National Defence: ಸುಖೋಯ್ ಯುದ್ಧ ವಿಮಾನ: ಭಾರತೀಯ ವಾಯುಪಡೆಯ ಸುದೀರ್ಘ ಭರವಸೆ

ಸುಖೋಯ್ ಸುಭದ್ರ ಯುದ್ಧ ವಿಮಾನವಾಗಿದ್ದು, ಭಾರತೀಯ ವಾಯುಪಡೆಗಾಗಿ ಸುಖೋಯ್ ಡಿಸೈನ್ ಬ್ಯೂರೋ ಮತ್ತು ಎಚ್ಎಎಲ್ ಜಂಟಿಯಾಗಿ ಈ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಿದೆ

National Defence: ಸುಖೋಯ್ ಯುದ್ಧ ವಿಮಾನ: ಭಾರತೀಯ ವಾಯುಪಡೆಯ ಸುದೀರ್ಘ ಭರವಸೆ
ಸುಖೋಯ್ ಯುದ್ಧ ವಿಮಾನ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 29, 2021 | 9:31 PM

ರಷ್ಯಾ ನಿರ್ಮಿತ ಫೈಟರ್ ಜೆಟ್ ಒಂದನ್ನು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಹೊಸ ರೀತಿಯಲ್ಲಿ ಜೋಡಿಸಿ, ಮರುವಿನ್ಯಾಸಗೊಳಿಸಿತು. ಅದನ್ನೀಗ ಬಹುತೇಕ ಭಾರತದ ದೇಶೀಯ ಫೈಟರ್ ಜೆಟ್ ಎಂದೇ ಪರಿಗಣಿಸಲಾಗಿದೆ. ಯಾವುದು ಈ ವಿಮಾನ ಅಂದುಕೊಂಡಿರಾ? ಅದು ಸುಖೋಯ್ ಅಥವಾ Su 30MKI. ಭಾರತೀಯ ವಾಯುಪಡೆಗೆ ಸುಖೋಯ್ ಯುದ್ಧವಿಮಾನಗಳು ಎಷ್ಟು ಅನಿವಾರ್ಯ ಎಂಬ ಬಗ್ಗೆ ಈ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ ಗಿರೀಶ್ ಲಿಂಗಣ್ಣ.

ಸುಖೋಯ್ ಸುಭದ್ರ ಯುದ್ಧ ವಿಮಾನವಾಗಿದ್ದು, ಭಾರತೀಯ ವಾಯುಪಡೆಗಾಗಿ (Indian Air Force – IAF) ಸುಖೋಯ್ ಡಿಸೈನ್ ಬ್ಯೂರೋ ಮತ್ತು ಎಚ್ಎಎಲ್ ಜಂಟಿಯಾಗಿ ಈ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಿದೆ. Su-30 ಯುದ್ಧ ವಿಮಾನವನ್ನು ಆಧರಿಸಿದ Su-30MKI ಥ್ರಸ್ಟ್ ವೆಕ್ಟರ್ ನಿಯಂತ್ರಣ ಮತ್ತು ಕ್ಯಾನರ್ಡ್‌ಗಳನ್ನು ಹೊಂದಿದೆ. 1995ರಲ್ಲಿ ಸುಖೋಯ್ ಮತ್ತು ಇರ್ಕುಟ್ಸ್ಕ್ ಏರ್‌ಕ್ರಾಫ್ಟ್ ಪ್ರೊಡಕ್ಷನ್ ಅಸೋಸಿಯೇಶನ್ (ಈಗ ಇರ್ಕುಟ್ ಕಾರ್ಪೊರೇಷನ್ ಎಂದು ಹೆಸರು) ಸಂಸ್ಥೆಯಿಂದ ಎರಡು ಮಾದರಿಗಳನ್ನು ತಯಾರಿಸಲಾಯಿತು. ವಿಮಾನಗಳ ಪರೀಕ್ಷೆ ಯಶಸ್ವಿಯಾದ ಮೇಲೆ 1997ರಲ್ಲಿ ಮೊದಲ ಹಾರಾಟ ನಡೆಯಿತು. ನಂತರ ಭಾರತ ಮತ್ತು ರಷ್ಯಾ ಅಕ್ಟೋಬರ್ 2000ರಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಎಚ್ಎಎಲ್ ನಾಸಿಕ್ ಸ್ಥಾವರದಲ್ಲಿ Su-30MKIಗಳ ಪರವಾನಿಗೆ ಸಹಿತ ಉತ್ಪಾದನೆ ಆರಂಭವಾಯಿತು.

ಈ ಯುದ್ಧ ವಿಮಾನಗಳು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದವು. 1996ರಲ್ಲಿ 8 Su-30K ಫೈಟರ್‌ಗಳು ಮತ್ತು 32 Su-30MKI ಗಳನ್ನು ಖರೀದಿಸಲು ಭಾರತವು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿತು. ಒಟ್ಟು 140 Su-30MKIಗಳ ಪರವಾನಿಗೆ ಸಹಿತವಾದ ಉತ್ಪಾದನೆಗೆ ರೊಸೊಬೊರಾನ್ ಎಕ್ಸ್ ಪೋರ್ಟ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿತು. ಎಚ್ಎಎಲ್ ಜೋಡಿಸಿದ ಮೊದಲ ಸುಖೋಯ್ Su-30MKI ನವೆಂಬರ್ 2004ರಲ್ಲಿ ಹೊರಬಂತು. 2007ರಲ್ಲಿ ಐಎಎಫ್ 40 Su-30MKIಗಳಿಗೆ ಬೇಡಿಕೆ ಸಲ್ಲಿಸಿತು. ಆದರೆ, ರಷ್ಯಾದಿಂದ ಖರೀದಿಸಿದ Su-30 ವಿಮಾನ ಎಚ್ಎಎಲ್ ಜೋಡಣೆ ಮಾಡಿದ್ದಕ್ಕಿಂತ ಅಗ್ಗವಾಗಿತ್ತು.

ರಷ್ಯಾದಿಂದ ಖರೀದಿಸಿದ ಪ್ರತಿ ಫೈಟರ್ ಜೆಟ್ ಬೆಲೆ ₹ 270 ಕೋಟಿ. ಎಚ್ಎಎಲ್‌ನಲ್ಲಿ ಜೋಡಿಸಲಾದ ವಿಮಾನದ ಬೆಲೆ ಸುಮಾರು ₹ 417 ಕೋಟಿ ಆಗಿತ್ತು. ಅದಕ್ಕೆ ಕಾರಣಗಳು ಈ ಕೆಳಗಿನಂತಿವೆ.

ಖರ್ಚೇಕೆ ಹೆಚ್ಚಾಯ್ತು? SU-30 MKI ಹೊಸ ವಿಮಾನವನ್ನು ರಷ್ಯಾ ಅವಳಿ ಆಸನ Su-27 UB ಮಾದರಿಯನ್ನು ಆಧರಿಸಿ ಅಭಿವೃದ್ಧಿಪಡಿಸಿತು. 1996ರಲ್ಲಿ ಭಾರತ SU30 MKI ಅನ್ನು ಖರೀದಿಸಿದಾಗ ಕಾಗದಗಳಲ್ಲಿ ಮಾತ್ರ ಭಾರತವು Su-30 MKI ಅಭಿವೃದ್ಧಿ ವೆಚ್ಚವನ್ನು ಭರಿಸಬೇಕಾಗಿತ್ತು. ಇದು ಬಹುತೇಕ ವಿದೇಶಿ ಮೂಲದ ಬಿಡಿಭಾಗಗಳನ್ನು ಸ್ಥಳೀಯ ಬಿಡಿಭಾಗಗಳೊಂದಿಗೆ ಬದಲಾಯಿಸಿತು.

ಮೂಲ ತಂತ್ರಜ್ಞಾನವನ್ನು ಭಾರತೀಯ ಹಣದಿಂದ ಅಭಿವೃದ್ಧಿಪಡಿಸಲಾಗಿದೆ. ಭಾರತಕ್ಕಿಂತ ರಷ್ಯಾ ಕಡಿಮೆ ಹಣವನ್ನು ಹೂಡಿಕೆ ಮಾಡಿದೆ. ರಷ್ಯಾ ಅಸೆಂಬ್ಲಿ ಯೂನಿಟ್ ಮತ್ತು ಮೂಲ ಸೌಕರ್ಯವನ್ನು ಮೊದಲೇ ಹೊಂದಿತ್ತು. ಎಚ್ಎಎಲ್ ಅಸೆಂಬ್ಲಿ ಲೈನ್ ಮತ್ತು Su-30 ಉತ್ಪಾದನಾ ಘಟಕಗಳ ಸ್ಥಾಪನೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿತು. ಈ ಎಲ್ಲ ಹೂಡಿಕೆಗಳನ್ನು ಅದು ವಿಮಾನ ತಯಾರಿಕೆಯ ವೆಚ್ಚಕ್ಕೆ ಸೇರಿಸಿತು.

ವಿಮಾನ ತಯಾರಿಕೆ, ತಂತ್ರಜ್ಞಾನದ ವರ್ಗಾವಣೆ ಮತ್ತು ಪರವಾನಗಿ ಶುಲ್ಕಕ್ಕಾಗಿ ರಾಯಲ್ಟಿ ಪಾವತಿ ವಿಮಾನದ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ. ಎಂಜಿನ್ ಸೇರಿದಂತೆ ಎಲ್ಲ ಘಟಕಗಳನ್ನು ಮೂಲ ತಯಾರಕ ಇರ್ಕುಟ್ ಕಾರ್ಪೊರೇಷನ್‌ನಿಂದ ಎಚ್ಎಎಲ್ ಖರೀದಿಸುತ್ತಿತ್ತು. ಆ ಸಂಸ್ಥೆ ಅವುಗಳನ್ನು ಹೆಟ್ಟಿನ ಲಾಭಕ್ಕೆ ಮಾರಾಟ ಮಾಡಿತು. ಎಚ್ಎಎಲ್ ಉತ್ಪಾದನೆ ನಿಧಾನವಾಗಿತ್ತು. ಒಂದು ವರ್ಷದಲ್ಲಿ 12 ಜೆಟ್‌ಗಳನ್ನು ಉತ್ಪಾದಿಸಿದ್ದರೆ, ಇರ್ಕುಟ್ 25 ವಿಮಾನಗಳನ್ನು ತಯಾರಿಸಿತು. ಇದೂ ಉತ್ಪಾದನಾ ವೆಚ್ಚದಲ್ಲಿ ತ್ವರಿತ ಏರಿಕೆಗೆ ಕಾರಣವಾಯಿತು.

Su-30 MKI 43,000ಕ್ಕೂ ಹೆಚ್ಚು ಬಿಡಿಭಾಗಗಳನ್ನು ಹೊಂದಿದೆ. ಅವುಗಳಲ್ಲಿ 31,000 ಬಿಡಿಭಾಗಗಳನ್ನು ಈಗ ಎಚ್ಎಎಲ್ ಮತ್ತು ಅದರ ಪೂರೈಕೆದಾರರು ತಯಾರಿಸುತ್ತಾರೆ. ಎಚ್ಎಎಲ್ ಇದರಲ್ಲಿ ಹೂಡಿಕೆ ಮಾಡಿತ್ತು. ಈ ಖರ್ಚು ಸರಿದೂಗಿಸಿಕೊಳ್ಳಲು ಫೈಟರ್ ಜೆಟ್ ಬಿಡಿಭಾಗಗಳನ್ನು ಬೇರೆ ದೇಶಗಳಿಗೆ ರವಾನಿಸಿತು. Su-30 ವಿಮಾನ ನಿರ್ಮಾಣವು 3 ವರ್ಷ ತಡವಾಯಿತು.

ಇದನ್ನೂ ಓದಿ: ತುಮಕೂರಿನಲ್ಲಿ ಸಿದ್ಧವಾಗಲಿದೆ ಲಘು ಯುದ್ಧವಿಮಾನ: ಭಾರತದ ರಕ್ಷಣಾ ಪಡೆಗಳಿಗೆ ಹೊಸ ಬಲ

Sukhoi-Plane

ಸುಖೋಯ್ ಯುದ್ಧವಿಮಾನ

ಹತ್ತು ಹಲವು ಸವಾಲುಗಳು ಒಂದು ದಶಕದಲ್ಲಿ 1,500 ಗಂಟೆಗಳ ಹಾರಾಟದ ಬಳಿಕ Su-30 ಅನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇದು ದುಬಾರಿ ಪ್ರಕ್ರಿಯೆಯಾಗಿದೆ. ಎಚ್ಎಎಲ್ ಸ್ಥಳೀಯವಾಗಿ ಹೆಚ್ಚಿನ ಬಿಡಿಭಾಗಗಳನ್ನು ಉತ್ಪಾದಿಸಿರುವುದರಿಂದ, ಈ ವೆಚ್ಚದಲ್ಲಿ ಉಳಿತಾಯ ಮಾಡಬಹುದು. ಇಲ್ಲದಿದ್ದರೆ ಪ್ರತಿ Su 30 MKI ಯನ್ನೂ ಸಮಗ್ರ ಪರಿಶೀಲನೆಗೆ ರಷ್ಯಾಗೇ ಕೊಂಡೊಯ್ಯಬೇಕಾಗುತ್ತದೆ.

ರಷ್ಯಾದೊಂದಿಗಿನ ಒಪ್ಪಂದದ ಪ್ರಕಾರ, ಎಚ್ಎಎಲ್ Su-30 ದೇಶೀಯ ಉತ್ಪಾದನೆ (IP) ಹಕ್ಕುಗಳನ್ನು ಹೊಂದಿರುವುದರಿಂದ, ಐಎಎಫ್‌ನ ಆವಶ್ಯಕತೆಗಳಿಗೆ ಅನುಗುಣವಾಗಿ ವಿಮಾನವನ್ನು ಮಾರ್ಪಡಿಸಬಹುದಾಗಿದೆ. ಇತ್ತೀಚೆಗೆ ಎಚ್ಎಎಲ್ ತನ್ನದೇ Su-30 ನೊಂದಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಸಂಯೋಜಿಸಿತು – ಇದಕ್ಕಾಗಿ ರಷ್ಯಾ ಹೆಚ್ಚಿನ ಬೆಲೆಯನ್ನು ಉಲ್ಲೇಖಿಸಿದೆ. ಇದು ಅಸ್ಟ್ರಾ ಬಿವಿಆರ್ (Astra BVR) ಕ್ಷಿಪಣಿಯನ್ನು ಸಹಿತ Su-30 ರೊಂದಿಗೆ ಸಂಯೋಜಿಸುತ್ತಿದೆ. ಏಕೆಂದರೆ, ಸ್ಥಳೀಯವಾಗಿ ಇದರ ಉತ್ಪಾದನೆ ಆರಂಭವಾಗಿದೆ. ರಷ್ಯಾದಲ್ಲಿ ತಯಾರಿಸಿದ್ದರೆ, ಅದು ಈ ಮಾರ್ಪಾಡುಗಳನ್ನು ಮಾಡಲು ಅವಕಾಶವಿರುತ್ತಿರಲಿಲ್ಲ.

Su-30 ಅನ್ನು ನಿರ್ವಹಿಸುವ ಮಲೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ಭಾರತ ಸಹಾಯ ಮಾಡುತ್ತಿದೆ. ಈ ದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಬಿಡಿಭಾಗಗಳ ಪೂರೈಕೆದಾರನಾಗಿ ಹೊರಹೊಮ್ಮುತ್ತಿದೆ. ರಷ್ಯಾದಿಂದ ಸ್ವಲ್ಪ ಸಹಾಯದೊಂದಿಗೆ, ಎಚ್ಎಎಲ್ Su-30 ಅನ್ನು ಮೇಲ್ದರ್ಜೆಗೇರಿಸಿದೆ. ರಷ್ಯಾ ಬಿಡಿಭಾಗಗಳ ಪೂರೈಕೆದಾರನಾಗಿ ಮಾತ್ರ ಉಳಿಯುತ್ತದೆ. ಹೆಚ್ಚಿನ ವೆಚ್ಚದಲ್ಲಿ ಈ ಬಿಡಿಭಾಗಗಳನ್ನು ಪೂರೈಸುವ ಪ್ರಯೋಜನ ಪಡೆಯಲೂ ಅದಕ್ಕೆ ಸಾಧ್ಯವಿಲ್ಲ.

ಸುದೀರ್ಘ ಅವಧಿಗೆ ಲಾಭ ಎಚ್ಎಎಲ್ ಈಗ ಟ್ವಿನ್ ಎಂಜಿನ್ ಯುದ್ಧವಿಮಾನ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಹಾಲಿ AMCA ಯೋಜನೆಯಲ್ಲಿ ಇದು ಬಹಳ ಸಹಾಯಕವಾಗಿದೆ. ಎಚ್ಎಎಲ್ ಮತ್ತು ಅದರ ಉಪ-ಗುತ್ತಿಗೆದಾರರಲ್ಲಿ ಸ್ಥಳೀಯವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಈ ಹಣವು ಭಾರತೀಯ ಆರ್ಥಿಕತೆಗೆ ಸಹಾಯ ಮಾಡುತ್ತದೆ. ವಿಮಾನಗಳನ್ನು ರಷ್ಯಾದಿಂದ ತರಿಸಿದರೆ, ರಷ್ಯಾದ ಆರ್ಥಿಕತೆಗೆ ಲಾಭವಾಗುತ್ತದೆ.

ಸುಮಾರು 260ಕ್ಕಿಂತ ಹೆಚ್ಚು ವಿಮಾನಗಳ ಸಮೂಹವು ಐಎಎಫ್​ನಲ್ಲಿ ಮುಂದಿನ 20 ವರ್ಷಗಳವರೆಗೆ ಉಳಿಯುತ್ತದೆ. ಇದು ಭಾರತ, ಫ್ರಾನ್ಸ್, ಇಸ್ರೇಲ್, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದ ಒಕ್ಕೂಟದಂತಹ ದೇಶಗಳು ಸಂಯೋಜಿಸಿದ ಘಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಒಂದು ಅನನ್ಯ ಉತ್ಪನ್ನವಾಗಿದೆ. ಆ ವ್ಯವಸ್ಥೆಗಳನ್ನು ಸಾಮರಸ್ಯದಿಂದ ಕಾರ್ಯನಿರ್ವಹಿಸುವಂತೆ ಸಂಯೋಜಿಸುವುದು ಎಚ್ಎಎಲ್​ಗೆ ಸವಾಲಾಗಿದೆ. 2002ರಲ್ಲಿ ಐಎಎಫ್​ಗೆ ಸೇರ್ಪಡೆಯಾದ ಮೇಲೆ, ಮೊದಲ ಸ್ವದೇಶಿ ಜೋಡಣೆಯಾದ Su-30MKI ಅನ್ನು ಎಚ್ಎಎಲ್​ನ ನಾಸಿಕ್ ವಿಭಾಗವು 2004ರಲ್ಲಿ ಹೊರತಂದಿತು.

ಸೇವೆಗೆ ಸೇರ್ಪಡೆಯಾದಲ್ಲಿಂದ, Su-30MKI ಅನೇಕ ಯೋಜನೆಗಳ -ನಿರ್ಣಾಯಕ ಸಾಧನಗಳೊಂದಿಗೆ ನಿರಂತರ ವಿಕಸನಕ್ಕೆ ಒಳಗಾಗಿದೆ. ಅದ ಉನ್ನತೀಕರಣ ಅಗತ್ಯವಿದ್ದು, ಸ್ವದೇಶಿ ಉತ್ಪಾದನೆ ಅಥವಾ ರಷ್ಯಾದ ಜತೆಗಿನ ತಿಳಿವಳಿಕೆಯ ಒಪ್ಪಂದ (MoU) ಅಗತ್ಯವಿದೆ. ಈ ವಿಮಾನವು ಎರಡು ದಶಕಗಳಷ್ಟು ಹಳೆಯದಾಗಿದೆ ಮತ್ತು ಶತ್ರುಗಳ ಮೇಲೆ ಮೇಲುಗೈ ಉಳಿಸಿಕೊಳ್ಳಲು ನವೀಕರಣಗಳ ಅಗತ್ಯವಿದೆ.

ಸುಖೋಯ್ ವಿಮಾನಗಳ ನವೀಕರಣ 10 ವರ್ಷಗಳ ಹಿಂದೆ ಆರಂಭವಾಯಿತು. ಅನೇಕ ವಿಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಆದರೆ ಉನ್ನತೀಕರಣದಲ್ಲಿ ಅಲ್ಪ ಪ್ರಗತಿಯಾಗಿದೆ. ಏಕೆಂದರೆ ರಷ್ಯಾದ ಮೂಲ ಉಪಕರಣ ತಯಾರಕರು (OEM) ತಂತ್ರಜ್ಞಾನವನ್ನು ವರ್ಗಾಯಿಸಲು ಹೆಚ್ಚಿನ ಬೆಲೆಯನ್ನು ಕೇಳುತ್ತಿದ್ದಾರೆ. ಸಂಬಂಧಿತ ಸಚಿವಾಲಯವು ಅದಕ್ಕೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದೆ. ಐಎಎಫ್ ಈ ವಿಷಯವಲ್ಲಿ ತೀವ್ರವಾಗಿ ಬೆನ್ನು ಬಿದ್ದಿಲ್ಲ.

ಇದನ್ನೂ ಓದಿ: ತೇಜಸ್ ಮೇಲೆ ವಾಯುಪಡೆಯ ಭರವಸೆ, ಬದಿಗೆ ಸರಿಯುತ್ತಿದೆ ಮಿರಾಜ್ ವಿಮಾನಗಳ ಬಳಕೆ

ಸುಖೋಯ್ ಯುದ್ಧವಿಮಾನ ಮತ್ತು ಲೇಖಕ ಗಿರೀಶ್ ಲಿಂಗಣ್ಣ

ಸ್ವಾವಲಂಬನೆಯಲ್ಲಿ ಎಚ್ಚರ ಬೇಕು ಅಪೇಕ್ಷಿತ ಫಲಿತಾಂಶಗಳು ಮತ್ತು ಹೊಣೆಗಾರಿಕೆ ಇಲ್ಲದಿದ್ದರೆ ಸ್ಥಳೀಯ ಸಾಮರ್ಥ್ಯಾಭಿವೃದ್ಧಿ ದಶಕಗಳ ಕಾಲ ಮುಂದುವರೆಯಲು ಸಾಧ್ಯವಿಲ್ಲ. ಮಿಲಿಟರಿ ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಕಾರ್ಯಗತಗೊಳ್ಳುವ ಮೊದಲೇ ತಂತ್ರಜ್ಞಾನವು ಹಳೆಯದಾಗಿರುತ್ತದೆ. ಈ ಸವಾಲಿನಲ್ಲಿ ಮುಂದಿರುವುದು ಅನಿವಾರ್ಯ ಹಾಗೂ ಸವಾಲೂ ಆಗಿದೆ. ರಾಷ್ಟ್ರೀಯ ಭದ್ರತೆಯು ಸ್ಥಳೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಇದು ಸೂಕ್ತ ಅವಕಾಶವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ.

ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಕೈಬಿಡಬೇಕು ಮತ್ತು ವಿದೇಶಿ ಉಪಕರಣಗಳನ್ನು ಮಾತ್ರ ಖರೀದಿಸಬೇಕು ಎಂದು ಯಾರೂ ಸೂಚಿಸಿಲ್ಲ. ಇದು ಸಮಾನಾಂತರ ಪ್ರಕ್ರಿಯೆಯಾಗಿರಬೇಕು. ಪ್ರಾದೇಶಿಕ ಪ್ರಾಬಲ್ಯದ ನಮ್ಮ ಅನ್ವೇಷಣೆಯಲ್ಲಿ, ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ವ್ಯವಸ್ಥೆಗಳಿಂದ ದುಬಾರಿ ವಿದೇಶಿ ಉಪಕರಣಗಳನ್ನು ಬದಲಿಸುವುದು ಕೇವಲ ಅಪೇಕ್ಷಣೀಯವಲ್ಲ, ದೀರ್ಘಾವಧಿಯಲ್ಲಿ ಅಗತ್ಯವೂ ಆಗಿರುತ್ತದೆ. ಆದರೆ, ಕಾರ್ಯಾಚರಣೆಯ ಸಾಮರ್ಥ್ಯದಲ್ಲಿ ಯಾವುದೇ ರಾಜಿ ಇಲ್ಲದೆ ಇದು ಸಂಭವಿಸಬೇಕು. ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಅಥವಾ ‘ಸ್ವಾವಲಂಬನೆ’ಗೆ ಸರ್ಕಾರ ಚಾಲನೆ ನೀಡಿ, ಸರಿಯಾದ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ. ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯು ಭಾರತ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೂ, ಅವಕಾಶದ ವೆಚ್ಚವನ್ನು ವಾಸ್ತವಿಕವಾಗಿ ನಿಗದಿಪಡಿಸಬೇಕು.

ಮುಂದಿನ 20 ವರ್ಷಗಳಲ್ಲಿ ಐಎಎಫ್‌ನಲ್ಲಿ Su-30MKI ಪ್ರಮುಖ ಪಾತ್ರ ವಹಿಸುತ್ತದೆ. ಸುಖೋಯ್‌ನ ನವೀಕರಣವು ಹಲವು ವರ್ಷಗಳಿಂದ ಪರಿಗಣನೆಯಲ್ಲಿದೆ. ಅದು ಸ್ವಲ್ಪ ವಿಳಂಬವಾಗಿದ್ದು, ತ್ವರಿತಗೊಳಿಸಬೇಕಾಗಿದೆ. ಯಾವುದೇ ವಿಳಂಬವು ಐಎಎಫ್ ನ ಯುದ್ಧ-ಸಾಮರ್ಥ್ಯಗಳ ಹಿನ್ನಡೆಗೆ ಕಾರಣವಾಗುತ್ತದೆ. ಭಾರತದ ಆಸಕ್ತಿ ಮತ್ತು ಪ್ರಭಾವದ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಬೆದರಿಕೆಯ ಸನ್ನಿವೇಶವು ಇನ್ನು ಮುಂದೆ ಇಷ್ಟು ಕಾಲಾವಕಾಶವನ್ನು ಅನುಮತಿಸುವುದಿಲ್ಲ

ನಿರ್ವಹಣೆಗೆ ಸಂಬಂಧಿಸಿದ ಇನ್ನೊಂದು ಸಮಸ್ಯೆ ಬಿಡಿಭಾಗಗಳ ಪೂರೈಕೆಯಲ್ಲ. ಬದಲಾಗಿ ಲೈನ್ ಮತ್ತು ಶಾಪ್ ಬದಲಾಯಿಸಬಹುದಾದ ಬಿಡಿಭಾಗಗಳ ದುರಸ್ತಿಯ ವೇಗವಾಗಿದೆ. ರಷ್ಯಾದವರು ಸಾಕಷ್ಟು ಲಾಭವಿರಿಸಿಕೊಂಡು ಬಿಡಿಭಾಗಗಳನ್ನು ಪೂರೈಸುತ್ತಿದ್ದಾರೆ. ಅಲ್ಲದೆ, ಹೊಸ ವಸ್ತುಗಳ ಬೆಲೆಯ ಶೇ 25 ವೆಚ್ಚದಲ್ಲಿ ದುರಸ್ತಿ ಮಾಡಲೂ ನಿರಾಸಕ್ತರಾಗಿದ್ದಾರೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ಫೈಟರ್ ಜೆಟ್‌ಗಳಲ್ಲಿ ಬಳಸುವ AL-31FP ಎಂಜಿನ್‌ಗಳ ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ. ಇವು ನಿಜವಾಗಿಯೂ ಕಳಪೆ ದಾಖಲೆಯನ್ನು ಹೊಂದಿವೆ. ಇದು ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಸ್ತು ಹಾನಿಗೆ (FOD) ಒಳಗಾಗುತ್ತದೆ. ನಿರ್ವಹಣೆಯೂ ತೀವ್ರವಾಗಿರಬೇಕಾಗುತ್ತದೆ. ‘ಅಧಿಕೃತವಾಗಿ’ ಥ್ರಸ್ಟ್ ವೆಕ್ಟರ್ ನಾಝಲ್‌ಗಳಿಗೆ ಪ್ರತಿ 500 ಗಂಟೆಗಳಿಗೊಮ್ಮೆ ಕೂಲಂಕಷ ಪರೀಕ್ಷೆ ಅಗತ್ಯವಿದೆ. 500 ಗಂಟೆಗಳ ಹಾರಾಟದ ಬಳಿಕ ಇವುಗಳಲ್ಲಿ ದೋಷಗಳುಂಟಾಗುತ್ತವೆ (2015ರಲ್ಲಿ MoD ವರದಿ ಮಾಡಿದಂತೆ). ಪ್ರತಿ ಬಾರಿಯೂ ಇದರ ನಿರ್ವಹಣೆ/ಕೂಲಂಕಷ ಪರೀಕ್ಷೆಗಾಗಿ ರಷ್ಯಾಗೆ ಒಯ್ಯಬೇಕು (Su -57ರ ಎಂಜಿನ್‌ನಂತೆ ಮಾಡ್ಯುಲರ್-ಎಂಜಿನ್ ಪರಿಕಲ್ಪನೆಯನ್ನು ಹೊಂದಿಲ್ಲದಿರುವುದು, ಐಎಎಫ್‌ನಿಂದ ಹಿಂತೆಗೆದುಕೊಳ್ಳಲು ಪ್ರಮುಖ ಕಾರಣವಾಗಿದೆ). ವಿಶೇಷವಾಗಿ ದೀರ್ಘ ಹಾರಾಟಗಳನ್ನು ನಿರ್ವಹಿಸಿದರೆ ಇದು ಖಂಡಿತವಾಗಿಯೂ ಲಾಜಿಸ್ಟಿಕಲ್ ದುಃಸ್ವಪ್ನವಾಗಿರುತ್ತದೆ.

ಇದು ಗರಿಷ್ಠ 3000 ಗಂಟೆಗಳ ಜೀವಿತಾವಧಿಯನ್ನು ಹೊಂದಿದೆ. ಪ್ರತಿ 1000 ಗಂಟೆಗಳಿಗೊಮ್ಮೆ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಅಂದರೆ, ಎಂಜಿನ್ ಜೀವಿತಾವಧಿಯಲ್ಲಿ 3 ಅಥವಾ ಹೆಚ್ಚು ಕೂಲಂಕಷ ಪರಿಶೀಲನೆಗಳ ಅಗತ್ಯವಿರುತ್ತದೆ. ಇತ್ತೀಚಿನ ನಿಖರವಾದ ಏರ್ ಟು ಗ್ರೌಂಡ್ ಆರ್ಡಿನೆನ್ಸ್ Su-30 ನಲ್ಲಿ ಇಲ್ಲ. ಚೀನಾದ ಗಡಿಯಲ್ಲಿರುವ ‘ನೈಜ ನಿಯಂತ್ರಣ ರೇಖೆ’ಯ ಉದ್ದಕ್ಕೂ ಭಾರತೀಯ ಕಾರ್ಯಾಚರಣೆಗಳನ್ನು ಬೆಂಬಲಿಸುವ ಎತ್ತರದ ವಾಯುನೆಲೆಗಳಿಂದ ಇದು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ.

ಸಾಮಾನ್ಯವಾಗಿ ರಷ್ಯಾದ ವಿಮಾನಗಳು ಕಡಿಮೆ ಸೇವಾ ಜೀವನ ಮತ್ತು ವೈಫಲ್ಯಗಳ ನಡುವಿನ ಸರಾಸರಿ ಸಮಯದ ಘಟಕಗಳನ್ನು ಹೊಂದಿವೆ. ಇದರರ್ಥ ನೀವು ಬಿಡಿಭಾಗಗಳು ಮತ್ತು ವಿವಿಧ ಬಿಡಿ ಭಾಗಗಳನ್ನು ಹೆಚ್ಚಿನ ದರದಲ್ಲಿ ಬದಲಾಯಿಸಬೇಕಾಗಿದೆ.

ಇದನ್ನೂ ಓದಿ: ತಕ್ಷಣಕ್ಕೆ ಪಾಕ್ ಮೇಲೆ ಆಕ್ರಮಣ ಇಲ್ಲ, ಒಂದಲ್ಲಾ ಒಂದು ದಿನ ಇಡೀ ಕಾಶ್ಮೀರ ಭಾರತಕ್ಕೆ ಸೇರಲಿದೆ: ವಾಯುಪಡೆ ಹಿರಿಯ ಅಧಿಕಾರಿ ಇದನ್ನೂ ಓದಿ: ಆಧುನೀಕರಣದತ್ತ ಭಾರತೀಯ ವಾಯುಪಡೆ ದಾಪುಗಾಲು: ಎಂಜಿನ್ ಅಭಿವೃದ್ಧಿಯೇ ದೊಡ್ಡ ಸವಾಲು

Published On - 9:28 pm, Fri, 29 October 21