Updated on: Apr 09, 2022 | 3:39 PM
ಖ್ಯಾತ ನಟ ಶ್ರೀಮಹದೇವ್ ಹಾಗೂ ನಟಿ ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಜೂನ್ 3ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಎಲ್ಲವೂ ಪ್ಲ್ಯಾನ್ ಪ್ರಕಾರವೇ ನಡೆದಿದ್ದರೆ ಫೆಬ್ರವರಿ ತಿಂಗಳಲ್ಲೇ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಈಗ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.
ಜೂನ್ 3ರಂದು ರಾಜ್ಯಾದ್ಯಂತ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾ ರಿಲೀಸ್ ಆಗಲಿದೆ. ‘ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ / ನಟ ಅಭಿಷೇಕ್ ಅವರು ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾಗೆ ಈಗ ನಿರ್ದೇಶನ ಮಾಡಿದ್ದಾರೆ.
ನಿರ್ದೇಶನದ ಮಾಡುವುದರ ಜೊತೆಗೆ ಅಭಿಷೇಕ್ ಅವರು ಒಂದು ಪಾತ್ರವನ್ನೂ ನಿಭಾಯಿಸಿದ್ದಾರೆ. ಯು.ಎಸ್. ನಾಗೇಶ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರದ್ಯೋತನ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ಹಾಗೂ ಉದಯ್ ಲೀಲಾ ಅವರು ಛಾಯಾಗ್ರಹಣ ಮಾಡಿದ್ದಾರೆ.
ಅದಿತಿ ಪ್ರಭುದೇವ, ಶ್ರಿಮಹದೇವ್, ಅಭಿಷೇಕ್ ಜೊತೆಗೆ ಬಿಗ್‌ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಬ್ರೋ ಗೌಡ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ತಿಂಗಳ ಹಿಂದೆ ರಿಲೀಸ್ ಆಗಿದ್ದ ಟ್ರೇಲರ್ ಸಖತ್ ಗಮನ ಸೆಳೆದಿದೆ.