೆ ಮಾಡುವ ಹೊಸ ಅವಕಾಶಗಳಿಗೆ ಸಾಧ್ಯತೆಗಳನ್ನು ಮುಕ್ತವಾಗಿಸಿದೆ.
ವಿಕ್ರಾಂತ್ ಮೇಲಿರುವ ವಿಮಾನಗಳು ಮತ್ತು ಶಸ್ತ್ರಾಸ್ತ್ರ
ನೌಕಾಪಡೆಯು ಅತ್ಯಂತ ಶಕ್ತಿಶಾಲಿ ಆಸ್ತಿಯೆಂದು ಪರಿಗಣಿಸಲ್ಪಟ್ಟಿರುವ ವಿಕ್ರಾಂತ್ ರಷ್ಯಾ ನಿರ್ಮಿತ ಯುದ್ಧ ವಿಮಾನಗಳಾದ ಮಿಗ್-29ಕೆ, ಕಮೋವ್-31 ಏರ್ ಅರ್ಲಿ ವಾರ್ನಿಂಗ್ ಹೆಲಿಕಾಪ್ಟರ್ಗಳನ್ನು ನಿರ್ವಹಿಸುತ್ತದೆ. ಇದು ಎಂಎಚ್-60, ಅಮೆರಿಕನ್ ನಿರ್ಮಿತ ಹೆಲಿಕಾಪ್ಟರ್ಗಳು ಹಾಗೂ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ಗಳನ್ನು ನಿರ್ವಹಿಸುತ್ತದೆ. ಇದನ್ನು ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದೆ.
ಈ ಯುದ್ಧ ನೌಕೆಯು ಹೋಲಿಕೆ ಮಾಡಲಾರದಂತಹ ಮಿಲಿಟರಿ ಸಾಧ್ಯತೆಗಳನ್ನು ಭಾರತಕ್ಕೆ ಒದಗಿಸಿದೆ. ಶತ್ರುಗಳ ಯುದ್ಧ ವಿಮಾನ, ಯುದ್ಧ ನೌಕೆಗಳನ್ನು ಭಾರತದ ಗಡಿಯಿಂದ ಬಹುದೂರದಲ್ಲಿಯೇ ನಿರ್ಬಂಧಿಸುವ ಸಾಮರ್ಥ್ಯ ಹೊಂದಿರುವ ವಿಕ್ರಾಂತ್ ಆಕ್ರಮಣ ಮತ್ತು ರಕ್ಷಣಾತ್ಮಕ ವ್ಯೂಹ ತಂತ್ರಗಳನ್ನು ರೂಪಿಸುವ ತಂತ್ರಗಳನ್ನು ಹೆಣೆಯಲು ನೆರವು ನೀಡುತ್ತದೆ. ಭಾರತದ ಗಡಿಯಿಂದ ಬಹುದೂರದವರೆಗೆ ಯುದ್ಧಭೂಮಿಯನ್ನು ವಿಸ್ತರಿಸುವ ಸಾಮರ್ಥ್ಯ ಈ ಯುದ್ಧನೌಕೆಗೆ ಇದೆ.
ನಾವೆಲ್ಲಿದ್ದೇವೆ? ಭವಿಷ್ಯವೇನು?
ಸಮಕಾಲೀನ ವಿಶ್ವದಲ್ಲಿ ಅತಿಹೆಚ್ಚು ವಿಮಾನವಾಹಕ ಯುದ್ಧನೌಕೆಗಳನ್ನು ಹೊಂದಿರುವ ದೇಶ ಅಮೆರಿಕ. ಅಮೆರಿಕ ಬಳಿ ಒಟ್ಟು 11 ವಿಮಾನವಾಹಕ ಯುದ್ಧನೌಕೆಗಳಿವೆ. ಇಟಲಿ ಬಳಿ ಇಂಥ ಎರಡು ಯುದ್ಧನೌಕೆಗಳಿವೆ. ಇದೀಗ ವಿಕ್ರಾಂತ್ ಸೇರ್ಪಡೆಯ ನಂತರ ಭಾರತವು ಎರಡು ವಿಮಾನ ವಾಹಕ ಯುದ್ಧನೌಕೆಗಳನ್ನು ಹೊಂದಿರುವ ಎರಡನೇ ದೇಶ ಎನಿಸಿಕೊಂಡಿದೆ. ಎರಡು
ವಿಮಾನ ವಾಹಕ ನೌಕೆಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಚೀನಾ ಯತ್ನಿಸುತ್ತಿದೆ. ಭಾರತವು ಇನ್ನೂ ನಾಲ್ಕು ವಿಮಾನ ವಾಹಕಗಳನ್ನು ಅಭಿವೃದ್ಧಿಪಡಿಸುತ್ತಿದೆ. ಐಎನ್ಎಸ್ ವಿಶಾಲ್ ಹೆಸರಿನ ಮತ್ತೊಂದು ಬೃಹತ್ ವಿಮಾನವಾಹಕ ಯುದ್ಧನೌಕೆಯನ್ನು ಅಭಿವೃದ್ಧಿಪಡಿಸಲು ಭಾರತ ಯತ್ನಿಸುತ್ತಿದೆ. 65,000 ಟನ್ನಷ್ಟು ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಯುದ್ಧನೌಕೆಯು ಐಎನ್ಎಸ್ ವಿಕ್ರಮಾದಿತ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ರಕ್ಷಣಾ ಪಡೆಗಳು ಮುಖ್ಯಸ್ಥರು (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ -ಸಿಡಿಎಸ್) ಈ ಯೋಜನೆಗೆ ಅನುಮೋದನೆ ನೀಡಿಲ್ಲ. ಆದರೂ ಈ ಬಹುನಿರೀಕ್ಷಿತ ಯೋಜನೆ ಅತ್ಯಂತ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಎಂಬ ಮಾತು ರಕ್ಷಣಾ ವಲಯದಲ್ಲಿ ಕೇಳಿ ಬರುತ್ತಿದೆ.
(ಲೇಖಕ ಗಿರೀಶ್ ಲಿಂಗಣ್ಣ, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರು)
(INS Vikrant Leads Way towards Atmanirbhar Indigenous Power in Indian Defense Sector)
Proud & historic day for India as the reincarnated #Vikrant sails for her maiden sea trials today, in the 50th year of her illustrious predecessor’s key role in victory in the #1971war
Largest & most complex warship ever to be designed & built in India.
Many more will follow… pic.twitter.com/6cYGtAUhBK— SpokespersonNavy (@indiannavy) August 4, 2021
ಇದನ್ನೂ ಓದಿ: ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯುದ್ಧನೌಕೆ ವಿಕ್ರಾಂತ್; ದೇಶಕ್ಕಿದು ಐತಿಹಾಸಿಕ ದಿನ
ಇದನ್ನೂ ಓದಿ: INS Vikrant: ಮೊದಲ ದೇಶೀ ವಿಮಾನವಾಹಕ ಯುದ್ಧನೌಕೆಯ ಹಿಂದಿದೆ 21 ವರ್ಷಗಳ ಪರಿಶ್ರಮ
Published On - 8:44 pm, Fri, 1 October 21