- Kannada News Photo gallery Chitradurga Zilla Panchayat CEO MS Divakar applies brakes to corruption in government offices
Chitradurga ZP ಸಿಇಓ ದಿವಾಕರ್ ತಮ್ಮ ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರಕ್ಕೆ ಬ್ರೇಕ್ ಹಾಕಿರುವುದು ಹೀಗೆ
Chitradurga Zilla Panchayat CEO: ಕೋಟೆನಾಡಿನ ಜಿಲ್ಲಾ ಪಂಚಾಯತಿ ಸಿಇಓ ಎಂ.ಎಸ್. ದಿವಾಕರ್ ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೃಢ ಹೆಜ್ಜೆಯಿಟ್ಟಿದ್ದಾರೆ. ಖುದ್ದಾಗಿ ಗ್ರಾಮ ಪಂಚಾಯತಿಗಳಿಗೆ, ವಿವಿಧ ಕಚೇರಿಗಳಿಗೆ, ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದಾರೆ.
Updated on: Feb 04, 2023 | 12:12 PM

ಸರ್ಕಾರಿ ಕಚೇರಿಗಳಲ್ಲಿ ಪ್ರತಿ ಕೆಲಸಕ್ಕೂ ಲಂಚದ ಹಣ ನೀಡಬೇಕೆಂಬುದು ಅಲಿಖಿತ ನಿಯಮದಂತೆ ಆಗಿರುವುದು ಓಪನ್ ಸಿಕ್ರೇಟ್. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ (Zilla Panchayat) ಸಿಇಓ (CEO) ವಿಭಿನ್ನ ಹೆಜ್ಜೆಯಿಟ್ಟಿದ್ದಾರೆ.

ಮನೆ ಬಾಗಿಲಿಗೆ ಇ-ಸ್ವತ್ತು ತಲುಪಿಸುವ ಕೆಲಸ ಶುರು ಮಾಡಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಗ್ರಾಮಗಳಲ್ಲಿನ ಮನೆ ಬಾಗಿಲಿಗೆ ತೆರಳಿ ಇ-ಸ್ವತ್ತು ಪ್ರಮಾಣ ಪತ್ರ ವಿತರಣೆ. ಭ್ರಷ್ಟಾಚಾರಕ್ಕೆ (Corruption) ಕಡಿವಾಣ, ಮನೆ ಬಾಗಿಲಿಗೆ ಆಡಳಿತ. ಜಿಲ್ಲಾ ಪಂಚಾಯತಿ ಸಿಇಓ ಎಂ.ಎಸ್. ದಿವಾಕರ್ ಪ್ರತಿ ಗ್ರಾಮ ಪಂಚಾಯತಿಯ ಗ್ರಾಮಗಳಿಗೆ ಭೇಟಿ. ಈ ಬೆಳವಣಿಗೆಗಳು ಕಂಡು ಬಂದಿರುವುದು ಕೋಟೆನಾಡು ಚಿತ್ರದುರ್ಗದಲ್ಲಿ.

ಹೌದು, ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಸಿಇಓ ಎಂ.ಎಸ್. ದಿವಾಕರ್ ಖಡಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಇಓ ದಿವಾಕರ್ ಇ-ಸ್ವತ್ತು ವಿತರಣೆ ಸೇರಿದಂತೆ ಇತರೆ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚದ ಹಣಕ್ಕೆ ಡಿಮ್ಯಾಂಡ್ ಮಾಡುವ ವಿಚಾರ ತಿಳಿದಿದ್ದರು. ಸಿಇಓ ಆಗಿ ಬಂದ ಆರಂಭದಲ್ಲೇ ನಾಲ್ವರು ಪಿಡಿಓಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಹೀಗಾಗಿ, ಜಿ.ಪಂ. ಸಿಇಓ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.

ತಳಮಟ್ಟದಲ್ಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು. ಜನರ ಓಡಾಟ ತಪ್ಪಿಸುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು. ಮನೆ ಬಾಗಿಲಿಗೆ ಇ-ಸ್ವತ್ತು ವಿತರಿಸಿ ಜನರಿಗೆ ಆಡಳಿತದ ಮೇಲೆ ನಂಬಿಕೆ ಹುಟ್ಟಿಸುವ ದೃಢ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ.

ಹೀಗಾಗಿ, ಜಿಲ್ಲಾ ಪಂಚಾಯಿತಿ ಸಿಇಓ ದಿವಾಕರ್ ಅವರ ನೇತೃತ್ವದಲ್ಲಿ ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಮನೆ ಬಾಗಿಲಿಗೆ ಇ-ಸ್ವತ್ತು ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ದಿನ ಗ್ರಾಮ ಪಂಚಾಯತಿಯೊಂದರ ಗ್ರಾಮಕ್ಕೆ ಖುದ್ದು ಸಿಇಓ ಭೇಟಿ ನೀಡಿ ಸಾಂಕೇತಿಕವಾಗಿ ಇ-ಸ್ವತ್ತು ವಿತರಿಸುವ ಮೂಲಕ ಜನರಲ್ಲಿ ಭರವಸೆ ಮೂಡಿಸುವ ಧೃಢ ಹೆಜ್ಜೆಯಿರಿಸಿದ್ದಾರೆ.

ಇಂದು ಐಎಎಸ್ ಅಧಿಕಾರಿಯಾಗಿರುವ ಎಂ.ಎಸ್. ದಿವಾಕರ್ ದಾವಣಗೆರೆ ಜಿಲ್ಲೆ ಗಂಗನಕಟ್ಟೆ ಮೂಲದವರು. ತಂದೆ ಶಿವಮೂರ್ತಿಸ್ವಾಮಿ ಶಿಕ್ಷಕರಾಗಿದ್ದರು, ತಾಯಿ ನಾಗರತ್ನಮ್ಮ ಗೃಹಿಣಿ ಆಗಿದ್ದು, ಸಾಮಾನ್ಯ ಕುಟುಂಬದಲ್ಲಿ ದಿವಾಕರ್ ಜನಿಸಿದವರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ದಿವಾಕರ್ ಅವರು ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ಟಾಪರ್ ಆಗಿ 3 ಚಿನ್ನದ ಪದಕ ಗಳಿಸಿದರು. ಪದವಿ ಮುಗಿದ ಬಳಿಕ ಕೆಪಿಎಸ್ಸಿ ಪರೀಕ್ಷೆ ಪಾಸ್ ಆಗಿದ್ದು ಕೃಷಿ ಇಲಾಖೆಯಲ್ಲಿ ಸಾಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಐಎಎಸ್ ಪರೀಕ್ಷೆ ಬರೆದು ಪಾಸ್ ಆಗಿದ್ದು ಸದ್ಯ ಚಿತ್ರದುರ್ಗ ಜಿ.ಪಂ. ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ)

ಇನ್ನು ಜಿಲ್ಲಾ ಪಂಚಾಯತಿ ಸಿಇಓ ದಿವಾಕರ್ ಅವರ ಈ ವಿಭಿನ್ನ ಕಾರ್ಯಕ್ರಮಕ್ಕೆ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದ ಜನರು ಇ-ಸ್ವತ್ತು ಪಡೆಯಲು ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯಬೇಕಿತ್ತು. ಅನೇಕ ಮಧ್ಯವರ್ತಿಗಳು, ಅಧಿಕಾರಿಗಳು ಜನರ ಬಳಿ ಲಂಚದ ಹಣ ಪಡೆಯುವುದು ಸಾಮಾನ್ಯವಾಗಿತ್ತು.

ಇದೀಗ ಖುದ್ದು ಸಿಇಓ ಅವರೇ ಮನೆ ಬಾಗಿಲಿಗೆ ಇ-ಸ್ವತ್ತು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದ್ದು ಜನರಿಗೆ ಅನುಕೂಲ ಆಗಿದೆ. ಅಂತೆಯೇ ಸಿಇಓ ಅವ್ರ ಈ ಮಾದರಿ ಕಾರ್ಯಕ್ರಮದಿಂದಾಗಿ ಅಧಿಕಾರಿಗಳಿ ಖಡಕ್ ವಾರ್ನಿಂಗ್ ಪಾಸ್ ಆಗಿದೆ ಅಂತಾರೆ ಮಾಜಿ ಗ್ರಾ.ಪಂ. ಸದಸ್ಯರಾದ ತಿಪ್ಪೇಸ್ವಾಮಿ.

ಒಟ್ಟಾರೆಯಾಗಿ ಕೋಟೆನಾಡಿನ ಜಿಲ್ಲಾ ಪಂಚಾಯತಿ ಸಿಇಓ ಎಂ.ಎಸ್.ದಿವಾಕರ್ ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೃಢ ಹೆಜ್ಜೆಯಿಟ್ಟಿದ್ದಾರೆ. ಜನರಿಗೆ ಸರ್ಕಾರದ ಆಡಳಿತದ ಮೇಲೆ ಭರವಸೆ ಮೂಡಿಸುವ ವಿಭಿನ್ನ ಪ್ರಯತ್ನದಲ್ಲಿದ್ದಾರೆ. ಖುದ್ದಾಗಿ ಗ್ರಾಮ ಪಂಚಾಯತಿಗಳಿಗೆ, ವಿವಿಧ ಕಚೇರಿಗಳಿಗೆ, ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದಾರೆ. ಹೀಗಾಗಿ,

ಜನಪರವಾದ ಕಾರ್ಯದಲ್ಲಿ ತೊಡಗಿರುವ ಜಿಲ್ಲಾ ಪಂಚಾಯತಿ ಸಿಇಓ ದಿವಾಕರ್, ದುರ್ಗದ ಜನರ ಮೆಚ್ಚುಗೆ ಗಳಿಸಿದ್ದಾರೆ. ಇದು ಕೇವಲ ಆರಂಭ ಶೂರತ್ವ ಆಗದೆ ನಿರಂತರ ಜನಪರ ಕಾರ್ಯ ನಡೆಯಲಿ ಎಂಬುದು ಜನರ ಆಶಯವಾಗಿದೆ.




