
ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಅಲ್ಲು ಅರ್ಜುನ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಬಾಲನಟನಾಗಿ. 1985ರಲ್ಲಿ ‘ವಿಜೇತ’ ಸಿನಿಮಾದಲ್ಲಿ ನಟಿಸಿದಾಗ ಅಲ್ಲು ಅರ್ಜುನ್ ಅವರಿಗೆ ಕೇವಲ 4 ವರ್ಷ. ಬಳಿಕ ಅವರು ‘ಸ್ವಾತಿ ಮುತ್ಯಂ’ ಚಿತ್ರದಲ್ಲೂ ನಟಿಸಿದರು.

ಚಿರಂಜೀವಿ ನಟನೆಯ ‘ಡ್ಯಾಡಿ’ ಸಿನಿಮಾ 2001ರಲ್ಲಿ ತೆರೆಕಂಡಿತು. ಆ ಚಿತ್ರದ ಒಂದು ದೃಶ್ಯದಲ್ಲಿ ಅಲ್ಲು ಅರ್ಜುನ್ ಅವರು ಕಾಣಿಸಿಕೊಂಡಿದ್ದರು. ಸೂಪರ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಅವರು ಗಮನ ಸೆಳೆದಿದ್ದರು. ಅವರು ಇಂದು ಟಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಆಗಿ ಬೆಳೆದಿದ್ದಾರೆ.

ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿದ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಹೆಸರು ಕೂಡ ಇದೆ. 2014ರಿಂದ ಈಚೆಗೆ ಹಲವು ಬಾರಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರು ಭಾರತದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ 100 ಕೋಟಿ ರೂಪಾಯಿ ಗಳಿಸಿ ಬೀಗಿತು. ಅದಕ್ಕೂ ಮುನ್ನ ಅವರ ಕೆಲವು ಸಿನಿಮಾಗಳು ಈ ಸಾಧನೆ ಮಾಡಿದ್ದವು. 2014ರಲ್ಲಿ ‘ರೇಸು ಗುರ‍್ರಂ’ ಕೂಡ ಶತಕೋಟಿ ರೂಪಾಯಿ ಗಳಿಸಿತ್ತು. ‘ಸರೈನೋಡು’, ‘ದುವ್ವಡ ಜಗನ್ನಾಥಂ’ ಹಾಗೂ ‘ಅಲಾ ವೈಕುಂಟಪುರಮುಲೋ’ ಸಿನಿಮಾಗಳು ಕೂಡ 100 ಕೋಟಿ ರೂ. ಕಲೆಕ್ಷನ್ ಮಾಡಿದ್ದವು.

ತಮ್ಮ ಅತ್ಯುತ್ತಮ ನಟನೆಯಿಂದ ಅಲ್ಲು ಅರ್ಜುನ್ ಅವರು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 5 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ 5 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ.