ಆಸ್ಟ್ರೇಲಿಯನ್ ಓಪನ್‌ನಲ್ಲಿ ಒಂದೊಂದು ಸುತ್ತಿನಲ್ಲೂ ಒಂದೊಂದು ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ. ಈ ಹಿಂದೆ ಟೆನಿಸ್ ಲೆಜೆಂಡ್ ರಾಫೆಲ್ ನಡಾಲ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರೆ, ಇದೀಗ ಮಾಜಿ ವಿಶ್ವ ನಂ.1 ಮತ್ತು ಏಳನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮೂರನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪಂದ್ಯಾವಳಿಯ 2021 ಮತ್ತು 2022 ಆವೃತ್ತಿಗಳಲ್ಲಿ ರನ್ನರ್ ಅಪ್ ಆಗಿದ್ದ ಮೆಡ್ವೆಡೆವ್ ಅವರನ್ನು ಅಮೇರಿಕಾದ 29 ನೇ ಶ್ರೇಯಾಂಕದ ಸೆಬಾಸ್ಟಿಯನ್ ಕೊರ್ಡಾ 7-6 (9-7), 6-4, 7-6 (7-1) ನೇರ ಸೆಟ್‌ಳಿಂದ ಸೋಲಿಸಿ ಟೂರ್ನಿಯಿಂದ ಹೊರ ಹಾಕಿದ್ದಾರೆ.
ಮೆಡ್ವೆಡೆವ್ ಅವರನ್ನು ಸೋಲಿಸಿ 16 ರ ರೌಂಡ್ಗೆ ಎಂಟ್ರಿಕೊಟ್ಟಿರುವ ಸೆಬಾಸ್ಟಿಯನ್ ಕೊರ್ಡಾ 2018 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜೂನಿಯರ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮುಂದಿನ ಸುತ್ತಿನಲ್ಲಿ ಅವರು ಪೋಲಿಷ್ 10 ನೇ ಶ್ರೇಯಾಂಕದ ಹಬರ್ಟ್ ಹರ್ಕಾಜ್ ಅವರನ್ನು ಎದುರಿಸಲಿದ್ದಾರೆ.
ಎರಡು ವರ್ಷಗಳ ಹಿಂದೆ ಯುಎಸ್ ಓಪನ್ ಗೆದ್ದಿದ್ದ ಮೆಡ್ವೆಡೆವ್, 2021 ರಆಸ್ಟ್ರೇಲಿಯಾ ಓಪನ್ ಫೈನಲ್ನಲ್ಲಿ ನೊವಾಕ್ ಜೊಕೊವಿಕ್‌ಗೆ ವಿರುದ್ಧ ಸೋತಿದ್ದರೆ, 2022 ರಲ್ಲಿ ರಾಫೆಲ್ ನಡಾಲ್ ವಿರುದ್ಧ ಸೋತು ಪ್ರಶಸ್ತಿ ವಂಚಿತರಾಗಿದ್ದರು.
2022ರಫೆಬ್ರವಯಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಮೆಡ್ವೆಡೆವ್, 2004 ರಲ್ಲಿ ಆಂಡಿ ರೊಡ್ಡಿಕ್ ನಂತರ ATP ಶ್ರೇಯಾಂಕದಲ್ಲಿ ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮುರ್ರೆಯನ್ನು ಹೊರತುಪಡಿಸಿ ನಂ.1 ಸ್ಥಾನಕ್ಕೇರಿದ ಮೊದಲ ಟೆನಿಸ್ ಆಟಗಾರ ಎನಿಸಿಕೊಂಡಿದ್ದರು.