ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿ ಮಗಳ ಅಪಹರಣ; ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿ
ಘಟನೆಯಿಂದ ನಮಗೂ ಬೇಸರವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನ ರಾಯಭಾರಿ ನಜೀಬುಲ್ಲಾ ಅಲಿಖಿಲ್ ಮತ್ತು ಅವರ ಕುಟುಂಬಕ್ಕೆ ನೀಡಲಾಗಿದ್ದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ.
ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನ (Afghanistan) ರಾಯಭಾರಿ ನಜೀಬುಲ್ಲಾ ಅಲಿಖಿಲ್ರ ಮಗಳು ಸಿಲ್ಸಿಲಾ ಅಲಿಖಿಲ್ರನ್ನು ಕೆಲಹೊತ್ತುಗಳ ಕಾಲ ಅಪಹರಿಸಲಾಗಿತ್ತು. ಆಕೆಯನ್ನು ಬಿಡುಗಡೆ ಮಾಡುವುದಕ್ಕೂ ಮೊದಲು ತುಂಬ ಹಿಂಸೆ ನೀಡಲಾಗಿದೆ. ಸಿಲ್ಸಿಲಾರನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಫ್ಘಾನಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ಈ ಘಟನೆ ಜು.16ರಂದು ನಡೆದಿದೆ. ಸಿಲ್ಸಿಲಾ ಅಲಿಖಿಲ್ ಪಾಕಿಸ್ತಾನ(Pakistan) ದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದಾಗ ಆಕೆಯನ್ನು ಅಪರಿಚಿತರು ಯಾರೋ ಅಪಹರಿಸಿದ್ದರು. ಕೆಲವು ತಾಸುಗಳ ಬಳಿಕ ಬಿಡುಗಡೆ ಮಾಡಿದರೂ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಇದ್ದರು. ನಾವು ಈ ಕ್ರೂರ ಕೃತ್ಯವನ್ನು ಖಂಡಿಸುತ್ತೇವೆ. ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಗಳು, ಧೂತರು, ಹೈಕಮೀಷನರ್ಗಳು ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ನಿಜಕ್ಕೂ ಆತಂಕವಾಗುತ್ತಿದೆ. ಅವರ ರಕ್ಷಣೆಯ ಬಗ್ಗೆ ಚಿಂತಾಕ್ರಾಂತರಾಗಿದ್ದೇವೆ ಎಂದು ಆಫ್ಘಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗೇ, ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದದಂತೆ ನಮ್ಮ ರಾಯಭಾರಿಗಳು, ಅಧಿಕಾರಿಗಳು ಮತ್ತವರ ಕುಟುಂಬಗಳ ರಕ್ಷಣೆ ಬಗ್ಗೆ ಗಮನಹರಿಸಿ..ಈ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ.
ಇನ್ನು ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಕಚೇರಿಯೂ ಪ್ರತಿಕ್ರಿಯೆ ನೀಡಿದ್ದು, ಸಿಲ್ಸಿಲಾ ಅಲಿಖಿಲ್ ಬಾಡಿಗೆ ವಾಹನದ ಮೇಲೆ ತೆರಳುತ್ತಿದ್ದ ವೇಳೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಅಫ್ಘಾನ್ ವಿದೇಶಾಂಗ ವ್ಯವಹಾರಗಳ ಇಲಾಖೆ ನಮಗೆ ಹೇಳಿತ್ತು. ಅದೇನೆ ಇರಲಿ ಈ ಘಟನೆಯಿಂದ ನಮಗೂ ಬೇಸರವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನ ರಾಯಭಾರಿ ನಜೀಬುಲ್ಲಾ ಅಲಿಖಿಲ್ ಮತ್ತು ಅವರ ಕುಟುಂಬಕ್ಕೆ ನೀಡಲಾಗಿದ್ದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಪ್ರತಿ ಹೇಳಿಕೆ ಬಿಡುಗಡೆ ಮಾಡಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: Prem Press Meet: ದರ್ಶನ್ ‘ಜೋಗಿ ಪ್ರೇಮ್ ಪುಡಾಂಗ್’ ಎಂದಿದ್ದು ಬೇಸರವಾಗಿದೆ; ನಿರ್ದೇಶಕ ಪ್ರೇಮ್
Daughter of Afghanistans envoy abducted in Pakistan