‘ಕಾಂತಾರ’ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ನಲ್ಲಂತೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ನೋಡಿದ ಅನೇಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನವನ್ನು ಎಲ್ಲರೂ ಹೊಗಳಿದ್ದಾರೆ. ಈಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸರದಿ.
ನಿರ್ಮಲಾ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸಿನಿಮಾ ಅದ್ಭುತವಾಗಿದೆ ಎಂದು ಹೊಗಳಿದ್ದಾರೆ. ಇದರಿಂದ ‘ಕಾಂತಾರ’ ತಂಡ ಖುಷಿಯಾಗಿದೆ.
ನಿರ್ಮಲಾ ಸೀತಾರಾಮನ್ ಅವರು ತಮ್ಮ ಕೆಲಸಗಳ ಮಧ್ಯೆಯೂ ಇಂದು (ನವೆಂಬರ್ 2) ಬೆಂಗಳೂರಿನ ಗರುಡ ಮಾಲ್ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿದ ನಂತರದ ಫೋಟೋವನ್ನು ಹಂಚಿಕೊಂಡಿರುವ ನಿರ್ಮಲಾ ಅವರು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ರಿಷಬ್ ಅವರೇ ಸಿನಿಮಾನ ಉತ್ತಮವಾಗಿ ಮಾಡಿದ್ದೀರಿ. ತುಳುನಾಡು ಮತ್ತು ಕರಾವಳಿಯ ಶ್ರೀಮಂತ ಸಂಪ್ರದಾಯವನ್ನು ಚಿತ್ರ ಸೆರೆ ಹಿಡಿದಿದೆ’ ಎಂದು ನಿರ್ಮಲಾ ಟ್ವೀಟ್ ಮಾಡಿದ್ದಾರೆ.
‘ಕಾಂತಾರ’ ಸಿನಿಮಾದ ಮಂಗಳವಾರ (ನವೆಂಬರ್ 1) 2.30 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ಆರಂಭದಲ್ಲಿ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಿಜಕ್ಕೂ ಸಾಧನೆಯೇ ಸರಿ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 47.55 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್’ ಹಿಂದಿ ವರ್ಷನ್ 44 ಕೋಟಿ ರೂ. ಬಾಚಿಕೊಂಡಿತ್ತು. ಆ ದಾಖಲೆಯನ್ನು ಈ ಚಿತ್ರ ಮುರಿದಿದೆ.
Published On - 9:24 pm, Wed, 2 November 22