ಜೋಳ ಬೆಳೆಯುವ ನೆಲದಲ್ಲಿ ಸೇಬು ಬೆಳೆದ ರೈತ: ನಕ್ಕವರ ಮುಂದೆ ಲಕ್ಷ ಲಕ್ಷ ಹಣ ಎಣಿಸಿದ
ಬಾಗಲಕೋಟೆ ಜಿಲ್ಲೆಯ ರೈತ ಶ್ರೀಶೈಲ್ ತೇಲಿ ಅವರು ಕಬ್ಬು ಬೆಳೆಯುವ ಪ್ರದೇಶದಲ್ಲಿ ಸೇಬು ಬೆಳೆಯುವ ಮೂಲಕ ಅಪಾರ ಯಶಸ್ಸು ಕಂಡಿದ್ದಾರೆ. ಏಳು ಎಕರೆ ಜಮೀನಿನಲ್ಲಿ ಸಾವಯವ ವಿಧಾನದಿಂದ ಸೇಬು ಬೆಳೆದು ಅವರು ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ. ಈ ಯಶಸ್ಸಿನಿಂದ ಇತರ ರೈತರಿಗೆ ಸ್ಪೂರ್ತಿಯಾಗಿದ್ದಾರೆ ಮತ್ತು ಸೇಬು ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
Updated on:Mar 29, 2025 | 1:54 PM

ಬಾಗಲಕೋಟೆ ನೂರಕ್ಕೆ 80 ರಷ್ಟು ಕಬ್ಬು ಬೆಳೆಯುವ ಪ್ರದೇಶ. ಕಬ್ಬು ಇಲ್ಲಿನ ರೈತರ ಪ್ರಮುಖ ಬೆಳೆಯಾಗಿದೆ. ಕಬ್ಬು ಜೋಳ, ಗೋಧಿ ಗೋವಿನ ಜೋಳ, ದಾಳಿಂಬೆ ಮತ್ತು ಚಿಕ್ಕು ಬಿಟ್ಟು ಬೇರೆ ಏನು ಬೆಳೆಯುವುದಿಲ್ಲ ಎಂಬುವುದು ರೈತರ ನಂಬಿಕೆ. ಆದರೆ ಇಂತಹ ನೆಲದಲ್ಲಿ ಓರ್ವ ರೈತ ಸೇಬು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಶ್ರೀಶೈಲ್ ತೇಲಿ ಅವರು ಸೇಬು ಬೆಳೆಯುವ ಮೂಲಕ ಉಳಿದ ರೈತರ ಹುಬ್ಬೇರುವಂತೆ ಮಾಡಿದ್ದಾರೆ. ಶ್ರೀಶೈಲ್ ತಮ್ಮ ಏಳು ಎಕರೆ ಜಮೀನಿನಲ್ಲಿ ಸೇಬು ಬೆಳೆದು ಲಾಭ ಪಡೆಯುತ್ತಿದ್ದಾರೆ. ಕಬ್ಬು ಹೆಚ್ಚಾಗಿ ಬೆಳೆಯುವ ಈ ನಾಡಲ್ಲಿ ಸಮೃದ್ಧವಾಗಿ ಸೇಬು ಬೆಳೆದು ಜನರಿಗೆ ಸೇಬಿನ ಸಿಹಿ ಹಂಚುತ್ತಿದ್ದಾರೆ.

ಎರಡು ವರ್ಷದ ಹಿಂದೆ ಸೇಬು ನಾಟಿ ಮಾಡಿದ್ದು, ಈ ವರ್ಷ ಎಕರೆಗೆ ಖರ್ಚುವೆಚ್ಚ ಎಲ್ಲ ತೆಗೆದು ಮೂರುವರೆ ಲಕ್ಷ ಆದಾಯ ಪಡೆದಿದ್ದಾರೆ. ಬಾಗಲಕೋಟೆ , ಬೆಳಗಾವಿ, ವಿಜಯಪುರದ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈ ತುಂಬ ಆದಾಯ ಪಡೆಯುತ್ತಿದ್ದಾರೆ.

ಶ್ರೀಶೈಲ್ ತೇಲಿ ಮೊದಲು ದ್ರಾಕ್ಷಿ ಬೆಳೆಯುತ್ತಿದ್ದರು. ಅದು ಇತ್ತೀಚೆಗೆ ಲಾಸ್ ಆಗಿ ಮುಂದೆ ಏನು ಬೆಳೆಯಬೇಕು ಎಂಬ ವಿಚಾರದಲ್ಲಿ ಇದ್ದಾಗ ಹೊಳೆದದ್ದು ಸೇಬು. ಯಾಕೆ ನಮ್ಮ ಜಮೀನಿನಲ್ಲಿ ಸೇಬು ಬೆಳೆಯಬಾರದು ಎಂದು ಕೆಲ ಗೆಳೆಯರನ್ನು ಪ್ರಶ್ನೆ ಮಾಡಿದಾಗ ಆಪ್ತ ಗೆಳೆಯರು ಪ್ರೋತ್ಸಾಹ ನೀಡಿದರು. ನಂತರ ಮಹಾರಾಷ್ಟ್ರದ ಶಿರಡಿಯಿಂದ 150 ರೂ.ಗೆ ಒಂದರಂತೆ ಒಟ್ಟು 2600 ಸೇಬಿನ ಗಿಡ ತಂದು ನೆಟ್ಟಿದ್ದಾರೆ.

ಹರ್ಮನ್-99, ಗೋಲ್ಡನ್ ಡಾರ್ಸೆಟ್, ಅಣ್ಣಾ ತಳಿಯ ಸೇಬು ಬೆಳೆದಿದ್ದಾರೆ. ಅದು ಸಾವಯವ ಪದ್ದತಿಯಲ್ಲಿ ಎಂಬುದು ವಿಶೇಷವಾಗಿದೆ. ಹೂ ಬಿಡುವ ವೇಳೆ ಸ್ವಲ್ಪ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದನ್ನು, ಬಿಟ್ಟರೆ ಮತ್ತೆ ಕೆಮಿಕಲ್ ಸ್ಪರ್ಷ ನೀಡಿಲ್ಲ. ಇನ್ನು, ಯಾವುದೇ ಕಾಶ್ಮೀರಿ ಆ್ಯಪಲ್ಗೂ ಕಡಿಮೆಯಿಲ್ಲದ ರುಚಿ ಬಣ್ಣದಿಂದ ಸೇಬು ಕಂಗೊಳಿಸುತ್ತಿವೆ.

ಸೇಬು ಬೆಳೆಯುವಾಗ ಇಲ್ಲಿ ಸೇಬು ಬೆಳೆಯುತ್ತಾ, ಈತನಿಗೆ ತಲೆ ಕೆಟ್ಟಿದೆ ಎಂದು ನಗಾಡಿದ್ದ ರೈತರೇ ಈಗ ಶಾಕ್ ಆಗಿದ್ದಾರೆ. ಅದೇ ರೈತರು ಶ್ರೀಶೈಲ ಅವರ ಜಮೀನಿಗೆ ಬಂದು ಸೇಬು ಬೆಳೆಯ ಬಗ್ಗೆ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಶ್ರೀಶೈಲ ಅವರ ಸೇಬು ಕೃಷಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Published On - 11:02 pm, Fri, 28 March 25



















