ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ ನಡೆಯುವ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ. ತೆಂಗಿನ ಕಾಯಿಗಳನ್ನ ತಲೆ ಮೇಲೆ ಒಡೆದರೂ ಅವರ ತಲೆಗೆ ನೋವಾಗಲಿ ಒಂದು ಹನಿ ರಕ್ತವಾಗಲಿ ಬರುವುದಿಲ್ಲ. ಈ ವಿಶಿಷ್ಟ ಹಬ್ಬದ ಕುರಿತು ಒಂದು ವರದಿ ಇಲ್ಲಿದೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವತೆ ಮೂಗುಮಾರಮ್ಮನ ಹಬ್ಬ ಮೂರು ದಿನಗಳ ಕಾಲ ನಡೆಯುತ್ತೆ. ತೆಂಗಿನ ಕಾಯಿಗಳನ್ನು ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವುದೇ ಈ ಜಾತ್ರೆಯ ವಿಶೇಷವಾಗಿದೆ. ಹರಕೆ ಹೊತ್ತ ಭಕ್ತರು ತಮ್ಮ ತಲೆಯಿಂದ ತೆಂಗಿನ ಕಾಯಿ ಒಡೆಸಿಕೊಂಡು ಭಕ್ತಿಯ ಪರಕಾಷ್ಠ ಮೆರೆಯುತ್ತಾರೆ. ಮೊದಲ ದಿನ ನಡೆಯುವ ಮಾರಮ್ಮನ ಮೆರವಣಿಗೆಯಲ್ಲಿ ಭಕ್ತರ ತಲೆ ಮೇಲೆ ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ.
ಎರಡನೇ ದಿನ ವಿಶೇಷಪೂಜೆ, ಪುನಸ್ಕಾರಗಳು ನಡೆಯುತ್ತವೆ. ಮೂರನೇ ದಿನ ಗ್ರಾಮದ ಮನೆ ಮನೆಗಳಿಗೆ ಪಡಿತರ ಸಂಗ್ರಹಿಸಲಾಗುತ್ತದೆ. ಈ ವೇಳೆ ಹರಕೆ ಹೊತ್ತವರ ತಲೆ ಮೇಲೆ ತೆಂಗಿನ ಕಾಯಿ ಒಡೆಯಲಾಗುತ್ತದೆ. ಗ್ರಾಮದ ಪ್ರತಿ ಮನೆಯ ಬಳಿ ಹೋಗಿ ಅಕ್ಕಿ, ಬೆಲ್ಲ ಪಡೆದು ಬಳಿಕ ಆ ಮನೆಯವರಿಗೆ ಅವರ ಮನೆಯ ಮುಂದೆಯೇ ತೆಂಗಿನಕಾಯಿಯನ್ನ ಒಡೆಯಲಾಗುತ್ತೆ.
ತಮ್ಮ ತಲೆ ಮೇಲೆ ತೆಂಗಿನ ಕಾಯಿ ಒಡೆದರೂ ಯಾವುದೇ ನೋವುಂಟಾಗುವುದಿಲ್ಲ ರಕ್ತವೂ ಬರುವುದಿಲ್ಲ, ಇದೆಲ್ಲಾ ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಎನ್ನುತ್ತಾರೆ ಹರಕೆ ಹೊತ್ತ ಭಕ್ತರು. ತಲೆ ಮೇಲೆ ಒಡೆಯುವ ತೆಂಗಿನ ಕಾಯಿ ಒಂದೇ ಏಟಿಗೆ ಪಟಾರನೆ ಎರಡು ಹೋಳಾಗುತ್ತದೆ.
ಒಟ್ಟಾರೆ ತಲೆತಲಾಂತರಗಳಿಂದ ನಡೆದು ಬಂದಿರುವ ಈ ಪದ್ದತಿಯನ್ನು ಇಂದಿನ ಪೀಳಿಗೆಯುವರು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.