National Defence: ತೇಜಸ್ ಮೇಲೆ ವಾಯುಪಡೆಯ ಭರವಸೆ, ಬದಿಗೆ ಸರಿಯುತ್ತಿದೆ ಮಿರಾಜ್ ವಿಮಾನಗಳ ಬಳಕೆ

Indian Air Force: ಹಳೆಯ ಮಿರಾಜ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ದೇಶದಿಂದ ಭಾರತೀಯ ವಾಯುಪಡೆ ಖರೀದಿಸಿದೆ. ಇದು ಐಎಎಫ್‌ನ ಅತ್ಯುತ್ತಮ ಕಾರ್ಯತಂತ್ರ ಎಂದು ಪರಿಗಣಿಸಲಾಗಿದ್ದರೂ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

National Defence: ತೇಜಸ್ ಮೇಲೆ ವಾಯುಪಡೆಯ ಭರವಸೆ, ಬದಿಗೆ ಸರಿಯುತ್ತಿದೆ ಮಿರಾಜ್ ವಿಮಾನಗಳ ಬಳಕೆ
ಮಿರಾಜ್-2000 ಯುದ್ಧ ವಿಮಾನ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 15, 2021 | 7:59 PM

ಭಾರತೀಯ ವಾಯುಪಡೆಯು ಹಲವು ಕಾರಣಗಳಿಂದ ಮೂರನೇ ತಲೆಮಾರಿನ ಮಿರಾಜ್-2000 ಅನ್ನು ತನ್ನ ಮುಖ್ಯ ಹೋರಾಟದ ತಂಡವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಫ್ರಾನ್ಸ್ ದೇಶದ ಡಸಾಲ್ಟ್ ಏವಿಯೇಶನ್ ಈ ವಿಮಾನಗಳ ತಯಾರಿಕೆಯನ್ನು ನಿಲ್ಲಿಸಿದೆ. ಸಂಸ್ಥೆಯು ಈಗ 4, 5ನೇ ತಲೆಮಾರಿನ ರಫೇಲ್ ಫೈಟರ್ ಜೆಟ್‌ಗಳ ತಯಾರಿಕೆಯನ್ನು ಆರಂಭಿಸಿದೆ. ಬಳಸಿರುವ 24 ಮಿರಾಜ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ದೇಶದಿಂದ ಐಎಎಫ್ ಖರೀದಿಸಿದೆ. ಇದು ಐಎಎಫ್‌ನ ಅತ್ಯುತ್ತಮ ಕಾರ್ಯತಂತ್ರ ಎಂದು ಪರಿಗಣಿಸಲಾಗಿದ್ದರೂ, ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ತೇಜಸ್ ಮಾರ್ಕ್ 2 ರೂಪಾಂತರದ ಉತ್ಪಾದನೆಯನ್ನು ಹೆಚ್ಚಿಸದಿದ್ದರೆ ಈ ಒಪ್ಪಂದವು ತಕ್ಷಣದ ನಷ್ಟವನ್ನು ಉಂಟುಮಾಡಬಹುದು ಎಂದು ರಕ್ಷಣಾ ವಿಷಯಗಳನ್ನು ವಿಶ್ಲೇಷಿಸುವ ಗಿರೀಶ್ ಲಿಂಗಣ್ಣ ಅಭಿಪ್ರಾಯಪಡುತ್ತಾರೆ.

ಭಾರತೀಯ ವಾಯುಪಡೆಯು 30 ಫೈಟರ್ ಸ್ಕ್ವಾಡ್ರನ್‌ಗಳನ್ನು, 500ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದೆ. ಪ್ರತಿ ಸ್ಕ್ವಾಡ್ರನ್‌ನಲ್ಲಿ ಸುಮಾರು 16 ವಿಮಾನಗಳು ಮತ್ತು ಅವಳಿ ಆಸನಗಳ ಎರಡು ತರಬೇತುದಾರ ವಿಮಾನಗಳಿವೆ. ಇದು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಎರಡು ಮುಂಚೂಣಿಯ ಯುದ್ಧಗಳಿಗೆ ಸಾಕಾಗುತ್ತದೆ. ಈ ಸ್ಕ್ವಾಡ್ರನ್ ಸೋವಿಯತ್ ಯುಗದ ಮಿಗ್-21 ವಿಮಾನವನ್ನೂ ಒಳಗೊಂಡಿದೆ. ಈ ವಿಮಾನಗಳ ಬಳಕೆಯನ್ನು ಹಂತಹಂತವಾಗಿ ಒಂದೆರಡು ವರ್ಷಗಳಲ್ಲಿ ಸ್ಥಗಿತಗೊಳಿಸಲಾಗುವುದು. 200ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಸುಖೋಯ್ (Su30MKI), ಮತ್ತು ಫ್ರಾನ್ಸ್ ಉತ್ಪಾದಿತ ಮಿರಾಜ್ 2000 ವಿಮಾನಗಳನ್ನು ವಾಯುದಾಳಿ, ವಾಯುರಕ್ಷಣೆ ಮತ್ತು ಏರ್ ಟು ಗ್ರೌಂಡ್ ದಾಳಿಗೆ ಬಳಸಲಾಗುತ್ತದೆ. ಐಎಎಫ್‌ಗೆ 42 ಸ್ಕ್ವಾಡ್ರನ್‌ಗಳೊಂದಿಗೆ ಮಂಜೂರು ಮಾಡಲಾಗಿದ್ದರೂ, ಅದೀಗ 30ಕ್ಕೆ ಇಳಿದಿದೆ. ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಐಎಎಫ್ ನೂತನ ಮುಖ್ಯಸ್ಥರ ಮುಂದಿರುವ ದೊಡ್ಡ ಸವಾಲೆಂದರೆ, ಕ್ಷೀಣಿಸುತ್ತಿರುವ ಈ ತಂಡವನ್ನು ನಿಭಾಯಿಸುವುದು. 2025ರ ಹೊತ್ತಿಗೆ ಮಿಗ್-21 ಬಳಕೆಯನ್ನು, 2029ರ ಹೊತ್ತಿಗೆ ಜಾಗ್ವಾರ್ ಮತ್ತು ಮಿಗ್-29 ಬಳಕೆಯನ್ನು ಸ್ಥಗಿತಗೊಳಿಸಲಿದ್ದು, ಮುಂದಿನ ಎರಡು ದಶಕಗಳ ಅವಧಿಯಲ್ಲಿ ಐಎಎಫ್‌ನಿಂದ ಹೊರಹಾಕುವ ವಿಮಾನಗಳ ಪಟ್ಟಿಯಲ್ಲಿ ಮಿರಾಜ್-2000 ಕೂಡ ಇದೆ.

ಎಲ್‌ಸಿಎ ಮೇಲೆ ಐಎಎಫ್ ತುಂಬ ಅವಲಂಬಿತವಾಗಿದೆ. 96 ಎಲ್‌ಸಿ ತೇಜಸ್‌ನ ಆರು ಸ್ಕ್ವಾಡ್ರನ್‌ಗಳನ್ನು ಐಎಎಫ್ ಸೇರಿಸಿಕೊಳ್ಳಲಿದೆ. ಈಗಾಗಲೇ ಅದು 36 ರಫೇಲ್ ಯುದ್ಧ ವಿಮಾನಗಳನ್ನು ಹೊಂದಿದೆ. ಇದರ ಹೊರತಾಗಿಯೂ ಐಎಎಫ್ ಸ್ಕ್ವಾಡ್ರನ್‌ಗಳನ್ನು ಕಳೆದುಕೊಳ್ಳುತ್ತಲೇ ಇರುತ್ತದೆ. 2032ರ ವೇಳೆಗೆ ಸ್ಕ್ವಾಡ್ರನ್‌ಗಳ ಸಂಖ್ಯೆ 27ಕ್ಕೆ ಹಾಗೂ 2042ರ ವೇಳೆಗೆ ಕೇವಲ 19ಕ್ಕೆ ಇಳಿಯುತ್ತದೆ. ಇದನ್ನು ನಿಭಾಯಿಸುವುದು ತುಂಬ ಕಠಿಣ ಕೆಲಸ. ಇನ್ನೂ ವಿನ್ಯಾಸದ ಹಂತದಲ್ಲಿರುವ ತೇಜಸ್ ಎಂಕೆ-2ನ್ನು ಐಎಎಫ್‌ಗೆ ಸೇರಿಸಿದರೂ 2042ರ ವೇಳೆಗೆ 42 ಸ್ಕ್ವಾಡ್ರನ್‌ಗಳನ್ನು ಸಾಧಿಸುವ ಗುರಿಯನ್ನು ಅದು ತಲುಪದಿರಬಹುದು. ತೇಜಸ್ ಎಂಕೆ 2ನ್ನು ಸೇರಿಸಿಕೊಳ್ಳಲು ಐಎಎಫ್ ಯೋಜಿಸಿದೆ. ಇದು ಎಚ್‌ಎಎಲ್‌ನ ಬದ್ಧತೆಯನ್ನು ಅವಲಂಬಿಸಿರುತ್ತದೆ.

ಇದನ್ನೆಲ್ಲ ಪರಿಗಣಿಸಿದರೆ, ಐಎಎಫ್ 200ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಸುಖೊಯ್ 30 ವಿಮಾನಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ತೇಜಸ್ ಎಂಕೆ 2 ಪೂರೈಕೆ ಆರಂಭವಾಗುವವರೆಗೂ ಫ್ರಾನ್ಸ್ ನಿರ್ಮಿತ ಮಿರಾಜ್-2000 ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುತ್ತವೆ. 1999ರಲ್ಲಿ ಸೇರ್ಪಡೆಯಾದ ಮಿರಾಜ್ 2000 ವಿಮಾನವು ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಲ್ಲಿಂದೀಚೆಗೆ ಮಿರಾಜ್-2000 ಅನ್ನು ಹಲವಾರು ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸೈನ್ಯದ ಬೆಂಬಲಕ್ಕಾಗಿ, ಹಲವು ನಿರ್ಣಾಯಕ ಸ್ಥಳಗಳನ್ನು ಗುರಿಯಾಗಿಸಲು ವ್ಯಾಪಕವಾಗಿ ಬಳಸಲಾಯಿತು. ಈ ವಿಮಾನವು ಪ್ರಬಲ ನಿರೋಧಕ ಸಾಮರ್ಥ್ಯ ಹೊಂದಿದೆ. ಸುಖೋಯ್ ಸು-ಎಂಕೆಐಗೆ ಹೋಲಿಸಿದರೆ ಇದನ್ನು ಶತ್ರು ದೇಶದ ರಾಡಾರ್‌ಗಳು ಪತ್ತೆ ಮಾಡುವುದು ಕಷ್ಟ.

ಇದನ್ನೂ ಓದಿ: Tejas LCA: ಭಾರತದ ರಕ್ಷಣಾ ಉದ್ಯಮದಲ್ಲಿ ಹೊಸಶಕೆ: ಅಮೆರಿಕ, ಮಲೇಷ್ಯಾಗಳಿಂದ ಎಲ್​ಸಿಎ ತೇಜಸ್ ಖರೀದಿಗೆ ಅಸಕ್ತಿ

Mirage-2000-Flight

ಮಿರಾಜ್ ಯುದ್ಧ ವಿಮಾನ

ಮಿರಾಜ್​-2000 ವೈಶಿಷ್ಟ್ಯಗಳು ಹಲವು

ಫೈಟರ್ ಜೆಟ್‌ಗಳಿಗೆ ಸ್ಪೈಸ್-2000 ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಯಾವುದೇ ಬಾಂಬ್ ಅನ್ನು ಜಿಪಿಎಸ್ ಮಾರ್ಗದರ್ಶಿತ ಕ್ಷಿಪಣಿಯಾಗಿ ಪರಿವರ್ತಿಸಬಹುದು. ಬಾಲಾಕೋಟ್ ದಾಳಿಯ ಸಮಯದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ನಾಶಮಾಡುವುದಕ್ಕಾಗಿ ಈ ವಿಮಾನವನ್ನು ಆಯ್ಕೆ ಮಾಡಲು ಇದೇ ಮುಖ್ಯ ಕಾರಣವಾಗಿತ್ತು.

ಮಿರಾಜ್-2000 ಬಳಕೆ ಈಗ ಕಡಿಮೆಯಾಗುತ್ತಿದ್ದರೂ, ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ವ್ಯವಸ್ಥೆಯಂತಹ ಅಗತ್ಯ ಏವಿಯಾನಿಕ್ಸ್ ಮತ್ತು ತಂತ್ರಜ್ಞಾನದೊಂದಿಗೆ ನಿಯತಕಾಲಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ. ಸೆಕ್ಸ್‌ಟಂಟ್ ವಿಇ-130 ಎಚ್‌ಯುಡಿ ಹೊಂದಿದ್ದು, ಫ್ಲೈಟ್ ಕಂಟ್ರೋಲ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸುತ್ತದೆ. ತನ್ನೊಂದಿಗೆ ಥಾಮ್ಸನ್-ಸಿಎಸ್‌ಎಫ್ ಆರ್‌ಡಿವೈ (ರಾಡಾರ್ ಡಾಪ್ಲರ್ ಮಲ್ಟಿ-ಟಾರ್ಗೆಟ್) ರೇಡಾರ್ ಅನ್ನು ಸಾಗಿಸುವ ಇದನ್ನು ಅತ್ಯಂತ ವೇಗದ ಫೈಟರ್ ಜೆಟ್ ಎಂದು ಪರಿಗಣಿಸಲಾಗಿದೆ. SNECMA M53-P2 ಎಂಜಿನ್ ನಿಯಂತ್ರಿತವಾಗಿದ್ದು, ಒಟ್ಟು 17,000 ಕೆಜಿ ತೂಕವನ್ನು ಹೊತ್ತೊಯ್ಯುತ್ತದೆ.

ಮಿರಾಜ್ 2000 ಮ್ಯಾಕ್ 2.2 (2336 ಕಿ.ಮೀ./ಗಂಟೆಗೆ) ಗರಿಷ್ಠ ವೇಗವನ್ನು ಹೊಂದಿದೆ ಮತ್ತು ಡ್ರಾಪ್ ಟ್ಯಾಂಕ್‌ಗಳೊಂದಿಗೆ 1,550 ಕಿ.ಮೀ. ಪ್ರಯಾಣಿಸಬಲ್ಲದು. ಹಾರಾಟದ ಎತ್ತರವನ್ನು 59,000 ಅಡಿಗೆ (17 ಕಿಮೀ) ಮಿತಿಗೊಳಿಸಲಾಗಿದೆ. ಭಾರತದ ಹೆಚ್ಚು ಸುಧಾರಿತ ಫೈಟರ್ ಜೆಟ್-ರಷ್ಯಾ ನಿರ್ಮಿತ ಸುಖೋಯ್ ಸು 30 ಎಂಕೆಐ 2,120 ಕಿಮೀ/ಗಂಟೆಗೆ (ಮ್ಯಾಕ್ 2) ವೇಗವನ್ನು ಹೊಂದಿದೆ. ಇದು ಮಿರಾಜ್-2000ಗಿಂತ ಕಡಿಮೆ. ಭಾರವೂ ಹೆಚ್ಚು. ಹೀಗಾಗಿ, ತುರ್ತು ಕಾರ್ಯಾಚರಣೆಗಳಲ್ಲಿ ಮಿರಾಜ್-2000 ಹೆಚ್ಚು ಅನುಕೂಲಕರವಾಗಿದೆ.

ಆಪರೇಷನ್ ವಿಜಯ್ ಸಂದರ್ಭದಲ್ಲಿ ಜೆಟ್ ಫೈಟ್ ಸಾರ್ಟೀಸ್‌ಗಳ ಒಟ್ಟು 1,199 ಹಾರಾಟಗಳ ಪೈಕಿ ಇದೇ 500ಕ್ಕಿಂತಲೂ ಹೆಚ್ಚು ಹಾರಾಟ ನಡೆಸಿತು. ಕಾರ್ಗಿಲ್ ಯುದ್ಧದ ವೇಳೆ ಎಸೆಯಲಾದ 9 ಲೇಸರ್ ಗೈಡೆಡ್ ಬಾಂಬ್‌ಗಳ ಪೈಕಿ ಎಂಟ ಮಿರಾಜ್ ಹಾಕಿತ್ತು. ಡ್ರಾಸ್ ಸೆಕ್ಟರ್‌ನಲ್ಲಿ ಹೆಚ್ಚು ಎತ್ತರದ ಪ್ರದೇಶಗಳಾದ ಮುಂತೋ ಧಲೋ, ಟೈಗರ್ ಹಿಲ್ಸ್ ಮತ್ತು ಪಾಯಿಂಟ್ 4388ಗಳಿಗೆ ಗುರಿಯಿಡುವ ಕಾರ್ಯಾಚರಣೆಗಳನ್ನು ನಡೆಸಿ, ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

26ನೇ ಫೆಬ್ರವರಿ 2019ರಂದು, 20 ಶಸ್ತ್ರಸಜ್ಜಿತ ಮಿರಾಜ್ 2000 ಯುದ್ಧ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿ, ಲೇಸರ್ ನಿರ್ದೇಶಿತ 1,000 ಕೆಜಿ ಬಾಂಬ್‌ಗಳನ್ನು ಗಡಿಯಾಚೆಗಿನ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳ ಮೇಲೆ ಹಾಕಿದವು. ಬಾಲಕೋಟ್ ದಾಳಿಯು ಗಡಿ ನಿಯಂತ್ರಣ ರೇಖೆಯನ್ನು ಮೀರಿ ಪಾಕಿಸ್ತಾನದಲ್ಲಿ ಭಾರತವು ನಡೆಸಿದ ಮೊದಲ ವಾಯು ಕಾರ್ಯಾಚರಣೆಯಾಗಿದೆ. ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಬೆಂಗಾವಲು ತಂಡದ ಮೇಲೆ ದಾಳಿ ಮಾಡಿ, 42 ಸಿಬ್ಬಂದಿಯನ್ನು ಹತ್ಯೆ ಮಾಡಿದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು.

ಮಿರಾಜ್-2000 ಯುದ್ಧ ವಿಮಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಭಾರತೀಯ ವಾಯುಪಡೆ (ಐಎಎಫ್) ಫ್ರೆಂಚ್ ವಾಯುಪಡೆಯ ಮಿರಾಜ್‌ಗಳನ್ನು ಹಂತಹಂತವಾಗಿ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಆಗಸ್ಟ್ 31ರಂದು, ಮಿರಾಜ್-2000 ವಿಮಾನಗಳ ಸೇವಾ ಸಾಮರ್ಥ್ಯವನ್ನು, ಬಿಡಿಭಾಗಗಳ ಲಭ್ಯತೆ ಮತ್ತು ಏರ್‌ಫ್ರೇಮ್ ಸಾಮರ್ಥ್ಯವನ್ನು ಸುಧಾರಿಸಲು ಹಂತ ಹಂತವಾಗಿ ಸುಮಾರು 50 ವಿಮಾನಗಳನ್ನು ಭಾರತೀಯ ಫ್ಲೀಟ್‌ನಲ್ಲಿ ಸೇರಿಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ರಕ್ಷಣಾ ಮೂಲಗಳ ಪ್ರಕಾರ, ಈ ಯಾವುದೇ ವಿಮಾನವನ್ನು ಹಾರಾಟಕ್ಕೆ ಬಳಸಲಾಗುವುದಿಲ್ಲ. ಅವುಗಳನ್ನು ಭಾರತೀಯ ವಾಯುಪಡೆಗೆ ಪೂರೈಸಲಾಗುವುದು. ಈ ಹಿಂದೆಯೂ ಭಾರತವು ಫ್ರೆಂಚ್ ಕಂಪನಿಗಳೊಂದಿಗೆ ಹಳೆಯ ಮಿರಾಜ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅವು ಕಳೆದ ವರ್ಷ ಗ್ವಾಲಿಯರ್‌ಗೆ ತಲುಪಿ, ಕಾರ್ಯಾಚರಣೆಯ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸಲು ಸಹಾಯ ಮಾಡಿದವು ಎಂದು ಮೂಲಗಳು ತಿಳಿಸಿವೆ.

ಫ್ರೆಂಚ್ ವಾಯುಪಡೆಯು ತನ್ನ ಹಳೆಯ ಮಿರಾಜ್‌ಗಳನ್ನು ಹೊಸ ರಫೇಲ್ ಯುದ್ಧ ವಿಮಾನಗಳೊಂದಿಗೆ ಬದಲಾಯಿಸುತ್ತಿದೆ. 1982ರಲ್ಲಿ ಪಾಕಿಸ್ತಾನವು ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿರುವುದಕ್ಕೆ ಉತ್ತರವಾಗಿ ಐಎಎಫ್ ಈ ಜೆಟ್‌ಗಳನ್ನು ಖರೀದಿಸಿತು. ಫ್ರಾನ್ಸ್ ಮಾತ್ರವಲ್ಲ, ತಮ್ಮ ಶಸ್ತ್ರಾಸ್ತ್ರಗಳು ಮತ್ತು ಯುದ್ಧವಿಮಾನಗಳನ್ನು ನವೀಕರಿಸುತ್ತಿರುವ ಇತರ ರಾಷ್ಟ್ರಗಳಿಂದಲೂ ನಮ್ಮ ದೇಶವು ಈ ಜೆಟ್‌ಗಳನ್ನು ಖರೀದಿಸುತ್ತಿದೆ.

ಎಫ್‌-35 ವಿಮಾನಗಳನ್ನು ಪರಿಚಯಿಸುತ್ತಿರುವ ಯುಎಇ ತನ್ನ ವಿಮಾನಗಳನ್ನು ಇರಾಕ್‌ಗೆ ಮಾರಾಟ ಮಾಡಲು ಬಯಸುತ್ತದೆ. ಆದರೆ ಅವುಗಳನ್ನು ಇರಾಕ್‌ಗೆ ಮಾರಾಟ ಮಾಡಲು ಫ್ರಾನ್ಸ್ ನಿರಾಕರಿಸಿದಾಗ, ಅವರು ತೈವಾನ್ ಕಡೆಗೆ ನೋಡಿದರು. ಆದರೆ ಮಧ್ಯಪ್ರಾಚ್ಯ ರಾಷ್ಟ್ರವು ಚೀನಾದೊಂದಿಗೆ ತನ್ನ ಸಂಬಂಧವನ್ನು ಬೆಳೆಸುವ ಪ್ರಕ್ರಿಯೆಯಲ್ಲಿರುವುದರಿಂದ, ಈ ಒಪ್ಪಂದದಿಂದ ತೈವಾನ್ ಪ್ರಯೋಜನ ಪಡೆಯುವುದಿಲ್ಲ. ಯುಎಇಗೆ ಮುಂದಿನ ಆಯ್ಕೆ ಭಾರತ. ಐಎಎಫ್ ಸೇವೆ ಮತ್ತು ಬೆಂಬಲದ ವ್ಯವಸ್ಥೆಯನ್ನು ಹೊಂದುವ ಜತೆಗೆ ಮಿರಾಜ್ 2000 ಯುಪಿಜಿ ಗುಣಮಟ್ಟಕ್ಕೆ ಈ ಜೆಟ್‌ಗಳನ್ನು ನವೀಕರಿಸಲು ಫ್ರಾನ್ಸ್ ಮತ್ತು ಡಸಾಲ್ಟ್ ಎರಡರೊಂದಿಗೂ ಒಪ್ಪಂದಗಳನ್ನು ಮಾಡಿಕೊಂಡಿದೆ.

ಎಚ್​ಎಎಲ್​ ಮೇಲೆ ಹೆಚ್ಚಿದ ನಿರೀಕ್ಷೆ ಆಧುನಿಕ ಯುದ್ಧ ವಿಮಾನಗಳನ್ನು ತಮ್ಮ ಕಾರ್ಯಾಚರಣೆಯಲ್ಲಿ 8000 ಗಂಟೆಗಳ ಹಾರಾಟದ ಸಮಯವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ವರ್ಷ ಸರಾಸರಿ 200 ಗಂಟೆಗಳ ಕಾಲ ಹಾರಾಟ ನಡೆಸಿದರೂ ಅವು ಸುಮಾರು 40 ವರ್ಷಗಳ ಕಾಲ ಹಾರಾಟ ಮತ್ತು ಯೋಜನೆಗಳಲ್ಲಿ ಹೆಚ್ಚಿನ ಕ್ಷಮತೆಯನ್ನು ನೀಡುತ್ತವೆಂದು ನಿರೀಕ್ಷಿಸಲಾಗಿದೆ. ಈ ಬಳಿಕ ಸೂಕ್ಷ್ಮ ಒಡಕುಗಳು ಮೂಡಿರುವ ಏರ್‌ಫ್ರೇಮ್‌ಗಳು ಹಾರಾಟಕ್ಕೆ ಸುರಕ್ಷಿತವಾಗಿರುವುದಿಲ್ಲ.

ಮಿರಾಜ್-2000 ವಿಚಾರದಲ್ಲೂ ಹೀಗೇ ಇರುತ್ತದೆ. ಬಿಡಿ ಭಾಗಗಳನ್ನು ಪಡೆಯುವುದಕ್ಕಾಗಿ ಅದು ಬಳಸಿರುವ ವಿಮಾನಗಳನ್ನು ಐಎಎಫ್ ಪಡೆದುಕೊಳ್ಳುತ್ತದೆ. ಮಿಗ್ 29, ಜಾಗ್ವಾರ್ ಮತ್ತು ಮಿರಾಜ್ 2000 ವಿಮಾನಗಳ ಬದಲಿಗೆ ಬಳಸಲೆಂದು ಪರಿಗಣಿಸಲಾಗಿರುವ ತೇಜಸ್ ಎಂಕೆ 2 ಉತ್ಪಾದನೆಯನ್ನು ಎಚ್ಎಎಲ್ ಹೆಚ್ಚಿಸದಿದ್ದರೆ ಸ್ಕ್ವಾಡ್ರನ್‌ಗಳ ಸಂಖ್ಯೆ ಕ್ಷೀಣಿಸುತ್ತದೆ.

2030ರಿಂದ ತೇಜಸ್ ಎಂಕೆ 2 ಬಳಕೆಯನ್ನು ಐಎಎಫ್‌ ಹೆಚ್ಚಿಸಲಿದೆ. ಈ ವಿಮಾನವನ್ನು ಭಾರತದ ವಾಯು ರಕ್ಷಣೆಯ ಭವಿಷ್ಯವೆಂದೇ ಪರಿಗಣಿಸಲಾಗಿದೆ. ವಾಯುಪಡೆಯ ಶ್ರೇಷ್ಠತೆಯ ಸಂರಚನೆಯಲ್ಲಿ 3 ಡ್ರಾಪ್ ಟ್ಯಾಂಕ್‌ಗಳೊಂದಿಗೆ 8 ಬಿವಿಆರ್-ಎಎಎಂಗಳನ್ನು ಹೊತ್ತೊಯ್ಯಬಲ್ಲ ಏಕೈಕ ವಿಮಾನ ಇದು ಮತ್ತು ದಾಳಿ ಸಂರಚನೆಯಲ್ಲಿ ಹೆಚ್ಚಾಗಿ ಗಾಳಿಯಿಂದ ನೆಲಕ್ಕೆ ಗುರಿಯಿಡುವ ಶಸ್ತ್ರಾಸ್ತ್ರಗಳ ಸಂಯೋಜನೆಯಲ್ಲಿ ಪ್ರಭಾವಶಾಲಿ ಶಸ್ತ್ರಾಸ್ತ್ರಗಳ ಪ್ಯಾಕೇಜ್ ಅನ್ನು ಪ್ರದರ್ಶಿಸಿದೆ. ಎಲ್‌ಸಿಎ-ಎಕೆಎಂಕೆ2 ಸಂರಚನೆಗಳು ವಾಯುಪಡೆಯು ಸೇರಿಸಲು ಬಯಸುವ ಪರಿಪೂರ್ಣ ಓಮ್ನಿ ರೋಲ್ ಫೈಟರ್ ಜೆಟ್ ಎಂದು ಸೂಚಿಸುತ್ತದೆ.

ಕೆ.ಎಚ್. ಧನೋವಾ ಮತ್ತು ಭದೌರಿಯಾ ಇಬ್ಬರೂ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥರಾಗಿದ್ದವರು. ಮುಂದಿನ 15-20 ವರ್ಷಗಳಲ್ಲಿ 350ಕ್ಕೂ ಹೆಚ್ಚು ತೇಜಸ್ ಜೆಟ್‌ಗಳನ್ನು ಖರೀದಿಸುವ ಯೋಜನೆಯನ್ನು ರೂಪಿಸಿದ್ದಾರೆ. ಅವರ ಉತ್ತರಾಧಿಕಾರಿಗಳು ಯೋಜನೆಗೆ ಬದ್ಧರಾಗಿರುವುದು ನಿರ್ಣಾಯಕವಾಗುತ್ತದೆ. ಮುಂದಿನ 4-5 ವರ್ಷಗಳಲ್ಲಿ ಎರಡು ಹೊಸ ಯುದ್ಧ ವಿಮಾನ ಕಾರ್ಯಕ್ರಮಗಳು ಆರಂಭವಾಗಲಿವೆ.

ಯೋಜನೆಯನ್ನು ಬೇಗನೆ ಕೈಗೆತ್ತಿಕೊಳ್ಳುವ ಭರವಸೆಯನ್ನು ಎಚ್‌ಎಎಲ್ ನೀಡುತ್ತಿದ್ದರೂ, ಅದು ಈಗಾಗಲೇ ಕಾಲಮಿತಿಯನ್ನು ಮೀರಿದೆ. ತೇಜಸ್ ರೂಪಾಂತರದ ವಿತರಣೆಯ ಹಾಲಿ ಯೋಜನೆಯನ್ನೂ ಐಎಎಫ್ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾರಂಭಿಸಿದೆ. ಉತ್ಪಾದನೆಯನ್ನು ಹೆಚ್ಚಿಸುವುದಾಗಿ ಎಚ್‌ಎಎಲ್ ಹೇಳುತ್ತಿದ್ದರೂ ಪ್ರಯತ್ನವು ಸಾಕಾಗುವುದಿಲ್ಲ. ರಕ್ಷಣಾ ಪಂಡಿತರ ಪ್ರಕಾರ, ಐಎಎಫ್‌ನ ಗಂಭೀರ ಅಗತ್ಯವನ್ನು ಪರಿಗಣಿಸಿ, ಎಚ್‌ಎಎಲ್ ತನ್ನ ಘಟಕವನ್ನು ಸಂಪೂರ್ಣ ಯಾಂತ್ರೀಕರಣ ಮಾಡಿದರೆ ಮಾತ್ರ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಇನ್ನೂ ಅನೇಕ ಯುದ್ಧ ವಿಮಾನಗಳು ವೇಳಾಪಟ್ಟಿಯಂತೆ ಉತ್ಪಾದನೆಯಾಗುತ್ತವೆ. ಭಾರತದ ಸ್ಥಳೀಯ 5.5 ತಲೆಮಾರಿನ ಎಎಂಸಿಎ ವಿಮಾನ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಡಿಆರ್‌ಡಿಒ ಹಲವು ಖಾಸಗಿ ಸಂಸ್ಥೆಗಳ ಸಹಯೋಗ ಪಡೆದ ಮಾದರಿಯಲ್ಲೇ ಎಚ್‌ಎಎಲ್ ಕೂಡ ಖಾಸಗಿ ಸಂಸ್ಥೆಗಳ ನೆರವು ಪಡೆಯಬೇಕೆಂದು ತಜ್ಞರು ಹೇಳುತ್ತಾರೆ.

Mirage-2000-Flight

ಮಿರಾಜ್ ಯುದ್ಧವಿಮಾನ ಮತ್ತು ಲೇಖಕ ಗಿರೀಶ್ ಲಿಂಗಣ್ಣ

ಇದನ್ನೂ ಓದಿ: Missile Power: ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆ, ಮೇಲುಗೈಗೆ ಸಾಕ್ಷಿಯಾದ ಸೂಪರ್​ಸಾನಿಕ್ ಬ್ರಹ್ಮೋಸ್, ಸಬ್​ಸಾನಿಕ್ ನಿರ್ಭಯ್ ಇದನ್ನೂ ಓದಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ತುಂಬಿದ ಐಎನ್​ಎಸ್​ ವಿಕ್ರಾಂತ್: ಸ್ವಾವಲಂಬನೆಯತ್ತ ನೌಕಾಪಡೆ ದಿಟ್ಟ ಹೆಜ್ಜೆ

Published On - 7:52 pm, Fri, 15 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ