INS Vikrant: ಮೊದಲ ದೇಶೀ ವಿಮಾನವಾಹಕ ಯುದ್ಧನೌಕೆಯ ಹಿಂದಿದೆ 21 ವರ್ಷಗಳ ಪರಿಶ್ರಮ

Indian Navy: ಯುದ್ಧಗಳನ್ನು ಸ್ವದೇಶದ ನೆಲದಿಂದ ಬಹುದೂರಕ್ಕೆ ಕೊಂಡೊಯ್ಯಬಲ್ಲ, ನಮ್ಮ ದೇಶದತ್ತ ಕಣ್ಣೆತ್ತಿ ನೋಡಲೂ ವೈರಿಗಳು ಹತ್ತು ಸಲ ಯೋಚಿಸಬೇಕು ಎನ್ನುವ ಸ್ಥಿತಿಗೆ ದೂಡುವ ಮುಖ್ಯ ಅಸ್ತ್ರ ವಿಮಾನವಾಹಕ ಯುದ್ಧನೌಕೆ. ದೇಶದ ಭದ್ರತೆಗೆ ವಿಮಾನವಾಹಕ ಯುದ್ಧನೌಕೆಗಳು ಏಕೆ ಅಗತ್ಯ ಎಂಬ ವಿವರಣೆ ಇಲ್ಲಿದೆ.

INS Vikrant: ಮೊದಲ ದೇಶೀ ವಿಮಾನವಾಹಕ ಯುದ್ಧನೌಕೆಯ ಹಿಂದಿದೆ 21 ವರ್ಷಗಳ ಪರಿಶ್ರಮ
ನೀಲಿ ಕಡಲಿಗೆ ವಿಕ್ರಾಂತ ಪ್ರಯಾಣ. ಆಗಸ್ಟ್​ 4ರಂದು ಮೊದಲ ದೇಶೀ ನಿರ್ಮಿತ ವಿಮಾನ ವಾಹಕ ಯುದ್ಧನೌಕೆಯ ಪ್ರಯೋಗಾರ್ಥ ಸಂಚಾರ ಆರಂಭವಾಯಿತು.
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 06, 2021 | 1:18 AM

ಭಾರತದ ಮೊದಲ ದೇಶೀ ನಿರ್ಮಿತ ವಿಮಾನವಾಹಕ ಯುದ್ಧನೌಕೆ (Indigenous Aircraft Carrier – IAC) ಐಎನ್ಎಸ್ ವಿಕ್ರಾಂತ್ ನಿನ್ನೆಯಷ್ಟೇ (ಆಗಸ್ಟ್​ 4) ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಸ್ವತಂತ್ರ ಭಾರತದ ರಕ್ಷಣಾ ಇತಿಹಾಸದಲ್ಲಿ ಮೈಲಿಗಲ್ಲಾಗಿ ದಾಖಲಾಗಬೇಕಾದ ಮಹತ್ವದ ಬೆಳವಣಿಗೆಯಿದು. ಯುದ್ಧಗಳನ್ನು ಸ್ವದೇಶದ ನೆಲದಿಂದ ಬಹುದೂರಕ್ಕೆ ಕೊಂಡೊಯ್ಯಬಲ್ಲ, ಶತ್ರುರಾಷ್ಟ್ರಗಳ ಆರ್ಥಿಕ ಸಂಪನ್ಮೂಲ ಬತ್ತಿಹೋಗುವಂತೆ ಮಾಡುವ, ನಮ್ಮ ದೇಶದತ್ತ ಕಣ್ಣೆತ್ತಿ ನೋಡಲೂ ವೈರಿಗಳು ಹತ್ತು ಸಲ ಯೋಚಿಸಬೇಕು ಎನ್ನುವ ಸ್ಥಿತಿಗೆ ದೂಡುವ ಮುಖ್ಯ ಅಸ್ತ್ರ ವಿಮಾನವಾಹಕ ಯುದ್ಧನೌಕೆ. ವಿಕ್ರಾಂತ್ ನೀರಿಗಿಳಿದ ಶುಭಸುದ್ದಿಯೊಂದಿಗೆ ದೇಶದ ಭದ್ರತೆಗೆ ವಿಮಾನವಾಹಕ ಯುದ್ಧನೌಕೆಗಳು ಏಕೆ ಅಗತ್ಯ ಎಂಬ ವಿವರಣೆ ಇಲ್ಲಿದೆ.

ಯುದ್ಧನೌಕೆ ವಿಕ್ರಾಂತ್​ಗೇಕೆ IAC-1 ಎಂಬ ಮೇಲ್ಮೆ? ಏನಿದರ ಪ್ರಾಮುಖ್ಯತೆ? ಭಾರತ ದೇಶದಲ್ಲಿ ವಿನ್ಯಾಸಗೊಂಡು, ಕಟ್ಟುವ ಕೆಲಸ ಪೂರ್ಣಗೊಂಡ ಮೊದಲ ವಿಮಾನವಾಹಕ ಯುದ್ಧನೌಕೆಯಿದು. ಹೀಗಾಗಿಯೇ ಇದಕ್ಕೆ IAC ಅಂದರೆ Indegenous Aircraft Carrier ಎಂಬ ಮೇಲ್ಮೆ. ದೇಶದ ಭದ್ರತಾ ಸಂಪನ್ಮೂಲಗಳನ್ನು ಲೆಕ್ಕ ಹಾಕುವಾಗ, ಯುದ್ಧಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಜಾಗತಿಕ ಶಕ್ತಿಗಳು ವಿಮಾನವಾಹಕ ಯುದ್ಧನೌಕೆಗಳನ್ನು ಮುಖ್ಯವಾಗಿ ಗಮನಿಸುತ್ತವೆ. ಹೊರದೇಶದಗಳಲ್ಲಿ ಯಾವುದೇ ದೇಶದ ಹಿತಾಸಕ್ತಿಯನ್ನು ಪ್ರಭಾವಿಸುವ ಅಂತರರಾಷ್ಟ್ರೀಯ ರಾಜಕಾರಣದಲ್ಲಿ (ಜಿಯೊ ಪಾಲಿಟಿಕ್ಸ್​) ಇಂಥ ಯುದ್ಧನೌಕೆಗಳು ಇರುವ ದೇಶಗಳ ಮಾತಿಗೆ ಒಂದು ತೂಕ ಹೆಚ್ಚು. ಇಂಥ ಯುದ್ಧನೌಕೆಗಳು ಸಾಗರದಲ್ಲಿ ಮಾತ್ರವಲ್ಲ, ಆಗಸದಲ್ಲಿಯೂ ದೇಶದ ರಕ್ಷಣೆ ಮತ್ತು ದಾಳಿ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತವೆ. ಅಷ್ಟು ಮಾತ್ರವಲ್ಲ, ಯುದ್ಧ ಆಗುವ ಸ್ಥಳವನ್ನು ದೇಶದ ತೀರದಿಂದ ಸಾವಿರಾರು ಕಿಲೋಮೀಟರ್​ಗಳಷ್ಟು ದೂರಕ್ಕೆ ಕೊಂಡೊಯ್ಯಬಲ್ಲವು.

ಸ್ವದೇಶದ ತೀರದಿಂದ ಬಹುದೂರದವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವಿರುವ ಪ್ರಬಲ ನೌಕಾಪಡೆಗಳನ್ನು ಬ್ಲೂ ವಾಟರ್​ ನೇವಿ ಎಂದು ವರ್ಗೀಕರಿಸುತ್ತಾರೆ. ಈ ಸಾಮರ್ಥ್ಯ ಹೊಂದಬೇಕೆಂಬುದು ಭಾರತದ ಹಲವು ವರ್ಷಗಳ ಕನಸು. ವಿಮಾನವಾಹಕ ಯುದ್ಧನೌಕೆಗಳು ದಾಳಿವ್ಯೂಹ ಅಥವಾ ಸಮರವ್ಯೂಹವನ್ನು ಮುನ್ನಡೆಸುವ ಪ್ರಬಲ ಸಂಪನ್ಮೂಲ. ವಿಮಾನವಾಹಕ ಯುದ್ಧನೌಕೆಯೊಂದಿಗೆ ದಾಳಿನೌಕೆಗಳು, ಕ್ಷಿಪಣಿ ಉಡಾವಣಾ ನೌಕೆಗಳು, ಫ್ರಿಗೇಟ್​, ಜಲಾಂತರ್ಗಾಮಿಗಳು ಮತ್ತು ಸಂಪಲ್ಮೂಲ ಪೂರೈಸುವ ನೌಕೆಗಳು ಒಂದು ವ್ಯೂಹ ರಚಿಸಿಕೊಂಡು ಸಂಚರಿಸುತ್ತವೆ.

ಭಾರತೀಯ ನೌಕಾಪಡೆಯ ನೌಕಾ ವಿನ್ಯಾಸ ನಿರ್ದೇಶನಾಲಯ (Directorate of Naval Design – DND) ವಿನ್ಯಾಸ ಮಾಡಿದ ಈ ಯುದ್ಧನೌಕೆಯನ್ನು ಕೊಚಿನ್ ಶಿಪ್​ಯಾರ್ಡ್​ ಲಿಮಿಟೆಡ್ (ಸಿಎಸ್​ಎಲ್) ಕಟ್ಟಿದೆ. ಭಾರತ ಸರ್ಕಾರದ ನೌಕಾಯಾನ ಇಲಾಖೆಯ ಅಧೀನದಲ್ಲಿರುವ ಈ ಶಿಪ್​ಯಾರ್ಡ್​ಗೂ ಈಗ ಒಳ್ಳೇ ಹೆಸರು ಬಂದಿದೆ.

ಇದನ್ನೂ ಓದಿ: ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಪರೀಕ್ಷಾರ್ಥ ಸಂಚಾರ ಆರಂಭ

ಭಾರತದಲ್ಲಿ ನಿರ್ಮಾಣಗೊಂಡ ಯುದ್ಧನೌಕೆ ಎಂಬುದು ಏಕಿಷ್ಟು ಮುಖ್ಯ? ವಿಶ್ವದ ಕೇವಲ ಐದಾರು ದೇಶಗಳಿಗೆ ಮಾತ್ರ ದೇಶೀಯವಾಗಿ ವಿಮಾನವಾಹಕ ಯುದ್ಧನೌಕೆ ನಿರ್ಮಿಸುವ ಸಾಮರ್ಥ್ಯವಿದೆ. ಈ ಪ್ರಭಾವಿ ದೇಶಗಳ ಗುಂಪಿಗೆ ಭಾರತವೂ ಈಗ ಸೇರ್ಪಡೆಯಾಗಿದೆ. ರಕ್ಷಣಾ ವಿದ್ಯಮಾನಗಳ ತಜ್ಞರು ಮತ್ತು ನೌಕಾಪಡೆಯ ಅಧಿಕಾರಿಗಳು ಭಾರತ ಈಗ ಸ್ವಾವಲಂಬಿ ಎಂಬುದನ್ನು ಇದು ನಿರೂಪಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೀಗ ಸಮುದ್ರದಲ್ಲಿ ತೇಲಲು ಆರಂಭಿಸಿರುವ ವಿಕ್ರಾಂತ್​ ವಿಶ್ವದ ಅತ್ಯಂತ ಸಂಕೀರ್ಣ ಮತ್ತು ಮುಂಚೂಣಿ ತಂತ್ರಜ್ಞಾನವನ್ನು ಹೊಂದಿದೆ.

ಭಾರತ ಈ ಮೊದಲು ವಿಮಾನವಾಹಕ ಯುದ್ಧನೌಕೆಗಳನ್ನು ಇಂಗ್ಲೆಂಡ್ ಮತ್ತು ರಷ್ಯಾದಿಂದ ಖರೀದಿಸಿತ್ತು. ಇದೀಗ ಭಾರತದ ನೌಕಾಪಡೆ ನಿರ್ವಹಿಸುತ್ತಿರುವ ಐಎನ್​ಎಸ್​ ವಿಕ್ರಮಾದಿತ್ಯ 2013ರಲ್ಲಿ ಸೇವೆಗೆ ಸೇರ್ಪಡೆಯಾಯಿತು. ಸೋವಿಯತ್ ರಷ್ಯಾ ನೌಕಾಪಡೆಯಲ್ಲಿ ಅಡ್ಮಿರಲ್ ಗೊರ್​ಶ್​ಕೊವ್ ಹೆಸರು ಹೊಂದಿದ್ದ ಈ ಸಮರನೌಕೆಯನ್ನು ಭಾರತ ಖರೀದಿಸಿತ್ತು. ದೇಶದಲ್ಲಿ ಈ ಹಿಂದೆ ಸೇವೆಯಲ್ಲಿದ್ದ ಐಎನ್​ಎಸ್​ ವಿಕ್ರಾಂತ್ ಮತ್ತು ಐಎನ್​ಎಸ್ ವಿರಾಟ್ ಯುದ್ಧನೌಕೆಗಳು ಕ್ರಮವಾಗಿ ಎಚ್ಎಂಎಸ್ ಹರ್ಕ್ಯುಲಸ್ ಮತ್ತು ಎಚ್​ಎಂಎಸ್ ಹರ್ಮಸ್ ಹೆಸರಿನೊಂದಿಗೆ ಬ್ರಿಟಿಷ್​ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದವು. ಇವನ್ನು ಕ್ರಮವಾಗಿ 1961 ಮತ್ತು 1987ರಲ್ಲಿ ಭಾರತ ಸರ್ಕಾರ ಖರೀದಿಸಿ ಸೇವೆಗೆ ನಿಯೋಜಿಸಿತ್ತು.

ದೇಶೀ ನಿರ್ಮಿತ ವಿಕ್ರಾಂತ್ ಸಮರನೌಕೆ ಶೇ 76ರಷ್ಟು ಸ್ವದೇಶಿ ನಿರ್ಮಾಣದ ವಸ್ತುಗಳು ಮತ್ತು ಉಪಕರಣಗಳನ್ನು ಹೊಂದಿದೆ. 23,000 ಟನ್ ಉಕ್ಕು, 2,500 ಕಿಮೀಯಷ್ಟು ಉದ್ದದ ಎಲೆಕ್ಟ್ರಿಕ್ ಕೇಬಲ್, 150 ಕಿಮೀಯಷ್ಟು ಪೈಪ್​ ಮತ್ತು 2,000 ವಾಲ್ವ್​ಗಳು ಮತ್ತು ಸಂಪೂರ್ಣ ಸಿದ್ಧಗೊಂಡಿರುವ ಹಗುರ ತೇಲುವ ದೋಣಿಗಳು, ಗ್ಯಾಲರಿ ಉಪಕರಣಗಳು, ಹವಾನಿಯಂತ್ರಕ ಮತ್ತು ರೆಫ್ರಿಜರೇಷನ್ ಘಟಕಗಳು ಮತ್ತು ನೌಕೆ ಚಲಿಸುವ ದಿಕ್ಕು ನಿರ್ಧರಿಸುವ ಚುಕ್ಕಾಣಿಯನ್ನು ದೇಶೀಯವಾಗಿಯೇ ನಿರ್ಮಿಸಲಾಗಿದೆ.

ಈ ಯೋಜನೆಯಲ್ಲಿ ಸುಮಾರು 50 ಭಾರತೀಯ ಉತ್ಪಾದಕರು ನೇರವಾಗಿ ಪಾಲ್ಗೊಂಡಿದ್ದಾರೆ. 2000 ಭಾರತೀಯರು ವಿಕ್ರಾಂತ್​ಗಾಗಿ ಪ್ರತಿದಿನ ಕೆಲಸ ಮಾಡಬೇಕಾಗುತ್ತದೆ. ಅಂದರೆ ಅಷ್ಟು ಜನರಿಗೆ ನೇರವಾಗಿ ಉದ್ಯೋಗಾವಕಾಶ ಸಿಗುತ್ತದೆ. ಸುಮಾರು 40,000 ಮಂದಿಗೆ ಪರೋಕ್ಷವಾಗಿ ಉದ್ಯೋಗಾವಕಾಶಗಳು ಸಿಗುತ್ತವೆ. ವಿಕ್ರಾಂತ್ ನಿರ್ಮಾಣಕ್ಕೆ ನೌಕಾಪಡೆಯು ₹ 23,000 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಶೇ 80ರಿಂದ 85ರಷ್ಟು ಹಣ ಭಾರತೀಯ ಆರ್ಥಿಕತೆಗೇ ಮರಳಿ ಬಂದಿದೆ ಎಂಬುದು ಗಮನಾರ್ಹ ಸಂಗತಿ.

ಇದನ್ನೂ ಓದಿ: Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?

ವಿಶಾಲ ಸಾಗರದತ್ತ ವಿಕ್ರಾಂತ್ ಪಯಣ

ಈ ಯುದ್ಧನೌಕೆಗೇಕೆ ಐಎನ್​ಎಸ್ ವಿಕ್ರಾಂತ್ ಎಂಬ ನಾಮಕರಣ? 50 ವರ್ಷಗಳ ಹಿಂದೆ, ಅಂದರೆ 1971ರಲ್ಲಿ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬರಲು ಕಾರಣವಾದ ಭಾರತ-ಪಾಕ್​ ಯುದ್ಧದಲ್ಲಿ ನಿರ್ಣಾಯಕ ನಿರ್ವಹಿಸಿದ್ದು ವಿಮಾನ ವಾಹಕ ಯುದ್ಧನೌಕೆ ಐಎನ್​ಎಸ್​ ವಿಕ್ರಾಂತ್. ಅಂದಿನ ಪೂರ್ವ ಪಾಕಿಸ್ತಾನದ ಪ್ರಮುಖ ಪಟ್ಟಣ, ಇಂದಿನ ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರಕ್ಕೆ ಸಾಗರ ದಿಗ್ಬಂಧನ ಹೇರಿದ್ದು ಇದೇ ವಿಕ್ರಾಂತ್. ಇದೇ ನೌಕೆಯಿಂದ ಹಾರುತ್ತಿದ್ದ ಸೀ ಹಾಕ್ ಫೈಟರ್​ ಜೆಟ್ ಮತ್ತು ಅಲೀಜ್ ನಿಗಾವಣೆ ವಿಮಾನಗಳನ್ನು ಬಂದರು, ವಾಣಿಜ್ಯ ನೌಕೆ ಮತ್ತು ಇತರ ಗುರಿಗಳ ಮೇಲೆ ದಾಳಿಗೆ ಬಳಸಲಾಗಿತ್ತು.

ಪಾಕಿಸ್ತಾನ ಸೇನೆ ಬಾಂಗ್ಲಾಕ್ಕೆ ಬರದಂತೆ ತಡೆಯುವುದು ಮತ್ತು ಅಲ್ಲಿ ಈಗಾಗಲೇ ಇರುವ ಸೈನಿಕರು ಸಮುದ್ರ ಮಾರ್ಗದಲ್ಲಿ ಪರಾರಿಯಾಗದಂತೆ ನಿಗಾ ಇಡುವುದು ಈ ನೌಕೆಯ ಹೊಣೆಗಾರಿಕೆಯಾಗಿತ್ತು. ಅದನ್ನು 50 ವರ್ಷಗಳ ಹಿಂದೆ ವಿಕ್ರಾಂತ್ ಯಶಸ್ವಿಯಾಗಿ ನಿರ್ವಹಿಸಿದ್ದರಿಂದಲೇ ಬಾಂಗ್ಲಾ ವಿಮೋಚನೆ ಸುಲಭವಾಯಿತು.  1961ರಲ್ಲಿ ಬ್ರಿಟನ್​ನಿಂದ ಖರೀದಿಸಿದ್ದ ಯುದ್ಧನೌಕೆಗೆ 1997ರಲ್ಲಿ ಸೇವಾ ನಿವೃತ್ತಿ ಘೋಷಿಸಲಾಯಿತು. 1971ರ ಯುದ್ಧದಲ್ಲಿ ಐಎನ್​ಎಸ್​ ವಿಕ್ರಾಂತ್​ ಅತಿಮುಖ್ಯ ಪಾತ್ರ ನಿರ್ವಹಿಸಿದ್ದ ದಿನದಂದೇ, ಅಂದರೆ ಆಗಸ್ಟ್​ 4ರಂದೇ ನೌಕಾಪಡೆಯು ದೇಶಿ ನಿರ್ಮಿತ ಯುದ್ಧವಿಮಾನ ವಾಹಕದ ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ ನೀಡಿದೆ.

ವಿಕ್ರಾಂತ್​ನಲ್ಲಿ ಯಾವೆಲ್ಲಾ ಶಸ್ತ್ರಗಳು, ಯುದ್ಧೋಪಕರಣಗಳು ಇರುತ್ತವೆ? ಐಎನ್​ಎಸ್​ ವಿಕ್ರಾಂತ್ ಸೇವೆಗೆ ನಿಯೋಜನೆಗೊಂಡ ನಂತರ ಅದರಲ್ಲಿ ಅಳವಡಿಸಲು ಉದ್ದೇಶಿಸಿರುವ ಶಸ್ತ್ರಗಳು ಮತ್ತು ಯುದ್ಧೋಪಕರಣಗಳ ಬಗ್ಗೆ ನೌಕಾಪಡೆ ಈವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಇದನ್ನು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಐಎನ್​ಎಸ್​ ವಿಕ್ರಮಾದಿತ್ಯಕ್ಕೆ ಸರಿಸಮನಾಗಿ ವಿಕ್ರಾಂತ್ ಯುದ್ಧನೌಕೆಯನ್ನೂ ಅಭಿವೃದ್ಧಿಪಡಿಸುವ ಇರಾದೆ ನೌಕಾಪಡೆಗೆ ಇದೆ. 44,500 ಟನ್ ತೂಕದ ವಿಕ್ರಮಾದಿತ್ಯ ಯುದ್ಧನೌಕೆಗೆ 34 ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ.

ಸೇವೆಗೆ ನಿಯೋಜನೆಗೊಂಡ ನಂತರ ವಿಕ್ರಾಂತ್​ ಭಾರತದ ಪಾಲಿಗೆ ಬಹುಮೌಲ್ಯದ ಸಾಗರ ಸಂಪನ್ಮೂಲ ಎನಿಸುತ್ತದೆ. ರಷ್ಯಾ ನಿರ್ಮಿತ ಮಿಗ್-29ಕೆ ಫೈಟರ್​ ಜೆಟ್, ಕಮೊವ್-31 ವಾಯುದಾಳಿ ಮುನ್ನೆಚ್ಚರಿಕೆ ಹೆಲಿಕಾಪ್ಟರ್​ಗಳನ್ನು ಒಡಲಲ್ಲಿ ಹೊತ್ತುಕೊಂಡು ಸಾಗರದಲ್ಲಿ ಸಂಚರಿಸಲಿದೆ ವಿಕ್ರಾಂತ್. ಈಗಾಗಲೇ ಇಂಥ ಫೈಟರ್ ಜೆಟ್ ಮತ್ತು ಹೆಲಿಕಾಪ್ಟರ್​ಗಳು ವಿಕ್ರಮಾದಿತ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಶೀಘ್ರದಲ್ಲಿಯೇ ಸೇವೆಗೆ ಲಭ್ಯವಾಗಲಿರುವ ಅಮೆರಿಕ ನಿರ್ಮಾಣದ ಎಂಎಚ್​-60ಆರ್​ ಸೀಹಾಕ್ ಮಲ್ಟಿರೋಲ್ ಹೆಲಿಕಾಪ್ಟರ್​ ಮತ್ತು ಸ್ವದೇಶಿ ಕಂಪನಿ ಹಿಂದೂಸ್ತಾನ್ ಎರೊನಾಟಿಕ್ಸ್​ ಲಿಮಿಟೆಡ್ ನಿರ್ಮಾಣದ ಅಡ್ವಾನ್ಸ್​​ಡ್ ಲೈಟ್ ಹೆಲಿಕಾಪ್ಟರ್​ಗಳನ್ನೂ ವಿಕ್ರಾಂತ್​ ಹೊಂದಿರಲಿದೆ.

ನೌಕಾಪಡೆಯ ಪ್ರಕಾರ ಈ ಯುದ್ಧನೌಕೆಯು ದೇಶದ ಗಡಿಯಿಂದ ಬಹುದೂರದಲ್ಲಿ ಸಾಗರ ಮತ್ತು ವಾಯುದಾಳಿಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಶತ್ರುದೇಶದ ಯುದ್ಧವಿಮಾನಗಳನ್ನು ಮಾರ್ಗಮಧ್ಯೆಯೇ ತಡೆಯುವ, ಆಗಸದಿಂದ ಭೂಮಿಯ ಮೇಲಿನ ಸಂಪನ್ಮೂಲಗಳ ದಾಳಿ ತಡೆಗಟ್ಟುವ, ಜಲಾಂತರ್ಗಾಮಿಗಳನ್ನು ಗುರುತಿಸಿ, ನಾಶಪಡಿಸುವ ಮತ್ತು ವಾಯುಮಾರ್ಗದ ಆತಂಕಗಳ ಬಗ್ಗೆ ಮುಂಚಿತವಾಗಿ ಸೂಚನೆ ಕೊಡುವ ಕಾರ್ಯಾಚರಣೆಗಳನ್ನು ವಿಕ್ರಾಂತ್ ನಿರ್ವಹಿಸಲಿದೆ.

ಇದನ್ನೂ ಓದಿ: Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು

ಸಾಗರದಲ್ಲಿ ವಿಕ್ರಾಂತ್

ಭಾರತ ಇಂಥ ಮತ್ತಷ್ಟು ಯುದ್ಧನೌಕೆಗಳನ್ನು ನಿರ್ಮಿಸುತ್ತದೆಯೇ? ಭಾರತಕ್ಕಿರುವ ವಿಶಾಲ ಸಾಗರ ಗಡಿಗಳ ರಕ್ಷಣೆಗಾಗಿ ಕನಿಷ್ಠ ಮೂರು ವಿಮಾನವಾಹಕ ಯುದ್ಧನೌಕೆಗಳು ಬೇಕು ಎಂದು ಚಿಂತಕರ ಚಾವಡಿ ಹಲವು ಬಾರಿ ಸಲಹೆ ಮಾಡಿದೆ. ಮತ್ತೊಂದು ವಿಮಾನವಾಹಕ ನೌಕೆ ನಿರ್ಮಾಣಕ್ಕೆ ಅನುಮೋದನೆ ಕೋರಿ ನೌಕಾಪಡೆಯು 2015ರಿಂದಲೂ ಸರ್ಕಾರದ ಮುಂದೆ ಬೇಡಿಕೆ ಇಡುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತರೆ ಭಾರತವು ಮತ್ತೊಂದು ವಿಮಾನವಾಹಕ ನೌಕೆ ನಿರ್ಮಿಸಲಿದೆ. ಪ್ರಸ್ತಾವಿತ ಯುದ್ಧನೌಕೆಗೆ ಐಎನ್​ಎಸ್​ ವಿಶಾಲ್ ಎಂಬ ಹೆಸರು ಇರಿಸಬೇಕೆಂದು ನೌಕಾಪಡೆ ಚಿಂತಿಸಿದೆ. 65,000 ಟನ್ ತೂಗುವ ಈ ನೌಕೆಯು ವಿಕ್ರಾಂತ್ ಮತ್ತು ವಿಕ್ರಮಾದಿತ್ಯಕ್ಕಿಂತಲೂ ಗಾತ್ರ ಮತ್ತು ಸಾಮರ್ಥ್ಯದಲ್ಲಿ ದೊಡ್ಡದಾಗಿರುತ್ತದೆ.

ಮೂರನೇ ವಿಮಾನವಾಹಕ ಯುದ್ಧನೌಕೆಯ ಅಗತ್ಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನೌಕಾಪಡೆ ಪ್ರಯತ್ನಿಸುತ್ತಲೇ ಇದೆ. ‘ನಮ್ಮ ನೌಕಾಪಡೆ ಇನ್ನು ಮುಂದೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲೇಬೇಕು. ಮೃದುಶಕ್ತಿಯಾಗಿಯೇ ಉಳಿಯಲು ಸಾಧ್ಯವಿಲ್ಲ’ ಎಂದು ನೌಕಾಪಡೆ ಮುಖ್ಯಸ್ಥರಾದ ಅಡ್ಮಿರಲ್ ಕರಮ್​ಬೀರ್​ ಸಿಂಗ್ ಕಳೆದ ವರ್ಷ ನೌಕಾದಿನದಂದು ನೇರವಾಗಿ ಹೇಳಿದ್ದರು. ಜಾಗತಿಕ ಜಲಮಾರ್ಗಗಳ ಭದ್ರತೆ, ಜಾಗತಿಕ ಶಾಂತಿಯ ವಿಚಾರದಲ್ಲಿ ಭಾರತ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಇದು ಸಾಧ್ಯವಾಗಬೇಕಿದ್ದರೆ ತೀರದಿಂದ ಬಹುದೂರದವರೆಗೆ ನಮ್ಮ ವಿಮಾನವಾಹಕ ನೌಕೆಗಳನ್ನು ರವಾನಿಸುವ ಸಾಮರ್ಥ್ಯ ನಮ್ಮ ದೇಶಕ್ಕೆ ಬೇಕು ಎಂದು ರಾಷ್ಟ್ರೀಯ ಭದ್ರತೆಯ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಚಿಂತಕರ ಚಾವಡಿ ಸಂಸ್ಥೆಗಳು ಪ್ರತಿಪಾದಿಸುತ್ತಿವೆ.

ಲಕ್ಷದ್ವೀಪ ಮತ್ತು ಅಂಡಮಾನ್ ದ್ವೀಪ ಸಮೂಹಗಳನ್ನು ಎಂದಿಗೂ ಮುಳುಗದ ನೌಕಾ ಸಂಪನ್ಮೂಲವಾಗಿ ಅಭಿವೃದ್ಧಿಪಡಿಸುವ ಯೋಜನೆಯ ಬಗ್ಗೆಯೂ ಭಾರತ ಸರ್ಕಾರ ಚಿಂತನೆ ಆರಂಭಿಸಿದೆ. ಈ ಯೋಜನೆಗೆ ಚಾಲನೆ ಸಿಕ್ಕರೆ ಅದನ್ನು ಸಾಕಾರಗೊಳಿಸಲು ಬಹಳಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಮತ್ತೊಂದು ವಿಮಾನವಾಹಕ ಯುದ್ಧನೌಕೆ ನಿರ್ಮಾಣಕ್ಕೆ ಚಾಲನೆ ನೀಡುವುದು ಅಥವಾ ಅಂಡಮಾನ್ ಮತ್ತು ಲಕ್ಷದ್ವೀಪಗಳಲ್ಲಿ ಪ್ರಬಲ ಸೇನಾನೆಲೆಗಳನ್ನು ಸ್ಥಾಪಿಸುವುದು; ಈ ಎರಡರಲ್ಲಿ ಯಾವುದು ಮೊದಲು ಎಂಬ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಕಳೆದ 60 ವರ್ಷಗಳಲ್ಲಿ ಭಾರತ ಯುದ್ಧನೌಕೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯಿಂದ ಗಳಿಸಿರುವ ಅನುಭವದ ಲಾಭ ಬಳಸಿಕೊಳ್ಳಬೇಕಾದ ಕಾಲ ಈಗ ಬಂದಿದೆ. ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕ 11 ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ವಹಿಸುತ್ತಿದೆ. ಚೀನಾ ಸಹ ಈಗಾಗಲೇ ಎರಡು ವಿಮಾನವಾಹಕ ಯುದ್ಧನೌಕೆಗಳನ್ನು ಕಾರ್ಯಾಚರಣೆಗೆ ಇಳಿಸಿದ್ದು, ಮೂರನೆಯದ್ದು ಅಂತಿಮ ಹಂತದಲ್ಲಿದೆ. ಮುಂದಿನ 10 ವರ್ಷಗಳಲ್ಲಿ ಇನ್ನೂ ಎರಡು ವಿಮಾನವಾಹಕ ಸಮರನೌಕೆಗಳನ್ನು ಕಾರ್ಯಾಚರಣೆಗೆ ಬಳಸಲು ನಿರ್ಧರಿಸಿದ್ದು, ಪೂರಕ ಕೆಲಸಗಳು ಚುರುಕಾಗಿ ಸಾಗುತ್ತಿವೆ. ಭಾರತ ಸರ್ಕಾರವು ಮತ್ತೊಂದು ವಿಮಾನವಾಹಕ ಯುದ್ಧನೌಕೆಯನ್ನು ನಿರ್ಮಿಸಲು ನೌಕಾಪಡೆಗೆ ಅನುಮತಿ ನೀಡಿದರೂ, ಅದರು ಸಿದ್ಧಗೊಂಡು ಕಾರ್ಯಾಚರಣೆ ಸ್ಥಿತಿ ತಲುಪಲು ಕನಿಷ್ಠ 10 ವರ್ಷಗಳೇ ಬೇಕಾಗುತ್ತದೆ.

ಇದನ್ನೂ ಓದಿ: ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ

ವಿಕ್ರಾಂತ್ ಮೇಲೆ ಹೆಲಿಕಾಪ್ಟರ್ ಹಾರಾಟ

ದೇಶಿ ವಿಮಾನ ವಾಹಕ ನೌಕೆಯ ಕನಸು ಸಾಕಾರಗೊಂಡ 20 ವರ್ಷಗಳ ಹಾದಿ 1999: ‘ಪಿ71’ ವಾಯುದಾಳಿ ನಿರೋಧಕ ನೌಕೆ (Air Defence Ship – ADS) ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ 2003: ವಿಮಾನವಾಹಕ ಯುದ್ಧನೌಕೆ ನಿರ್ಮಾಣ ಪ್ರಸ್ತಾವಕ್ಕೆ ಸರ್ಕಾರದ ಒಪ್ಪಿಗೆ 2006: ವಾಯುದಾಳಿ ನಿರೋಧಕ ನೌಕೆ ನಿರ್ಮಾಣ ಯೋಜನೆಯನ್ನೇ ದೇಶೀ ವಿಮಾನವಾಹಕ ಯುದ್ಧನೌಕೆ ನಿರ್ಮಾಣ ಯೋಜನೆಯಾಗಿ ಬದಲಿಸಲು ನಿರ್ಧರಿಸಿರುವುದಾಗಿ ನೌಕಾಪಡೆ ಪ್ರಕಟಿಸಿತು 2009: ಹಡಗು ನಿರ್ಮಾಣ ಕಾರ್ಯ ಆರಂಭ 2011: ಕಾರ್ಯಾಗಾರದ ಕೆಲಸ ಪೂರ್ಣ. ಒಣ ಧಕ್ಕೆಯಿಂದ ಸಮುದ್ರಕ್ಕೆ ನೌಕೆ 2013: ನೌಕೆಯ ಮೊದಲ ಪ್ರಯೋಗಾರ್ಥ ಸಂಚಾರ ನವೆಂಬರ್ 2020: ಬಂದರು ಮತ್ತು ಕಡಲ ತೀರದ ಪ್ರಯೋಗಗಳು ಸಂಪೂರ್ಣ ಆಗಸ್ಟ್ 4, 2021: ಆಳ ಸಮುದ್ರದಲ್ಲಿ ಪ್ರಯೋಗಾರ್ಥ ಸಂಚಾರ ಆರಂಭ ಮುಂದೇನು: ನೌಕೆಯನ್ನು ನಿರ್ಮಿಸುತ್ತಿರುವ ಕೊಚಿನ್ ಶಿಪ್​ಯಾರ್ಡ್​ನ ತಂತ್ರಜ್ಞರು ಮುಂದಿನ ಆರೇಳು ತಿಂಗಳು ಸಮರನೌಕೆಯನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಿದೆ ಎಂದಾದರೆ ನೌಕಾಪಡೆಗೆ ಸಮರನೌಕೆಯನ್ನು ಹಸ್ತಾಂತರಿಸಲಾಗುತ್ತದೆ. ಆಗಸ್ಟ್ 2022: ಸಮರನೌಕೆಯನ್ನು ನೌಕಾಪಡೆಯು ಅಧಿಕೃತವಾಗಿ ಸೇವೆಗೆ ನಿಯೋಜಿಸಲಿದೆ.

(Made in India Aircraft Carrier Vikrant Indigenously Built War Ship very Important Naval Asset for India)

ಇದನ್ನೂ ಓದಿ: ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ

ಇದನ್ನೂ ಓದಿ: Explainer | Arjun Mark 1A Tank: ಭೂಸೇನೆಗೆ ಅರ್ಜುನ್​ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?

Published On - 1:11 am, Fri, 6 August 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ