
ಕರ್ನಾಟಕದ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಬೀಗರಾಗಿದ್ದಾರೆ. ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಹಾಗೂ ಕಾಂಗ್ರೆಸ್ನ ನಗರಾಭಿವೃದ್ಧಿ ಸಚಿವರೂ ಆಗಿರುವ ಭೈರತಿ ಸುರೇಶ್ ಪಕ್ಷ, ಸಿದ್ಧಾಂತ ಹಾಗೂ ಜಾತಿಯನ್ನೂ ಮೀರಿ ಬೀಗರಾಗಿದ್ದಾರೆ.

ಎಸ್‌ಆರ್ ವಿಶ್ವನಾಥ್ ಬಿಜೆಪಿಯ ಯಲಹಂಕ ಶಾಸಕ, ಇನ್ನು ಬೈರತಿ ಸುರೇಶ್ ಪಕ್ಕದ ಹೆಬ್ಬಾಳ ಕ್ಷೇತ್ರದ ಶಾಸಕ. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ಬೈರತಿ ಸುರೇಶ್ ಪುತ್ರ ಸಂಜಯ್ ಅವರು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ಗೆ ಎರಡೂ ಕುಟುಂಬಗಳು ಪರಸ್ಪರ ಒಪ್ಪಿಕೊಂಡಿದ್ದರಿಂದ ಇವರ ಎಂಗೇಜ್‌ಮೆಂಟ್ ನೆರವೇರಿತು.

ಯಲಹಂಕ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಪುತ್ರಿ ಹಾಗೂ ಸಚಿವ ಬೈರತಿ ಸುರೇಶ್ ಅವರ ಪುತ್ರನ ನಿಶ್ಚಿತಾರ್ಥ ಇಂದು (ಆಗಸ್ಟ್ 28) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಎರಡು ಭಿನ್ನ ವಿಚಾರಧಾರೆಗಳ ಪಕ್ಷಗಳ ನಾಯಕರಾಗಿದ್ದರೂ ಬೀಗರಾಗುತ್ತಿರುವುದು ವಿಶೇಷ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅಪೂರ್ವ ಮತ್ತು ಸಂಜಯ್ ನಿಶ್ಚಿತಾರ್ಥ ಸಮಾರಂಭದಲ್ಲಿ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಸೇರಿದಂತೆ ಎರಡೂ ಪಕ್ಷದ ಶಾಸಕರು, ಸಚಿವರು ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದರು.

ಇನ್ನು ತಮ್ಮ ಆಪ್ತ ಸಚಿವರಾಗಿರುವ ಬೈರತಿ ಸುರೇಶ್ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಿ ನವಜೋಡಿಗಳಿಗೆ ಶುಭ ಕೋರಿದರು. ಈ ವೇಳೆ ವಿಶ್ವನಾಥ್ ಮತ್ತು ಬೈರತಿ ಸುರೇಶ್ ಕುಟುಂಬ ಸಿಎಂ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡಿತು.

ಯಲಹಂಕ ಶಾಸಕ ವಿಶ್ವನಾಥ್ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಎರಡು ಭಿನ್ನ ವಿಚಾರಧಾರೆಗಳ ಪಕ್ಷಗಳ ನಾಯಕರಾಗಿದ್ದರೂ ಬೀಗರಾಗುತ್ತಿರುವುದು ವಿಶೇಷ, ರಾಜಕೀಯವೇ ಬೇರೆ ವೈಯಕ್ತಿಕ ಬದುಕು ಮತ್ತು ಅದರ ಉದ್ದೇಶಗಳೇ ಬೇರೆ. ಎರಡೂ ಕುಟುಂಬಗಳಿಗೆ ಅಭಿನಂದನೆ ಮತ್ತು ಶುಭಾಶಯಗಳು.