ಹಿಂದೂ ಮಹಾಸಾಗರದ ತಳದ ಸಂಪತ್ತನ್ನು ಭಾರತ – ಆಸ್ಟ್ರೇಲಿಯಾಗಳು ಯಾಕೆ ರಕ್ಷಿಸಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2023 | 2:39 PM

ಯುರೋಪಿನಲ್ಲಿ ಈಗಾಗಲೇ ಸಮುದ್ರ ತಳದ ಬಳಕೆಗಾಗಿ ಚಕಮಕಿಗಳು ಆರಂಭವಾಗಿದ್ದು, ಅದು ಹಿಂದೂ ಮಹಾಸಾಗರದ ತನಕವೂ ವಿಸ್ತರಿಸುವ ಎಲ್ಲ ಸಾಧ್ಯತೆಗಳಿವೆ. ಇತ್ತೀಚಿನ ರಷ್ಯಾ - ಉಕ್ರೇನ್ ಯುದ್ಧವಂತೂ ಮಹತ್ವದ ಸಾಗರ ತಳದ ವ್ಯವಸ್ಥೆಯ ದುರ್ಬಲತೆಯನ್ನು ತೆರೆದಿಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾಗಳು ಈ ಸಾಗರ ತಳದ ಸಮರಕ್ಕಾಗಿ ಸಿದ್ಧಗೊಂಡು, ಹಿಂದೂ ಮಹಾಸಾಗರ ತಳದ ಬೆಲೆಬಾಳುವ ಆಸ್ತಿಗಳನ್ನು ಕಾಪಾಡಿಕೊಳ್ಳಲು ಜಂಟಿಯಾಗಿ ಪರಿಶ್ರಮಿಸಬೇಕಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಚಕಮಕಿ (ವಿಶಾಲವಾಗಿ ಗಮನಿಸಿದರೆ, ಇದು ರಷ್ಯಾ ಮತ್ತು ಯುರೋಪನ್ನು ಒಳಗೊಂಡ ಯುದ್ಧವಾಗಿದೆ) ತಕ್ಕಮಟ್ಟಿಗೆ ಈಗಾಗಲೇ ಸಾಗರ ತಳಕ್ಕೂ ವಿಸ್ತರಿಸಿದೆ.

ಹಿಂದೂ ಮಹಾಸಾಗರದ ತಳದ ಸಂಪತ್ತನ್ನು ಭಾರತ - ಆಸ್ಟ್ರೇಲಿಯಾಗಳು ಯಾಕೆ ರಕ್ಷಿಸಬೇಕು?
ಸಾಂದರ್ಭಿಕ ಚಿತ್ರ
Follow us on

ಯುರೋಪಿನಲ್ಲಿ ಈಗಾಗಲೇ ಸಮುದ್ರ ತಳದ ಬಳಕೆಗಾಗಿ ಚಕಮಕಿಗಳು ಆರಂಭವಾಗಿದ್ದು, ಅದು ಹಿಂದೂ ಮಹಾಸಾಗರ(Indian Ocean) ತನಕವೂ ವಿಸ್ತರಿಸುವ ಎಲ್ಲ ಸಾಧ್ಯತೆಗಳಿವೆ. ಇತ್ತೀಚಿನ ರಷ್ಯಾ – ಉಕ್ರೇನ್ ಯುದ್ಧವಂತೂ ಮಹತ್ವದ ಸಾಗರ ತಳದ ವ್ಯವಸ್ಥೆಯ ದುರ್ಬಲತೆಯನ್ನು ತೆರೆದಿಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾಗಳು ಈ ಸಾಗರ ತಳದ ಸಮರಕ್ಕಾಗಿ ಸಿದ್ಧಗೊಂಡು, ಹಿಂದೂ ಮಹಾಸಾಗರ ತಳದ ಬೆಲೆಬಾಳುವ ಆಸ್ತಿಗಳನ್ನು ಕಾಪಾಡಿಕೊಳ್ಳಲು ಜಂಟಿಯಾಗಿ ಪರಿಶ್ರಮಿಸಬೇಕಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಚಕಮಕಿ (ವಿಶಾಲವಾಗಿ ಗಮನಿಸಿದರೆ, ಇದು ರಷ್ಯಾ ಮತ್ತು ಯುರೋಪನ್ನು ಒಳಗೊಂಡ ಯುದ್ಧವಾಗಿದೆ) ತಕ್ಕಮಟ್ಟಿಗೆ ಈಗಾಗಲೇ ಸಾಗರ ತಳಕ್ಕೂ ವಿಸ್ತರಿಸಿದೆ. ರಷ್ಯಾ ರಹಸ್ಯವಾಗಿ, ಯಾವುದೇ ಅನುಮತಿಯಿಲ್ಲದೆ ಯುರೋಪಿನ ಮಹತ್ತರ ಸಾಗರತಳದ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಇನ್ನೊಂದು ತಂಟೆ ತಕರಾರು ಆರಂಭಿಸುವ ಪೂರ್ವ ಸಿದ್ಧತೆಗಳೂ ಆಗಿರಬಹುದು!

ನವೆಂಬರ್ 2022ರಲ್ಲಿ, ರಷ್ಯಾದ ಅಧಿಕೃತ ರಹಸ್ಯ ಸಮುದ್ರ ಸಂಶೋಧನಾ ಹಡಗಾದ ಅಡ್ಮಿರಲ್ ವ್ಲಾಡಿಮಿರ್ಸ್ಕಿ ಸ್ಕಾಟಿಷ್ ತೀರದಲ್ಲಿ, ಡೆನ್ಮಾರ್ಕ್ ಹಾಗೂ ಯುನೈಟೆಡ್ ಕಿಂಗ್‌ಡಮ್ ಬಳಿಯ ವಿಂಡ್ ಫಾರ್ಮ್‌ಗಳು ಮತ್ತು ತೈಲ ವಲಯದ ಬಳಿ ಕಾಣಿಸಿಕೊಂಡಿತ್ತು. ಪತ್ರಕರ್ತರು ಅದರಲ್ಲಿದ್ದವರನ್ನು ಮಾತನಾಡಿಸಲು ಪ್ರಯತ್ನ ನಡೆಸಿದಾಗ, ಮುಖಗವಸು ಹಾಕಿಕೊಂಡಿದ್ದ, ಕೈಯಲ್ಲಿ ರಷ್ಯನ್ ನಿರ್ಮಿತದಂತೆ ಕಾಣುವ ಬಂದೂಕುಗಳನ್ನು ಹಿಡಿದ, ಗುಂಡೇಟು ತಗುಲದಂತೆ ರಕ್ಷಣಾ ಕವಚಗಳನ್ನು ಹಾಕಿಕೊಂಡಿದ್ದ ಜನರು ಹಡಗಿನ ಡೆಕ್ ಮೇಲೆ ಕಾಣಿಸಿಕೊಂಡರು. ಒಂದಷ್ಟು ವಿಚಾರಣೆಗಳು ಈ ಹಡಗು ನಾರ್ತ್ ಸೀ ಬಳಿ ಸಮುದ್ರದಾಳದ ಶಕ್ತಿ ಸಂಪನ್ಮೂಲಗಳ ಮ್ಯಾಪಿಂಗ್ ನಡೆಸಲು ಬಂದಿದ್ದು, ಭವಿಷ್ಯದಲ್ಲಿ ಏನಾದರೂ ವಿಧ್ವಂಸಕ ಕಾರ್ಯ ನಡೆಸುವ ಉದ್ದೇಶ ಹೊಂದಿರಬಹುದು ಎಂಬ ಅನುಮಾನಗಳು ವ್ಯಕ್ತವಾದವು.

ಸೆಪ್ಟೆಂಬರ್ 2022ರಲ್ಲಿ, ನಾರ್ಡ್ ಸ್ಟ್ರೀಮ್ 1 ಮತ್ತು 2 ಪೈಪ್ ಲೈನ್‌ಗಳ ಅಡೆತಡೆ ಹಿಂದೆ ಸಾಗರ ತಳದ ವ್ಯವಸ್ಥೆಗಳನ್ನು ಹಾಳುಗೆಡವಿದ ಐತಿಹಾಸಿಕ ಘಟನೆಯನ್ನು ನೆನಪಿಸಿತ್ತು. ಸೆಪ್ಟೆಂಬರ್ 26, 2022ರಂದು ಮೂರು ಸ್ಫೋಟಗಳು ಸಂಭವಿಸಿ, ರಷ್ಯಾ ಮತ್ತು ಜರ್ಮನಿಯನ್ನು ಸಂಪರ್ಕಿಸುವ ನಾಲ್ಕರಲ್ಲಿ ಮೂರು ಪೈಪ್ ಲೈನ್‌ಗಳನ್ನು ಹಾಳುಗೆಡವಿತ್ತು. ಇದರ ಪರಿಣಾಮವಾಗಿ, ನಾರ್ಡ್ ಸ್ಟ್ರೀಮ್ ಈಗ ಕಾರ್ಯಾಚರಿಸುವುದನ್ನು ಸ್ಥಗಿತಗೊಳಿಸಿದೆ.‌ ಇದರಿಂದಾಗಿ ಯುರೋಪಿನ ಇಂಧನ ಬಿಕ್ಕಟ್ಟು ಮಿತಿಮೀರಿದೆ.

ಜನವರಿ 2022ರಲ್ಲಿ, ನಾರ್ವೆಯ ಸ್ವಾಲ್‌ಬರ್ಡ್ ಸ್ಯಾಟಲೈಟ್ ಸ್ಟೇಷನ್ ಅನ್ನು ಸಂಪರ್ಕಿಸುವ ಡೇಟಾ ಕೇಬಲ್ ರಹಸ್ಯಮಯವಾಗಿ ಹಾಳಾಗಿತ್ತು. ಆಗಸ್ಟ್ 2021ರಲ್ಲಿ, ಯಾಂತರ್ ಎನ್ನುವ ರಷ್ಯನ್ ಹಡಗು ಐರಿಷ್ ಕಡಲ ತೀರದಲ್ಲಿ ಕಾಣಿಸಿಕೊಂಡಿತ್ತು. ಈ ಹಡಗು ಐರ್ಲ್ಯಾಂಡ್ ಮತ್ತು ನಾರ್ವೇಗಳನ್ನು ಸಂಪರ್ಕಿಸುವ ಸೆಲ್ಟಿಕ್ ನಾರ್ಸ್ ಎಂಬ ಭವಿಷ್ಯದ ಕೇಬಲ್ ನಿರ್ಮಾಣದ ಸ್ಥಳದಲ್ಲೇ ಕಂಡುಬಂದಿತ್ತು. ಈ ಹಡಗು ಐರ್ಲೆಂಡ್ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಎಇಕನೆಕ್ಟ್-1 ಎಂಬ ಕೇಬಲ್ ಸಮೀಪದಲ್ಲಿ ಕಾಣಿಸಿಕೊಂಡಿತ್ತು.

ರಷ್ಯಾದ ಈ ಎಲ್ಲ ಚಟುವಟಿಕೆಗಳ ಹೊರತಾಗಿಯೂ, ಸಾಗರದಾಳದ ಈ ಪ್ರದೇಶದ ನಿಯಂತ್ರಣ ಪಡೆದುಕೊಳ್ಳಲು ಹಲವು ರಾಷ್ಟ್ರಗಳು ಸಕ್ರಿಯವಾಗಿ ಪ್ರಯತ್ನ ನಡೆಸುತ್ತಿವೆ. ಯುರೋಪಿನ ಹಲವಾರು ಮಿಲಿಟರಿ ಚಟುವಟಿಕೆಗಳು ವಿದ್ಯುತ್ ಕೇಬಲ್, ಸೆನ್ಸರ್‌ಗಳು ಮತ್ತು ಶಕ್ತಿ ಮೂಲಗಳು, ಡೇಟಾ ಕೇಬಲ್‌ನಂತಹ ಸಾಗರದಾಳದ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿವೆ. ಈ ಪ್ರದೇಶದಲ್ಲೇನಾದರೂ ಉದ್ವಿಗ್ನ ಪರಿಸ್ಥಿತಿ ತಲೆದೋರಿದರೆ, ಪ್ರಸ್ತುತ ಯುರೋಪಿನಲ್ಲಿ ನಡೆಯುತ್ತಿರುವ ಸಾಗರ ತಳದ ಮಿಲಿಟರಿ ಚಟುವಟಿಕೆಗಳು ಹಿಂದೂ ಮಹಾಸಾಗರ ಪ್ರಾಂತ್ಯಕ್ಕೆ ವಿಸ್ತರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಿಂದೂ ಮಹಾಸಾಗರದ ತಳದಲ್ಲಿ ಈ ಪ್ರದೇಶದ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ, ದೂರ ಪ್ರದೇಶಗಳಿಗೆ ಸಂವಹನ ವ್ಯವಸ್ಥೆ ಒದಗಿಸುವ ಕೇಬಲ್ ಜಾಲಗಳಿವೆ. ಅತ್ಯಂತ ನಿಬಿಡವಾದ ಹಡಗು ಸಂಚಾರದ ಮಾರ್ಗದಲ್ಲಿ ಮಲಾಕಾ ಜಲಸಂಧಿ, ಬಾಬ್ ಎಲ್ – ಮಂದೇಬ್ ಜಲಸಂಧಿಯಂತಹ ಪ್ರಮುಖ ತಾಣಗಳಿವೆಯೋ, ಅದೇ ರೀತಿ ಈ ಕೇಬಲ್ ಜಾಲವೂ ಇಂತಹ ಪ್ರಮುಖ ಸ್ಥಳಗಳಲ್ಲಿ ಸಂಧಿಸುತ್ತವೆ. ಆದ್ದರಿಂದ ಇವುಗಳೂ ದಾಳಿಯ ಸಂಭಾವ್ಯ ಗುರಿಗಳೂ ಆಗಿವೆ. ಇವುಗಳು ಸಾಗರ ತಳದಲ್ಲಿದ್ದು, ಜಗತ್ತಿನ ವಿವಿಧ ಭಾಗಗಳಿಗೆ ಅಂತರ್ಜಾಲ, ಟೆಲಿಕಮ್ಯುನಿಕೇಶನ್ ಸಂಕೇತಗಳು ಸೇರಿದಂತೆ ಮಾಹಿತಿ ರವಾನಿಸಲು ನೆರವಾಗುತ್ತವೆ. ಆ ಮೂಲಕ ಜಾಗತಿಕ ಸಂವಹನ ಮತ್ತು ಮಾಹಿತಿ ರವಾನೆಗೆ ಪೂರಕವಾಗಿವೆ.

ಹಿಂದೂ ಮಹಾಸಾಗರದಲ್ಲಿರುವ ಸಬ್ ಸೀ ಪೈಪ್ ಲೈನ್‌ಗಳು ಭಾರತದ ಪಾಲಿಗೆ ಅತ್ಯಮೂಲ್ಯವಾಗಿವೆ. ಭಾರತದ ಆಯಿಲ್ ಆ್ಯಂಡ್ ನ್ಯಾಚುರಲ್‌ ಗ್ಯಾಸ್ ಕಾರ್ಪೋರೇಷನ್ (ಒಎನ್‌ಜಿಸಿ) ಈಗಾಗಲೇ ಭಾರತದ ಪಶ್ಚಿಮ ತೀರದಲ್ಲಿ ಕಿಲೋಮೀಟರ್‌ಗಟ್ಟಲೆ ದೂರದ ಪೈಪ್‌ಲೈನ್ ವ್ಯವಸ್ಥೆ ಹೊಂದಿದ್ದು, ಮುಂಬೈ ಹೈ, ನೀಲಮ್, ಹೀರಾ ಮತ್ತು ಬಸ್ಸೇನ್ ನಂತಹ ಪ್ರಮುಖ ತೈಲಾಗಾರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಇರಾನ್ ಈಗಾಗಲೇ ನೀರಿನಾಳದ ನೈಸರ್ಗಿಕ ಅನಿಲ ಪೈಪ್ ಲೈನ್ ವಿಸ್ತರಿಸಿ, ಅದನ್ನು ಒಮಾನ್ ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸಲು ಆಲೋಚಿಸುತ್ತಿದೆ. ಈ ಪೈಪ್ ಲೈನ್ ಗುಜರಾತಿನ ಪೋರಬಂದರಿಗೆ ಸಂಪರ್ಕ ಸಾಧಿಸಲಿದೆ. ಅದರೊಡನೆ, ಇನ್ನೂ 5 ಬಿಲಿಯನ್ ಡಾಲರ್ ಮೊತ್ತದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತದ ನಡುವೆ ಇನ್ನೊಂದು ಜಲಾಂತರ್ಗತ ಪೈಪ್ ಲೈನ್ ಪ್ರಸ್ತಾವನೆಯಾಗಿದ್ದು, ಅದೂ ಗುಜರಾತನ್ನು ಸಂಪರ್ಕಿಸಲಿದೆ.

ಆಸ್ಟ್ರೇಲಿಯಾ ಹಿಂದೂ ಮಹಾಸಾಗರದ ವಾಯುವ್ಯ ಪ್ರದೇಶದಲ್ಲಿ ಸಾಕಷ್ಟು ಪೈಪ್ ಲೈನ್‌ಗಳನ್ನು ಹೊಂದಿದೆ. ಈ ಪೈಪ್ ಲೈನ್‌ಗಳು ಆಸ್ಟ್ರೇಲಿಯಾದ ಮುಖ್ಯಭೂಮಿಗೆ ಅನಿಲ ಪೂರೈಕೆ ನಡೆಸುತ್ತದೆ. ಆದರೆ, ಆಸ್ಟ್ರೇಲಿಯಾ ಈಗಾಗಲೇ ತನ್ನ ಕರಾವಳಿಯಾದ್ಯಂತ ಶಕ್ತಿ ಉತ್ಪಾದನಾ ವ್ಯವಸ್ಥೆಗಳನ್ನು ನಿರ್ಮಿಸುತ್ತಿದೆ. ಇದರಲ್ಲಿ ವಾಯು ಯಂತ್ರಗಳು, ಸೋಲಾರ್ ಕ್ಷೇತ್ರಗಳು, ಸಾಗರದಾಳದ ನಿರ್ಮಾಣಗಳೂ ಸೇರಿವೆ. ಹಿಂದೂ ಮಹಾಸಾಗರದಲ್ಲಿಯೂ ಆಸ್ಟ್ರೇಲಿಯಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸಾಗರದಾಳದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಸ ಅಪಾಯಗಳನ್ನು ಎದುರಿಸುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾ ಜಗತ್ತಿನ ಅತಿ ದೀರ್ಘ ಸಾಗರದಾಳದ ಹೈ ವೋಲ್ಟೇಜ್ ಕೇಬಲ್ ಜಾಲವಾದ ಸಬ್ ಕೇಬಲ್ ಆಸ್ಟ್ರೇಲಿಯಾ – ಏಷ್ಯಾ ಪವರ್ ಲಿಂಕ್ ಮೂಲಕ ಸಿಂಗಾಪುರಕ್ಕೆ ಸೌರ ವಿದ್ಯುತ್ ಪೂರೈಕೆ ಮಾಡಲಿದೆ.

ಹಿಂದೂ ಮಹಾಸಾಗರದಲ್ಲಿ ಸಾಗರದಾಳದ ಗಣಿಗಾರಿಕೆಗೆ ಅನ್ವೇಷಣೆಗಳು ನಡೆಯುತ್ತಿದ್ದು, ಅಲ್ಲಿ ಹಲವಾರು ಪಾಲಿಮೆಟಾಲಿಕ್ ನಾಡ್ಯುಲ್‌ಗಳಿವೆ. ಈ ರೀತಿಯ ಗಣಿಗಾರಿಕೆಗಳು ಸಾಗರ ತಳದ ಚಟುವಟಿಕೆಗಳಿಗೆ ಹೊಸ ತಂಡಗಳು, ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಪರಿಚಯಿಸುತ್ತವೆ. ಪಾಲಿಮೆಟಾಲಿಕ್ ನಾಡ್ಯುಲ್‌ಗಳೆಂದರೆ ಸಣ್ಣದಾದ, ಬಂಡೆಗಳಂತಹ ರಚನೆಗಳಾಗಿದ್ದು, ಸಾಗರದ ತಳದಲ್ಲಿರುತ್ತವೆ. ಇವುಗಳು ಸಾಕಷ್ಟು ಮಹತ್ವದ ಖನಿಜಗಳನ್ನು ಹೊಂದಿದ್ದು, ನಿಕ್ಕೆಲ್, ತಾಮ್ರ, ಕೋಬಾಲ್ಟ್‌ನಂತಹ ಲೋಹಗಳನ್ನು ಹೊಂದಿವೆ.

ಇದನ್ನೂ ಓದಿ: ಆಳ ಸಮುದ್ರದ ಅನ್ವೇಷಣೆ: ಸಾಗರ ರಹಸ್ಯಗಳ ಅನಾವರಣಕ್ಕೆ ಸನ್ನದ್ಧವಾದ ಭಾರತದ ಮತ್ಸ್ಯ-6000

ಆಸ್ಟ್ರೇಲಿಯಾ ಮತ್ತು ಭಾರತ ಹಿಂದೂ ಮಹಾಸಾಗರದ ತಳದ ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ. ಸಮುದ್ರ ತಳದ ಯುದ್ಧಗಳ ಸವಾಲುಗಳನ್ನು ಎದುರಿಸಲು, ಆಸ್ಟ್ರೇಲಿಯಾ ಮತ್ತು ಭಾರತದ ಕಾರ್ಯತಂತ್ರಗಳಿಗೆ ಸೂಕ್ತವಾಗುವಂತೆ ಚರ್ಚೆಗಳು ನಡೆಯಿತ್ತಿವೆ. ಅವುಗಳಲ್ಲಿ ಸಮುದ್ರ ತಳದ ಯುದ್ಧಗಳನ್ನು ಎದುರಿಸುವುದು, ಇವಕ್ಕೆ ಅವಶ್ಯಕವಾದ ಉಪಕರಣಗಳು ಮತ್ತು ತಂತ್ರಜ್ಞಾನಗಳು (ಹಡಗುಗಳು, ಮಾನವ ರಹಿತ ನೀರಿನಾಳದ ವಾಹನಗಳು, ಸೆನ್ಸರ್‌ಗಳು ಮತ್ತಿತರ ಉಪಕರಣಗಳು) ಹಾಗೂ ಮಾನವ ಸಂಪನ್ಮೂಲಗಳು ಮತ್ತು ಅವಶ್ಯಕ ಸಹಯೋಗಗಳನ್ನು ಸ್ಥಾಪಿಸುವ ಕುರಿತ ಚರ್ಚೆಗಳು ನಡೆಯಬೇಕಿದೆ. ಫ್ರಾನ್ಸ್ ಈಗಾಗಲೇ 2022ರಲ್ಲಿ ತನ್ನ ಸಾಗರ ತಳದ ಯುದ್ಧ ತಂತ್ರವನ್ನು ಹಂಚಿಕೊಂಡಿದೆ. ಇದು ಒಂದು ಅನುಕೂಲಕರ ನೀಲಿ ನಕಾಶೆಯಾಗಿ ಉಳಿಯಲಿದೆ.

ಹಿಂದೂ ಮಹಾಸಾಗರ ಹಲವಾರು ಸಾಗರತೀರದ ಮತ್ತು ದ್ವೀಪ ರಾಷ್ಟ್ರಗಳಿಗೆ ಮನೆಯಾಗಿದೆ. ಆದರೆ ಅವೆಲ್ಲ ರಾಷ್ಟ್ರಗಳಿಗೂ ಆಧುನಿಕ ನೌಕಾಪಡೆಗಳು ಮತ್ತು ಕರಾವಳಿ ಕಾವಲು ಪಡೆಗಳ ಸೌಲಭ್ಯವಿಲ್ಲ. ಈ ಪ್ರದೇಶಗಳ ರಕ್ಷಣೆಗೆ ಸಂಬಂಧಿಸಿದಂತೆ, ಜವಾಬ್ದಾರಿ ವಹಿಸಿಕೊಳ್ಳಲು ನ್ಯಾಟೋದ ರೀತಿಯ ಒಂದು ಕೇಂದ್ರೀಯ ಗುಂಪಿನ ಅಸ್ತಿತ್ವವಿಲ್ಲ. ಆದರೆ ಭಾರತ ಮತ್ತು ಆಸ್ಟ್ರೇಲಿಯಾಗಳು ಶಕ್ತಿಶಾಲಿ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳನ್ನು ಹೊಂದಿರುವುದರಿಂದ, ಇವೆರಡು ರಾಷ್ಟ್ರಗಳು ಕಡಿಮೆ ಶಕ್ತಿಶಾಲಿ ರಾಷ್ಟ್ರಗಳ ನಾಯಕತ್ವ ವಹಿಸಿ ಕಾರ್ಯಾಚರಿಸಬೇಕಿದೆ. ಅವುಗಳು ಇಂತಹ ದೇಶಗಳೊಡನೆ ಕಾರ್ಯಾಚರಿಸಿ, ಸಮುದ್ರ ತಳದ ವ್ಯವಸ್ಥೆಗಳನ್ನು ಗಮನಿಸಬೇಕಿದೆ. ಆ ಮೂಲಕ ಸಾಗರ ತಳಕ್ಕೆ ತೊಂದರೆಗಳಾಗುವುದನ್ನು ತಪ್ಪಿಸಲು ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಂತಹ ಸಹಕಾರ ಹಲವು ಆಯಾಮಗಳನ್ನು ಒಳಗೊಂಡಿದ್ದು, ಅದರಲ್ಲಿ ಸಾಗರ ತಳದ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸುವುದು, ಸಾಗರತಳದ ರಕ್ಷಣೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಕ್ರಮಗಳು, ಜಂಟಿ ಮಿಲಿಟರಿ ಯೋಜನೆಗಳು ಮತ್ತು ಗಣಿಗಾರಿಕೆಗಳು ಸೇರಿವೆ.

ಮೇ 2023ರಲ್ಲಿ ಕ್ವಾಡ್ರಿಲಾಟರಲ್ ಸೆಕ್ಯುರಿಟಿ ಡಯಲಾಗ್ (ಕ್ವಾಡ್) ಒಕ್ಕೂಟ ಕ್ವಾಡ್ ಪಾರ್ಟ್‌ನರ್‌ಶಿಪ್ ಫಾರ್ ಕೇಬಲ್ ಕನೆಕ್ಟಿವಿಟಿ ಆ್ಯಂಡ್ ರೆಸಿಲಿಯೆನ್ಸ್ ಎಂಬ ವ್ಯವಸ್ಥೆಯನ್ನು ಸ್ಥಾಪಿಸುವ ತನ್ನ ಆಸಕ್ತಿಯನ್ನು ಘೋಷಿಸಿತು. ಸರಳವಾಗಿ ಹೇಳುವುದಾದರೆ, ವಿವಿಧ ರೀತಿಯ ಅಪಾಯಗಳು, ಅಡೆತಡೆಗಳು ಎದುರಾದರೂ ಕೇಬಲ್ ವ್ಯವಸ್ಥೆ ಕಾರ್ಯಾಚರಣೆ ಮುಂದುವರಿಯುವಂತೆ ಮಾಡುವ ಕ್ರಮವಾಗಿದೆ. ಆಸ್ಟ್ರೇಲಿಯಾ ಇದರ ಅಂಗವಾಗಿ ಇಂಡೋ – ಫೆಸಿಫಿಕ್ ಕೇಬಲ್ ಕನೆಕ್ಟಿವಿಟಿ ಆ್ಯಂಡ್ ರೆಸಿಲಿಯೆನ್ಸ್ ಪ್ರೋಗ್ರಾಮ್ ಆರಂಭಿಸಲು ಉದ್ದೇಶಿಸಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಇದಕ್ಕೆ ತನ್ನ 5 ಮಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಕೇಬಲ್ಸ್ ಪ್ರೋಗ್ರಾಮ್ ಮೂಲಕ ತಾಂತ್ರಿಕ ಬೆಂಬಲ ಒದಗಿಸಲು ಬದ್ಧವಾಗಿದೆ.

ಇದನ್ನು ಓದಿ: ಭಾರತದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಮಾನವರನ್ನು ಬಾಹ್ಯಾಕಾಶಕ್ಕೊಯ್ಯಲು ಸಿದ್ಧವಾಗುತ್ತಿದೆ ಭಾರತ

ಈ ಕಾರ್ಯಕ್ರಮ ಕೇವಲ ಸಂವಹನ ಕೇಬಲ್‌ಗಳಿಗೆ ಸಂಬಂಧಿಸಿದೆಯೇ, ಅಥವಾ ಇತರ ಸಮುದ್ರ ತಳದ ವ್ಯವಸ್ಥೆಗಳನ್ನು ಒಳಗೊಂಡಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಯತ್ನಗಳು ಕೇವಲ ಸಂವಹನ ಕೇಬಲ್‌ಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ, ಸಾಗರ ತಳದ ಸುರಕ್ಷತೆಯ ವಿವಿಧ ವಿಚಾರಗಳನ್ನು ಒಳಗೊಳ್ಳಬೇಕಿದೆ. ಕ್ವಾಡ್ ಒಂದು ಸಹಯೋಗ ಹೊಂದುವ ವೇದಿಕೆಯಾಗಿದ್ದು, ಆಸ್ಟ್ರೇಲಿಯಾ ಮತ್ತು ಭಾರತಗಳು ಹಿಂದೂ ಮಹಾಸಾಗರದ ನೆರೆಹೊರೆ ರಾಷ್ಟ್ರಗಳೊಡನೆ ಕಾರ್ಯಾಚರಿಸಬೇಕಿದೆ.

ಭಾರತ ಮತ್ತು ಆಸ್ಟ್ರೇಲಿಯಾಗಳು ಯುರೋಪಿನಲ್ಲಿ ಸಾಗರ ತಳಕ್ಕೆ ಸಂಬಂಧಿಸಿದ ಅಭಿವೃದ್ಧಿಗಳನ್ನು ಗಮನಿಸುವ ಅವಶ್ಯಕತೆಯಿದೆ. ಯಾಕೆಂದರೆ, ಅಲ್ಲಿನ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ನಮ್ಮ ಪ್ರದೇಶದಲ್ಲಿ ಎದುರಾಗಬಹುದಾದ ವಿದ್ಯಮಾನಗಳ ಪೂರ್ವ ಸಂಕೇತ ಒದಗಿಸುತ್ತವೆ. ಹಿಂದೂ ಮಹಾಸಾಗರದ ಪ್ರಮುಖ ನೌಕಾಶಕ್ತಿಗಳಾಗಿರುವ ಭಾರತ ಮತ್ತು ಆಸ್ಟ್ರೇಲಿಯಾಗಳು ಈ ಸಾಗರ ತಳದ ಆಸ್ತಿಗಳ ರಕ್ಷಣೆಗಾಗಿ ಜೊತೆಯಾಗಿ ಕಾರ್ಯಾಚರಿಸುವ ಅವಶ್ಯಕತೆಯಿದೆ. ಹಿಂದೂ ಮಹಾಸಾಗರದ ತಳದಲ್ಲಿ ಹಲವಾರು ಮಹತ್ವದ, ಬೆಲೆಬಾಳುವ ವ್ಯವಸ್ಥೆಗಳಿದ್ದು, ಅವುಗಳ ರಕ್ಷಣೆಗೆ ಜಂಟಿ ಸಹಕಾರ ಅತ್ಯವಶ್ಯಕವಾಗಿದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ