Political Analysis: ಉಳಿವಿನ ಕಲೆ ನೇವರಿಸುತ್ತಿರುವ ಗಾಂಧಿ ಕುಟುಂಬ: ಬಿಕ್ರಮ್ ವೊಹ್ರಾ ಬರಹ

ಗಾಂಧಿ ಕುಟುಂಬವು ಇಷ್ಟು ದೀರ್ಘ ಅವಧಿ ರಾಜಕಾರಣದಲ್ಲಿರಲು ಹೇಗೆ ಸಾಧ್ಯವಾಯಿತು? ಅದಕ್ಕೆ ಕಾರಣವಾದ ಅಂಶಗಳೇನು? ಈ ಬರಹದಲ್ಲಿ ವಿಶ್ಲೇಷಿಸಿದ್ದಾರೆ ಅಂಕಣಕಾರ ಬಿಕ್ರಮ್ ವೊಹ್ರಾ.

Political Analysis: ಉಳಿವಿನ ಕಲೆ ನೇವರಿಸುತ್ತಿರುವ ಗಾಂಧಿ ಕುಟುಂಬ: ಬಿಕ್ರಮ್ ವೊಹ್ರಾ ಬರಹ
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ

ಫಿಲಿಪೈನ್ಸ್ ಅಧ್ಯಕ್ಷರಾಗಿದ್ದ ಫರ್ಡಿನೆಂಡ್ ಮಾರ್ಕೊಸ್, ಅರ್ಜೆಂಟಿನಾ ಅಧ್ಯಕ್ಷರಾಗಿದ್ದ ಜುವಾನ್ ಪೆರೊನ್, ಪಾಕಿಸ್ತಾನದಲ್ಲಿ ಆಳ್ವಿಕೆ ನಡೆಸಿದ್ದ ಭುಟ್ಟೊ ಕುಟುಂಬಗಳು ಹಲವು ಅವಧಿಗೆ ಆಡಳಿತ ನಡೆಸಿದ್ದವು. ಆದರೆ ಕೊನೆಗೊಂದು ದಿನ ಪೆವಿಲಿಯನ್​ಗೆ ಮರಳಿ, ಇತಿಹಾಸದ ಪುಟ ಸೇರಿದ್ದವು. ಅಮೆರಿಕದ ಕೆನಡಿ ಕುಟುಂಬದ ಕಥೆ ನಿಮಗೆ ಗೊತ್ತಿರಬಹುದು. ತಮ್ಮ ಕಾಲದ ಬಹುಪ್ರಭಾವಿ ಎನಿಸಿಕೊಂಡಿದ್ದ ಕೆನಡಿ ಅವರ ಪ್ರಭಾವವನ್ನು ಎಲ್ಲರೂ ಕೊಂಡಾಡುತ್ತಿದ್ದರು. ಆದರೆ ಕಾಲ ಮತ್ತು ದುರಂತ ಅವರ ಇನ್ನಿಂಗ್ಸ್​ ಅನ್ನೂ ಮುಗಿಸಿತ್ತು. ಈ ಕುಟುಂಬಗಳೊಂದಿಗೆ ಗಾಂಧಿ / ನೆಹರು ಕುಟುಂಬವನ್ನು ಹೋಲಿಸಿ ನೋಡಿ. ಇದು ಮುಂದುವರಿಯುತ್ತಲೇ ಇದೆ. ಸದಾ ಒಂದಲ್ಲ ಒಂದು ಕಾರಣಕ್ಕೆ ತಮ್ಮ ಮೇಲೆ ಪ್ರಖರ ಬೆಳಕು ಇರುವಂತೆ ಅವರು ಪರಿಸ್ಥಿತಿ ನಿರ್ವಹಿಸುತ್ತಿದ್ದಾರೆ. ಅವರು ಇಷ್ಟು ದೀರ್ಘ ಅವಧಿ ರಾಜಕಾರಣದಲ್ಲಿರಲು ಹೇಗೆ ಸಾಧ್ಯವಾಯಿತು? ಅದಕ್ಕೆ ಕಾರಣವಾದ ಅಂಶಗಳೇನು?

ಕಳೆದ 10 ವರ್ಷಗಳಲ್ಲಿ ಗಮನಾರ್ಹ ಎನಿಸಿದ ಯಾವುದೇ ಕೆಲಸವನ್ನು ಈ ಕುಟುಂಬ ಮಾಡಿಲ್ಲ. ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಸಾಮಾನ್ಯವಾಗಿ ಸರ್ಕಾರದ ನಿಯಮಗಳನ್ನು ಖಂಡಿಸುವುದು ಇವರ ಕ್ರಮ. ಸಾರ್ವಜನಿಕ ಆಸ್ತಿ ನಿರ್ಮಾಣಕ್ಕೂ ಅಂಥ ಕೊಡುಗೆ ಏನೂ ಇಲ್ಲ. ಕಾಂಗ್ರೆಸ್ ಪಕ್ಷವು ಈಗ ಸುಸ್ತಾಗಿ ಸಾವಿನ ಅಂಚಿಗೆ ಬಂದಿದೆ, ಹೀಗಾಗಿ ಅವರ ಬಳಿ ಪ್ರಭಾವಶಾಲಿಯಾದ ರಾಜಕೀಯ ಪಕ್ಷವೂ ಇಲ್ಲ. ಆದರೂ ಅವರು ಏನು ಮಾಡಿದರೂ, ಅದೆಷ್ಟು ಚಿಕ್ಕದಾಗಿದ್ದರೂ ಮಾಧ್ಯಮಗಳಲ್ಲಿ ಸುದ್ದಿಯಂತೂ ಆಗುತ್ತದೆ.

ಪ್ರಿಯಾಂಕಾ ಗಾಂಧಿ ಒಂದು ಸಾಮಾನ್ಯ ಕೊಠಡಿಯಲ್ಲಿ ವಾಸ್ತವ್ಯ ಹೂಡಿ, ಅಲ್ಲಿ ಕಸ ಗುಡಿಸಿದರೆ ಅದೂ ಸಹ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಕೊಲೆಯಾದ ಕುಟುಂಬಕ್ಕೆ ರಾಹುಲ್ ಗಾಂಧಿ ಸಹಾನುಭೂತಿ ತೋರಿದರೆ ಅದಕ್ಕೆ ಅಗತ್ಯಕ್ಕಿಂತ ಹೆಚ್ಚೇ ಪ್ರಚಾರ ಸಿಗುತ್ತದೆ. ಬಿಜೆಪಿಯಲ್ಲಿ ವರುಣ್ ಗಾಂಧಿ ಮತ್ತು ಮನೇಕಾ ಗಾಂಧಿ ಅವರನ್ನು ಎಲ್ಲ ಹಂತ ವೇದಿಕೆಗಳು, ಸಮಿತಿಗಳಿಂದ ದೂರ ಇಟ್ಟರೆ ಆಗಲೂ ಜನರು ಇವರಿಬ್ಬರ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ದೇಶದ ಇಂದಿನ ರಾಜಕೀಯಕ್ಕೆ ಇವರ ಅಗತ್ಯ ಎಷ್ಟಿದೆ ಎನ್ನುವ ಬಗ್ಗೆ ಯಾರೊಬ್ಬರೂ ಯೋಚಿಸುವುದಿಲ್ಲ. ಆದರೆ ನಾವು ಮಾತ್ರ ಅವರ ಬೆನ್ನು ಹತ್ತಿದ್ದೇವೆ. ಉದಾಹರಣೆಗೆ, ಸುದ್ದಿ ಮನೆಗಳ ಪಾಲಿಗೆ ಸೋನಿಯಾ ಗಾಂಧಿ ಸದಾ ಸುದ್ದಿಯಾಗುವ ಹೆಸರು. ಅವರ ಪ್ರತಿ ನಡೆಯೂ ಸುದ್ದಿಯಾಗುತ್ತದೆ. ಕೇವಲ ದೊಡ್ಡ ಸುದ್ದಿಯ ಭಾಗವಾಗಿ ಅಲ್ಲ, ಬದಲಿಗೆ ಸುದ್ದಿಯೊಂದರ ಶೀರ್ಷಿಕೆಯಾಗಿ ಕಾಣಿಸಿಕೊಳ್ಳುತ್ತದೆ. ಪ್ರಿಯಾಂಕಾರ ಮಗ ರೈಹನ್ ಮತ್ತು ಫೋಟೊಗ್ರಾಫರ್ ಆಗಬೇಕು ಎನ್ನುವ ಅವನ ಆಸೆಯ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್​ ಈಚೆಗೆ ಲೇಖನವೊಂದನ್ನು ಪ್ರಕಟಿಸಿತ್ತು.

ಅವರ ಆಟವನ್ನು ಇನ್ನಷ್ಟು ದಿನ ವಿಸ್ತರಿಸಲು ಬೇಕಾದ ಇಂಧನವನ್ನು ಈ ಮೂಲಕ ಮಾಧ್ಯಮಗಳು ಒದಗಿಸುತ್ತವೆ ಎಂದು ಜನರು ದೂರುತ್ತಾರೆ. ಅದು ನಿಜವೂ ಇರಬಹುದು. ಆದರೆ ಓದುಗರಿಗೆ ಆಸಕ್ತಿಯಿಲ್ಲದಿದ್ದರೆ ಮತ್ತು ಇವರು ವಿವರಿಸಲು ಸಾಧ್ಯವಾಗದ ಮಾರ್ಗದಲ್ಲಿ ಮಾಧ್ಯಮಗಳನ್ನು ಒಲಿಸಿಕೊಳ್ಳದಿದ್ದರೆ ಪ್ರಸ್ತುತತೆಯನ್ನು ಉಳಿಸಿಕೊಳ್ಳುವುದಾದರೂ ಹೇಗೆ. ಗಾಂಧಿ ಕುಟುಂಬದ ಬಗ್ಗೆ ನಮಗೇಕೆ ಈ ಕಾಲಾತೀತ ಒಲವು? ಭಾರತದ ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಈ ಹೆಸರು ತಳುಕು ಹಾಕಿಕೊಂಡಿರುವ ರೀತಿಯಿಂದಾಗಿ ನಮಗೆ ಇಷ್ಟು ಒಲವು ಇದೆಯೇ? ನೆಹರು, ಇಂದಿರಾ ಅಥವಾ ರಾಜೀವ್​ ಮಾಡಿರುವ ಸೇವೆಗೆ ಈ ಮೂಲಕ ನಾವು ಕೃತಜ್ಞತೆ ಅಥವಾ ಸದ್ಭಾವನೆ ತೋರುತ್ತಿದ್ದೇವೆಯೇ? ಈ ಕುಟುಂಬದ ಇಬ್ಬರು ಹಿಂಸೆಗೆ ಬಲಿಯಾಗಿದ್ದಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆಯೇ? ಒಂದಲ್ಲ ಒಂದು ರೀತಿ ಈ ಎಲ್ಲ ಅಂಶಗಳು ತುಸು ಮಿಶ್ರಣ ಇದ್ದಂತೆ ಭಾಸವಾಗುತ್ತದೆ. ಇದರ ಜೊತೆಗೆ ‘ರಾಯಲ್ಟಿ’ಯ ಪ್ರಭಾವವೂ ಕಂಡುಬರುತ್ತದೆ. ನಮಗೆ ಸರಿಯಿಲ್ಲ ಎನಿಸಬಹುದು, ಆದರೆ ಅಪ್ಪ-ಅಮ್ಮನ ಪ್ರಭಾವ ಎನ್ನುವುದು ನಮ್ಮ ಮಾನಸಿಕ ಮತ್ತು ಸಾಮಾಜಿಕ ವಂಶವಾಹಿಗಳ ಭಾಗವೇ ಆಗಿದೆ. ಇದೇ ಕಾರಣಕ್ಕೆ ಕಳಾಹೀನ ನಾಯಕರನ್ನು ನಾವು ಆರಾಧಿಸುತ್ತೇವೆ.

‘ದೇಶವು ಗಾಂಧಿ ಕುಟುಂಬವನ್ನು ದೇಶವು ಆರಾಧಿಸುವುದು ಮಾತ್ರವಲ್ಲ ಪ್ರತಿ ಹಂತದಲ್ಲಿಯೂ ಬೆಂಬಲಿಸುತ್ತದೆ’ ಎಂದು ‘ವಾಷಿಂಗ್​ಟನ್ ಪೋಸ್ಟ್’​​ ಬರೆದಿತ್ತು. ಸಿನಿಮಾ ತಾರೆಯರಂತೆ ಈ ದೇಶವು ಗಾಂಧಿ ಕುಟುಂಬವನ್ನು ಕಾಣುತ್ತಿದೆ. ಕೌಟುಂಬಿಕ ಸಂಪ್ರದಾಯ ಮತ್ತು ಪೋಷಣೆಯಿಂದ ವಂಶಪಾರಂಪರ್ಯ ರಾಜಕಾರಣವು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಲೋಕಸಭೆಯ ಒಟ್ಟು ಸದಸ್ಯರ ಪೈಕಿ ಮೂರನೇ ಒಂದರಷ್ಟು ಮಂದಿ ಕೌಟುಂಬಿಕ ರಾಜಕಾರಣದ ಹಿನ್ನೆಲೆಯಿಂದ ಅಥವಾ ಒಂದಲ್ಲ ಒಂದು ರೀತಿ ರಾಜಕಾರಣದೊಂದಿಗೆ ನಂಟು ಹೊಂದಿರುವ ಕುಟುಂಬಗಳಿಂದ ಬಂದವರೇ ಆಗಿದ್ದಾರೆ.

ಹಿಂದೂಸ್ತಾನ್ ಟೈಮ್ಸ್​ನಲ್ಲಿ ಲೇಖನ ಬರೆದಿದ್ದ ರಾಮಚಂದ್ರ ಗುಹ ಹೀಗೆ ವಿಶ್ಲೇಷಿಸಿದ್ದರು: ಕಾಂಗ್ರೆಸ್ ಪಕ್ಷದ ಮೂವರು ಅತಿಮುಖ್ಯ ವ್ಯಕ್ತಿಗಳನ್ನು ಗಾಂಧಿ, ಗಾಂಧಿ ಮತ್ತು ಗಾಂಧಿ ಎಂದು ಹೆಸರಿಸಬಹುದು. ಅವರು ಒಂದೇ ಸಣ್ಣ ಕುಟುಂಬದ ಭಾಗ. ಈ ಪೈಕಿ ಒಬ್ಬರು ಇನ್ನುಳಿದ ಇಬ್ಬರ ತಾಯಿ. ತಮ್ಮ ಬದುಕಿನ ಬಹುತೇಕ ಕ್ಷಣಗಳನ್ನು ಇವರು ಒಂದೇ ಸೂರಿನಡಿ ಕಳೆದಿದ್ದಾರೆ. ಇದೇ ಕುಟುಂಬದ ಮತ್ತೊಬ್ಬ ವ್ಯಕ್ತಿಯು ರಾಜಕೀಯದಲ್ಲಿ ಪ್ರಬಲ ಅಧಿಕಾರ ಪಡೆದುಕೊಂಡು, ಅದನ್ನು ಉಳಿದವರಿಗೆ ದಾಟಿಸಬೇಕು ಎಂದುಕೊಂಡಿದ್ದೇ ಇವರು ರಾಜಕೀಯಕ್ಕೆ ಬರಲು ಮುಖ್ಯ ಕಾರಣವಾಯಿತು (ದಿವಂಗತ ಪ್ರಧಾನಿಯ ಪತ್ನಿ ಎನ್ನುವ ಕಾರಣಕ್ಕೆ ತಾಯಿ ಕಾಂಗ್ರೆಸ್​ಗೆ ಸೇರಿದರು. ತಂದೆ-ತಾಯಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎನ್ನುವ ಕಾರಣಕ್ಕೆ ಮಕ್ಕಳು ಪಕ್ಷಕ್ಕೆ ಬಂದರು). ವೃತ್ತಿಪರ ಪರಿಭಾಷೆಯಲ್ಲಿ ಹೇಳುವುದಾದರೆ ಗಾಂಧಿ, ಗಾಂಧಿ ಮತ್ತು ಗಾಂಧಿ ಹತ್ತಾರು ಅನುಕೂಲಗಳೊಂದಿಗೆ ಮತ್ತು ಅವಕಾಶಗಳನ್ನು ಹೊಂದಿದ್ದಾರೆ. ತಮ್ಮ ಉಪನಾಮದ ಕಾರಣಕ್ಕಾಗಿಯೇ ಅವರು ಈ ಹಂತಕ್ಕೆ ತಲುಪಿದ್ದಾರೆ.

ನಾವು ಮತ್ತೆ ಅಲ್ಲಿಗೇ ಬಂದೆವು. ಗಾಂಧಿ ಎನ್ನುವ ಹೆಸರಿಗೆ ಅಯಸ್ಕಾಂತದ ಶಕ್ತಿಯಿದೆ ಮತ್ತು ನಾವು ಅದಕ್ಕೆ ಆಕರ್ಷಿತರಾಗಿದ್ದೇವೆ. ಈ ಆರಾಧನೆಯು ನಮ್ಮ ಅಂತಃಪ್ರಜ್ಞೆಯಲ್ಲಿಯೇ ಇರಬಹುದು, ಆದರೆ ನಾವು ಮಂಡಿಯೂರಿರುವುದಂತೂ ನಿಜ. ಇದು ಮೇಲು ಮಾತಿನ ವಿವರಣೆ ಎನಿಸಬಹುದು. ಆದರೆ ಇಷ್ಟು ದೀರ್ಘ ಅವಧಿಗೆ ಅದು ತನ್ನ ಪ್ರಸ್ತುತತೆ ಕಾಪಾಡಿಕೊಂಡಿದ್ದು ವಿಶ್ಲೇಷಣೆಗೆ ಅರ್ಹವಾದ ವಿಷಯವೇ ಸರಿ. ಆಧುನಿಕ ಭಾರತದಲ್ಲಿ ಯಾವುದೇ ಒಂದು ಕುಟುಂಬ ಇಷ್ಟು ಪ್ರಬಲ ಶಕ್ತಿ ಹೊಂದಿಲ್ಲ.

ಅವರಿಗೆ ಬೇಕೆನಿಸಿದ ಎಲ್ಲವೂ ಸಿಕ್ಕಿದೆಯಾದರೂ, ಕುಟುಂಬದ ಪ್ರಭಾವದಿಂದ ಮೇಲೆ ಬಂದಿದ್ದೇ ತಪ್ಪು ಎನ್ನಿಸುವಂಥ ಪರಿಸ್ಥಿತಿ ಒದಗಿದೆ. ಪಪ್ಪು (ರಾಹುಲ್ ಗಾಂಧಿ) ಹಲವು ಬಾರಿಗೆ ಅಣಕ-ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಸೋನಿಯಾರ ವಿದೇಶಿ ಮೂಲದ ಬಗ್ಗೆ ಹಲವು ಬಾರಿ ಟೀಕೆಗಳ ಸುರಿಮಳೆಯಾಗಿದ್ದು ಉಂಟು. ತಮ್ಮ ಪತಿಯ ಮೇಲೆ ಕೇಳಿಬಂದ ಅವ್ಯವಹಾರದ ಆರೋಪಗಳು ಪ್ರಿಯಾಂಕಾರನ್ನು ಬಾಧಿಸಿದವು. ದೈಹಿಕ ಚಹರೆಗಳಲ್ಲಿ ಅಜ್ಜಿಯನ್ನು (ಇಂದಿರಾ ಗಾಂಧಿ) ಹೋಲುತ್ತಾರೆಯಾದರೂ, ರಾಜಕೀಯವಾಗಿ ಪ್ರಿಯಾಂಕಾ ಗಾಂಧಿ ಎಂದಿಗೂ ಇಂದಿರಾರರ ಎತ್ತರಕ್ಕೆ ಏರಲೇ ಇಲ್ಲ. ಅವರ ದೈಹಿಕ ಚಹರೆಯ ಕಾರಣದಿಂದಲೇ ಒಂದಲ್ಲ ಒಂದು ಸಲ ಅವರು ಪುಟಿದೇಳಬಹುದು ಎಂಬ ನಿರೀಕ್ಷೆಯು ಜೀವಂತವಾಗಿದೆ. ವರುಣ್ ಮತ್ತು ಮನೇಕಾ ಅವರು ಇಷ್ಟು ವರ್ಷ ನಡೆದು ಬಂದ ಹಾದಿಯ ಬಗ್ಗೆ ಮಾತನಾಡಲು ಸಹ ಏನೂ ಸಿಗುವುದಿಲ್ಲ. ವರುಣ್ ಗಾಂಧಿ ಒಂದು ವೇಳೆ ಲಖನೌಗೆ ಹೋಗುತ್ತಾರೆ ಎಂದಾದರೆ ನಮ್ಮ ಸುದ್ದಿ ಮಾಧ್ಯಮಗಳು ಅದನ್ನೊಂದು ಸುದ್ದಿಯಾಗಿ ಪ್ರಕಟಿಸುವುದು ನಿಜ. 2021ರಲ್ಲಿಯೂ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉತ್ತರ ಸಿಗುವವರೆಗೂ ಅವರು ಪ್ರಸ್ತುತತೆ ಉಳಿಸಿಕೊಂಡೇ ಇರುತ್ತಾರೆ.

ಬರಹ: ಬಿಕ್ರಮ್ ವೊಹ್ರಾ

ಇದನ್ನೂ ಓದಿ: ನೂರಕ್ಕೆ ನೂರು ಅಂಕಗಳಿಸಬೇಕೆಂಬ ಹುಚ್ಚು ಒತ್ತಡ, ಇದು ಈ ತಲೆಮಾರಿನ ಮೇಲೆ ನಡೆಯುತ್ತಿರುವ ದಾಳಿ
ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸ: ಶ್ವೇತ ಭವನದಲ್ಲಿ ಕ್ವಾಡ್ ಔತಣ, ಚೀನಾ ವಿಚಾರದತ್ತ ಮುಖ್ಯ ಗಮನ

Read Full Article

Click on your DTH Provider to Add TV9 Kannada