- Kannada News Photo gallery Cricket photos Abhishek Sharma's IPL 2025 Slump: From Six-Hitting Star to Struggling Opener
IPL 2025: 2024 ರಲ್ಲಿ ನಂ.1; 2025 ರಲ್ಲಿ ಖಾತೆಯನ್ನು ತೆರೆಯದ ಅಭಿಷೇಕ್ ಶರ್ಮಾ
Abhishek Sharma's IPL 2025 Failure: ಐಪಿಎಲ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ, 2025ರಲ್ಲಿ ನಿರಾಶಾದಾಯಕ ಆರಂಭವನ್ನು ಕಂಡಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಕೇವಲ 33 ರನ್ ಗಳಿಸಿದ್ದು, ಒಂದೇ ಒಂದು ಸಿಕ್ಸ್ ಹೊಡೆಯಲು ವಿಫಲರಾಗಿದ್ದಾರೆ. ಇದರಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೂಡ ತೊಂದರೆ ಅನುಭವಿಸುತ್ತಿದೆ. ಅವರ ಕಳಪೆ ಪ್ರದರ್ಶನವು ತಂಡದ ಸೋಲಿಗೆ ಕಾರಣವಾಗಿದೆ.
Updated on: Apr 04, 2025 | 5:42 PM

ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಆಟದಿಂದಲೇ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದವರು. ಇದೀಗ ಭಾರತ ಟಿ20 ತಂಡದ ಖಾಯಂ ಆರಂಭಿಕನಾಗಿರುವ ಅಭಿಷೇಕ್ ಶರ್ಮಾಗೆ ಈ ಬಾರಿಯ ಐಪಿಎಲ್ ಅಷ್ಟೊಂದು ಯಶಸ್ವಿಯಾಗಿಲ್ಲ. ಕಳೆದ ಐಪಿಎಲ್‌ನಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ್ದ ಅಭಿಷೇಕ್, ಈ ಬಾರಿ ಕ್ರೀಸ್ನಲ್ಲಿ ನಿಲ್ಲುವುದಕ್ಕೂ ಸಾಧ್ಯವಾಗುತ್ತಿಲ್ಲ.

ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಆವೃತ್ತಿಯಲ್ಲಿ ಸಿಕ್ಸರ್‌ಗಳ ಮಳೆಯನ್ನೇ ಹರಿಸಿದ್ದ ಅಭಿಷೇಕ್ ಈ ವಿಚಾರದಲ್ಲಿ ನಂಬರ್-1 ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಐಪಿಎಲ್ 2025 ರಲ್ಲಿ ಆಡಿರುವ 4 ಪಂದ್ಯಗಳಲ್ಲಿ ಅಭಿಷೇಕ್ ಒಂದೇ ಒಂದು ಸಿಕ್ಸ್ ಹೊಡೆಯಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಅವರ ಬ್ಯಾಟ್ ಮೌನವಾಗಿದ್ದು, ರನ್ ಗಳಿಸಲು ಹಂಬಲಿಸುತ್ತಿದ್ದಾರೆ.

ಅಭಿಷೇಕ್ ಶರ್ಮಾ ನಾಲ್ಕು ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ, ಇದರ ಪರಿಣಾಮವಾಗಿ ಸನ್‌ರೈಸರ್ಸ್ ಹೈದರಾಬಾದ್ 3 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಕ್ಕೆ ಕುಸಿದಿದೆ. ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ಎದುರಾಳಿ ತಂಡವನ್ನು ಕೆಣಕುತ್ತಿದ್ದ ಅಭಿಷೇಕ್, ಈಗ ತಮ್ಮದೇ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.

2025 ರ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ತುಂಬಾ ಕೆಟ್ಟ ಆರಂಭವನ್ನು ಪಡೆದಿದ್ದಾರೆ. ಮೊದಲ 4 ಪಂದ್ಯಗಳಲ್ಲಿ ಅವರು ಕೇವಲ 33 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 11 ಎಸೆತಗಳಲ್ಲಿ 24 ರನ್ ಗಳಿಸಿದ್ದರು. ಇದಾದ ನಂತರ, ಮುಂದಿನ ಮೂರು ಪಂದ್ಯಗಳಲ್ಲಿ ಅವರು ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಅತಿದೊಡ್ಡ ಶಕ್ತಿ ಎಂದರೆ ಅದರ ಆರಂಭಿಕ ಬ್ಯಾಟಿಂಗ್. ಆದರೆ ಅಭಿಷೇಕ್ ಶರ್ಮಾ ಅವರ ನಿರಂತರ ವೈಫಲ್ಯದ ಹೊರೆಯನ್ನು ಸನ್‌ರೈಸರ್ಸ್ ಹೈದರಾಬಾದ್ ಹೊರಬೇಕಾಯಿತು. ಮೊದಲ ಪಂದ್ಯವನ್ನು ಗೆದ್ದ ನಂತರ SRH ಸತತ 3 ಪಂದ್ಯಗಳನ್ನು ಸೋತಿದೆ. ಆಡಿರುವ 4 ಪಂದ್ಯಗಳಲ್ಲಿ ಕೇವಲ 2 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಅಭಿಷೇಕ್ ಶರ್ಮಾ ಐಪಿಎಲ್ 2024 ರಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್‌ಗಳ ಮನಸ್ಸಿನಲ್ಲಿ ಭಯ ಹುಟ್ಟಿಸಿದ್ದರು. ಕಳೆದ ಋತುವಿನಲ್ಲಿ ಅವರು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ನಂಬರ್-1 ಬ್ಯಾಟ್ಸ್‌ಮನ್ ಆಗಿದ್ದರು. ಅಭಿಷೇಕ್ 16 ಪಂದ್ಯಗಳಲ್ಲಿ 42 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದಲ್ಲದೆ, ಅವರು 36 ಬೌಂಡರಿಗಳನ್ನು ಸಹ ಹೊಡೆದಿದ್ದರು. 32 ಸರಾಸರಿ ಮತ್ತು 204 ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಕಲೆಹಾಕಿದ್ದರು.



















