- Kannada News Photo gallery Bengaluru: Hell for motorists due to potholes, outrage against BBMP, Kannada news
ಬೆಂಗಳೂರು: ಗುಂಡಿ ಗಂಡಾಂತರದಿಂದ ವಾಹನ ಸವಾರರಿಗೆ ನರಕ, ಬಿಬಿಎಂಪಿ ವಿರುದ್ಧ ಆಕ್ರೋಶ
ಬೆಂಗಳೂರು, ಆಗಸ್ಟ್ 6: ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ನದಿಯಂತಾಗಿದ್ದವು. ಅಂಡರ್ಪಾಸ್ಗಳಲ್ಲಿ ಮಂಡಿಯುದ್ದ ನೀರು ನಿಂತಿತ್ತು. ಕಿಲೋಮೀಟರ್ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮರಗಳು ರಸ್ತೆಗಳ ಮೇಲೆ ಉರುಳಿದ್ದವು. ಮಳೆಯಿಂದ ಇಷ್ಟೆಲ್ಲಾ ಅವಾಂತರ ಆಗಿರುವ ಮಧ್ಯೆ ಇದೀಗ ಮತ್ತೊಂದು ಕಾಟ ಶುರುವಾಗಿದೆ. ಯಮ ಗುಂಡಿಗಳು ಬಾಯ್ದೆರೆದು ನಿಂತಿವೆ.
Updated on: Aug 06, 2024 | 2:07 PM

ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್, ಗುಂಡಿಗಳದ್ದೇ ಗಂಡಾಂತರ. ಇದು ಸಿಲಿಕಾನ್ ಸಿಟಿ ಬೆಂಗಳೂರಿನ ಸದ್ಯದ ಪರಿಸ್ಥಿತಿಯಾಗಿದೆ. ಪ್ರತಿ ದಿನವೂ ಆತಂಕದಲ್ಲೇ ಸವಾರರು ಸಾಗಬೇಕಾದ ಪರಿಸ್ಥಿತಿ ಬಂದಿದೆ. ಇದು ವಾಹನ ಸವಾರರಿಗೆ ನರಕಯಾತನೆ ತಂದಿಟ್ಟಿದೆ.

ಬೆಂಗಳೂರಿನ ನಾಗವಾರ-ಹೆಬ್ಬಾಳ ಸಂಪರ್ಕಿಸುವ ಹಿರಣ್ಯಪಾಳ್ಯ ಮುಖ್ತರಸ್ತೆಯಲ್ಲಿ ಗುಂಡಿಗಳು ವಿಪರೀತವಾಗಿವೆ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಯಲ್ಲೇ ದೊಡ್ಡ ಗುಂಡಿ ಬಿದ್ದು ಮಳೆ ನೀರು ತುಂಬಿದೆ. ಇದೆಲ್ಲಾ ಬಿಟ್ಟಿ ಭಾಗ್ಯದ ಪರಿಣಾಮ ಅನಿಸುತ್ತಿದೆ. ಪರಿಸ್ಥಿತಿ ತುಂಬಾ ಕೆಟ್ಟು ಹೋಗಿದೆ ಆಗಿದೆ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ರಸ್ತೆ ಗುಂಡಿಗಳ ಬಗ್ಗೆ ಯಾವಾಗ ಟಿವಿ9 ನಿರಂತರ ವರದಿ ಮಾಡಿತೋ, ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಸಿಬ್ಬಂದಿಯನ್ನ ಕಳುಹಿಸಿದರು. ಗುಂಡಿಗಳಿಗೆ ಜಲ್ಲಿಕಲ್ಲು ಸುರಿದು ತೇಪೆ ಹಚ್ಚುವ ಕೆಲಸ ಮಾಡಿದರು. ಸದ್ಯ ತಾತ್ಕಾಲಿಕವಾಗಿ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿಸಿದ್ದಾರೆ.

ಇದಿಷ್ಟೇ ಅಲ್ಲ, ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ನಲ್ಲೂ ಇದೇ ಪರಿಸ್ಥಿತಿ ಇದೆ. ಅಳೆತ್ತರದ ಗುಂಡಿಯಲ್ಲೇ ಬಿಎಂಟಿಸಿ ಬಸ್ಗಳು ಸಂಚಾರಿಸುವ ಪರಿಸ್ಥಿತಿ ಇದೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ ಗುಂಡಿಗಳಲ್ಲಿ ನೀರು ನಿಂತಿದೆ. ಗುಂಡಿಯಲ್ಲೇ ಸರ್ಕಸ್ ಮಾಡಿಕೊಂಡು ಬಸ್ಗಳು ಸಂಚರಿಸುತ್ತಿವೆ. ಎಷ್ಟೇ ಬಾರಿ ಟಾರ್ ಹಾಕಿದರೂ ಅದೇ ರಾಗ, ಅದೇ ಹಾಡು ಆಗಿದೆ.

ಇನ್ನು ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ನಲ್ಲೂ ಸಾವಿನ ಗುಂಡಿಗಳು ಬಾಯ್ದೆರೆದು ನಿಂತಿವೆ. ಮಾಗಡಿ ರಸ್ತೆ, ನಾಗರಬಾವಿ, ಬೆಂಗಳೂರು ವಿವಿಗೆ ಸಂಪರ್ಕಿಸುವ ರಸ್ತೆಯಲ್ಲಿ ಬರೀ ಗುಂಡಿಗಳದ್ದೇ ದರ್ಬಾರ್ ಆಗಿದೆ. ಪ್ರತಿಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಆಗ್ತಿದೆ. ಗುಂಡಿಯಲ್ಲಿ ಬಿದ್ದು ಯಾರದ್ದಾದ್ರೂ ಜೀವ ಹೋದ್ರೆ ಯಾರು ಹೊಣೆ ಅಂತಾ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಹಲವು ಕಡೆ ಅವಾಂತರವಾಗಿ ಜನರು ಪರದಾಡಿದ್ದರೆ, ಮತ್ತೊಂದೆಡೆ ಮಳೆಯಿಂದಾಗಿ ಸಾವಿನ ಗುಂಡಿಗಳು ಸವಾರರ ಬಲಿಗೆ ಕಾಯುತ್ತಿವೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಬೇಕಿದೆ.



