- Kannada News Photo gallery Chikmagalur's Datta Peetha: 21st Annual Datta Mala Abhiyana Begins, Kannada News
ಚಿಕ್ಕಮಗಳೂರಿನ ದತ್ತಪೀಠ: ದತ್ತಮಾಲಾ ಅಭಿಯಾನ ಆರಂಭ, ಫೋಟೋಸ್ ನೋಡಿ
21ನೇ ವಾರ್ಷಿಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ದತ್ತಮಾಲಾಧಾರಿಗಳು ಏಳು ದಿನಗಳ ವ್ರತಾಚರಣೆಯಲ್ಲಿ ಇರಲಿದ್ದಾರೆ. ಈ ಬಾರಿ ದತ್ತ ಮಾಲಾ ಅಭಿಯಾನದಲ್ಲಿ ಬಿಜೆಪಿ ನಾಯಕರು ಸಹ ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
Updated on: Nov 05, 2024 | 2:40 PM

ಚಿಕ್ಕಮಗಳೂರಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕೆ ಆಗ್ರಹಿಸಿ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರುವ 21ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆತಿದೆ.

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಶ್ರೀಗುರುದತ್ತಾತ್ರೇಯರ ಭಕ್ತರು ಮಾಲೆ ಧರಿಸಿ, ಏಳು ದಿನಗಳ ಕಾಲ ವ್ರತಾಚರಣೆಯಲ್ಲಿರುತ್ತಾರೆ. ನವೆಂಬರ್ 10ರಂದು ದತ್ತಪೀಠದಲ್ಲಿ ವಿಶೇಷ ಹೋಮ-ಹವನ ನಡೆಸಲಿದ್ದಾರೆ. ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳುವ ಚಿಕ್ಕಮಗಳೂರು ತಾಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ಆರಂಭಗೊಂಡಿದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು ಮಾಲಾಧಾರಿಗಳಾಗಿದ್ದು, ನವೆಂಬರ್ 10ನೇ ತಾರೀಖಿನಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಸಿ ದತ್ತಪೀಠದಲ್ಲಿ ವಿಶೇಷ ಹೋವ-ಹವನ ನಡೆಸಿ ದತ್ತ ಪಾದುಕೆ ದರ್ಶನ ಪಡೆಯುತ್ತಾರೆ.

ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ. ಅಲ್ಲಿ ಯಾವ ಬಾಬಾಬುಡನ್ ಇಲ್ಲ. ಇಸ್ಲಾಂ ಮುಕ್ತ ದತ್ತಪೀಠವಾಗಬೇಕು. ದತ್ತಪೀಠದ ಆವರಣದಲ್ಲಿರುವ ಗೋರಿಗಳ ಸ್ಥಳಾಂತರ ಸೇರಿದಂತೆ ದತ್ತ ಗುಹೆಯಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದವನ್ನು ಬಗೆಹರಿಸಿ ದತ್ತಪೀಠಕ್ಕೆ ಮಾಲೆ ಧರಿಸಿ ಬಂದರೆ ನಾವು ಸ್ವಾಗತ ಮಾಡುತ್ತೇವೆ ಎಂದು ದತ್ತಮಾಲಾಧಾರಿಗಳು ಹೇಳಿದ್ದಾರೆ.

ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಕೂಡ ಆಗಿದೆ. ದಾಖಲೆಗಳ ಪ್ರಕಾರ ದತ್ತಪೀಠದಲ್ಲಿರುವ ಗೋರಿಗಳನ್ನ ನಾಗೇನಗಳ್ಳಿಗೆ ಸ್ಥಳಾಂತರವಾಗಬೇಕು. ಇದರ ಬಗ್ಗೆ ದೇಶಾದ್ಯಂತ ಆಂದೋಲನ ನಡೆಸುವುದಾಗಿ ಶ್ರೀರಾಮಸೇನೆ ಕಾರ್ಯಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

20 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಬಿಜೆಪಿ ನಾಯಕರಿಗೆ ದತ್ತಮಾಲಾ ಅಭಿಯಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಸಿಟಿ ರವಿ, ಮಾಧವಿ ಲತಾ ಸೇರಿದಂತೆ ಅನೇಕ ಮುಖಂಡರು ನವೆಂಬರ್10 ರಂದು ಚಿಕ್ಕಮಗಳೂರು ನಗರದಲ್ಲಿ ನಡೆಯುವ ಧರ್ಮ ಸಭೆ, ಶೋಭಾಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಏಲು ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದು, ವಿವಾದಾತ್ಮಕ ಘೋಷಣೆ ಕೂಗದಂತೆ ಜಿಲ್ಲಾಡಳಿತ ಹಿಂದೂ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದೆ.

21ನೇ ವರ್ಷದ ದತ್ತಮಾಲಾಧಾರಣೆ ಆಗಿರುವುದರಿಂದ ಈ ಬಾರಿಯ ದತ್ತಪೀಠದಲ್ಲಿ ದತ್ತಮಾಲಾಧಾರಣೆ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯುವ ಎಲ್ಲ ಮುನ್ಸೂಚನೆಗಳಿವೆ. ಈ ನಡುವೆ ಪೊಲೀಸ್ ಇಲಾಖೆ ಕೂಡ ದತ್ತಪೀಠದಲ್ಲಿ ಶಾಂತಿ ಕಾಪಾಡಲು ಸಕಲ ಸಿದ್ಧತೆ ಮಾಡ್ಕೊಂಡಿದೆ. ಕಾಫಿನಾಡಿಗರು ಕೂಡ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಅಭಿಯಾನ ಮುಗಿದರೆ ಸಾಕು ಅಂತಿದ್ದಾರೆ.




