ಕೇರಳ: ಸಾಮಾಜಿಕ ಮಾಧ್ಯಮ ನಿರ್ಬಂಧ ಸುಗ್ರೀವಾಜ್ಞೆಗೆ ತಾತ್ಕಾಲಿಕ ತಡೆ

  • TV9 Web Team
  • Published On - 17:03 PM, 23 Nov 2020
ಕೇರಳ: ಸಾಮಾಜಿಕ ಮಾಧ್ಯಮ ನಿರ್ಬಂಧ ಸುಗ್ರೀವಾಜ್ಞೆಗೆ ತಾತ್ಕಾಲಿಕ ತಡೆ

ತಿರುವನಂತಪುರ: ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಹೊರಡಿಸಿದ್ದ ಕೇರಳ ಸರ್ಕಾರ ಇದೀಗ ತನ್ನ ನಿರ್ಧಾರ ಬದಲಿಸಿದೆ. ಆಡಳಿತಾರೂಢ ಎಲ್​ಡಿಎಫ್​ನ ಮುಂಚೂಣಿ ನಾಯಕರೂ ಸೇರಿದಂತೆ ಹಲವರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯನ್ನು ಸದ್ಯಕ್ಕೆ ಅನುಷ್ಠಾನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ.

‘ಆಕ್ಷೇಪಾರ್ಹ’ ಪೋಸ್ಟ್​ಗಳನ್ನು ಹಾಕಿದವರಿಗೆ ₹ 10 ಸಾವಿರ ದಂಡ ಅಥವಾ 3 ವರ್ಷ ಜೈಲು ಶಿಕ್ಷೆ ವಿಧಿಸುವ 118ಎ ಪರಿಚ್ಛೇದವನ್ನು ಸುಗ್ರೀವಾಜ್ಞೆಯ ಮೂಲಕ ಕೇರಳ ಪೊಲೀಸ್ ಕಾಯ್ದೆಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಸರ್ಕಾರದ ಪ್ರಸ್ತಾವಕ್ಕೆ ಶನಿವಾರ ರಾಜ್ಯಪಾಲರ ಅಂಕಿತವೂ ದೊರಕಿತ್ತು.

ಈ ಕಾನೂನಿಗೆ ಕೇರಳ ಮಾತ್ರವಲ್ಲದೇ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದನ್ನು ‘ಕೆಟ್ಟ’ ಕಾನೂನು ಎಂದೇ ಪರಿಣಿತರು ಮತ್ತು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದರು.

ಪೊಲೀಸ್​ ಕಾಯ್ದೆ ತಿದ್ದುಪಡಿಗೆ ಪ್ರಜಾಪ್ರಭುತ್ವದ ಪರವಾಗಿರುವವರು, ಎಲ್​ಡಿಎಫ್ ಬೆಂಬಲಿಗರೂ ಸೇರಿದಂತೆ ಸಮಾಜದ ವಿವಿಧ ವಲಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅವರ ಭಾವನೆಗಳಿಗೆ ಬೆಲೆ ಕೊಟ್ಟು ಸುಗ್ರೀವಾಜ್ಞೆಯನ್ನು ಅನುಷ್ಠಾನಕ್ಕೆ ತರಬಾರದು ಎಂಬ ನಿರ್ಧಾರಕ್ಕೆ ಬಂದೆ ಎಂದು ಪಿಣರಯಿ ವಿಜಯನ್ ಹೇಳಿದ್ದಾರೆ.

ಸುಳ್ಳು ಸುದ್ದಿ ಹರಡುವುದು, ವೈಯಕ್ತಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವುದು, ಸಂವಿಧಾನಾತ್ಮಕ ವೈಯಕ್ತಿಕ ಘನತೆಗೆ ಚ್ಯುತಿ ತರುವುದು, ಮಹಿಳೆಯರು ಮತ್ತು ತೃತೀಯ ಲಿಂಗಿಗಳನ್ನು ಅವಹೇಳನ ಮಾಡುವುದನ್ನು ತಪ್ಪಿಸಲು ಕಠಿಣ ಕಾಯ್ದೆ ತರಲು ನಮ್ಮ ಸರ್ಕಾರ ಮುಂದಾಗಿತ್ತು.

ಸಾಮಾಜಿಕ ಮಾಧ್ಯಮಗಳ ಕೆಲ ಪೋಸ್ಟ್​ಗಳಿಂದ ಎಷ್ಟೋ ಕುಟುಂಬಗಳು ಒಡೆದುಹೋಗಿವೆ, ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹಿರಿಯ ಪತ್ರಕರ್ತರೇ ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಕಠಿಣ ಕಾಯ್ದೆ ಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಇಂಥ ಪೊಲೀಸ್ ಕಾಯ್ದೆ ತಿದ್ದುಪಡಿಗೆ ಯತ್ನಿಸಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದನ್ನು ಓದಿ: ಆಕ್ಷೇಪಾರ್ಹ ‘ಸಾಮಾಜಿಕ ಸಂದೇಶ’ಕ್ಕೆ 5 ವರ್ಷ ಜೈಲು: ಕೇರಳ ಸರ್ಕಾರದ ಹೊಸ ಕಾನೂನು