Missile Power: ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆ, ಮೇಲುಗೈಗೆ ಸಾಕ್ಷಿಯಾದ ಸೂಪರ್​ಸಾನಿಕ್ ಬ್ರಹ್ಮೋಸ್, ಸಬ್​ಸಾನಿಕ್ ನಿರ್ಭಯ್

ದಾಳಿ ಮತ್ತು ರಕ್ಷಣೆಗೆ ಕ್ಷಿಪಣಿಯನ್ನು ಬಳಸುವಾಗ ಯುದ್ಧತಂತ್ರ ರೂಪಿಸುವ ನಿಪುಣರು ಕಡಿಮೆ ವೇಗದಲ್ಲಿ ಕ್ರಮಿಸಿದರೂ ಹೆಚ್ಚು ಭಾರ ಹೊರುವ ಸಬ್​ಸಾನಿಕ್ ಕ್ಷಿಪಣಿಗಳು ಹಾಗೂ ಹೆಚ್ಚು ವೇಗದಲ್ಲಿ ಬಹುದೂರ ಧಾವಿಸುವ ಸೂಪರ್​ಸಾನಿಕ್ ಕ್ಷಿಪಣಿಗಳ ಸಂಯೋಜಿತ ಕಾರ್ಯತಂತ್ರ ಹೆಣೆಯುತ್ತಾರೆ. ಬ್ರಹ್ಮೋಸ್ ಮತ್ತು ನಿರ್ಭಯ್ ಮೂಲಕ ಭಾರತಕ್ಕೆ ಈ ಬಲ ಸಿಕ್ಕಿದೆ.

Missile Power: ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆ, ಮೇಲುಗೈಗೆ ಸಾಕ್ಷಿಯಾದ ಸೂಪರ್​ಸಾನಿಕ್ ಬ್ರಹ್ಮೋಸ್, ಸಬ್​ಸಾನಿಕ್ ನಿರ್ಭಯ್
ಸಾಗರ ಮತ್ತು ಭೂಮಿಯಿಂದಲೂ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಬಹುದು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 09, 2021 | 10:05 AM

ಭಾರತ ಹಾಗೂ ರಷ್ಯಾ ದೇಶಗಳು ಜೂನ್ 2001ರಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ (BrahMos) ಕ್ರೂಸ್ ಕ್ಷಿಪಣಿಯು ಸೇವಾ ಹಂತವನ್ನು ಪ್ರವೇಶಿಸಿದೆ. ಖರೀದಿಗೆ ಆಸಕ್ತಿ ತೋರುವ ದೇಶಗಳಿಗೆ ಕ್ಷಿಪಣಿಯನ್ನು ರಫ್ತು ಮಾಡಲೂ ಮುಕ್ತ ಅವಕಾಶವಿದೆ ಎನ್ನುತ್ತಾರೆ ರಕ್ಷಣಾ ಕ್ಷೇತ್ರದ ವಿಶ್ಲೇಷಕ ಗಿರೀಶ್ ಲಿಂಗಣ್ಣ.

ಡಿಆರ್‌ಡಿಒ (DRDO) ಪರೀಕ್ಷಾ ಕೇಂದ್ರವಾದ ಒಡಿಶಾದ ಚಾಂದಿಪುರದ ಆಗಸದಲ್ಲಿ ಘರ್ಜಿಸಿದ ಬ್ರಹ್ಮೋಸ್ ಮೊದಲ ಪರೀಕ್ಷೆ ನಡೆದ ಆರು ವರ್ಷಗಳ ಬಳಿಕ ಭಾರತೀಯ ಸೇನೆಯ ಬತ್ತಳಿಕೆ ಸೇರಿತು. ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಬಲ್ಲ ಕ್ಷಿಪಣಿಯು ಇಂದು 20 ಯಶಸ್ವಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಡಿಆರ್‌ಡಿಒ (DRDO) ಮತ್ತು ಎನ್‌ಪಿಒ ಮಾಶಿನೊಸ್ಟ್ರೊಯೆನಿಯಾ (NPO Mashinostroyenia) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಇದಕ್ಕೆ ಭಾರತದ ಸೇನೆಯಿಂದ ಹೆಚ್ಚು ಬೇಡಿಕೆಯಿದೆ. ಹಲವು ದೇಶಗಳು ತಮ್ಮ ಸೇನಾಪಡೆಗಳಿಗೆ ಇದನ್ನು ಸೇರಿಸಿಕೊಳ್ಳುವ ಕುರಿತು ಅಧ್ಯಯನಗಳನ್ನು ನಡೆಸುತ್ತಿವೆ.

ಪರಿಕಲ್ಪನೆಯು ರೂಪುಗೊಂಡು, ಕ್ಷಿಪಣಿಯ ಹಂತ ತಳೆದು ಪರೀಕ್ಷೆಗಳು ಮುಗಿದು, ಸೇನೆಯ ಬತ್ತಳಿಕೆ ಸೇರುವವರೆಗಿನ ಬ್ರಹ್ಮೋಸ್‌ನ ಪಯಣವು ಹೂ ಹಾಸಿನ ನಡಿಗೆ ಆಗಿರಲಿಲ್ಲ. ಅನೇಕ ಮಾನವ ವರ್ಷಗಳು ಮತ್ತು ಎರಡೂ ದೇಶಗಳ ತಂತ್ರಜ್ಞರ ಸಂಶೋಧನೆಗಳ ಜೊತೆಗೆ ಹಲವು ಇತರ ವಿಚಾರಗಳೂ ಬ್ರಹ್ಮೋಸ್ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ.

ಎರಡು ನದಿಗಳ ಹೆಸರಿನ ಕ್ಷಿಪಣಿ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೊಸ್ಕ್ವಾ ಎಂಬ ಎರಡು ನದಿಗಳ ಹೆಸರುಗಳ ಸಂಯೋಜನೆಯಿಂದ ಬ್ರಹ್ಮೋಸ್ ಹೆಸರು ಬಂದಿದೆ. ವಿಶ್ವದ ಏಕೈಕ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿರುವ ಬ್ರಹ್ಮೋಸ್, ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಸಂಚರಿಸುತ್ತದೆ (2.8 ಮ್ಯಾಕ್, ಪ್ರತಿ ಗಂಟೆಗೆ ಸುಮಾರು 3,450 ಕಿಮೀ ವೇಗದಲ್ಲಿ ಸಂಚರಿಸಬಲ್ಲದು.

ಈ ಕ್ಷಿಪಣಿಯು ಗರಿಷ್ಠ 15 ಕಿಮೀ ಎತ್ತರದಲ್ಲಿ ಹಾಗೂ ಕನಿಷ್ಠ 4 ಮೀಟರ್ ಎತ್ತರದಲ್ಲಿ ಹಾರಬಲ್ಲದು. 200-300 ಕೆಜಿ ವರೆಗಿನ ಸಾಂಪ್ರದಾಯಿಕ (ನ್ಯೂಕ್ಲಿಯರ್ ಅಲ್ಲದ) ಸಿಡಿತಲೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಕ್ಷಿಪಣಿ ವ್ಯಾಪ್ತಿ 290 ಕಿಮೀ ಇದ್ದು, ಅದನ್ನು 400 ಕಿ.ಮೀ.ವರೆಗೆ ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ.

ಭಾರತೀಯ ನೌಕಾಪಡೆಯು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಸಾಮರ್ಥ್ಯವನ್ನು ಬಹು ಬೇಗ ಗುರುತಿಸಿತು. ಭಾರತೀಯ ನೌಕಾಪಡೆಯ ಐಎನ್ಎಸ್ ರಾಜೌಟ್​ನಲ್ಲಿ (INS Rajout) 2005ರಲ್ಲೇ ಎರಡು ಕ್ರೂಸ್ ಕ್ಷಿಪಣಿಗಳನ್ನು ಅಳವಡಿಸಲಾಯಿತು. ನೌಕಾಪಡೆಯು ಕ್ಷಿಪಣಿಯ ಹಡಗು ವಿರೋಧಿ ಹಾಗೂ ಭೂ ದಾಳಿ ಆವೃತ್ತಿಗಳನ್ನು ಬಳಸುತ್ತದೆ. ಭೂ ದಾಳಿ ಆವೃತ್ತಿಯನ್ನು ಐಎನ್ಎಸ್ ರಾಜೌಟ್​ನಿಂದ 2008ರಲ್ಲಿ ಪರೀಕ್ಷಾರ್ಥವಾಗಿ ಪ್ರಯೋಗಿಸಲಾಯಿತು. ಈ ಮೂಲಕ ಶತ್ರುಗಳು ಕರಾವಳಿಯಲ್ಲಿ ಸ್ಥಾಪಿಸಿರುವ ನೆಲೆಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಬ್ರಹ್ಮೋಸ್​ಗೆ ಇದೆ ಎಂದು ನಿರೂಪಿಸಲಾಯಿತು.

ಬ್ರಹ್ಮೋಸ್ ಕ್ಷಿಪಣಿಯನ್ನು ತಲ್ವಾರ್ ಕ್ಲಾಸ್, ಶಿವಾಲಿಕ್ ಕ್ಲಾಸ್ ಮತ್ತು ನೀಲಗಿರಿ ಕ್ಲಾಸ್ ಫ್ರಿಗೇಟ್‌ಗಳಲ್ಲಿ (ದಾಳಿ ನೌಕೆ) ಅಳವಡಿಸಲಾಗಿದೆ. ಕ್ಷಿಪಣಿಯನ್ನು ಸಾಲ್ವೋ ಮೋಡ್​ನಲ್ಲಿಯೂ (ಎದುರಾಳಿ ಕ್ಷಿಪಣಿಗಳ ಪ್ರತಿರೋಧ ತಂತ್ರ) ಉಡಾಯಿಸುವ ಸಾಮರ್ಥ್ಯವನ್ನು ನೌಕಾಪಡೆ ಪ್ರದರ್ಶಿಸಿದೆ. ಬ್ರಹ್ಮೋಸ್ ಸಾಗಿಸುವ ಯುದ್ಧನೌಕೆ ಎರಡು ಸೆಕೆಂಡ್‌ಗಳ ಅಂತರದಲ್ಲಿ ಶತ್ರುಗಳ ಬೇರೆ ಬೇರೆ ಹಡಗುಗಳನ್ನು ಗುರಿಯಾಗಿಸಿಕೊಂಡು ಎಂಟು ಕ್ಷಿಪಣಿಗಳನ್ನು ಶತ್ರು ನೆಲೆಗಳ ಮೇಲೆ ಉಡಾಯಿಸಬಲ್ಲದು. 1998ರಲ್ಲಿ ಅಸ್ತಿತ್ವಕ್ಕೆ ಬಂದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜಲಾಂತರ್ಗಾಮಿಯಿಂದ ಉಡಾಯಿಸಬಹುದಾದ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿತು. ಈ ಕ್ಷಿಪಣಿಗಳನ್ನು 2013ರಲ್ಲಿ ಪರೀಕ್ಷಿಸಲಾಗಿದೆ. ಸಾಗರದಲ್ಲಿ 40ರಿಂದ 50 ಮೀಟರ್ ಆಳದಿಂದಲೂ ಈ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ.

ವಾಯುಪಡೆಯಲ್ಲಿ ಬ್ರಹ್ಮೋಸ್ ಭಾರತೀಯ ವಾಯುಪಡೆಯ ಎಸ್‌ಯು-30 ಎಂಕೆಐ (SU-30MKI) ಫೈಟರ್‌ಗಳು ಬ್ರಹ್ಮೋಸ್‌ನೊಂದಿಗೆ ಸಜ್ಜುಗೊಂಡಿವೆ. ಆ ಉದ್ದೇಶಕ್ಕಾಗಿ ಅವುಗಳನ್ನು ಮಾರ್ಪಡಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾದ ಎಸ್‌ಯು-30 ಎಂಕೆಐಗಳು (Su-30MKIs) ಈ ವರ್ಷದ ಆರಂಭದಲ್ಲಿ ಹಿಂದೂ ಮಹಾಸಾಗರದಲ್ಲಿ ನಡೆದ ಅಮೆರಿಕ ಜತೆಗಿನ ತಾಲೀಮಿನಲ್ಲಿ ಭಾಗವಹಿಸಿದ್ದವು.

ಕೋವಿಡ್-19ರ ಬಳಿಕ ‘ಆತ್ಮನಿರ್ಭರ ಭಾರತ’ಕ್ಕೆ (ಸ್ವಾವಲಂಬನೆಗೆ) ಹೆಚ್ಚಿನ ಒತ್ತು ಸಿಗುತ್ತಿದೆ. ರಕ್ಷಣಾ ವಿಭಾಗದಲ್ಲಿ ಹಲವು ಹೊಸ ಪ್ರಯೋಗಗಳು ನಡೆಯುತ್ತಿದ್ದು ವಿದೇಶದ ಅವಲಂಬನೆ ಕಡಿಮೆ ಆಗಬೇಕು ಎಂಬ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ಈ ಪ್ರಯತ್ನ ಮತ್ತು ಪ್ರಯೋಗದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಸಹ ಸಕ್ರಿಯ ಪಾತ್ರ ನಿರ್ವಹಿಸುತ್ತಿದೆ. ಪ್ರಸ್ತುತ ಬ್ರಹ್ಮೋಸ್ ಶೇ 75ರಷ್ಟು ಸ್ವದೇಶೀಕರಣಗೊಂಡಿದೆ.

ಬ್ರಹ್ಮೋಸ್ ಏರೋಸ್ಪೇಸ್ (BrahMos Aerospace) ಮತ್ತು ಡಿಆರ್‌ಡಿಒ (DRDO) ಜಂಟಿಯಾಗಿ ಅಭಿವೃದ್ಧಿಪಡಿಸಿದ ಸೀಕರ್ (ಗುರಿಯ ಬೆನ್ನತ್ತುವ ತಂತ್ರಜ್ಞಾನ) ಮೂಲಕ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ. ರಷ್ಯನ್ನರು ಘನ ಪ್ರೊಪೆಲೆಂಟ್‌ ತಂತ್ರಜ್ಞಾನವನ್ನು ಭಾರತಕ್ಕೆ ನೀಡಸಲು ಹಿಂಜರಿದ ನಂತರ ಡಿಆರ್‌ಡಿಒದ ಉನ್ನತ ಶಕ್ತಿಯ ವಸ್ತುಗಳ ಸಂಶೋಧನಾ ಪ್ರಯೋಗಾಲಯವು (High Energy Materials Research Laboratory) ಬ್ರಹ್ಮೋಸ್‌ ಕ್ಷಿಪಣಿಯ ಇಂಧನಕ್ಕಾಗಿ ವಿಶೇಷ ಪ್ರೊಪೆಲ್ಲಂಟ್ ಅಭಿವೃದ್ಧಿಪಡಿಸುತ್ತಿದೆ.

ಬ್ರಹ್ಮೋಸ್​ನಲ್ಲಿ ಬಳಕೆಯಾಗಿರುವುದು ರಷ್ಯಾ ನಿರ್ಮಿತ ರಾಮ್‌ಜೆಟ್ (Ramjet) ಎಂಜಿನ್. ಬ್ರಹ್ಮೋಸ್ ಕ್ಷಿಪಣಿಯ ನೂಕುವೇಗವು ಎರಡು ಹಂತದಲ್ಲಿ ಪ್ರತ್ಯೇಕ ಎಂಜಿನ್​ಗಳಿಂದ ಶಕ್ತಿ ಪಡೆಯುತ್ತದೆ. ಆರಂಭದಲ್ಲಿ ಘನ ಪ್ರೊಪೆಲ್ಲಂಟ್ ಬೂಸ್ಟರ್ ಎಂಜಿನ್ ಕ್ಷಿಪಣಿಗೆ ಚಲನೆ ನೀಡಿ ಮುಂದೆ ತಳ್ಳುತ್ತದೆ. ಇದು ಕ್ಷಿಪಣಿಯಿಂದ ಪ್ರತ್ಯೇಕಗೊಳ್ಳುವ ಹಂತದಲ್ಲಿ ಕ್ಷಿಪಣಿಗೆ ಸೂಪರ್​ಸಾನಿಕ್ (ಶಬ್ದಾತೀತ) ವೇಗ ಬಂದಿರುತ್ತದೆ. ಇದನ್ನು ಅನುಸರಿಸಿ, ದ್ರವ ರಾಮ್‌ಜೆಟ್ ಕಾರ್ಯರೂಪಕ್ಕೆ ಬರುತ್ತದೆ ಮತ್ತು ಚಲನೆಯ (ಕ್ರೂಸ್​) ಹಂತದಲ್ಲಿ ಕ್ಷಿಪಣಿಗೆ ಮ್ಯಾಕ್ 3ರ ವೇಗ ಪ್ರಾಪ್ತಿಯಾಗುತ್ತದೆ. ಉಡಾಯಿಸಿ ಹಾಗೂ ಮರೆತುಬಿಡಿ ನಿಯಮದ ಮೇಲೆ ಅದು ಕಾರ್ಯ ನಿರ್ವಹಿಸುತ್ತದೆ. ಗುರಿಯನ್ನು ತಲುಪುತ್ತಿದೆಯೇ ಎಂದು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಿಲ್ಲ.

ದೇಶವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ಭಾಗವಾದ ಮೇಲೆ, ಕ್ಷಿಪಣಿಯ ವ್ಯಾಪ್ತಿಯನ್ನು ವಿಸ್ತರಿಸಲು ಬ್ರಹ್ಮೋಸ್ ಏರೋಸ್ಪೇಸ್ ಮುಂದಾಯಿತು. ಬ್ರಹ್ಮೋಸ್-ಇಆರ್ (BrahMos- ER) ಅನ್ನು 2017ರಲ್ಲಿ 500 ಕಿಮೀ ವ್ಯಾಪ್ತಿಯಲ್ಲಿ ಪರೀಕ್ಷಿಸಲಾಯಿತು. 800 ಕಿಮೀ ವ್ಯಾಪ್ತಿಯ ಇನ್ನೊಂದು ಆವೃತ್ತಿ ಅಭಿವೃದ್ಧಿ ಹಂತದಲ್ಲಿದೆ.

ಬ್ರಹ್ಮೋಸ್ ಏರೋಸ್ಪೇಸ್‌ನ ಅಧಿಕಾರಿಗಳ ಪ್ರಕಾರ, ಶ್ರೇಣಿಯನ್ನು ಹೆಚ್ಚಿಸುವುದಕ್ಕಾಗಿ ಎಂಜಿನ್‌ನ ಪ್ರೊಪಲ್ಷನ್ ಶಕ್ತಿಯಲ್ಲಿ ಸುಧಾರಣೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. 2020ರಲ್ಲಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವೆ ಬ್ರಹ್ಮೋಸ್‌ನ ವಿವಿಧ ಆವೃತ್ತಿಗಳ ಏಳು ಪರೀಕ್ಷೆಗಳನ್ನು ನಡೆಸಲಾಯಿತು. ಬ್ರಹ್ಮೋಸ್ ಏರೋಸ್ಪೇಸ್ ಪ್ರಕಾರ, ಬ್ರಹ್ಮೋಸ್-ಎನ್‌ಜಿಯ ಮೊದಲ ಮಾದರಿ, ಇಂಡೊ-ರಷ್ಯನ್ ಕ್ರೂಸ್ ಕ್ಷಿಪಣಿಯು ಹಗುರವಾದ, ಸೂಕ್ಷ್ಮವಾದ ರೂಪಾಂತರ 2024ರಲ್ಲಿ ಸಿದ್ಧವಾಗಲಿದೆ.

ಹೊಸದಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್-ಎನ್​ಜಿ ಕ್ಷಿಪಣಿಗಳು ಈಗಾಗಲೇ ಸೇವೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಅರ್ಧದಷ್ಟು ಮಾತ್ರವೇ ಇದೆ. ಐದು ಮೀಟರ್ ಉದ್ದ, 50 ಸೆಂಟಿಮೀಟರ್ ದಪ್ಪ ಮತ್ತು 1.5 ಟನ್ ತೂಕವಿದೆ. ಇದನ್ನು ಜಲಾಂತರ್ಗಾಮಿ, ಯುದ್ಧ ವಿಮಾನ ಸೇರಿದಂತೆ ಹಲವು ವೇದಿಕೆಗಳಲ್ಲಿ ಸಾಗಿಸಬಹುದು. ಮೊದಲ ತಲೆಮಾರಿನ ಬ್ರಹ್ಮೋಸ್‌ ಕ್ಷಿಪಣಿಗಳ ವೇಗ, ಶ್ರೇಣಿ ಮತ್ತು ಧ್ವಂಸದ ಶಕ್ತಿಯನ್ನು ಹೊಂದಿದೆ.

ಸಬ್​ಸಾನಿಕ್ ಕ್ರೂಸ್ ಕ್ಷಿಪಣಿ ನಿರ್ಭಯ್ ಡಿಆರ್‌ಡಿಒ ಪ್ರಸ್ತುತ ಸಬ್​ಸಾನಿಕ್ ಕ್ರೂಸ್ ಕ್ಷಿಪಣಿ ನಿರ್ಭಯ್ (Nirbhay) ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ರಕ್ಷಣಾ ಸಂಶೋಧನಾ ಸಂಸ್ಥೆಯು ದೇಸಿ ಮಾಣಿಕ್ (Manik) ಎಂಜಿನ್‌ಗೆ ಹೊಂದಿಸಲು ಯೋಜಿಸುತ್ತಿದೆ. ದೇಶವು ಬ್ರಹ್ಮೋಸ್‌ನಂಥ ಕ್ರೂಸ್ ಮತ್ತು ಸೂಪರ್‌ಸಾನಿಕ್ ಕ್ಷಿಪಣಿಯನ್ನು ಹೊಂದಿರುವಾಗ ಸಬ್​ಸಾನಿಕ್ ಕ್ರೂಸ್ ಅಗತ್ಯವಿದೆಯೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

ಉದ್ದೇಶಿತ ಗುರಿ ಸಾಧಿಸಲು ಮೂಲಭೂತ ಅಗತ್ಯ ಎನ್ನಿಸದ ಪರಿಸ್ಥಿತಿಯಲ್ಲಿ, ದೂರದ ಅಥವಾ ಹೆಚ್ಚು ಕಠಿಣವಾದ ಗುರಿಯನ್ನು ತಲುಪಲು (ಉದಾ: ಕಮಾಂಡ್ ಮತ್ತು ಕಂಟ್ರೋಲ್ ಕಟ್ಟಡಗಳು, ಹೆಡ್‌ಕ್ವಾರ್ಟರ್ಸ್ ಇತ್ಯಾದಿ) ಸಬ್‌ಸಾನಿಕ್ ಕ್ಷಿಪಣಿಯ ಅಗತ್ಯವಿದೆ. ವಿಶೇಷವಾಗಿ ರಕ್ಷಣಾ ಪಡೆಗಳು ಭಯೋತ್ಪಾದಕ ಶಿಬಿರವನ್ನು ಧ್ವಂಸಗೊಳಿಸಬೇಕಾದಾಗ ಸಬ್‌ಸಾನಿಕ್ ಕ್ಷಿಪಣಿಯು ಉದ್ದೇಶಿತ ಗುರಿ ಪ್ರದೇಶದ ಮೇಲೆ ಸಂಚರಿಸುವ, ಗುರಿಯನ್ನು ಅಪ್ಪಳಿಸಲು ಸೂಕ್ತ ಸಮಯಕ್ಕಾಗಿ ಕಾಯುವ ಅವಕಾಶವಿದೆ. ಇದರಿಂದ ಧ್ವಂಸಗೊಳಿಸಲು ಉದ್ದೇಶಿಸಿರುವ ಸ್ಥಳದಲ್ಲಿ ನಮ್ಮ ಭದ್ರತಾ ಪಡೆಗಳು ಇದ್ದರೆ, ಅವರು ಸುರಕ್ಷಿತ ಅಂತರಕ್ಕೆ ಸರಿಯಲು ಅವಕಾಶ ಸಿಗುತ್ತದೆ ಎಂದು ರಕ್ಷಣಾ ಪಂಡಿತರು ಪ್ರತಿಪಾದಿಸುತ್ತಾರೆ.

ರಾಡಾರ್​ಗಳು ನಿಗದಿತ ಎತ್ತರದಲ್ಲಿ ಹಾರುವ ವಸ್ತುಗಳನ್ನು ಮಾತ್ರ ಗುರುತಿಸಬಲ್ಲದು. ಸಬ್‌ಸಾನಿಕ್ ಕ್ಷಿಪಣಿಗಳು ರಾಡಾರ್‌ಗಳಿಂದ ಟ್ರ್ಯಾಕ್ ಆಗದಂತೆ ನೆಲದ ಹತ್ತಿರಕ್ಕೆ ಹಾರುತ್ತವೆ. ಆದರೆ ವೇಗದ ವಿಚಾರದಲ್ಲಿ ಇವು ಸೂಪರ್ ಸಾನಿಕ್ ಕ್ಷಿಪಣಿಗೆ ಹೋಲಿಕೆ ಆಗಲಾರದು. ಆದರೆ ದೂರ ಕ್ರಮಿಸುವ ಸಾಧ್ಯತೆ, ಹೆಚ್ಚು ಭಾರದ ಸಿಡಿತಲೆ ಹೊರುವ ಸಾಮರ್ಥ್ಯಗಳು ಸಬ್-ಸಾನಿಕ್ ಕ್ಷಿಪಣಿಯಿಂದ ಒದಗುವ ಅನುಕೂಲಗಳಾಗಿವೆ.

ನಿರ್ಭಯ್ (Nirbhay) ಕ್ರೂಸ್ ಕ್ಷಿಪಣಿಯನ್ನು 2016ರಲ್ಲಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು. ಐದು ಪರೀಕ್ಷೆಗಳ ಪೈಕಿ ಎರಡು ವಿಫಲವೆಂದು ಘೋಷಿಸಲಾಯಿತು. ಒಂದು ಪರೀಕ್ಷೆಯ ಫಲಿತಾಂಶವನ್ನು ಘೋಷಿಸಲಿಲ್ಲ. ಐದನೆಯ ಹಾಗೂ ಕೊನೆಯ ಪರೀಕ್ಷೆಯನ್ನು 2019ರ ನವೆಂಬರ್ 7ರಂದು ಕೈಗೊಳ್ಳಲಾಯಿತು. ಅದು ಯಶಸ್ವಿಯಾಗಿದೆ. ನಿರ್ಭಯ್ ಭೂದಾಳಿಯ ಕ್ರೂಸ್ ಕ್ಷಿಪಣಿಯಾಗಿದ್ದು, 300 ಕಿಲೋಗ್ರಾಂ ಸಿಡಿತಲೆಯನ್ನು ಹೊತ್ತೊಯ್ಯುವ ಜತೆಗೆ 0.6-0.7 ಮ್ಯಾಕ್ ವೇಗವನ್ನು ತಲುಪಬಬಲ್ಲದು. ಆಕಾಶ, ನೀರು ಹಾಗೂ ಭೂಮಿಯಿಂದಲೂ ಅದನ್ನು ಉಡಾಯಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆರಂಭಿಕವಾಗಿ, ಪಾಕಿಸ್ತಾನದ ಬಾಬರ್ ಭೂದಾಳಿ ಕ್ರೂಸ್ ಕ್ಷಿಪಣಿಯನ್ನು ಎದುರಿಸುವುದಕ್ಕಾಗಿ ಇದನ್ನು ರೂಪಿಸಲಾಯಿತು.

ಸೀಮಿತ ಸಂಖ್ಯೆಯ ನಿರ್ಭಯ್ ಸಬ್-ಸಾನಿಕ್ ಕ್ಷಿಪಣಿಗಳನ್ನು ಉತ್ಪಾದಿಸಿ, ನಿಯೋಜಿಸಲಾಗಿದೆ. ಈ ವಿಶೇಷ ಆಯುಧ ವ್ಯವಸ್ಥೆಯು ಸಮುದ್ರದಲ್ಲಿ ತೇಲುತ್ತ, ಆಗಸದಲ್ಲಿ ಹಾರುತ್ತಾ 1,000 ಕಿ.ಮೀ. ವ್ಯಾಪ್ತಿಯನ್ನು ತಲುಪಬಲ್ಲದು. ಇದರರ್ಥ ಕ್ಷಿಪಣಿಯು ನೆಲದಿಂದ 100 ಮೀಟರ್‌ನಿಂದ ನಾಲ್ಕು ಕಿಮೀ ವರೆಗೆ ಹಾರಬಲ್ಲದು ಮತ್ತು ಗುರಿಯತ್ತ ಸಾಗುತ್ತಲೇ ತನ್ನ ಮಾರ್ಗವನ್ನು ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ನಿರ್ಭಯ್ ಕ್ಷಿಪಣಿಯು ಮೇಲ್ಮೈಯಿಂದ ಮೇಲ್ಮೈ ಆವೃತ್ತಿಯನ್ನು ಮಾತ್ರ ಹೊಂದಿದೆ. ಇದು ಎಲ್ಲ ಹವಾಮಾನಗಳಲ್ಲೂ ಕಾರ್ಯ ನಿರ್ಲಹಿಸಬಲ್ಲ, ಕಡಿಮೆ ವೆಚ್ಚದ, ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಯಾಗಿದ್ದು, ಸಾಂಪ್ರದಾಯಿಕ ಮತ್ತು ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ರೆಕ್ಕೆಗಳು ಮತ್ತು ಬಾಲದ ಈಜುರೆಕ್ಕೆಗಳನ್ನು ಹೊಂದಿದ್ದು, ರಾಕೆಟ್‌ನಂತೆ ಚಿಮ್ಮಬಲ್ಲದು. ಕ್ಷಿಪಣಿಯಂತಲ್ಲದೆ, ಅದು ವಿಮಾನದಂತೆ ಮಾರ್ಗವನ್ನು ಬದಲಿಸಿಕೊಂಡು ಗುರಿಯತ್ತ ಚಲಿಸುತ್ತದೆ.

ಮಾರ್ಗಮಧ್ಯೆ, ಅತ್ಯಾಧುನಿಕ ಆನ್-ಬೋರ್ಡ್ ಕಂಪ್ಯೂಟರ್‌ಗಳ ಮೂಲಕ ಸಂಜ್ಞೆಗಳನ್ನು ನೀಡಿ ಕ್ಷಿಪಣಿಯ ರೆಕ್ಕೆಗಳನ್ನು ತೆರೆದು, ತನ್ನ ಚಲನೆಯ ಮಾರ್ಗವನ್ನು ಸ್ಥಿರಗೊಳಿಸುವ ಅವಕಾಶವೂ ಇದೆ.

Nirbhay-Missile

ನಿರ್ಭಯ್ ಕ್ಷಿಪಣಿ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ

ಬ್ರಹ್ಮೋಸ್‌ನ ವಾಣಿಜ್ಯ ಮೌಲ್ಯ ಬ್ರೆಜಿಲ್, ಚಿಲಿ, ಫಿಲಿಪೈನ್ಸ್, ಥೈಲ್ಯಾಂಡ್, ಈಜಿಪ್ಟ್, ಸಿಂಗಾಪುರ, ದಕ್ಷಿಣ ಕೊರಿಯಾ, ಅಲ್ಜೀರಿಯಾ, ಗ್ರೀಸ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮತ್ತು ಬಲ್ಗೇರಿಯಾ ಮುಂತಾದ ಹಲವು ದೇಶಗಳು ಬ್ರಹ್ಮೋಸ್ ಕ್ಷಿಪಣಿ ಮತ್ತು ಅದರ ರೂಪಾಂತರಗಳಲ್ಲಿ ಆಸಕ್ತಿ ವ್ಯಕ್ತಪಡಿಸಿವೆ. ಅಧಿಕಾರಿಗಳ ಪ್ರಕಾರ, ಒಂದೆರಡು ತಿಂಗಳಲ್ಲಿ ಈ ಸಂಬಂಧ ಒಪ್ಪಂದಗಳು ಆಗಬಹುದು.

ಇದನ್ನೂ ಓದಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ತುಂಬಿದ ಐಎನ್​ಎಸ್​ ವಿಕ್ರಾಂತ್: ಸ್ವಾವಲಂಬನೆಯತ್ತ ನೌಕಾಪಡೆ ದಿಟ್ಟ ಹೆಜ್ಜೆ ಇದನ್ನೂ ಓದಿ: ರಕ್ಷಣಾ ವಿದ್ಯಮಾನ: ಹಗುರ ಯುದ್ಧವಿಮಾನ ತೇಜಸ್​ಗೆ ಶಕ್ತಿ ತುಂಬುವ ಕಾವೇರಿ ಸುಧಾರಣೆ ಈ ಕ್ಷಣದ ತುರ್ತು

Published On - 9:34 pm, Fri, 8 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ