ಅಫ್ಘಾನಿಸ್ತಾನ ಸ್ಥಿತಿ ಕುರಿತು ರಷ್ಯಾ ನಡೆಸಲಿರುವ ನಿರ್ಣಾಯಕ ಸಭೆಗೆ ಯುಎಸ್, ಚೀನಾ, ಪಾಕಿಸ್ತಾನಕ್ಕೆ ಆಹ್ವಾನ; ಭಾರತಕ್ಕಿಲ್ಲ!
ಕಳೆದ ತಿಂಗಳು ತಾಷ್ಕೆಂಟ್ನಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲವ್ರೋವ್ ಅವರು, ಭಾರತವೂ ಸೇರಿದಂತೆ ಅಫ್ಘಾನಿಸ್ತಾನದ ಈಗಿನ ಪರಿಸ್ಥಿತಿ ಮೇಲೆ ಪ್ರಭಾವ ಬೀರುವ ಉಳಿದೆಲ್ಲ ರಾಷ್ಟ್ರಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು.
ನವದೆಹಲಿ: ಅಫ್ಘಾನಿಸ್ತಾನದ ಪ್ರಸಕ್ತ ವಿದ್ಯಮಾನಗಳನ್ನು ಚರ್ಚಿಸಲು ರಷ್ಯಾ ಆಯೋಜಿಸುತ್ತಿರುವ ಅತ್ಯಂತ ನಿರ್ಣಾಯಕ ಸಭೆಯೊಂದಕ್ಕೆ ಭಾರತವನ್ನು ಆಹ್ವಾನಿಸಲಾಗಿಲ್ಲ. ಸದರಿ ಸಭೆಯಲ್ಲಿ ಪಾಕಿಸ್ತಾನ, ಚೀನಾ ಮತ್ತು ಯುಎಸ್ ಭಾಗವಹಿಸುವ ನಿರೀಕ್ಷೆಯಿದೆ ಎಂದು ಈ ಬೆಳವಣಿಗೆ ಕುರಿತು ಮಾಹಿತಿ ಹೊಂದಿರುವ ಜನರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಗುರುವಾರ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ತಾಲಿಬಾನ ಆಕ್ರಮಣ ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿ ಅಫ್ಘಾನಿಸ್ತಾನದಲ್ಲಿ ದಶಕಗಳಿಂದ ನಡೆಯುತ್ತಿರುವ ಹಿಂಸೆಯನ್ನು ಕೊನೆಗಾಣಿಸಿ ಆಫ್ಘನ್ ಶಾಂತಿ ಪ್ರಕ್ರಿಯೆ ಆರಂಭಿಸಲು ರಷ್ಯಾ ನಿರ್ಧರಿಸಿದೆ.
ಉದ್ದೇಶಿತ ‘ವಿಸ್ತೃತ ಟ್ರೊಯಿಕಾ’ ಸಭೆಯು ಆಗಸ್ಟ್ 11 ರಂದು ಕತಾರ್ ನಲ್ಲಿ ನಡೆಯಲಿದೆ. ಇದೇ ಸಂಬಂಧವಾಗಿ ಹಿಂದೆ ಮಾರ್ಚ್ 18 ಮತ್ತು ಏಪ್ರಿಲ್ 30 ರಂದ ಸಹ ಸಭೆಗಳನ್ನು ನಡೆಸಲಾಗಿತ್ತು. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತಾಗಲು ಮತ್ತು ಮತ್ತು ಅಲ್ಲಿ ರಾಷ್ಟ್ರೀಯ ಸಮನ್ವಯ ಪ್ರಕ್ರಿಯೆಗೆ ಪೂರಕ ಪರಿಸ್ಥಿತಿಗಳನ್ನು ಸೃಷ್ಟಿಸಲು ರಶಿಯಾ ‘ಮಾಸ್ಕೋ ಫಾರ್ಮ್ಯಾಟ್’ ಮಾತುಕತೆಗಳನ್ನು ಸಹ ನಡೆಸುತ್ತಿದೆ.
ಕಳೆದ ತಿಂಗಳು ತಾಷ್ಕೆಂಟ್ನಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲವ್ರೋವ್ ಅವರು, ಭಾರತವೂ ಸೇರಿದಂತೆ ಅಫ್ಘಾನಿಸ್ತಾನದ ಈಗಿನ ಪರಿಸ್ಥಿತಿ ಮೇಲೆ ಪ್ರಭಾವ ಬೀರುವ ಉಳಿದೆಲ್ಲ ರಾಷ್ಟ್ರಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು.
‘ವಿಸ್ತೃತ ಟ್ರೊಯಿಕಾ ಫಾರ್ಮಾಟ್ನಲ್ಲಿ ನಾವು ಅಮೇರಿಕ ಮತ್ತು ಅಫ್ಘಾನಿಸ್ತಾನದ ಸದ್ಯದ ಸ್ಥಿತಿಯ ಮೇಲೆ ಪ್ರಭಾವ ಬೀರುವ ಎಲ್ಲ ರಾಷ್ಟ್ರಗಳ ಜೊತೆ ಮಾತುಕತೆ ನಡೆಸುವುದನ್ನು ಮುಂದುವರಿಸುತ್ತೇವೆ. ಕೇಂದ್ರೀಯ ಏಷ್ಯಾದ-ಭಾರತ, ಇರಾನ್ ಮೊದಲಾದ ದೇಶಗಳೊಂದಿಗೆ ನಮ್ಮ ಮಾತುಕತೆ ಮುಂದುವರಿಯಲಿದೆ,’ ಎಂದು ಸೆರ್ಗೀ ಲವ್ರೋವ್ ಹೇಳಿದ್ದರು.
‘ನಮ್ಮಲ್ಲಿ ಮಾಸ್ಕೋ ಫಾರ್ಮಾಟ್ ಸಹ ರೆಡಿಯಿದೆ, ಅದರಲ್ಲೂ ಸಂಬಂಧಪಟ್ಟ ಎಲ್ಲ ರಾಷ್ಟ್ರಗಳು ಒಳಗೊಂಡಿರುತ್ತವೆ,’ ಎಂದು ಅವರು ಹೇಳಿದ್ದರು.
ಅವರ ಕಾಮೆಂಟ್ಗಳ ಹಿನ್ನೆಲೆಯಲ್ಲಿ ‘ವಿಸ್ತೃತ ಟ್ರೊಯಿಕಾ’ ಸಭೆಗೆ ಭಾರತವನ್ನು ಆಹ್ವಾನಿಸಲಾಗುತ್ತದೆ ಎಂದು ಭಾವಿಸಲಾಗಿತ್ತು.
ಅಫ್ಘಾನ್ ಸಂಘರ್ಷದ ವಿವಿಧ ಆಯಾಮಗಳಿಗೆ ಸಂಬಂಧಿಸಿದಂತೆ ರಷ್ಯಾ ಯುಎಸ್ ದೇಶಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಎರಡು ದೇಶಗಳು ಈಗ ಅಫ್ಘಾನ್ ಅಂತರಿಕ ವಿಷಯ ಕುರಿತು ಮಾತುಕತೆಗೆ ಮುಂದಾಗಿವೆ ಮತ್ತು ತಾಲಿಬಾನ್ ನಡೆಸುತ್ತಿರುವ ವ್ಯಾಪಕ ಹಿಂಸಾಚಾರವನ್ನು ಕೊನೆಗೊಳಿಸಲೇ ಬೇಕು ಎಂಬ ನಿರ್ಧಾರ ತಳೆದಿವೆ.
ವಿಸ್ತೃತ ಟ್ರೊಯಿಕಾ ಸಭೆ ಬಗ್ಗೆ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಏತನ್ಮಧ್ಯೆ, ಆಗಸ್ಟ್ 6 ರಂದು ನಡೆಯುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿರುವ ವಿದ್ಯಮಾನಗಳ ಮೇಲೆ ಚರ್ಚೆ ನಡೆಸಲು ನಿಶ್ಚಯಿಸಿರುವುದು ಒಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅಫ್ಘಾನಿಸ್ತಾನದ ಭಾರತ ರಾಯಭಾರಿ ಫರೀದ್ ಮಾಮುನ್ದ್ಜಾಯ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಟಿ ಎಸ್ ತ್ರಿಮೂರ್ತಿ ಅವರು ಭಾರತದ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಆಫ್ಘನಿಸ್ತಾನ ಸ್ಥಿತಿಯನ್ನು ಚರ್ಚಿಸಲಾಗುವುದು ಎನ್ನುವುದನ್ನು ಖಚಿತಪಡಿಸಿದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿ ಮಗಳ ಅಪಹರಣ; ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿ
Published On - 10:20 pm, Thu, 5 August 21