Updated on: Mar 02, 2023 | 5:28 PM
ಖ್ಯಾತ ನಿರ್ದೇಶಕ ಮಂಸೋರೆ ಅವರ ಬಹುನಿರೀಕ್ಷಿತ ‘19.20.21’ ಸಿನಿಮಾ ಮಾರ್ಚ್ 3ರಂದು ತೆರೆಗೆ ಬರುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ನಡೆದ ರಿಯಲ್ ಘಟನೆಗಳ ವಿವರ ಈ ಚಿತ್ರದಲ್ಲಿದೆ.
2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರ ಕಾನೂನು ಹೋರಾಟದ ಕಥೆಯೇ ‘19.20.21’ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ-ಮಗನನ್ನು ಬಂಧಿಸಲಾಗಿತ್ತು.
ಬಂಧನಕ್ಕೆ ಒಳಗಾದ ಸಮಯದಲ್ಲಿ ವಿಠಲ್ ಅವರು ಮಂಗಳೂರಿನ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.
ವಿಠಲ್ ಅವರು ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. 2021ರಲ್ಲಿ ಅವರು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ಸಿನಿಮಾದಲ್ಲಿ ವಿಠಲ್ ಮಲೆಕುಡಿಯ ಅವರ ಪಾತ್ರವನ್ನು ರಂಗಭೂಮಿ ಕಲಾವಿದ ಶೃಂಗ ಬಿ.ವಿ. ನಿಭಾಯಿಸಿದ್ದಾರೆ.
ದೇವರಾಜ್ ಆರ್. ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ. ಶೃಂಗ ಬಿ.ವಿ. ಜೊತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಮುಂತಾದವರು ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.