- Kannada News Photo gallery Cricket photos South Africa's Young Batter Matthew breetzke new world record in odi cricket
ಬರೋಬ್ಬರಿ 463 ರನ್ಗಳು… ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
Matthew Breetzke Records: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲೆರಡು ಪಂದ್ಯಗಳ ಮೂಲಕ 200+ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಮ್ಯಾಥ್ಯೂ ಬ್ರೀಟ್ಝ್ಕೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯೊಂದಿಗೆ ಮತ್ತೊಂದು ಭರ್ಜರಿ ರೆಕಾರ್ಡ್ ಬರೆಯುವಲ್ಲಿ ಸೌತ್ ಆಫ್ರಿಕಾದ ಯುವ ದಾಂಡಿಗ ಯಶಸ್ವಿಯಾಗಿದ್ದಾರೆ.
Updated on: Sep 06, 2025 | 7:54 AM

ಸೌತ್ ಆಫ್ರಿಕಾದ ಯುವ ದಾಂಡಿಗ ಮ್ಯಾಥ್ಯೂ ಬ್ರೀಟ್ಝ್ಕೆ (Matthew breetzke) ಏಕದಿನ ಕ್ರಿಕೆಟ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಮೊದಲ ಐದು ಪಂದ್ಯಗಳ ಮೂಲಕ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಐದು ಮ್ಯಾಚ್ಗಳ ಮೂಲಕ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಮ್ಯಾಥ್ಯೂ ಬ್ರೀಟ್ಝ್ಕೆ ತಮ್ಮದಾಗಿಸಿಕೊಂಡಿದ್ದಾರೆ.

ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಬ್ರೀಟ್ಝ್ಕೆ 77 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಆಕರ್ಷಕ 85 ರನ್ ಬಾರಿಸಿದರು.

ಈ 85 ರನ್ಗಳೊಂದಿಗೆ ಬ್ರೀಟ್ಝ್ಕೆ ಏಕದಿನ ಕ್ರಿಕೆಟ್ನಲ್ಲಿ 400+ ರನ್ಗಳಿಸಿದ ಸಾಧನೆ ಮಾಡಿದ್ದಾರೆ. ಅದು ಕೂಡ ಕೇವಲ 5 ಪಂದ್ಯಗಳ ಮೂಲಕ ಎಂಬುದು ವಿಶೇಷ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ 5 ಮ್ಯಾಚ್ಗಳ ಮೂಲಕ 400+ ರನ್ ಕಲೆಹಾಕಿದ ವಿಶ್ವ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಮ್ಯಾಥ್ಯೂ ಬ್ರೀಟ್ಝ್ಕೆ ತಮ್ಮಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನ ಮೊದಲ 5 ಇನಿಂಗ್ಸ್ಗಳಲ್ಲಿ ಅತೀ ಹೆಚ್ಚು ರನ್ಗಳಿಸಿದ ವಿಶ್ವ ದಾಖಲೆ ನೆದರ್ಲೆಂಡ್ಸ್ನ ಟಾಮ್ ಕೂಪರ್ ಹೆಸರಿನಲ್ಲಿತ್ತು. 2010 ರಲ್ಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಕೂಪರ್ ಮೊದಲ ಐದು ಇನಿಂಗ್ಸ್ಗಳ ಮೂಲಕ ಕಲೆಹಾಕಿದ್ದು ಬರೋಬ್ಬರಿ 374 ರನ್ಗಳು.

ಇದೀಗ ಕೂಪರ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿ ಮ್ಯಾಥ್ಯೂ ಬ್ರೀಟ್ಝ್ಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಏಕದಿನ ಕ್ರಿಕೆಟ್ನಲ್ಲಿ ಆಡಿದ ಮೊದಲ ಐದು ಇನಿಂಗ್ಸ್ಗಳಲ್ಲೂ 50+ ಸ್ಕೋರ್ಗಳಿಸುವ ಮೂಲಕ. ಅಂದರೆ ಚೊಚ್ಚಲ ಪಂದ್ಯದಲ್ಲಿ 150 ರನ್ ಬಾರಿಸಿದ್ದ ಬ್ರೀಟ್ಝ್ಕೆ ದ್ವಿತೀಯ ಪಂದ್ಯದಲ್ಲಿ 83 ರನ್ ಗಳಿಸಿದ್ದರು. ಇನ್ನು ಮೂರನೇ ಪಂದ್ಯದಲ್ಲಿ 57, ನಾಲ್ಕನೇ ಪಂದ್ಯದಲ್ಲಿ 88 ರನ್ ಕಲೆಹಾಕಿದ್ದರು. ಇದೀಗ ಐದನೇ ಪಂದ್ಯದಲ್ಲಿ 85 ರನ್ ಬಾರಿಸಿದ್ದಾರೆ.

ಅಂದರೆ ಮ್ಯಾಥ್ಯೂ ಬ್ರೀಟ್ಝ್ಕೆ ಮೊದಲ ಐದು ಪಂದ್ಯಗಳಲ್ಲಿ ಒಂದು ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಒಟ್ಟು 463 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಐದು ಇನಿಂಗ್ಸ್ಗಳಲ್ಲಿ 400+ ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು 26 ವರ್ಷದ ಮ್ಯಾಥ್ಯೂ ಬ್ರೀಟ್ಝ್ಕೆ ತಮ್ಮದಾಗಿಸಿಕೊಂಡಿದ್ದಾರೆ.
