
ಶೀರ್ಷಿಕೆಯಿಂದಲೇ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಕುತೂಹಲ ಸೃಷ್ಟಿ ಮಾಡಿದೆ. ಈ ಸಿನಿಮಾ ಮೇ 23ರಂದು ರಿಲೀಸ್ ಆಗಲಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಅವರು ಈ ಸಿನಿಮಾದಲ್ಲಿ ಹೀರೋ ಆಗಿದ್ದಾರೆ.

ಯೋಗರಾಜ್ ಸಿನಿಮಾಸ್ ಮತ್ತು ಪರ್ಲ್ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರಕ್ಕೆ ಕೆ. ರಾಮ್ ನಾರಾಯಣ್ ಅವರು ನಿರ್ದೇಶನ ಮಾಡಿದ್ದಾರೆ. ಮಡೆನೂರ್ ಮನು ಮತ್ತು ಮೌನ ಗುಡ್ಡೆಮನೆ ಜೋಡಿಯಾಗಿ ನಟಿಸಿದ್ದಾರೆ.

‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾಗೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ನೀಡದೆ ಯು/ಎ ಪ್ರಮಾಣಪತ್ರ ನೀಡಿದೆ. ಯೋಗರಾಜ್ ಭಟ್ ಮತ್ತು ಇಸ್ಲಾಮುದ್ದೀನ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಆ ಕಾರಣದಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಮತ್ತು ರಾಮ್ ನಾರಾಯಣ್ ಅವರು ಈ ಸಿನಿಮಾದ ಹಾಡುಗಳನ್ನು ಬರೆದಿದ್ದಾರೆ. ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಮನು ಛಾಯಾಗ್ರಹಣ, ದೀಪಕ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ವಿನೋದ್, ಮಾಸ್ ಮಾದ, ನರಸಿಂಹ ಸಾಹಸ ನಿರ್ದೇಶನ ಮಾಡಿದ್ದಾರೆ. ಅನಿಲ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ಸೋನಾಲ್ ಮೊಂತೆರೋ, ತಬಲಾ ನಾಣಿ, ರಂಗಾಯಣ ರಘು, ಶರತ್ ಲೋಹಿತಾಶ್ವ, ಡ್ರ್ಯಾಗನ್ ಮಂಜು ಮುಂತಾದವರು ಕೂಡ ನಟಿಸಿದ್ದಾರೆ.