- Kannada News Photo gallery Cricket photos Abhishek Sharma's Record 14 Ball Fifty Powers India to 13th Consecutive T20I Series Win vs NZ
IND vs NZ: ಗುರುವಿಗೆ ತಕ್ಕ ಶಿಷ್ಯ; 2ನೇ ಅತಿ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್
Abhishek Sharma fastest fifty: ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯ ಗೆಲ್ಲು ಮೂಲಕ ಟೀಂ ಇಂಡಿಯಾ ಸತತ 13ನೇ ಟಿ20 ಸರಣಿ ಗೆದ್ದ ಸಾಧನೆ ಮಾಡಿತು. ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಯುವರಾಜ್ ಸಿಂಗ್ ನಂತರ ಭಾರತದ ಎರಡನೇ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಅಲ್ಲದೆ, ನ್ಯೂಜಿಲೆಂಡ್ ವಿರುದ್ಧ ವೇಗದ ಅರ್ಧಶತಕ ಹಾಗೂ ವಿಶ್ವದ ಜಂಟಿ ಮೂರನೇ ವೇಗದ ಅರ್ಧಶತಕದ ದಾಖಲೆಗೂ ಅವರು ಭಾಜನರಾದರು.
Updated on: Jan 25, 2026 | 10:27 PM

ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಸತತ 13ನೇ ಟಿ20 ಸರಣಿಯನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕೇವಲ 153 ರನ್ ಗಳಿಸಲು ಸಾಧ್ಯವಾಯಿತು. ಭಾರತ ಕೇವಲ 10 ಓವರ್‌ಗಳಲ್ಲಿ ಈ ಗುರಿ ತಲುಪಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದರು. ಇದರೊಂದಿಗೆ ಭಾರತ ಪರ ಎರಡನೇ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು. ಅಚ್ಚರಿಯ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಅಭಿಷೇಕ್ ಶರ್ಮಾರ ಗುರು ಯುವರಾಜ್ ಸಿಂಗ್.

2007 ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈಗ ಅವರ ಶಿಷ್ಯ ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ ಗುರುವಿನ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದರ ಜೊತೆಗೆ ನ್ಯೂಜಿಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಅಭಿಷೇಕ್ ಪಾಲಾಯಿತು. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನ್ಯೂಜಿಲೆಂಡ್ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಅಭಿಷೇಕ್ ಆ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಪೂರ್ಣ ಸದಸ್ಯ ತಂಡಗಳನ್ನು ನೋಡಿದರೆ, ಅಭಿಷೇಕ್ ಶರ್ಮಾ ಜಂಟಿಯಾಗಿ ಮೂರನೇ ಅತಿ ವೇಗದ ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ ವಿರುದ್ಧ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಮೀಬಿಯಾದ ಆಟಗಾರ ಜಾನ್ ಫ್ರೈಲಿಂಕ್ ಎರಡನೇ ಸ್ಥಾನದಲ್ಲಿದ್ದಾರೆ. 2016 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಕಾಲಿನ್ ಮುನ್ರೋ ಅವರೊಂದಿಗೆ ಅಭಿಷೇಕ್ ಶರ್ಮಾ ಅವರ ಹೆಸರು ಈಗ ಜಂಟಿಯಾಗಿ ಮೂರನೇ ಸ್ಥಾನದಲ್ಲಿದೆ.

ಇನ್ನು ಈ ಪಂದ್ಯದಲ್ಲಿ ಅಭಿಷೇಕ್ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ ಅಜೇಯ 68 ರನ್ ಬಾರಿಸಿದರು. ಅಭಿಷೇಕ್ಗೆ ಉತ್ತಮ ಸಾಥ್ ನೀಡಿದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಸತತ ಎರಡನೇ ಅರ್ಧಶತಕ ಬಾರಿಸಿದರು. ಅಜೇಯರಾಗಿ ಉಳಿದ ಸೂರ್ಯ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಬಾರಿಸಿದರು.
