
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 170 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡ 20 ಓವರ್ಗಳಲ್ಲಿ 166 ರನ್ಗಳಿಸಲಷ್ಟೇ ಶಕ್ತರಾಗಿದ್ದರು.

ಈ ಮೂಲಕ ಅಪ್ಘಾನಿಸ್ತಾನ್ ತಂಡವು 4 ರನ್ಗಳ ರೋಚಕ ಜಯ ಸಾಧಿಸಿದೆ. ಈ ರೋಚಕ ಗೆಲುವಿನೊಂದಿಗೆ ಅಫ್ಘಾನ್ ಪಡೆ ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದರು. ಅದು ಸಹ ಒಂದೇ ಮೈದಾನದಲ್ಲಿ 20 ಗೆಲುವು ದಾಖಲಿಸುವ ಮೂಲಕ ಎಂಬುದು ವಿಶೇಷ.

ಈ ಹಿಂದೆ ಶಾರ್ಜಾ ಮೈದಾನದಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. ಪಾಕ್ ಪಡೆಯು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿದ 32 ಪಂದ್ಯಗಳಲ್ಲಿ 18 ಗೆಲುವು ದಾಖಲಿಸಿ ಈ ವಿಶೇಷ ದಾಖಲೆ ನಿರ್ಮಿಸಿತ್ತು. ಆದರೆ ಈ ಬಾರಿಯ ತ್ರಿಕೋನ ಸರಣಿಯ ಮೂಲಕ ಪಾಕ್ ದಾಖಲೆ ಮುರಿಯುವಲ್ಲಿ ಅಫ್ಘಾನಿಸ್ತಾನ್ ಯಶಸ್ವಿಯಾಗಿದೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟಿ20 ಪಂದ್ಯದಲ್ಲಿ 18 ರನ್ಗಳ ಜಯ ಸಾಧಿಸಿದ್ದ ಅಫ್ಘಾನಿಸ್ತಾನ್ ತಂಡವು ಇದೀಗ ಯುಎಇ ವಿರುದ್ಧ 4 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವುಗಳೊಂದಿಗೆ ಶಾರ್ಜಾ ಮೈದಾನದಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಜಯ ಸಾಧಿಸಿದ ತಂಡ ಎನಿಸಿಕೊಂಡಿದೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಅಫ್ಘಾನಿಸ್ತಾನ್ ತಂಡವು ಈವರೆಗೆ 29 ಪಂದ್ಯಗಳನ್ನಾಡಿದ್ದಾರೆ. ಇಪ್ಪತ್ತೊಂಬತ್ತು ಮ್ಯಾಚ್ಗಳಲ್ಲಿ 20 ಪಂದ್ಯಗಳಲ್ಲಿ ಅಫ್ಘಾನ್ ಪಡೆ ಜಯ ಸಾಧಿಸಿದೆ. ಈ ಮೂಲಕ ಪಾಕ್ ತಂಡದ ಹೆಸರಿನಲ್ಲಿದ್ದ ದಾಖಲೆ ಮುರಿದು ಅಫ್ಘಾನಿಸ್ತಾನ್ ತಂಡ ಶಾರ್ಜಾದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ವಿಶ್ವ ದಾಖಲೆ ಬಾಂಗ್ಲಾದೇಶ್ ತಂಡದ ಹೆಸರಿನಲ್ಲಿದೆ. ಬಾಂಗ್ಲಾದೇಶ್ ತಂಡವು ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆಡಿದ 48 ಪಂದ್ಯಗಳಲ್ಲಿ 24 ಗೆಲುವು ದಾಖಲಿಸಿ ಈ ದಾಖಲೆ ಬರೆದಿದೆ.

ಇದೀಗ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ 20 ಗೆಲುವು ದಾಖಲಿಸುವ ಮೂಲಕ ಅಫ್ಘಾನಿಸ್ತಾನ್ ತಂಡ ಒಂದೇ ಮೈದಾನದಲ್ಲಿ ಅತೀ ಹೆಚ್ಚು ವಿಜಯ ಸಾಧಿಸಿದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ. ಈ ಮೂಲಕ ಅಫ್ಘಾನ್ ಪಡೆ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸುವತ್ತ ಹೊರಟಿದೆ.