ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಮೃತರ ಆತ್ಮಕ್ಕೆ ನ್ಯಾಯ ನೀಡುವುದು ಹೇಗೆ?

ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಜೀವ ವಾಪಸ್ ಬಾರದು. ಈ ಸಂದರ್ಭದಲ್ಲಿ ನ್ಯಾಯಾಲಯ ದೊಡ್ಡ ಮನಸ್ಸು ಮಾಡಿದರೆ ಮೃತರ ಆತ್ಮಕ್ಕೆ ಶಾಂತಿ ದೊರಕಿಸಿ ಕೊಡಬಹುದು. ಹಾಗಾದರೆ ಅದಕ್ಕೆ ಏನು ಮಾಡಬೇಕು? ಕೈಗೊಳ್ಳಬಹುದಾದ ಕ್ರಮಗಳು ಏನು?

ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಮೃತರ ಆತ್ಮಕ್ಕೆ ನ್ಯಾಯ ನೀಡುವುದು ಹೇಗೆ?
ಕಾಲ್ತುಳಿತ

Updated on: Jun 06, 2025 | 9:38 PM

ಹದಿನೆಂಟು ವರ್ಷಗಳ ನಂತರ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ನಡೆಯಬೇಕಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಮೊನ್ನೆ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಭಾರತದ ಕ್ರೀಡಾ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಭವಿಷ್ಯದಲ್ಲಿ ಈ ಘಟನೆ ಒಂದು ಪಾಠವಾಗಲಿದೆ. ಹಾಗೆ ಆಗಬೇಕು ಎಂದಾದರೆ, ಈ ಬಾರಿ ಕಾಲ್ತುಳಿತಕ್ಕೆ ಕಾರಣರಾದವರಿಗೆ ಶಿಕ್ಷೆ ಆಗಬೇಕು.

ಕ್ರೀಡೆ ಮತ್ತು ಹಿಂಸೆ

ಕ್ರೀಡೆಯಲ್ಲಿ ಕಾಲ್ತುಳಿತವಾಗಲಿ, ಹಿಂಸಾಚಾರವಾಗಲಿ ಹೊಸದಲ್ಲ. ಯುರೋಪ್ ಮತ್ತು ದಕ್ಷಿಣ ಅಮೇರಿಕದಲ್ಲಿ ಸಾಕರ್ ಅಂದರೆ ಫುಟ್ಬಾಲ್ ಆಟಕ್ಕೆ ನೂರಾರು ಜನ ಫ್ಯಾನ್ಸ್ ಜೀವ ತೆತ್ತಿದ್ದಾರೆ. ಐದು ದಿನಗಳ ಹಿಂದೆ, ಫ್ರಾನ್ಸ್​ನಲ್ಲಿ ಕ್ರೀಡಾ ವಿಜಯೋತ್ಸಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ನಡೆದು ಇಬ್ಬರು ಸತ್ತಿದ್ದರು. ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್​ಜಿ) ಅಭಿಮಾನಿಗಳು ಚಾಂಪಿಯನ್ಸ್ ಲೀಗ್ ಫೈನಲ್​​ನಲ್ಲಿ ಕ್ಲಬ್​​ನ ಗೆಲುವನ್ನು ಆಚರಿಸಿದ ನಂತರ ಇಬ್ಬರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ದೇಶದ ನೈಋತ್ಯ ಭಾಗದಲ್ಲಿರುವ ಡ್ಯಾಕ್ಸ್​ನಲ್ಲಿ ಶನಿವಾರ ಸಂಜೆ 17 ವರ್ಷದ ಬಾಲಕನಿಗೆ ಇರಿದು ಕೊಲ್ಲಲಾಗಿದೆ. ಮಧ್ಯ ಪ್ಯಾರಿಸ್​ನಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ 23 ವರ್ಷದ ಯುವಕನೊಬ್ಬ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಬಿಬಿಸಿ ವರದಿ ಮಾಡಿತ್ತು.

ಆದರೆ ಭಾರತದಲ್ಲಿ ಈ ರೀತಿಯ ಘಟನೆ ಆಗುತ್ತಿರುವುದು ಇದೇ ಮೊದಲು. ಭಾರತದಲ್ಲಿ ಇಂತಹ ಘಟನೆ ಆಗಿಯೇ ಇಲ್ಲ ಎಂದರೂ ತಪ್ಪಿಲ್ಲ. ಭಾರತೀಯ ಕ್ರೀಡಾಭಿಮಾನಿ ಸಾರ್ವಜನಿಕ ಶಿಸ್ತನ್ನು ಮೀರದ ನಾಗರಿಕ. ಆದ್ದರಿಂದ ಬೆಂಗಳೂರಿನ ಘಟನೆ ನೆನಪಾದೊಡನೆ ಮನಸ್ಸು ಖೇದಗೊಳ್ಳುತ್ತದೆ. ಸಾರ್ವಜನಿಕವಾಗಿ ನಡೆದ ಹಿಂಸೆಯಲ್ಲಿ ಸತ್ತ ಯಾರಿಗೂ ಜೀವ ನೀಡಲು ಆಗದು. ಪ್ರಾಯಶಃ ಘಟನೆಗೆ ಕಾರಣರಾದವರಿಗೆ ಶಿಕ್ಷೆ ನೀಡಿದರೆ ಮಾತ್ರ, ಮೃತರ ಆತ್ಮಕ್ಕೆ ಶಾಂತಿ ಸಿಗಬಹುದು.

ಮೃತರ ಆತ್ಮಕ್ಕೆ ಶಾಂತಿ ದೊರಕಿಸಿಕೊಡುವುದು ಹೇಗೆ?

ಎರಡು ಕಡೆ ವಿಜಯೋತ್ಸವವನ್ನು ನಡೆಸಬೇಕೆಂಬ ಪ್ರಸ್ತಾವನೆಗೆ ನಾಯಕರು ಮತ್ತು ಹಿರಿಯ ಅಧಿಕಾರಿಗಳು ಮೌನವಾಗಿ ತಲೆದೂಗಿದಂತಿದೆ.  ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನಿಸದೇ ಯಾವ ತನಿಖೆ ಕೂಡ ಪೂರ್ಣವಾಗದು. ಜಿಲ್ಲಾಧಿಕಾರಿಯಿಂದ, ಸಿ ಐ ಡಿ ತಂಡದಿಂದ ಮತ್ತು ನಿವೃತ್ತ ನ್ಯಾಯಾಧೀಶ ಮೈಕೆಲ್​ ಡಿ ಕುನ್ಹಾ ನೇತೃತ್ವದ ನ್ಯಾಯಾಂಗ ತನಿಖೆ-ಹೀಗೆ ಮೂರು ಹಂತದಲ್ಲಿ ನಡೆಯುವ ಸ್ವತಂತ್ರ ತನಿಖೆ ಈ ಮೇಲಿನ ಎಲ್ಲರನ್ನೂ ತನಿಖೆಗೆ ಒಳಪಡಿಸುವ ಸಾಧ್ಯತೆ ಕಡಿಮೆ. ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಕರ್ನಾಟಕ ಉಚ್ಛ ನ್ಯಾಯಾಲಯ ನಿಜವಾಗಿಯೂ ನ್ಯಾಯ ನೀಡುತ್ತೆ ಎನ್ನುವುದಾರೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು. ಆಗ ಮಾತ್ರ ಮೃತ ಆತ್ಮಗಳಿಗೆ ಶಾಂತಿ ಸಿಗಬಹುದು.

1. ಜೂನ್ ಮೂರನೇ ತಾರೀಕಿನಿಂದ ಜೂನ್ ಆರನೇ ತಾರೀಕಿನವರೆಗೆ ಕರ್ನಾಟಕದ ವಿವಿಐಪಿಗಳ ಫೋನ್ ಕಾಲ್ ರೆಕಾರ್ಡ್ಸ್ ತೆಗೆಸಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅವರ ಸಿಬ್ಬಂದಿ ಬಳಗ ಒಳಗೊಂಡಂತೆ ಪೊಲೀಸ್ ಕಮಿಷನರ್, ಪೊಲೀಸ್ ಮಹಾನಿರ್ದೇಶಕರು, ಆರ್​​ಸಿಬಿ, ಕೆ ಎಸ್​ಸಿಎ ಸಂಸ್ಥೆಗಳ ಅಧಿಕಾರಿಗಳ ಸಂಭಾಷಣೆಯ ವಿವರಗಳನ್ನು ವಿಶ್ಲೇಷಿಸಬೇಕು. ಆಗ ಈ ಕಾರ್ಯಕ್ರಮವನ್ನು ತರಾತುರಿಯಲ್ಲಿ, ನಾಲ್ಕನೆ ತಾರೀಕಿನಂದು ವಿಜಯೋತ್ಸವ ಆಚರಿಸಬೇಕೆಂದು ನಿರ್ಧಾರ ತೆಗೆದುಕೊಂಡವರು ಯಾರು? ಅದೂ ಕೂಡ ಎರಡು ಕಡೆ ನಡೆಸುವಂತೆ ಯೋಜನೆ ನಿರೂಪಿಸಿದ್ದು ಯಾರು ಎನ್ನುವ ಮಾಹಿತಿ ಸಿಗುತ್ತದೆ. ಅವರಿಗೆ ಶಿಕ್ಷೆ ನೀಡಬಹುದು.

2. ಆರ್​ಸಿಬಿ ಟೀಂ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕು ಎಂದು ನಿರ್ಧರಿಸಿದ್ದು ಯಾರು? ಆ ಕುರಿತು ಕರ್ನಾಟಕ ಸರಕಾರದಿಂದ ಯಾವ ಅಧಿಕಾರಿ ಎಚ್​ಎಎಲ್ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದರು? ಅವರನ್ನು ಪ್ರಶ್ನಿಸಬೇಕು.

3. ನಾಲ್ಕನೇ ತಾರೀಕು ಬೆಳಿಗ್ಗೆ ಸುಮಾರು ಎಂಟು ಗಂಟೆಯಿಂದ ನಗರ ಪೊಲೀಸ್ ಕಮಿಷನರ್ ಅವರ ಕಚೇರಿಯಿಂದ ವಾಕಿಟಾಕಿಯಲ್ಲಿ ಹೋದ ಸಂದೇಶಗಳು ಯಾವುವು? ಆ ಲಾಗ್ ಬುಕ್ ಸೀಜ್ ಮಾಡಿ ಅದನ್ನು ವಿಶ್ಲೇಷಿಸಬೇಕು. ಆಗ ನಿಜವಾಗಿ ಏನು ನಡೆಯಿತು ಎನ್ನುವ ಮಾಹಿತಿ ಹೊರಬೀಳಬಹುದು.

4. ವಿಧಾನಸೌಧದ ಎದುರು ಆಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ತರಾತುರಿಯಲ್ಲಿ ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆಗೆ ಸಿಬ್ಬಂದಿ ಕೊರತೆ ಉಂಟಾಯಿತೇ? ವಿಧಾನಸೌಧದ ಹೊರಗಡೆ ಸೇರಿದ್ದ ಜನ ಅಲ್ಲಿ ತಮ್ಮ ಕ್ರೀಡಾ ಕಣ್ಮಣಿಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೆ ಅಲ್ಲಿ ಆದ ನಿರಾಸೆಯನ್ನು ಮೀರಿ, ಸ್ಟೇಡಿಯಂ ಬಳಿಗೆ ಹೋಗಿದ್ದರೆ? ಮತ್ತೊಮ್ಮೆ ನೆಚ್ಚಿನ ಆಟಗಾರರನ್ನು ನೋಡಿ ಸೆಲ್ಫೀ ತೆಗೆದುಕೊಳ್ಳಬಹುದು ಎಂದು ಅತ್ತ ಹೋಗಿದ್ದರೆ? ಈ ಕುರಿತು ಸಿಸಿಟಿವಿ ಫುಟೇಜ್ ನೋಡಿದರೆ ಗೊತ್ತಾಗುತ್ತದೆ. ಹಾಗೊಮ್ಮೆ ಆಗಿದ್ದರೆ, ವಿಧಾನಸೌಧದ ಕಾರ್ಯಕ್ರಮ ಮಾಡಿದ್ದು ತಪ್ಪು ಎಂಬುದು ನಿರೂಪಿತವಾಗುತ್ತದೆ. ಅದಾಗಲೇ ಸಾವಿರ ಸಾವಿರ ಜನ ಕ್ರೀಡಾಂಗಣದ ಎದುರು ಜಮಾಯಿಸಿದ್ದರು. ಐದು ನೂರು ಮೀಟರ್ ದೂರದಲ್ಲಿರುವ ಕ್ರೀಡಾಂಗಣಕ್ಕೆ ವಿಧಾನಸೌಧದ ಎದುರು ಸೇರಿದ್ದ ಜನ ಬಂದರೆ ಇನ್ನೇನಾಗಬಹುದು ಊಹಿಸಿ.

ಈ ಅನ್ಯಾಯಕ್ಕೆ ನ್ಯಾಯ ಒದಗಿಸಲು ಕರ್ನಾಟಕ ಉಚ್ಚ ನ್ಯಾಯಾಲಕ್ಕೆ ಒಂದು ದಾರಿ ಇದೆ. ಉಚ್ಚ ನ್ಯಾಯಾಲಯ ತಾನೇ ಆಯ್ಕೆ ಮಾಡಿದ ಪ್ರಾಮಾಣಿಕ ಪೊಲೀಸ್ ತಂಡ ರಚಿಸಿ, ತನಿಖೆ ನಡೆಸಬೇಕು ಮತ್ತು ಅದು ಉಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆದು ಮೂರು ತಿಂಗಳೊಳಗೆ ಆರೋಪ ಪಟ್ಟಿ ಹಾಕಬೇಕು. ಒಂದು ವರ್ಷದೊಳಗೆ ಶಿಕ್ಷೆ ಕೊಡುವಂತಹ ನಿರ್ಣಯವನ್ನು ನ್ಯಾಯಾಲಯ ತೆಗೆದುಕೊಂಡರೆ ಆಗ ಮೃತರ ಆತ್ಮಕ್ಕೆ ಶಾಂತಿ ಸಿಗಬಹುದು.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Fri, 6 June 25