ಕೊರೊನಾ ಆತಂಕದ ಮಧ್ಯೆ ಕಾಣಿಸಿಕೊಂಡ ಮಂಕಿಪಾಕ್ಸ್; ಕಳೆದ 20 ದಶಕಗಳಲ್ಲಿ ಪತ್ತೆಯಾದ ಮೊದಲ ಪ್ರಕರಣ
Monkeypox: ನೈಜಿರೀಯಾಕ್ಕೆ ತೆರಳಿದ್ದ ಈ ವ್ಯಕ್ತಿ ಕಳೆದ ಎರಡು ದಿನಗಳ ಹಿಂದಷ್ಟೇ ವಾಪಸ್ ಯುಎಸ್ಗೆ ಆಗಮಿಸಿದ್ದರು. ಮಂಕಿಪಾಕ್ಸ್ ಕೂಡ ಸಾಂಕ್ರಾಮಿಕ ಆಗಿದ್ದರಿಂದ, ಸಿಡಿಸಿ ಈ ವ್ಯಕ್ತಿ ಆಗಮಿಸಿದ ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರನ್ನು ಟ್ರ್ಯಾಕ್ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ.
ಯುಎಸ್ನಲ್ಲಿ ಕೊವಿಡ್ 19 (Covid 19) ಸೋಂಕಿನ ಮಧ್ಯೆ ಮತ್ತೊಂದು ಆತಂಕ ಶುರುವಾಗಿದೆ. ಇಲ್ಲಿನ ಟೆಕ್ಸಾಸ್ ನಗರದಲ್ಲಿ ಬರೋಬ್ಬರಿ ಎರಡು ದಶಕಗಳ ನಂತರ ಮಂಕಿಪಾಕ್ಸ್ (Monkeypox) ಪ್ರಕರಣ ಪತ್ತೆಯಾಗಿದೆ. ಮಂಕಿಪಾಕ್ಸ್ಗೆ ತುತ್ತಾಗಿರುವ ವ್ಯಕ್ತಿ ಯುಎಸ್ನ ನಿವಾಸಿಯಾಗಿದ್ದು, ಎರಡು ದಿನಗಳ ಹಿಂದಷ್ಟೇ ನೈಜಿರೀಯಾ (Nigeria) ದಿಂದ ಹಿಂದಿರುಗಿದ್ದರು ಎಂದು ಯುಎಸ್ (US) ನ ಕಾಯಿಲೆ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ತಿಳಿಸಿದ್ದಾಗಿ ಲೈವ್ ಸೈನ್ಸ್ ವರದಿ ಮಾಡಿದೆ. ಡಲ್ಲಾಸ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ನೈಜಿರೀಯಾಕ್ಕೆ ತೆರಳಿದ್ದ ಈ ವ್ಯಕ್ತಿ ಕಳೆದ ಎರಡು ದಿನಗಳ ಹಿಂದಷ್ಟೇ ವಾಪಸ್ ಯುಎಸ್ಗೆ ಆಗಮಿಸಿದ್ದರು. ಮಂಕಿಪಾಕ್ಸ್ ಕೂಡ ಸಾಂಕ್ರಾಮಿಕ ಆಗಿದ್ದರಿಂದ, ಸಿಡಿಸಿ ಈ ವ್ಯಕ್ತಿ ಆಗಮಿಸಿದ ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರನ್ನು ಟ್ರ್ಯಾಕ್ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಮಂಕಿಪಾಕ್ಸ್ಗೆ ಒಳಗಾದ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನೆಲ್ಲ ಕಂಡು ಹಿಡಿದು ಪರೀಕ್ಷಿಸುವ ಅನಿವಾರ್ಯತೆ ಎದುರಾಗಿದೆ. ಸದ್ಯ ಮಂಕಿಪಾಕ್ಸ್ನ ಏಕೈಕ ಪ್ರಕರಣ ಪತ್ತೆಯಾಗಿದ್ದು, ನಾಗರಿಕರು ಗಾಬರಿಪಡುವ ಅಗತ್ಯವಿಲ್ಲ. ಇದು ಖಂಡಿತ ಅಪಾಯವಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಯುಎಸ್ನಲ್ಲಿ 2003ರಿಂದ ಮಂಕಿಪಾಕ್ಸ್ನ ಒಂದೇಒಂದು ಪ್ರಕರಣವೂ ಕಂಡುಬಂದಿರಲಿಲ್ಲ. ಇದು ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಉಸಿರಾಟಕ್ಕೆ ಸಂಬಂಧಪಟ್ಟ ಹನಿಗಳ ಮೂಲಕ ಹರಡುತ್ತದೆ. ಈಗಂತೂ ಕೊವಿಡ್ 19 ಕಾರಣಕ್ಕೆ ಮಾಸ್ಕ್ಗಳನ್ನು ಕಡ್ಡಾಯ ಮಾಡಲಾಗಿದೆ. ಅದರಲ್ಲೂ ವಿಮಾನಯಾನ ಮಾಡುವ ಪ್ರಯಾಣಿಕರಂತೂ, ವಿಮಾನಗಳು, ಏರ್ಪೋರ್ಟ್ಗಳಲ್ಲಿ ಮಾಸ್ಕ್ ತೆಗೆಯುವಂತೆಯೇ ಇಲ್ಲ. ಹಾಗಾಗಿ ಈ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ಹರಡಿರುವ ಸಾಧ್ಯತೆ ತೀರ ಕಡಿಮೆಯಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ನಾವು ಉಳಿದ ವ್ಯಕ್ತಿಗಳನ್ನೂ ಟ್ರ್ಯಾಕ್ ಮಾಡುತ್ತಿದ್ದೇವೆಂದು ಸಿಡಿಸಿ ಮಾಹಿತಿ ನೀಡಿದೆ.
ಏನಿದು ಮಂಕಿಪಾಕ್ಸ್? ಮಂಕಿಪಾಕ್ಸ್ ಎಂಬುದು ಸಿಡುಬು ವರ್ಗಕ್ಕೆ ಸೇರಿದ ಒಂದು ಕಾಯಿಲೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾಗಳ ದೂರದ, ದುರ್ಗಮ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಲ್ ಗಂಭೀರವಾದ ಮತ್ತು ಅಪರೂಪದ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಮಂಕಿಪಾಕ್ಸ್ ಸಾಮಾನ್ಯವಾಗಿ ಸಸ್ತನಿಗಳು, ಮೊಲ, ಇಲಿಗಳಂಥ ದಂಶಕ ಪ್ರಭೇದದಲ್ಲಿ ಕಂಡುಬರುವ ವೈರಾಣು. ಪ್ರಾರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ದುಗ್ದರಸ ಗ್ರಂಥಿ (Lymph Nodes) ಊದಿಕೊಳ್ಳುವ ಜತೆ ಮುಖ, ದೇಹದ ಮೇಲೆಲ್ಲ ದದ್ದುಗಳುಂಟಾಗುತ್ತವೆ. ಈ ದದ್ದಿನ ಮಾದರಿ ಗುಳ್ಳೆಯಾಕಾರದಲ್ಲಿ ಇರುತ್ತದೆ. ಎರಡರಿಂದ ನಾಲ್ಕುವಾರಗಳ ತನಕ ಸೋಂಕು ದೇಹದಲ್ಲಿ ಇರುತ್ತವೆ. ಈ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಬಾಯಿಯ ದ್ರವ, ಗಾಯದಲ್ಲಿ ಬರುವ ದ್ರವ, ಕಲುಷಿತವಾದ ಬಟ್ಟೆಗಳಿಂದಲೂ ಇನ್ನೊಬ್ಬರಿಗೆ ಸೋಂಕು ಹರಡಬಹುದು.
ಇದನ್ನೂ ಓದಿ: ಕನ್ನಡ ಬಿಗ್ ಬಾಸ್ನ ಈ ವಾರದ ಎಲಿಮಿನೇಷನ್ನಲ್ಲಿ ಪ್ರಮುಖ ಕ್ಯಾಂಡಿಡೇಟ್ ಔಟ್?
Monkeypox case Reported in Texas City of US